ಲವ್ ಮಾಕ್‌ಟೇಲ್-2ನಲ್ಲಿ ಇರಲಿದ್ದಾರೆ ಹೊಸ ನಾಯಕಿ: ಯಾರು ಆ ನಟಿ?
ಲವ್ ಮಾಕ್‌ಟೇಲ್ ಚಿತ್ರದ ಯಶಸ್ಸಿನ ಬಳಿಕ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಜೋಡಿ ಅದರ ಮುಂದುವರಿದ ಭಾಗಕ್ಕೆ ಸಿದ್ಧತೆ ನಡೆಸಿರುವುದು ನಿಮಗೆ ಗೊತ್ತೇ ಇದೆ. ಅದೇ ಕಥೆಯನ್ನು ಮುಂದುವರಿಸುವುದು ಹಾಗೂ ಚಿತ್ರದಲ್ಲಿ ಒಂದಷ್ಟು ರೋಚಕ ತಿರುವುಗಳನ್ನು ನೀಡುವುದು ಚಿತ್ರಕಥೆ ಬರೆಯುತ್ತಿರುವ ಕೃಷ್ಣ ಅವರ ಬಯಕೆ.
Recommended Video
ಕಥೆಯ ಮುಂದುವರಿಕೆಯಾಗಿರುವುದರಿಂದ ಬಹುತೇಕ ಪಾತ್ರಗಳು ಈ ಚಿತ್ರದಲ್ಲಿಯೂ ಮರಳಲಿವೆ. ಮೊದಲ ಭಾಗದಲ್ಲಿ ನಿಧಿ ಪಾತ್ರ ಅಂತ್ಯವಾಗುತ್ತದೆ. ಆದರೆ ಆ ಪಾತ್ರ ನಿರ್ವಹಿಸಿದ್ದ ಮಿಲನಾ ನಾಗರಾಜ್ ಅವರಿಲ್ಲದೆ ಎರಡನೆಯ ಭಾಗ ಇರಲಾರದು. ಹೀಗಾಗಿ ಮಿಲನಾ ನಾಗರಾಜ್ ಅವರು ಸೀಕ್ವೆಲ್‌ನಲ್ಲಿ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಥವಾ ನಿರ್ಮಾಪಕರಾಗಿ ಕ್ಯಾಮೆರಾ ಹಿಂದೆಯಷ್ಟೇ ಕೆಲಸ ಮಾಡಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ. ಲಾಕ್ ಡೌನ್ ಅವಧಿಯಲ್ಲಿ ಕಥೆ ಬರೆಯಲು ಆರಂಭಿಸಿದ್ದ ಕೃಷ್ಣ, ಈಗ ಸಿನಿಮಾ ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಮುಂದೆ ಓದಿ..

ಚಿತ್ರೀಕರಣಕ್ಕೂ ಸಿದ್ಧ
ಲವ್ ಮಾಕ್‌ಟೇಲ್ 2 ಚಿತ್ರದ ಚಿತ್ರೀಕರಣ ಆರಂಭಿಸಲು ಕೃಷ್ಣ ಸನ್ನದ್ಧರಾಗಿದ್ದಾರೆ. ಕಥೆ ಮತ್ತು ಚಿತ್ರಕಥೆ ಬರೆದು ಬರಹ ರೂಪದಲ್ಲಿ ಸಿನಿಮಾ ಸಿದ್ಧಪಡಿಸಿರುವ ಅವರು, ಸಂಭಾಷಣೆಗಳನ್ನು ಹೊಸೆಯುವುದರಲ್ಲಿ ಮಗ್ನರಾಗಿದ್ದಾರೆ.

ಚಿತ್ರಕಥೆ ಬರೆದ ಕೃಷ್ಣ
ಲಾಕ್ ಡೌನ್ ನಿರ್ಬಂಧಗಳು ತೆರವುಗೊಂಡು ಚಿತ್ರೀಕರಣ ಆರಂಭಕ್ಕೆ ಅನುಮತಿ ಸಿಗುವುದಷ್ಟೇ ಬಾಕಿ. ಕೊರೊನಾ ವೈರಸ್ ಕಾರಣದಿಂದ ಚಿತ್ರಮಂದಿರಗಳು ಬಂದ್ ಆಗುವಾಗ 'ಲವ್ ಮಾಕ್‌ಟೇಲ್' ಚೆನ್ನಾಗಿ ಓಡುತ್ತಿತ್ತು. ಬಳಿಕ ಸಿನಿಮಾ ಟಿವಿ ಮತ್ತು ಒಟಿಟಿಯಲ್ಲಿಯೂ ಪ್ರಸಾರವಾಗಿ ಮತ್ತಷ್ಟು ಜನರನ್ನು ತಲುಪಿದೆ. ಲಾಕ್ ಡೌನ್ ಮುಗಿಯುವ ಮುನ್ನವೇ ಅದರ ಎರಡನೆಯ ಭಾಗ ಆರಂಭಿಸಲು ಸಿದ್ಧರಾಗಿರುವುದು ಕೃಷ್ಣ ಅವರ ವೇಗವನ್ನು ಸೂಚಿಸುತ್ತದೆ.

ಯಾವ ಪಾತ್ರಗಳು ವಾಪಸ್?
ವಿಜಯ್ ಪಾತ್ರದಲ್ಲಿ ನಟಿಸಿದ್ದ ಅಭಿಲಾಷ್ ಮತ್ತು ಸುಷ್ಮಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಖುಷಿ ಆಚಾರ್ ಎರಡನೆಯ ಭಾಗದಲ್ಲಿಯೂ ಇರಲಿದ್ದಾರೆ. ಹಾಗೆಯೇ ಸ್ವತಃ ಆದಿ ಪಾತ್ರದಲ್ಲಿ ನಟಿಸಿದ್ದ ಕೃಷ್ಣ ಹೊಸ ಕಥೆ ಹೇಳಲಿದ್ದಾರೆ. ಅವರೊಂದಿಗೆ ನಿಧಿಮಾ, ಜೋ ಮತ್ತು ಅದಿತಿ ಪಾತ್ರಗಳು ಮತ್ತೆ ಬರಲಿವೆಯೇ ಎನ್ನುವುದನ್ನು ಕೃಷ್ಣ ಬಹಿರಂಗಪಡಿಸಿಲ್ಲ.

ಎರಡನೆಯ ಭಾಗದಲ್ಲಿ ಹೊಸ ನಾಯಕಿ
ಆದರೆ ಎರಡನೆಯ ಭಾಗದಲ್ಲಿ ಹೊಸ ನಾಯಕಿಯೊಬ್ಬರು ಇರಲಿದ್ದಾರೆ ಎಂಬ ಸುಳಿವನ್ನು ಕೃಷ್ಣ ನೀಡಿದ್ದಾರೆ. ಆ ನಟಿ ಯಾರೆಂಬುದು ಇನ್ನೂ ತೀರ್ಮಾನವಾಗಿಲ್ಲ. ಸೂಕ್ತ ನಟಿಗಾಗಿ ಹುಡುಕಾಟ ನಡೆಯುತ್ತಿದೆ ಎನ್ನುವ ಮೂಲಕ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಮೊದಲ ಭಾಗದಂತೆಯೇ ರಘು ದೀಕ್ಷಿತ್ ಸಂಗೀತ ಮತ್ತು ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಾಹಣ ಚಿತ್ರಕ್ಕೆ ಇರಲಿದೆ.

ಮತ್ತೆರಡು ಚಿತ್ರಗಳಲ್ಲಿ ಕೃಷ್ಣ
ಲವ್ ಮಾಕ್‌ಟೇಲ್ 2ರ ಜತೆಗೆ ಕೃಷ್ಣ, ನಾಗಶೇಖರ್ ನಿರ್ದೇಶನದ ಶ್ರೀಕೃಷ್ಣ@ಜಿಮೇಲ್‌ಡಾಟ್‌ಕಾಂ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಂದೇಶ್ ನಾಗರಾಜ್ ನಿರ್ದೇಶನದ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ಇರಲಿದೆ. ಇದಲ್ಲದೆ ಕೃಷ್ಣ ಮತ್ತೊಂದು ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಹಲವು ವರ್ಷಗಳ ಹಿಂದೆ 'ಮನಸಾಲಜಿ' ಎಂಬ ಚಿತ್ರ ನಿರ್ದೇಶಿಸಿದ್ದ ನಟ ಅಮೂಲ್ಯ ಸಹೋದರ ದೀಪಕ್ ಅರಸ್ ಅವರ ಎರಡನೆಯ ಸಿನಿಮಾದಲ್ಲಿ ಕೂಡ ಕೃಷ್ಣ ನಾಯಕರಾಗಿದ್ದಾರೆ.


Click it and Unblock the Notifications











