ದರ್ಶನ್ 25 ವರ್ಷದ ಸಿನಿಮಾ ಜರ್ನಿಗೆ ಅದ್ಧೂರಿ ವೇದಿಕೆ; 25 ಸಾವಿರ ಅಭಿಮಾನಿಗಳ ನಿರೀಕ್ಷೆ
ಶ್ರೀರಂಗಪಟ್ಟಣ: ನಿನ್ನೆಯಷ್ಟೇ (ಫೆಬ್ರವರಿ 16) ಚಾಲೆಂಜಿಂಗ್ ಸ್ಟಾರ್ ದರ್ಶನ್ 47ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 'ಕಾಟೇರ' ಮೆಗಾ ಸಕ್ಸಸ್ ಕಂಡ ಬಳಿಕ ದರ್ಶನ್ ಆಚರಿಸಿಕೊಂಡ ಹುಟ್ಟುಹಬ್ಬವಿದು. ಹೀಗಾಗಿ ಅಭಿಮಾನಿಗಳು ಕೂಡ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಇನ್ನೇನು ಹುಟ್ಟುಹಬ್ಬದ ಸಂಭ್ರಮ ಮುಗೀತು ಅನ್ನುವಾಗಲೇ 25 ವರ್ಷದ ಸಿನಿಮಾ ಜರ್ನಿಯನ್ನು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿದೆ.
ಇಂದು (ಫೆಬ್ರವರಿ 17) ದರ್ಶನ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷಗಳನ್ನು ಪೂರೈಸಿದ ಬೆನ್ನಲ್ಲೇ ಅದ್ದೂರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶ್ರೀರಂಗಪಟ್ಟಣದಲ್ಲಿ ದರ್ಶನ್ ಆಪ್ತ ಇಂಡುವಾಳು ಸಚ್ಚಿದಾನಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈಗಾಗಲೇ ಸಂಜೆಯ ಸಂಭ್ರಮದಕ್ಕೆ ಸಕಲ ಸಿದ್ಧತೆಗಳೂ ಕಳೆದೆರಡು ದಿನಗಳಿಂದ ಆರಂಭ ಆಗಿದೆ.

ದರ್ಶನ್ ಬೆಳ್ಳಿ ಹಬ್ಬ ಇಂದು (ಫೆಬ್ರವರಿ 17) ಸಂಜೆ 5 ಗಂಟೆಯಿಂದ ಅದ್ದೂರಿಯಾಗಿ ನಡೆಯುತ್ತಿದೆ. ಕನ್ನಡ ಚಿತ್ರರಂಗದ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಅಷ್ಟೇ ಅಲ್ಲದೆ ಸಂಗೀತ ಕಾರ್ಯಕ್ರಮಗಳು ಸೇರಿದಂತೆ ನಟಿಯರಿಂದ ನೃತ್ಯ ಕೂಡ ಇರುತ್ತೆ. ಜೊತೆಗೆ ವೇದಿಕೆ ಮೇಲೆ ದರ್ಶನ್ ಅಭಿಮಾನಿಗಳಿ ಸರ್ಪ್ರೈಸ್ ಕೂಡ ಸಿಗುವ ಸಾಧ್ಯತೆಯಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ರಾಜ್ಯದ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಇದ್ದಾರೆ. ಅದರಲ್ಲೂ ಮಂಡ್ಯ, ಮೈಸೂರು ಭಾಗಗಳಲ್ಲಿ ದರ್ಶನ್ ಫ್ಯಾನ್ಸ್ ಕೊಂಚ ಹೆಚ್ಚು ಅಂತಲೇ ಹೇಳಬಹುದು. ಕೆಲವು ಸಿನಿಮಾಗಳು ರಿಲೀಸ್ ಆಗುವ ವೇಳೆ ದರ್ಶನ್ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಅಭಿಮಾನಿಗಳಿಗಾಗಿಯೇ ಪ್ರಿ ರಿಲೀಸ್ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು. ಈಗ ತಮ್ಮ 25ನೇ ಸಿನಿಮಾ ಜರ್ನಿಯನ್ನು ಮಂಡ್ಯದ ಜಿಲ್ಲೆಯ ಜನರೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ.
'D 25: ಬೆಳ್ಳಿ ಪರ್ವ" ಕಾರ್ಯಕ್ರಮಕ್ಕೆ ಇನ್ನೇನು ಕ್ಷಣಗಣನೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ದೂರದೂರುಗಳಿಂದ ಬರುವ ಅಭಿಮಾನಿಗಳಿಗಾಗಿ ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ. ಸುಮಾರು 25 ಸಾವಿರಕ್ಕೂ ಅಧಿಕ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಹೀಗಾಗಿ ಅಷ್ಟೂ ಆಸನಗಳಿಗೆ ವ್ಯವಸ್ಥೆ ಮಾಡಲಾಗಿದೆ. ಇಷ್ಟೇ ಅಲ್ಲದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರೆ, ಅದಕ್ಕೂ ತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಇನ್ನು ಈ ಬೆಳ್ಳಿ ಪರ್ವ ಕಾರ್ಯಕ್ರಮದಲ್ಲಿ ದರ್ಶನ್ ಫೇವರಿಟ್ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾರೆ. ದರ್ಶನ್ ಅವರ ಸೂಪರ್ ಹಿಟ್ ಹಾಡುಗಳನ್ನು ವೇದಿಕೆ ಮೇಲೆ ಖ್ಯಾತ ಗಾಯಕರು ಹಾಡುತ್ತಿದ್ದಾರೆ. ಅದಕ್ಕೆ ಕೆಲವು ದಿನಗಳಿಂದಲೇ ಪ್ರಿಪರೇಷನ್ ನಡೆದಿತ್ತು. ಇನ್ನೇನು ಕೆಲವೇ ಗಂಟೆಗಳಲ್ಲಿ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.
ಇನ್ನು ಸ್ಯಾಂಡಲ್‌ವುಡ್‌ನ ಖ್ಯಾತ ನಟಿಯರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಬಿಗ್‌ಬಾಸ್ ಖ್ಯಾತಿಯ ಸಾನ್ಯಾ ಅಯ್ಯರ್, ಬೃಂದಾ ಆಚಾರ್ಯ, ಪ್ರಿಯಾಂಕಾ, ಶರಣ್ಯ ಶೆಟ್ಟಿ ಸೇರಿದಂತೆ ಹಲವರು ಪರ್ಫಾಮೆನ್ಸ್ ನೀಡುತ್ತಿದ್ದಾರೆ. ದರ್ಶನ್ ಸಿನಿಮಾದ ಹಾಡುಗಳಿಗೆ ಹೆಜ್ಜೆ ಹಾಕಿ ರಂಜಿಸಲಿದ್ದಾರೆ.
ಇವರೊಂದಿಗೆ ಸುಮಲತಾ ಅಂಬರೀಷ್, ವಿನೋದ್ ರಾಜ್, ಶರಣ್, ವಿನೋದ್ ಪ್ರಭಾಕರ್, ಧನಂಜಯ್, ಪ್ರಜ್ವಲ್ ದೇವರಾಜ್, ನೆನಪಿರಲಿ ಪ್ರೇಮ್, ನೀನಾಸಂ ಸತೀಶ್, ಅಭಿಷೇಕ್ ಅಂಬರೀಷ್, ಧನ್ವೀರ್, ಚಿಕ್ಕಣ್ಣ, ಝೈದ್ ಖಾನ್, ಯಶಸ್ ಸೂರ್ಯ, ಸೂರಜ್ ಸೇರಿದಂತೆ ಇನ್ನೂ ಹಲವು ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗುತ್ತಿದ್ದಾರೆ.


Click it and Unblock the Notifications











