Love Mocktail 3; 'ಲವ್ ಮಾಕ್ಟೇಲ್' ಫ್ಯಾನ್ಸ್‌ಗೆ ನಿರಾಸೆ.. 'ಲವ್ ಮಾಕ್ಟೇಲ್ 4' ಬರೋದಿಲ್ಲ?
ಡಾರ್ಲಿಂಗ್ ಕೃಷ್ಣಗೆ ಸ್ಯಾಂಡಲ್‌ವುಡ್‌ನಲ್ಲಿ ಸೂಪರ್ ಸಕ್ಸಸ್ ಕೊಟ್ಟ ಸಿನಿಮಾ 'ಲವ್ ಮಾಕ್ಟೇಲ್'. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ತು ಅನ್ನೋದಷ್ಟೇ ಅಲ್ಲ. ಇದು ಡಾರ್ಲಿಂಗ್ ಕೃಷ್ಣ ವೃತ್ತಿ ಬದುಕಿಗೆ ಹೊಸ ತಿರುವು ಕೊಟ್ಟಿತ್ತು. ಒಂದೊಳ್ಳೆ ಯಶಸ್ಸಿಗೆ ಕಾಯುತ್ತಿದ್ದ ಕೃಷ್ಣಗೆ ಗೆಲುವಿನ ರುಚಿ ತೋರಿಸಿತ್ತು. ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ಪಟ್ಟ ತಂದು ಕೊಟ್ಟಿತ್ತು.
ಈ ಸಿನಿಮಾ ಡಾರ್ಲಿಂಗ್ ಕೃಷ್ಣಗೆ ಸಿಕ್ಕಾಪಟ್ಟೆ ಸ್ಪೆಷಲ್. ಯಾಕಂದ್ರೆ, ಯಾವ ನಿರ್ದೇಶಕನಿಂದಲೂ ಕೃಷ್ಣಗೆ ಸಕ್ಸಸ್ ಕೊಡಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ತನ್ನ ಯಶಸ್ಸನ್ನು ತಾನೇ ಸೃಷ್ಟಿಸಿಕೊಂಡ ಕೃಷ್ಣ 'ಲವ್ ಮಾಕ್ಟೇಲ್' ನಿಜಕ್ಕೂ ಸ್ಪೆಷಲ್. ಅದೇ ಯಶಸ್ಸು ಮುಂದುವರೆದು 'ಲವ್ ಮಾಕ್ಟೇಲ್ 2' ಆಯ್ತು. ಈಗ ಅದು 'ಲವ್ ಮಾಕ್ಟೇಲ್ 3'ವರೆಗೂ ಕರೆದುಕೊಂಡು ಬಂದಿದೆ.

ಹಾಗಿದ್ದರೆ, 'ಲವ್ ಮಾಕ್ಟೇಲ್' ಕೇವಲ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರಿಗಷ್ಟೇ ವಿಶೇಷನಾ? ಖಂಡಿತಾ ಇಲ್ಲ. ಈ ಸಿನಿಮಾಗೆ ಒಂದಿಷ್ಟು ಫಾಲೋವರ್ಸ್ ಇದ್ದಾರೆ. ಯುವ ಪ್ರೇಮಿಗಳನ್ನು ಅತೀ ಹೆಚ್ಚು ಕಾಡಿದ ಸಿನಿಮಾವಿದು. ಹೀಗಾಗಿ 'ಲವ್ ಮಾಕ್ಟೇಲ್ 3' ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ಈಗ ಆ ಸಿನಿಮಾದ ಒಂದು ಝಲಕ್ ಸಿಕ್ಕಿದೆ. 'ಲವ್ ಮಾಕ್ಟೇಲ್ 3' ಟ್ರೈಲರ್ ರಿಲೀಸ್ ಆಗಿದ್ದೇನೋ ಖುಷಿಯಿದೆ. ಅಷ್ಟೇ ನಿರಾಸೆನೂ ಆಗಿದೆ. ಅದೇನದು? ಅಂತ ನೋಡುವುದಕ್ಕೆ ಮುಂದೆ ಓದಿ.
ಕಳೆದ ಎರಡು ಅಧ್ಯಾಯಗಳು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್‌ಗೆ ಯಶಸ್ಸು ಕೊಟ್ಟಿವೆ. ಹೀಗಾಗಿ 'ಲವ್ ಮಾಕ್ಟೇಲ್ 3' ಕೂಡ ಬಾಕ್ಸಾಫೀಸ್‌ನಲ್ಲಿ ಯಶಸ್ಸು ಕಾಣಬಹುದೆಂಬ ನಿರೀಕ್ಷೆಯಿದೆ. 'ಲವ್ ಮಾಕ್ಟೇಲ್'ನ ಮೊದಲೆರಡು ಭಾಗಗಳ ಬಳಿಕ ಮತ್ತೊಂದು 'ಲವ್ ಮಾಕ್ಟೇಲ್ 3' ಟ್ರೈಲರ್ ಕಿಕ್ ಕೊಟ್ಟಿದೆ. ಪ್ರೇಕ್ಷಕರಿಗೆ 'ಲವ್ ಮಾಕ್ಟೇಲ್' ಜರ್ನಿಯನ್ನು ಮತ್ತೆ ನೆನಪಿಸಿದೆ.
'ಲವ್ ಮಾಕ್ಟೇಲ್ 3' ಟ್ರೈಲರ್ ಕಥೆಯ ಬಗ್ಗೆ ಹೆಚ್ಚು ಸುಳಿವನ್ನು ಬಿಟ್ಟುಕೊಡದೇ ಹೋದರೂ, ಈ ಅಧ್ಯಾಯದಲ್ಲಿ ತಂದೆ-ಮಗಳ ನಡುವಿನ ಬಾಂಧವ್ಯವನ್ನು ಹೇಳುವುದಕ್ಕೆ ಡಾರ್ಲಿಂಗ್ ಕೃಷ್ಣ ಹೊರಟಿದ್ದಾರೆ ಅನ್ನೋದು ಸ್ಪಷ್ಟವಾಗಿದೆ. ಇದರಲ್ಲೂ ಕಾಡುವಂತಹ ಲವ್ ಸ್ಟೋರಿ ಇರುತ್ತಾ? ಕೃಷ್ಣ ಮಿಲನಾ ಕಾಂಬಿನೇಷನ್ ಇರುತ್ತಾ? ಅನ್ನೋದು ಸಿನಿಮಾ ನೋಡಿದ ಬಳಿಕವೇ ಗೊತ್ತಾಗುತ್ತೆ.

ಟ್ರೈಲರ್ ರಿಲೀಸ್ ಆದ ಖುಷಿಯಲ್ಲಿ ಅಭಿಮಾನಿಗಳು ಇದ್ದಾರೆ. ಆದರೆ, ಅವರಿಗೆ ಖುಷಿ ಜೊತೆ ನಿರಾಸೆನೂ ಆಗಿದೆ. ಅದಕ್ಕೆ ಕಾರಣ ಟ್ರೈಲರ್‌ನಲ್ಲಿ ರಿವೀಲ್ ಆಗಿರುವ ಒಂದು ವಿಷಯ. ಈ ಯಶಸ್ವಿ ಸೀರಿಸ್‌ನ ಕೊನೆಯ ಅಧ್ಯಾಯ 'ಲವ್ ಮಾಕ್ಟೇಲ್ 3'. ಒಂದು ವೇಳೆ 'ಲವ್ ಮಾಕ್ಟೇಲ್ 3'ನೂ ಯಶಸ್ಸು ಕಂಡರೆ ನಾಲ್ಕನೇ ಅಧ್ಯಾಯ ಬರಬಹುದು ಅನ್ನೋದು ನಿರೀಕ್ಷೆಯಲ್ಲಿ ಇದ್ದವರಿಗೆ ನಿರಾಸೆಯಾಗಿದೆ. ಈ ಸಿನಿಮಾದ ಟ್ರೈಲರ್‌ನ ಒಂದು ಕಡೆ " ಇದು ನನ್ನ ಲೈಫ್‌ನ ಕೊನೆಯ ಅಧ್ಯಾಯ. ಅಂದರೆ, ನಾನು ನಿಮಗೆ ಹೇಳುತ್ತಿರುವ ಕೊನೆಯ ಅಧ್ಯಾಯ." ಎನ್ನುವ ಡೈಲಾಗ್ ಇಂತಹದ್ದೊಂದು ಸುಳಿವು ಕೊಟ್ಟಿದೆ.
ಈ ಡೈಲಾಗ್ ಹಲವು ಸಿನಿಪ್ರಿಯರಿಗೆ ನಿರಾಸೆಗೆ ಕಾರಣವಾಗಿದೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಕಾಮೆಂಟ್‌ಗಳು ಬರುತ್ತಿವೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ ಆಕ್ಷನ್ ಕಟ್ ಹೇಳಿದ್ದು, ನಕುಲ್ ಅಭ್ಯಂಕರ್ ಟ್ಯೂನ್ ಹಾಕಿದ್ದಾರೆ. ಇದೇ ಮಾರ್ಚ್ 19ರಂದು ಈ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.


Click it and Unblock the Notifications











