Darshan: ತ್ವರಿತಗತಿಯಲ್ಲಿ ವಿಚಾರಣೆ ನಡೆಸುವಂತೆ ದರ್ಶನ್ ಮನವಿ; ಮುಂದೇನಾಗುತ್ತೆ?
ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಎರಡನೇ ಆರೋಪಿಯಾಗಿದ್ದಾರೆ. ಈ ಸಂಬಂಧ ಸದ್ಯ ಜೈಲಿನಲ್ಲಿರುವ ದರ್ಶನ್ ಜಾಮೀನು ಪಡೆಯುವುದಕ್ಕೆ ಹರಸಾಹಸ ನಡೆಸುತ್ತಿದ್ದಾರೆ. ಆದ್ರೀಗ ಟ್ರಯಲ್ ನಡೆಯುತ್ತಿದ್ದು, ವಿಚಾರಣೆ ಮುಗಿಯುವವರೆಗೂ ದರ್ಶನ್‌ಗೆ ಜಾಮೀನು ಸಿಗುವುದು ಅನುಮಾನ ಎನ್ನಲಾಗಿತ್ತು. ಹೀಗಾಗಿ ದರ್ಶನ್ ಜಾಮೀನು ಅರ್ಜಿಯನ್ನು ಸಲ್ಲಿಸುವುದಕ್ಕೆ ಹೋಗಿರಲಿಲ್ಲ.
ಇತ್ತ ಇದೇ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಪವಿತ್ರಾ ಗೌಡ ಕೂಡ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು. ಇದನ್ನು ಅರಿತಿದ್ದ ದರ್ಶನ್ ಆ ಪ್ರಯತ್ನಕ್ಕೆ ಕೈ ಹಾಕಿರಲಿಲ್ಲ. ಬೇಗನೆ ಟ್ರಯಲ್ ಮುಗಿದರೆ, ಜಾಮೀನು ಅರ್ಜಿಯನ್ನು ಸಲ್ಲಿಸುವುದಕ್ಕೆ ನಿರ್ಧರಿಸಿದಂತೆ ಇತ್ತು. ಆದರೆ, ವಿಚಾರಣೆ ತಡವಾಗುತ್ತಿದೆ ಎಂದು ಈಗ ದರ್ಶನ್ ನ್ಯಾಯಾಲಯಕ್ಕೆ ಡೇ ಟು ಡೇ ಬೇಸಿಸ್ ಮೇಲೆ ವಿಚಾರಣೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಈಗಾಗಲೇ ದರ್ಶನ್ ಪರ ವಕೀಲರು ತ್ವರಿತಗತಿಯಲ್ಲಿ ವಿಚಾರಣೆ ನಡೆಸುವಂತೆ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಕೂಡ ನ್ಯಾಯಾಲಯ ವಿಚಾರಣೆಗೆ ಎತ್ತಿಕೊಳ್ಳಲಿದೆ. ದರ್ಶನ್ ಪರ ವಕೀಲರು ಸಲ್ಲಿಸಿದ ಅರ್ಜಿಯ ಬಗ್ಗೆ ನ್ಯಾಯಾಲಯ ಏನು ಹೇಳುತ್ತೆ? ತ್ವರಿತಗತಿಯಲ್ಲಿ ವಿಚಾರಣೆ ನಡೆಸುವುದಕ್ಕೆ ಅವಕಾಶ ಸಿಗುತ್ತಾ? ಅನ್ನೋದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಯಲ್ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ. ಇದಕ್ಕೆ ಇನ್ನೂ ಸಾಕಷ್ಟು ಸಮಯ ಹಿಡಿಯಲಿದೆ. ಯಾಕಂದ್ರೆ ಈ ಪ್ರಕರಣದಲ್ಲಿ ನೂರಾರು ಸಾಕ್ಷಿಗಳು ಇವೆ. ಇವನ್ನು ವಿಚಾರಣೆ ಮಾಡುವುದಕ್ಕೆ ಇನ್ನೂ ಒಂದು ವರ್ಷ ಆದರೂ ಬೇಕಾಗುತ್ತೆ. ಈ ಕಾರಣಕ್ಕೆ ಡೇ ಟು ಡೇ ಬೇಸಿಸ್‌ನಲ್ಲಿ ವಿಚಾರಣೆ ಮಾಡುವುದಕ್ಕೆ ದರ್ಶನ್ ಪರ ವಕೀಲರು ಮನವಿ ಮಾಡಿಕೊಂಡಿದ್ದಾರೆ.
ದರ್ಶನ್ ವಕೀಲರು ಸಲ್ಲಿಸಿದ ಅರ್ಜಿಗೆ ಎಸ್‌ಪಿಪಿ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಪೊಲೀಸರು ಕೂಡ ತ್ವರಿತಗತಿಯಲ್ಲಿ ವಿಚಾರಣೆ ಮಾಡುವುದಕ್ಕೆ ಆಕ್ಷೇಪ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಹೀಗಾಗಿ ಡೇ ಟು ಡೇ ಬೇಸಿಸ್ ವಿಚಾರಣೆ ಕುತೂಹಲ ಕೆರಳಿಸಿದೆ. ಒಂದು ವೇಳೆ ನ್ಯಾಯಾಲಯ ಒಪ್ಪಿದರೆ, ದರ್ಶನ್‌ಗೆ ಬಹುಬೇಗನೆ ಜಾಮೀನು ಸಿಗುವ ಸಾಧ್ಯತೆಯಿದೆ.

ಇಂದು (ಫೆಬ್ರವರಿ 23) ದರ್ಶನ್‌ಗೆ ಇನ್ನೊಂದು ಅರ್ಜಿಯಲ್ಲಿ ಕೊಂಚ ಮಟ್ಟಿಗೆ ರಿಲೀಫ್ ಸಿಕ್ಕಿದೆ. 2024ರಲ್ಲಿ ದರ್ಶನ್ ಮಧ್ಯಂತರ ಜಾಮೀನು ಸಿಕ್ಕು ಹೊರ ಬಂದಿದ್ದರು. ಈ ವೇಳೆ ಪೊಲೀಸರು ಅವರ ಲೈಸೆನ್ಸ್ ಗನ್ ಅನ್ನು ಅಮಾನತುಗೊಳಿಸಿದ್ದರು. ದರ್ಶನ್ ಗನ್ ಅನ್ನು ಬಳಸಿ ಸಾಕ್ಷಿಗಳನ್ನು ಹೆದರಿಸಬಹುದೆಂದು ಲೈಸನ್ ಅನ್ನು ರದ್ದು ಮಾಡಿದ್ದರು. ಇದನ್ನು ಪ್ರಶ್ನಿಸಿ ದರ್ಶನ್ ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದರು.
ದರ್ಶನ್ ಪರ ವಕೀಲರು ಈ ಸಂಬಂಧ ವಾದ ಮಂಡಿಸಿದರು. ದರ್ಶನ್ 2008ರಿಂದ ಲೈಸೆನ್ಸ್ ಇರುವ ಗನ್ ಬಳಸುತ್ತಿದ್ದಾರೆ. ಜಾಮೀನು ರದ್ದಾಗುತ್ತಿದ್ದಂತೆ ಗನ್ ಅನ್ನು ಸರೆಂಡರ್ ಮಾಡಲಾಗಿತ್ತು. ಆದರೂ ದರ್ಶನ್ ಹೆಸರು ಇರುವ ಕಾರಣಕ್ಕೆ ಲೈಸನ್ ಅನ್ನು ರದ್ದಗೊಳಿಸಲಾಗಿದೆ ಎಂದು ದರ್ಶನ್ ಪರ ವಕೀಲ ಎಸ್. ಸುನೀಲ್ ಕುಮಾರ್ ವಾದ ಮಾಡಿದ್ದರು. ಬಳಿಕ ದರ್ಶನ್ ಹೆಸರು ಇದೆ ಅನ್ನೋ ಕಾರಣಕ್ಕಲ್ಲ. ಅವರ ಮೇಲೆ ಆರೋಪವಿರುವುದರಿಂದ ಲೈಸೆನ್ಸ್ ರದ್ದು ಮಾಡಲಾಗಿದೆ ಎಂದು ಹೈಕೊರ್ಟ್ ಹೇಳಿದ್ದು, ಆನಂತ್ರ ಗನ್ ಲೈಸೆನ್ಸ್ ಅಮಾನತು ಕ್ರಮಕ್ಕೆ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಮಧ್ಯಂತರ ತಡೆ ನೀಡಿದೆ.
ದರ್ಶನ್‌ಗೆ ಈ ವಿಚಾರದಲ್ಲಿ ಚಿಕ್ಕದೊಂದು ರಿಲೀಫ್ ಸಿಕ್ಕಿದೆ. ಇನ್ನು ಜಾಮೀನು ವಿಚಾರದಲ್ಲಿ ದರ್ಶನ್‌ಗೆ ಬೇಗ ರಿಲೀಫ್ ಸಿಗುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ. ಇತ್ತ ದರ್ಶನ್ ಆಗಮನಕ್ಕೆ ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಆದರೆ, ಈ ಕೇಸ್ ಟ್ರಯಲ್‌ನಲ್ಲಿ ಇದ್ದು, ಸಾಕ್ಷಿಗಳ ವಿಚಾರಣೆ ನಡೆಯಬೇಕಿದೆ. ಅದಕ್ಕೆ ಇನ್ನೂ ಸಾಕಷ್ಟು ಸಮಯ ಹಿಡಿಯುವ ಸಾಧ್ಯತೆಯಿದೆ.


Click it and Unblock the Notifications











