Love Mocktail 3: 'ಲವ್ ಮಾಕ್ಟೇಲ್ 3' ರಿಲೀಸ್‌ಗೆ ಮುಹೂರ್ತ ಫಿಕ್ಸ್; ಮೋಡಿ ಮಾಡ್ತಾರಾ ಕೃಷ್ಣ, ಮಿಲನಾ, ಅಮೃತಾ?
ಡಾರ್ಲಿಂಗ್ ಕೃಷ್ಣ ಹಲವು ಸಿನಿಮಾಗಳಲ್ಲಿ ನಟನಾಗಿ ಕಾಣಿಸಿಕೊಂಡಿದ್ದರು. ಆದರೆ, ನಿರೀಕ್ಷೆ ಮಾಡಿದಷ್ಟು ಯಶಸ್ಸು ಅವರಿಗೆ ಸಿಗಲಿಲ್ಲ. ಆದರೆ, ಅವರೇ ಮೊದಲ ಬಾರಿಗೆ ನಟಿಸಿ, ನಿರ್ದೇಶಿಸಿದ್ದ 'ಲವ್ ಮಾಕ್ಟೇಲ್' ಎಂಬ ಸಿನಿಮಾ ಬಾಕ್ಸಾಫೀಸ್ ಸೂಪರ್ ಹಿಟ್ ಆಯ್ತು. ಡಾರ್ಲಿಂಗ್ ಕೃಷ್ಣ ಬದುಕಿಗೆ ಹೊಸ ತಿರುವು ಸಿಕ್ಕಿತ್ತು. ನಿರ್ದೇಶನ ಮಾಡಿದ ಮೊದಲ ಹೆಜ್ಜೆಯಲ್ಲಿಯೇ ಯಶಸ್ಸು ಕಂಡ ಕೃಷ್ಣ ಡೈರೆಕ್ಷನ್ ಅನ್ನು ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ.
ಮೊದಲ ಹೆಜ್ಜೆಯಲ್ಲಿಯೇ ಗೆಲುವು ಕಂಡಿದ್ದ ಕೃಷ್ಣ ಬಳಿಕ ಎರಡನೇ ಆವೃತ್ತಿಗೂ ನಿರ್ದೇಶನ ಮಾಡಿದ್ದರು. ಮೊದಲ ಸಿನಿಮಾದ ಗೆಲುವಿನ ನಶೆಯಲ್ಲಿ 'ಲವ್ ಮಾಕ್ಟೇಲ್ 2' ಕೂಡ ಸಕ್ಸಸ್ ಕಂಡಿದೆ. ಎರಡು ಸಿನಿಮಾಗಳ ಯಶಸ್ಸಿನ ಬಳಿಕ 'ಲವ್ ಮಾಕ್ಟೇಲ್ 3' ಆರಂಭ ಮಾಡಿದ್ದರು. ಅದರ ಶೂಟಿಂಗ್ ಕೂಡ ಮುಗಿಸಿ, ಈಗ ಸಿನಿಮಾ ಬಿಡುಗಡೆಗೆ ತಯಾರಿ ನಡೆಸಿದ್ದಾರೆ.

ಡಾರ್ಲಿಂಗ್ ಕೃಷ್ಣ ಇತ್ತೀಚೆಗಷ್ಟೇ 'ಲವ್ ಮಾಕ್ಟೇಲ್ 3' ಸಿನಿಮಾ ಮೋಷನ್ ಪೋಸ್ಟರ್ ಅನ್ನೂ ಲಾಂಚ್ ಮಾಡಿದ್ದರು. ಅದಕ್ಕೆ ಸಿನಿ ಪ್ರಿಯರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇಲ್ಲಿಂದ ಸಿನಿಮಾ ಪ್ರೇಮಿಗಳು 'ಲವ್ ಮಾಕ್ಟೇಲ್ 3' ರಿಲೀಸ್ ಯಾವಾಗ ಅನ್ನೋದನ್ನೇ ಎದುರು ನೋಡುತ್ತಿದ್ದರು. ಈಗ ಡಾರ್ಲಿಂಗ್ ಕೃಷ್ಣ ಅದನ್ನೂ ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ಈ ಸಿನಿಮಾ ರಿಲೀಸ್ ಯಾವಾಗ? ಸಿನಿಮಾದಲ್ಲಿ ಯಾರೆಲ್ಲ ಇದ್ದಾರೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
'ಲವ್ ಮಾಕ್ಟೇಲ್' ಮೂರನೇ ಆವೃತ್ತಿ ಬಗ್ಗೆ ಡಾರ್ಲಿಂಗ್ ಕೃಷ್ಣ ಹಾಗೂ ಅವರ ಟೀಮ್ ಹೊಸ ವರ್ಷದ ಸರ್ಪ್ರೈಸ್ ಕೊಟ್ಟಿದ್ದಾರೆ. ತಮ್ಮ ಸಿನಿಮಾ ಪ್ರೇಮಿಗಳಿಗೆ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಅಂದ್ಹಾಗೆ 'ಲವ್ ಮಾಕ್ಟೇಲ್ 3' ಇದೇ ಏಪ್ರಿಲ್ 10ರಂದು ರಾಜ್ಯಾದ್ಯಂತ ಯಶಸ್ವಿಯಾಗಿ ಬಿಡುಗಡೆಯಾಗಲಿದೆ. ಯಾವುದಕ್ಕೂ ಜಗ್ಗದೇ ಈ ದಿನವನ್ನು ರಿಲೀಸ್‌ಗೆ ಫಿಕ್ಸ್ ಮಾಡಿದ್ದಾರೆ.
2020ರಲ್ಲಿ ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿದ್ದ 'ಲವ್ ಮಾಕ್ಟೇಲ್' ಕನ್ನಡ ಚಿತ್ರರಂಗದ ಬೆಸ್ಟ್ ಲವ್ ಸ್ಟೋರಿ ಎನಿಸಿಕೊಂಡಿತ್ತು. ಈ ಸಿನಿಮಾ ಡಾರ್ಲಿಂಗ್ ಕೃಷ್ಣಗೂ ಹೊಸ ಬದುಕು ನೀಡಿತ್ತು. ನವಿರು ಪ್ರೇಮದೊಂದಿಗೆ ಹೊಸೆದುಕೊಂಡಿದ್ದ ಸೂಕ್ಷ್ಮ ಕಥೆಯ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದು ಬೀಗಿದ್ದರು. ಇದೇ ಜೋಷ್‌ನಲ್ಲಿ 'ಲವ್ ಮಾಕ್ಟೇಲ್ 2' ಸಿನಿಮಾವನ್ನೂ ನಟಿಸಿ, ನಿರ್ಮಿಸಿ, ನಿರ್ದೇಶಿಸಿದ್ದರು. ಈಗ 3ನೇ ಆವೃತ್ತಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಅದಕ್ಕೆ ಡಾರ್ಲಿಂಗ್ ಕೃಷ್ಣ ಖುದ್ದಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇದೀಗ ತೆರೆಗಾಣಲು ಸಜ್ಜಾಗಿರುವ 'ಲವ್ ಮಾಕ್ಟೇಲ್ 3' ಈ ಹಿಂದಿನ ಎರಡು ಆವೃತ್ತಿಗಳಿಗಿಂತಲೂ ಭಿನ್ನವಾಗಿರಲಿದೆ ಎಂಬ ವಿಚಾರವನ್ನ ಕೃಷ್ಣ ಹಂಚಿಕೊಂಡಿದ್ದಾರೆ. ಕಥೆ, ನಿರೂಪಣೆ ಸೇರಿದಂತೆ ಎಲ್ಲದರಲ್ಲಿಯೂ ಲವ್ ಮಾಕ್ಟೇಲ್ 3 ಹೊಸ ಅನುಭವವನ್ನು ಕೊಡಲಿದೆ ಎಂಬ ಭರವಸೆ ಕೃಷ್ಣ ವ್ಯಕ್ತಪಡಿಸಿದ್ದಾರೆ. ಇನ್ನು ಸಿನಿಮಾದ ಹಾಡುಗಳಿಂದ ಹಿಡಿದು, ಸೀನ್ ಬೈ ಸೀನ್ ಅಳೆದು ತೂಗಿ ನೋಡುವುದಕ್ಕೆ ಪ್ರೇಕ್ಷಕರು ಕಾದು ಕೂತಿದ್ದಾರೆ.
ಅಂದಹಾಗೆ, ಈ ಸಿನಿಮಾವನ್ನು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಇಬ್ಬರೂ ಸೇರಿ ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನ, ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲ ಈ ಚಿತ್ರಕ್ಕಿದೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಸಿನಿಮಾದ ಎಲ್ಲಾ ಕೆಲಸ ಕಾರ್ಯಗಳೂ ಮುಗಿದಿವೆ. ಐಪಿಎಲ್ ಏನೇ ಇದ್ದರೂ ಅದನ್ನೆಲ್ಲ ಪಕ್ಕಕ್ಕೆ ತಳ್ಳಿ ಬೇಸಿಗೆ ರಜೆಯನ್ನು ಗಮನದಲ್ಲಿಟ್ಟುಕೊಂಡು ಏಪ್ರಿಲ್ 10ರಂದು ಗ್ರ್ಯಾಂಡ್ ರಿಲೀಸ್ ಮಾಡುವುದಕ್ಕೆ ಕೃಷ್ಣ ಹಾಗೂ ಮಿಲನಾ ಪ್ರಕಾಶ್ ನಿರ್ಧರಿಸಿದ್ದಾರೆ.


Click it and Unblock the Notifications











