'ಲವ್ ಮಾಕ್ಟೇಲ್ 3' ಕಥೆ ಕದ್ದ ಆರೋಪ; "ಗೂಗಲ್‌ನಿಂದ ಕಥೆ ಕದ್ದಿರೋರಿಗೆ ಲೀಗಲ್ ನೋಟೀಸ್"- ಕೃಷ್ಣ-ಮಿಲನಾ
ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಿರ್ಮಿಸಿರುವ 'ಲವ್ ಮಾಕ್ಟೇಲ್ 3' ಸಿನಿಮಾ ರಿಲೀಸ್ ಆಗಿ ಯಶಸ್ವಿಯಾಗಿ ಪ್ರದರ್ಶನ ಆಗುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಸಿನಿಮಾವನ್ನು ಕರ್ನಾಟಕಕ್ಕೆ ವಿತರಣೆ ಮಾಡಿದೆ. 'ಲವ್ ಮಾಕ್ಟೇಲ್'ನ ಮೂರನೇ ಸೀಕ್ವೆಲ್ ಕೂಡ ಯಶಸ್ವಿಯಾಗಿದ್ದು, ಜನರು ಮೆಚ್ಚಿಕೊಂಡಿದ್ದಾರೆ. ಇದೇ ಖುಷಿಯಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ಇರುವಾಗ ಅವರ ಮೇಲೆ ಕಥೆ ಕದ್ದ ಆರೋಪ ಬಂದಿದೆ.
ಸ್ಯಾಂಡಲ್‌ವುಡ್‌ನ ನಿರ್ದೇಶಕ ಗುರುದೇಶಪಾಂಡೆ ಹಾಗೂ ರಾಘವೇಂದ್ರ ನಾಯಕ್ ಇಬ್ಬರೂ ಡಾರ್ಲಿಂಗ್ ಕೃಷ್ಣ ಮೇಲೆ ಕಥೆ ಕದ್ದಿರುವ ಆರೋಪ ಮಾಡಿದ್ದರು. ಸಿನಿಮಾ ಸೆಕೆಂಡ್ ಹಾಫ್‌ನಲ್ಲಿ ಬರುವ ಕೋರ್ಟ್ ಸನ್ನಿವೇಶಗಳೆಲ್ಲವೂ ತಾನು ಹೇಳಿದ ಕಥೆ ಎಂದು ಹೇಳಿದ್ದರು. ಈ ಸಂಬಂಧ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ಇಬ್ಬರೂ ಪ್ರೆಸ್ ಮೀಟ್ ಮಾಡಿ ಕ್ಲಾರಿಟಿಯನ್ನು ಕೊಟ್ಟಿದ್ದಾರೆ.

'ಲವ್ ಮಾಕ್ಟೇಲ್ 3' ಫಸ್ಟ್ ಹಾಫ್ ಕಾಮಿಡಿಯಾಗಿದ್ದರೆ, ಸೆಕೆಂಡ್ ಹಾಫ್ ಎಮೋಷನಲ್ ಆಗಿದೆ. ದ್ವಿತಿಯಾರ್ಧದಲ್ಲಿ ಬರುವ ಸನ್ನಿವೇಶಗಳು ರಿಯಲ್ ಲೈಫ್‌ನಲ್ಲಿ ನಡೆದ ಘಟನೆ ಎಂದು ಹೇಳಲಾಗಿದ್ದು, ಅದನ್ನೇ ಇಟ್ಟುಕೊಂಡು ಲೇಖಕ ರಾಘವೇಂದ್ರ ನಾಯಕ ಕಥೆ ಹೆಣೆದಿದ್ದಾಗಿ ಹೇಳಿದ್ದರೆ. ಇತ್ತ ಕೃಷ್ಣ ಕೂಡ ಅವರು ಕಥೆ ಹೇಳುವುದಕ್ಕೆ ಬಂದಾಗ ಅದು ಗೂಗಲ್ ಕಥೆ. ಅದು ಬೇಡ ನನಗೆ ಸೇಮ್ ಕಾನ್ಸೆಪ್ಟ್ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದೆ ಎಂದು ಹೇಳಿಕೊಂಡಿದ್ದಾರೆ.
"ಅವರು ಯಾವ ಕೇಸ್ ಅನ್ನೂ ಹೇಳಿಲ್ಲ. ಗೂಗಲ್‌ನಲ್ಲಿ ಒಂದು ಫೋಟೋವನ್ನು ತೋರಿಸಿದರು. ಆ ಕೇಸ್ ಅನ್ನು ತೋರಿಸಿ, ಇದು ಕೇಸ್ ಅಂದರು. ಸ್ಕ್ರೀನ್‌ಪ್ಲೇಯನ್ನು ಹೇಳಿಲ್ಲ. ಅದನ್ನು ನನಗೆ ವಿವರಿಸಿದರು. ಅವರು ಏನು ಹೇಳಿದ್ರು? ಸೇಮ್ ಕಾನ್ಸೆಪ್ಟ್ ಮಾಡಿಕೊಂಡಿದ್ದೇವೆ ಅಂತ ಹೇಳಿದರೋ ಇಲ್ವೋ. ನಾನು ಅದನ್ನೇ ಹೇಳಿದ್ದು, ಸೇಮ್ ಕಾನ್ಸೆಪ್ಟ್ ಮಾಡಿಕೊಂಡಿದ್ದೇನೆ. ಗೂಗಲ್‌ನಲ್ಲಿ ಇರೋದು ಬೇಡ. ನಮಗೆ ತಲೆಯಿದೆ. ನಾಲ್ಕು ವರ್ಷ ತಲೆ ಕೆರಕೊಂಡು ಸಿನಿಮಾ ಮಾಡಿದ್ದೇವೆ ಎಂದು ಹೇಳಿದೆ" ಎಂದು ಡಾರ್ಲಿಂಗ್ ಕೃಷ್ಣ ಆರೋಪಕ್ಕೆ ಪ್ರತ್ಯಾರೋಪ ಮಾಡಿದ್ದಾರೆ.
ಈ ಆರೋಪದ ಸಂಬಂಧ ಫಿಲ್ಮ್ ಚೇಂಬರ್‌ಗೆ ದೂರು ನೀಡಿದ್ದು, ಕಾನೂನು ಹೋರಾಟ ನಡೆಸುವುದಕ್ಕೆ ಮುಂದಾಗಿದ್ದಾರೆ. "ನಾವು ಮೊದಲ ಫಿಲ್ಮ್ ಚೇಂಬರ್‌ಗೆ ಪತ್ರವನ್ನು ಕೊಟ್ಟು ಆ ಮೇಲೆ ಲೀಗಲ್ ಆಗಿ ಹೋಗುತ್ತೇವೆ. ನಿನ್ನೆಯೇ ಚೇಂಬರ್‌ಗೆ ಪತ್ರವನ್ನು ಕೊಟ್ಟಾಗಿದೆ. ಈಗ ಲೀಗಲ್ ಆಗಿ ಏನು ಮಾಡಬೇಕೋ ಅದು ಆಗುತ್ತಿದೆ. ನಿಜವಾದ ರೈಟರ್ ಏನಿದ್ದಾರಲ್ಲ. ಗೂಗಲ್‌ನಿಂದ ಕಥೆ ಕದ್ದಿರುವ ರಾಘವೇಂದ್ರ ನಾಯಕ್ ಅವರು ಫೋನ್‌ಗೆ ರಿಪ್ಲೇ ಮಾಡುತ್ತಿಲ್ಲ. ನಿನ್ನೆಯಿಂದ ನಾನೊಂದಿಷ್ಟು ಮೆಸೇಜ್ ಮಾಡಿದ್ದೀನಿ. ನಮ್ಮ ಪಿಆರ್‌ಓ ಒಂದು 50 ಮೆಸೇಜ್ ಮಾಡಿದ್ದಾರೆ. ಅವರಿಂದ ಪ್ರತಿಕ್ರಿಯೆ ಇಲ್ಲ." ಎಂದಿದ್ದಾರೆ.
ಹಾಗೇ ಯಾವುದೇ ಕಾರಣಕ್ಕೂ ಸಂಧಾನ ಮಾಡಿಕೊಳ್ಳುವುದಿಲ್ಲ. ನಿರ್ದೇಶಕ ಗುರುದೇಶಪಾಂಡೆ ಹಾಗೂ ರಾಘವೇಂದ್ರ ನಾಯಕ್ ಅವರಿಗೆ ಲೀಗಲ್ ನೋಟೀಸ್ ಹೋಗುತ್ತೆ ಎಂದಿದ್ದಾರೆ. "ಅವರು ಸಂಧಾನ ಮಾಡಿಕೊಳ್ಳುವುದು ಆಮೇಲೆ, ಹೋಗಿರುವ ಮರ್ಯಾದೆ ಯಾರು ಕೊಡ್ತಾರೆ. ಓದಿ ರ್ಯಾಂಕ್ ಬಂದಿರೋನಿಗೆ ಕಾಪಿ ಹೊಡೆದು ಪಾಸ್ ಆಗಿದ್ದೀಯಾ ಅಂದರೆ, ಸುಮ್ಮನೆ ಇರುತ್ತೀರ ನೀವು? ಎಲ್ಲಿಂದ ಉರಿಯುತ್ತೆ. ಗುರುದೇಶಪಾಂಡೆ ಅವರ ಹತ್ತಿರನೂ ಏನಿದೆ ಕೇಳೋಕೆ. ಅವರಿಗೂ ಲೀಗಲ್ ನೋಟೀಸ್ ಹೋಗುತ್ತೆ. ಅವರ ಹತ್ತಿರ ಚರ್ಚೆ ಮಾಡಿ,ಬೆಸ್ಟ್ ಫ್ರೆಂಡ್ ಅಂತ ಒತ್ತಿ ಹೇಳುವ ಅವಶ್ಯಕತೆಯಿಲ್ಲ. ನಾನು ಅವರ ಬೆಸ್ಟ್ ಫ್ರೆಂಡ್ ಅಲ್ಲ" ಎಂದಿದ್ದಾರೆ.

ಇನ್ನು ಮಿಲನಾ ನಾಗರಾಜ್ ಕೂಡ ಈ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. "ನಾನು ಕೃಷ್ಣ ಸಿನಿಮಾಗೆ ಬಂದು 13-14 ವರ್ಷ ಆಯ್ತು. ಇಂತಹದ್ದೊಂದು ಪ್ರೆಸ್‌ಮೀಟ್‌ಗೆ ಬಂದು ಕೂತಿದ್ದೇ ಇಲ್ಲ. ನಿಮ್ಮ ಸಿನಿಮಾ ಪಬ್ಲಿಸಿಟಿ ನಿಮ್ಮ ತಾಕತ್ತಲ್ಲಿ ಮಾಡಿ. ನಮ್ಮ ಸಿನಿಮಾದಿಂದ ಯಾಕೆ ಮಾಡುತ್ತಿದ್ದೀರಿ. ಅದಕ್ಕೆ ಇಷ್ಟು ಕಾದ್ವಿ. ಏನೋ ಚಿಕ್ಕದಾಗಿ ಆರೋಪ ಮಾಡುತ್ತಿದ್ದಾರೆ. ಮಾಡಿಕೊಳ್ಳಲಿ ಮುಂದೆ ನೋಡೋಣ ಅಂತ, ಯಾಕಂದ್ರೆ, ಇದರಿಂದ ನಮಗೆ ಪಬ್ಲಿಸಿಟಿ ಅವಶ್ಯಕತೆಯಿಲ್ಲ. ಲವ್ ಮಾಕ್ಟೇಲ್ 3ಗೀಗ ಅವಶ್ಯಕತೆಯಿಲ್ಲ. ಅದಕ್ಕೆ ಸುಮ್ಮನಿದ್ವಿ. ಆದರೆ, ಬಹಳ ಕಡೆಯಿಂದ ಬರುವುದಕ್ಕೆ ಶುರುವಾಗಿತ್ತು. ನಮಗೂ ನೋವಾಗುತ್ತೆ ಅಲ್ವಾ?" ಎಂದು ಮಿಲನಾ ನಾಗರಾಜ್ ಹೇಳಿದ್ದಾರೆ.
ಡಾರ್ಲಿಂಗ್ ಕೃಷ್ಣ ತಾನು ಬರೆಯೋ ಕಥೆಯನ್ನು ಯಾರಿಗೂ ಹೇಳುವುದಿಲ್ಲ. ಎಲ್ಲೂ ರಿಜಿಸ್ಟರ್ ಮಾಡುವುದಿಲ್ಲ ಎಂದಿದ್ದಾರೆ. "ನಾನು ಯಾರಿಗೂ ಕಥೆ ಹೇಳಲ್ಲ. ನನ್ನ ಕಥೆಯನ್ನು ಎಲ್ಲಿಯೂ ರಿಜಿಸ್ಟರ್ ಮಾಡುವುದಿಲ್ಲ. ನನ್ನ ಕ್ಯಾಮರಾಮ್ಯಾನ್‌ಗೂ ಕಥೆ ಹೇಳುವುದಿಲ್ಲ. ಶೂಟಿಂಗ್ ಹಿಂದಿನ ದಿನ ಕಥೆಯನ್ನು ಹೇಳುತ್ತೇನೆ. ನನಗೆ ಹೇಗೆ ಅನಿಸುತ್ತೆ ಹಾಗೆ ಬರೆಯುತ್ತೇನೆ. ಹಾಗೇ ಶೂಟಿಂಗ್ ಮಾಡಿಕೊಂಡು ಹೋಗುತ್ತೇನೆ." ಎಂದಿದ್ದಾರೆ.


Click it and Unblock the Notifications















