'ಲವ್ ಮಾಕ್‌ಟೇಲ್' ಮೆಚ್ಚಿಕೊಂಡವರಿಗೆ ಮತ್ತೊಂದು ಖುಷಿ ಸಂಗತಿ: ಕಥೆ ಮುಂದುವರಿಯಲಿದೆ!
ಬಿಡುಗಡೆಯಾದ ಬಳಿಕ ಒಳ್ಳೆಯ ಹೆಸರು ಮಾಡಿದರೂ 'ಲವ್ ಮಾಕ್‌ಟೇಲ್' ಚಿತ್ರದ ಯಶಸ್ಸು ಪರಿಚಯವಾಗಿದ್ದು, ಅದು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ಬಳಿಕ. ಚಿತ್ರಮಂದಿರಗಳು ಈಗ ಸ್ಥಗಿತಗೊಂಡಿರುವುದರಿಂದ ಜನರೂ ಮುಗಿಬಿದ್ದು ಜಾಲತಾಣ ಹಾಗೂ ಆಪ್‌ಗಳಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾರೆ. ಅದರಲ್ಲಿಯೂ 'ದಿಯಾ' ಮತ್ತು 'ಲವ್ ಮಾಕ್‌ಟೇಲ್' ಚಿತ್ರಗಳಿಗಂತೂ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾಗಳು ಬಿಡುಗಡೆಯಾದಾಗ ಈ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ ಇವೆರಡೂ ಅತಿ ದೊಡ್ಡ ಹಿಟ್ ಸಿನಿಮಾಗಳಾಗುತ್ತಿದ್ದವು.
'ಲವ್ ಮಾಕ್‌ಟೇಲ್' ವೀಕ್ಷಿಸಿದವರಿಗೆ ಅತಿ ಹೆಚ್ಚು ಇಷ್ಟವಾಗಿರುವ ಪಾತ್ರ 'ನಿಧಿ'ಯದ್ದು. ಆ ಪಾತ್ರವನ್ನಿಟ್ಟುಕೊಂಡು ನೂರಾರು ಮೀಮ್‌ಗಳನ್ನು ತಯಾರಿಸುತ್ತಿದ್ದಾರೆ. ಈ ಸಿನಿಮಾ ಕೂಡ ಸುಖಾಂತ್ಯವಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ದಿಯಾ ಚಿತ್ರ ಹಾಗೂ ಲವ್ ಮಾಕ್‌ಟೇಲ್ ಚಿತ್ರದ ನಾಯಕಿ-ನಾಯಕಿಗೆ ಮದುವೆ ಮಾಡಿಸಿ ಎಂದೂ ಹೇಳುತ್ತಿದ್ದಾರೆ. ಇದರ ನಡುವೆ 'ಲವ್ ಮಾಕ್‌ಟೇಲ್' ಚಿತ್ರದ ಕಥೆಗಾರ, ನಿರ್ಮಾಪಕ, ನಿರ್ದೇಶಕ, ನಾಯಕ ಡಾರ್ಲಿಂಗ್ ಕೃಷ್ಣ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ.
ಮೊದಲ ಬಾರಿ ನಿರ್ದೇಶಿಸಿ ಅಭಿನಯಿಸಿದ 'ಲವ್ ಮಾಕ್‌ಟೇಲ್' ಯಶಸ್ಸಿನಿಂದ ಆನಂದತುಂದಿಲರಾಗಿರುವ 'ಮದರಂಗಿ' ಕೃಷ್ಣ ಅವರಿಗೆ ಹೊಸ ಹೊಸ ಸಿನಿಮಾಗಳ ಆಫರ್ ಬರುತ್ತಿವೆಯಂತೆ. ಬೇರೆ ನಿರ್ಮಾಪಕರು, ನಿರ್ದೇಶಕರ ಜತೆ ಸಿನಿಮಾ ಮಾಡುವುದೇ ಅಥವಾ ತಮ್ಮದೇ ನಿರ್ದೇಶನದಲ್ಲಿ ಸಿನಿಮಾ ಮಾಡುವುದು ಒಳಿತೇ ಎಂಬ ಎರಡು ಆಯ್ಕೆ ಅವರ ಮುಂದೆ ಇದೆ.

ಲವ್ ಮಾಕ್‌ಟೇಲ್-2
ಆದರೆ ಕೃಷ್ಣ 'ಲವ್ ಮಾಕ್‌ಟೇಲ್' ಗುಂಗಿನಲ್ಲಿಯೇ ಮತ್ತೊಂದು ಪ್ರೇಮಕಥೆಯನ್ನು ಸಿನಿಮಾ ಮಾಡಲು ಉದ್ದೇಶಿಸಿದ್ದಾರೆ ಎಂದು ಹೇಳಲಾಗಿತ್ತು. ನಿರ್ದೇಶನದ ಎರಡನೆಯ ಪಂದ್ಯಕ್ಕೆ ಅವರು ಅಣಿಯಾಗುತ್ತಿದ್ದಾರೆ. ಅದಕ್ಕೆ ಶೀರ್ಷಿಕೆಯ ನೋಂದಣಿಯನ್ನೂ ಮಾಡಿಸಿದ್ದಾರೆ. ಅದಕ್ಕೆ 'ಲವ್ ಮಾಕ್‌ಟೇಲ್-2' ಎಂಬ ಹೆಸರಿಟ್ಟಿದ್ದಾರೆ ಎನ್ನಲಾಗಿದೆ.

ಯಶಸ್ಸಿನ ಗುಂಗಲ್ಲಿ ಮತ್ತೊಂದು ಸಿನಿಮಾ
'ಲವ್ ಮಾಕ್‌ಟೇಲ್' ಚಿತ್ರದ ಯಶಸ್ಸಿಗೆ ಕಾರಣಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ಅವರು, ಆ ಸಿನಿಮಾದ ಕಥೆಯನ್ನು ಮುಂದುವರಿಸಲು ಯೋಚಿಸಿದ್ದಾರಂತೆ. ಮೊದಲ ಸಿನಿಮಾವನ್ನು ಪಯಣದ ರೂಪದಲ್ಲಿ ಅವರು ತೋರಿಸಿದ್ದರು. ಅದೇ ಜರ್ನಿಯನ್ನು ಅವರು ಮುಂದುವರಿಸಲು ನಿರ್ಧರಿಸಿದ್ದಾರಂತೆ.

ಪ್ರೇಮ ಪಯಣ ಮುಂದುವರಿಯಲಿದೆ
ಚಿತ್ರದ ಅಂತ್ಯದಲ್ಲಿ ನಿಧಿಮಾ ನೆನಪಲ್ಲಿಯೇ ಇರುವುದಾಗಿ 'ಆದಿ' ಹೇಳುತ್ತಾನೆ. ಆತನ ಜತೆಗೆ ಪ್ರಯಾಣದಲ್ಲಿ ಜತೆಗೂಡಿ ಕಥೆ ಕೇಳಿದ ಯುವತಿಗೂ ಆತನ ಮೇಲೆ ಪ್ರೀತಿ ಮೂಡಿರುತ್ತದೆ. ಈ ಪ್ರೇಮ ಕಥನದ ಪಯಣ ಮತ್ತೆ ಮುಂದುವರಿಯಲಿದೆ. ಕಥೆಯನ್ನು ಮತ್ತೊಂದು ಮಗ್ಗುಲಲ್ಲಿ ಕೊಂಡೊಯ್ಯಲು ಕೃಷ್ಣ ಅವರಿಗೆ ಆಸಕ್ತಿಕರ ಐಡಿಯಾವೊಂದು ಸಿಕ್ಕಿದೆಯಂತೆ. ಅದರಂತೆ ಇಲ್ಲಿ ಮತ್ತಷ್ಟು ಪ್ರೇಮಕಥನಗಳು ಸಿಗುವುದ ಖಾತರಿಯಾಗಿದೆ.

ಬೇರೆ ನಿರ್ಮಾಪಕರು ಬರಬಹುದು
ಈ ಸಿನಿಮಾ ಯಾವಾಗ ಶುರುವಾಗಲಿದೆ, ಯಾರು ನಿರ್ಮಿಸಲಿದ್ದಾರೆ ಎನ್ನುವುದು ಖಚಿತವಾಗಿಲ್ಲ. ಸದ್ಯಕ್ಕೆ ಕೃಷ್ಣ ಕಥೆ ಹೊಸೆಯುವುದರಲ್ಲಿ ಮಗ್ನರಾಗಿದ್ದಾರಂತೆ. ಚಿತ್ರ ನಿರ್ಮಿಸಲು ಬೇರೆ ನಿರ್ಮಾಪಕರು ಮುಂದೆ ಬಂದು, ಕೃಷ್ಣ ನಿರ್ದೇಶನ ಮಾಡುವ ಸಾಧ್ಯತೆಯೂ ಇದೆ. ಕಥೆ ಸಿದ್ಧವಾದ ಕೂಡಲೇ ಚಿತ್ರೀಕರಣ ಆರಂಭಿಸಲು ಅವರು ಯೋಚಿಸಿದ್ದಾರೆ ಎನ್ನಲಾಗಿದೆ.

ನಿಧಿಮಾ ಮತ್ತೆ ಬರ್ತಾರಾ?
ಲವ್ ಮಾಕ್‌ಟೇಲ್ ಚಿತ್ರದಲ್ಲಿ ಹಲವು ಪಾತ್ರಗಳಿದ್ದರೂ ಜನರನ್ನು ಕಾಡುತ್ತಿರುವುದ ನಿಧಿಮಾ ಪಾತ್ರ. ನಿಧಿಯಂತಹ ಹುಡುಗಿ ಬೇಕು ಎಂದು ಹುಡುಗರು ಈಗ ಕನಸು ಕಾಣುತ್ತಿದ್ದಾರೆ. ಸಿನಿಮಾದಲ್ಲಿ ಈ ಪಾತ್ರ ದುರಂತ ಅಂತ್ಯ ಕಾಣುತ್ತದೆ. ನಿಜ ಜೀವನದಲ್ಲಿಯೂ ಜೋಡಿ ಹಕ್ಕಿಗಳಾಗಿರುವ ಆದಿ ಮತ್ತು ನಿಧಿ ಪಾತ್ರಧಾರಿಗಳಾಗಿರುವ ಕೃಷ್ಣ ಹಾಗೂ ಮಿಲನಾ ನಾಗರಾಜ್, ಈ ಸಿನಿಮಾದಲ್ಲಿಯೂ ಒಟ್ಟಿಗೆ ಕೆಲಸ ಮಾಡಲಿದ್ದಾರೆ. 'ಲವ್ ಮಾಕ್‌ಟೇಲ್'ನ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ಮಾಣ ಹಾಗೂ ಇತರೆ ವಿಭಾಗಗಳಲ್ಲಿಯೂ ಮಿಲನಾ ಜವಾಬ್ದಾರಿ ನಿರ್ವಹಿಸಿದ್ದರು. ಆದರೆ 'ನಿಧಿಮಾ' ಆಗಿ ಅಭಿನಯಿಸಿದ್ದ ಮಿಲನಾ ನಾಗರಾಜ್ ಬೇರೆ ಪಾತ್ರ ಹಾಗೂ ಬೇರೆ ಅವತಾರದಲ್ಲಿ ಈ ಸಿನಿಮಾದಲ್ಲಿ ನಟಿಸುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.


Click it and Unblock the Notifications











