'ಲವ್ ಮಾಕ್‌ಟೇಲ್' ಬಿಡುಗಡೆ ಹಿಂದಿನ ದಿನ ಹೇಗಿತ್ತು?: ಕೃಷ್ಣ ಹಂಚಿಕೊಂಡ ತಳಮಳದ ನೆನಪು
'ಲವ್ ಮಾಕ್‌ಟೇಲ್' ಚಿತ್ರ ಬಿಡುಗಡೆಯಾದ ಎರಡೇ ತಿಂಗಳಲ್ಲಿ ಥಿಯೇಟರ್, ಅಮೆಜಾನ್ ಪ್ರೈಮ್ ಬಳಿಕ ಕಿರುತೆರೆಯಲ್ಲಿಯೂ ಪ್ರಸಾರವಾಗಿದೆ. ಈ ವರ್ಷದ ಹಿಟ್ ಸಿನಿಮಾಗಳ ಪಟ್ಟಿಯಲ್ಲಿ 'ಲವ್ ಮಾಕ್‌ಟೇಲ್' ನಿಸ್ಸಂಶಯವಾಗಿ ಸ್ಥಾನ ಪಡೆದಿದೆ. ಸಿನಿಮಾ ವೀಕ್ಷಿಸಿದವರೆಲ್ಲರೂ ಮೆಚ್ಚುಗೆಯ ಮಾತನ್ನಾಡುತ್ತಿದ್ದಾರೆ. ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲು ಅರ್ಜುನ್ ಸಹೋದರ, ಅಲ್ಲು ಸಿರೀಶ್ ಕೂಡ 'ಲವ್ ಮಾಕ್‌ಟೇಲ್' ಮೆಚ್ಚಿಕೊಂಡು ಟ್ವೀಟ್ ಮಾಡಿದ್ದರು.
ಲವ್ ಮಾಕ್‌ಟೇಲ್ ಅಂತ್ಯ ದುರಂತವಾಗಿದ್ದರೂ ಆರಂಭದಿಂದ ಕೊನೆಯವರೆಗೂ ನಿಜ ಜೀವನಕ್ಕೆ ಹತ್ತಿರವಾಗುವಂತೆ, ಲವಲವಿಕೆಯ ಕಥೆಯನ್ನು ಹೇಳುತ್ತದೆ ಎಂಬ ಹೊಗಳಿಕೆಗಳನ್ನು ಗಿಟ್ಟಿಸಿಕೊಂಡಿದೆ. ಅದರಲ್ಲಿಯೂ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಡಾರ್ಲಿಂಗ್ ಕೃಷ್ಣ ಮತ್ತು ಮಿಲಿನಾ ನಾಗರಾಜ್ ಅವರ ಪ್ರಬುದ್ಧ ಅಭಿನಯವನ್ನು ಜನರು ಕೊಂಡಾಡುತ್ತಿದ್ದಾರೆ. ಮುಂದೆ ಓದಿ...

ಮೆಚ್ಚುಗೆ ಗಳಿಸಿದ ಸಿನಿಮಾ
ಜನರು ಚಿತ್ರಕ್ಕೆ ನೀಡುತ್ತಿರುವ ಪ್ರತಿಕ್ರಿಯೆಗಳು ನಿಜ ಜೀವನದಲ್ಲಿಯೂ ಪ್ರೇಮಿಗಳಾಗಿರುವ ಕೃಷ್ಣ ಮತ್ತು ಮಿಲನಾ ಅವರನ್ನು ಮುದಗೊಳಿಸಿದೆ. ಏಕೆಂದರೆ ಅವರಿಲ್ಲಿ ಕೇವಲ ಆದಿ ಮತ್ತು ನಿಧಿಮಾ ಪಾತ್ರಧಾರಿಗಳಲ್ಲ. ಚಿತ್ರದ ಕಥೆ, ಸಂಭಾಷಣೆ, ನಿರ್ಮಾಣ, ನಿರ್ದೇಶನ ಹೀಗೆ ಎಲ್ಲ ಹೊಣೆಗಾರಿಕೆಯೂ ಅವರದ್ದೇ ಆಗಿದ್ದು.

ಅಪರೂಪದ ದಾಖಲೆ
ಹಸೆಮಣೆಗೇರಲು ಸಿದ್ಧತೆ ನಡೆಸುತ್ತಿರುವ ಚಿತ್ರರಂಗದ ಮುದ್ದಾದ ಜೋಡಿ ಹೀಗೆ ಬಂಡವಾಳ ಹೂಡಿ, ಕಥೆ ಹೊಸೆದು ನಿರ್ದೇಶನ ಮಾಡಿದ್ದಲ್ಲದೆ, ನಟನೆಯನ್ನೂ ಮಾಡಿರುವ ನಿದರ್ಶನ ಅತಿ ಅಪರೂಪ. ಅಂತಹದ್ದೊಂದು ದಾಖಲೆಯನ್ನು ಕೃಷ್ಣ ಮತ್ತು ಮಿಲನಾ ಸೃಷ್ಟಿಸಿದ್ದಾರೆ.

ಬಿಡುಗಡೆಯ ಹಿಂದಿನ ದಿನ
ಸಿನಿಮಾ ಗೆದ್ದ ನಂತರ ಖುಷಿಯದ್ದು ಒಂದು ಕಥೆ. ಆದರೆ ಅದರ ಬಿಡುಗಡೆಗೂ ಹಿಂದಿನ ದಿನ ಹೇಗಿರಬಹುದು? ನಿಜಕ್ಕೂ ಚಿತ್ರತಂಡದ ಎದೆ ನೂರುಪಟ್ಟು ಜೋರಾಗಿ ಹೊಡೆದುಕೊಳ್ಳುವಂತಹ ಸಂದರ್ಭ. ಅಂತಹದ್ದೇ ಸನ್ನಿವೇಶವನ್ನು ಕೃಷ್ಣ ಮತ್ತು ಮಿಲನಾ ಎದುರಿಸಿದ್ದರು. ಅದರ ಬಗ್ಗೆ ಕೃಷ್ಣ ನೆನಪೊಂದನ್ನು ಹಂಚಿಕೊಂಡಿದ್ದಾರೆ.

ಒಂದು ವರ್ಷದ ಪರಿಶ್ರಮ
'ಲವ್ ಮಾಕ್‌ಟೇಲ್' ಬಿಡುಗಡೆಯಾಗುವ ಹಿಂದಿನ ದಿನ ರಾತ್ರಿ ಊಟಕ್ಕೆಂದು ನಾವು ಹೋಗಿದ್ದೆವು. ಒಂದು ವರ್ಷದ ಕಠಿಣ ಪರಿಶ್ರಮ ಅದು. ನಾಳೆ ಏನಾಗಲಿದೆ ಎನ್ನುವುದರ ಬಗ್ಗೆ ನಮಗೆ ಯಾವ ಐಡಿಯಾ ಕೂಡ ಇರಲಿಲ್ಲ ಎಂದು ಡಾರ್ಲಿಂಗ್ ಕೃಷ್ಣ ಹೇಳಿದ್ದಾರೆ.
ನಾಳೆ ಅನಿಶ್ಚಿತವಾಗಿತ್ತು
'ಆ ದಿನಕ್ಕಾಗಿ ಮಿಲನಾ ನಾಗರಾಜ್‌ಗೆ ಧನ್ಯವಾದ ಹೇಳಲು ಬಯಸಿದ್ದೆ. ಆಕೆಯಲ್ಲಿ ಭದ್ರತೆ ಭಾವ ಮೂಡಿಸುವುದು ಮತ್ತು ಖುಷಿಯಾಗಿಸಬೇಕಿತ್ತು. ಏಕೆಂದರೆ ನಾಳೆ ಎನ್ನುವುದು ಅನಿಶ್ಚಿತವಾಗಿತ್ತು. ಆದರೂ ಅದನ್ನು ಯಶಸ್ವಿಯಾಗಿ ಎದುರಿಸಿದೆವು. ಅದಕ್ಕಾಗಿ ನಿಮಗೆಲ್ಲರಿಗೂ ಧನ್ಯವಾದಗಳು' ಎಂದು ಟ್ವೀಟ್ ಮಾಡಿದ್ದಾರೆ.


Click it and Unblock the Notifications











