ಡಾ. ಕೆ. ಸುಧಾಕರ್ ಪರ ತೆಲುಗಿನ ಹಾಸ್ಯನಟ ಬ್ರಹ್ಮಾನಂದಂ ಪ್ರಚಾರ: ಇತ್ತ ದರ್ಶನ್ ಕಾಂಪೇನ್
ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಇನ್ನು ಕೆಲವೇ ಕೆಲವು ದಿನ ಬಾಕಿ ಉಳಿದಿದೆ. ಮತಯಾಚನೆಯ ಕೊನೆಯ ಹಂತದಲ್ಲಿ ಅಭ್ಯರ್ಥಿಗಳು ತಾರೆಯರನ್ನು ಕರೆಸಿ, ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಅದರಲ್ಲೂ ಡಾ. ಕೆ ಸುಧಾಕರ್ ಪರ ದಿಗ್ಗಜರೇ ಅಖಾಡಕ್ಕೆ ಇಳಿಸಿದ್ದಾರೆ.
ಒಂದ್ಕಡೆ ಕನ್ನಡದ ನಟರು ಪ್ರಚಾರ ಮಾಡುತ್ತಿದ್ದರೆ, ಅದೇ ಆಂಧ್ರದ ಗಡಿ ಭಾಗದಲ್ಲಿ ತೆಲುಗು ನಟರನ್ನು ಕರೆಸಿ ಪ್ರಚಾರ ಮಾಡಲಾಗುತ್ತಿದೆ. ಸದ್ಯ ತೆಲುಗಿನ ಹಾಸ್ಯ ನಟ ಬ್ರಹ್ಮಾನಂದಂ ಡಾ. ಕೆ ಸುಧಾಕರ್ ಪರ ಮತಯಾಚನೆ ಮಾಡಿದ್ದಾರೆ.

ಅದೇ ಇನ್ನೊಂದು ಕಡೆ ಕನ್ನಡದ ಸೂಪರ್‌ಸ್ಟಾರ್ ದರ್ಶನ್ ಕೂಡ ಡಾ.ಕೆ. ಸುಧಾರಕರ್ ಪರ ಪ್ರಚಾರ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಪ್ರಮುಖ ಏರಿಯಾಗಳಿಗೆ ತೆರಳಿ ದರ್ಶನ್ ಪ್ರಚಾರ ಮಾಡಿದ್ದಾರೆ. ಇದೇ ವೇಳೆ ಸುಧಾಕರ್ ಅವರ ಪರ ಯಾಕೆ ಪ್ರಚಾರ ಮಾಡುತ್ತಿದ್ದೇನೆ ಅಂತಾನೂ ಬಹಿರಂಗ ಪಡಿಸಿದ್ದಾರೆ.
ಕಾಮಿಡಿ ಡೈಲಾಗ್ ಹೇಳಿ ಪ್ರಚಾರ
ಆಂಧ್ರ ಹಾಗೂ ಕರ್ನಾಟಕದ ಗಡಿಭಾಗಗಳಲ್ಲಿ ತೆಲುಗು ಸಿನಿಮಾ ಪ್ರೇಮಿಗಳು ಹೆಚ್ಚಾಗಿದ್ದಾರೆ. ಬಹುತೇಕ ಮಂದಿ ಕನ್ನಡ ಹಾಗೂ ತೆಲುಗು ಎರಡೂ ಭಾಷೆಯನ್ನೂ ಮಾತಾಡುತ್ತಾರೆ. ಹೀಗಾಗಿ ಟಾಲಿವುಡ್‌ನ ಹಾಸ್ಯನಟ ಬ್ರಹ್ಮಾನಂದಂ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಪರ ಮತಯಾಚನೆ ಮಾಡಿದ್ದಾರೆ. ಕಳೆದ ಬಾರಿಯ ಬೈ ಎಲೆಕ್ಷನ್‌ನಲ್ಲೂ ಬ್ರಹ್ಮಾನಂದಂ ಸುಧಾಕರ್ ಪರ ಪ್ರಚಾರ ಮಾಡಿದ್ದರು.

ಚಿಕ್ಕಬಳ್ಳಾಪುರದ ಗ್ರಾಮ ಹಾಗೂ ಪಟ್ಟಣಗಳಲ್ಲಿ ಹಾಸ್ಯ ನಟ ಬ್ರಹ್ಮಾನಂದಂ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್‌ಗೆ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ. ಬ್ರಹ್ಮಾನಂದಂ ಬರುತ್ತಿದ್ದಂತೆ ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಇದೇ ವೇಳೆ ಬ್ರಹ್ಮಾನಂದಂ ಸಿನಿಮಾ ಡೈಲಾಗ್ ಹೇಳಿ ಜನರ ಪರ ಮತಯಾಚನೆ ಮಾಡಿದ್ದಾರೆ.
"ಸುಧಾಕರ್ ಅವರ ಪರ ಮತ ಕೇಳೋಕೆ ಬಂದಿದ್ದೇನೆ"
"ನಾನು ಇಲ್ಲಿಗೆ ಬಂದ ಉದ್ದೇಶ ಒಂದೇನೆ ಡಾಕ್ಟರ್. ಇದೇ ಏಪ್ರಿಲ್ 10 (ಮೇ 10 ಆಗಬೇಕು)ಕ್ಕೆ ಬರ್ತಿರೋ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಡಾ. ಸುಧಾಕರ್ ಅವರು ನಿಂತಿದ್ದಾರೆ. ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಅಂತ ಕೇಳುವುದಕ್ಕೇ ಬಂದಿದ್ದೇನೆ." ಎಂದು ದರ್ಶನ್ ಮತಯಾಚಿಸಿದ್ದಾರೆ.
"ನಾನು ಯಾವುದೇ ಪಕ್ಷಕ್ಕಾಗಿ, ಮತ, ಜಾತಿಯಾಗಲಿ ನೋಡುವುದಿಲ್ಲ. ನಾನು ನೋಡುವುದು ಒಂದೇ ಸ್ನೇಹ. ಯಾಕಂದ್ರೆ, ನಾನು ಸ್ನೇಹಕ್ಕೆ ತುಂಬಾನೇ ಬೆಲೆ ಕೊಡುತ್ತೇನೆ. ಅದು ಯಾರೇ ಆಗಿರಲಿ." ಎಂದು ಡಾ.ಸುಧಾಕರ್ ಪರ ಮತ ಕೇಳಿದ್ದಾರೆ.
"ನಟೋರಿಯಸ್ ಕಥೆ ಹೇಳಿದ ದರ್ಶನ್"
"ಒಂದು ಉದಾಹರಣೆ ಹೇಳುತ್ತೇನೆ ಬೇಜಾರು ಮಾಡಿಕೊಳ್ಳಬೇಡಿ. ಇದೇ ಮಂಡ್ಯದಲ್ಲಿ ನಿಮಗೆಲ್ಲರಿಗೂ ಗೊತ್ತಿರಬಹುದು. ಇಡೀ ಮಂಡ್ಯದಲ್ಲಿ ಎರಡು ಹೆಸರು ಗೊತ್ತಿರಬಹುದು. ಇಬ್ಬರು ಓಳ್ಳೆ ಫ್ಯಾನ್‌ಗಳಿದ್ದರು. ಯಾವುದೋ ಕಾರ್ಯಕ್ರಮಕ್ಕೆ ಹೋದಾಗ ನಾನು ಮಧ್ಯದಲ್ಲಿ ಕೂತಿದ್ದೆ. ಈ ಕಡೆ ರವಿ ಅಂತ ಗೊತ್ತು. ಆ ಕಡೆ ಶಂಕರ ಅಂತ ಗೊತ್ತು. ಅವರಿಗೆ ಇನ್ನೊಂದು ಹೆಸರಿತ್ತು. ಜಡೇಜ ರವಿ, ಚಿರಳ್ಳಿ ಶಂಕರ ಅಂತ ಇಬ್ಬರೂ ನಟೋರಿಯಸ್ ಕ್ರಿಮಿನಲ್‌ಗಳು. ಯಾಕೆ ಈ ಮಾತು ಹೇಳ್ತೀನಿ ಅಂದ್ರೆ, ಅಭಿಮಾನಿ ಅಂದ ಕೂಡಲೇ ನಾನು ತಲೆ ಬಾಗುತ್ತೇನೆ. ಯಾಕಂದ್ರೆ, ಅವನು ಸಿನಿಮಾ ನೋಡಿದ್ರೆ, ಒಂದು ಭಾಗದಷ್ಟು ನನಗೆ ಊಟ ಬರುತ್ತೆ." ಎಂದು ನಟೋರಿಯಸ್ ಅಭಿಮಾನಿಗಳ ಕಥೆ ಹೇಳಿದ್ದಾರೆ.
"ಇವತ್ತು ಡಾಕ್ಟರ್ ಒಳ್ಳೆ ಸ್ನೇಹಿತರು ನನಗೆ.. ನಾನು ಡಾಕ್ಟರ್ ಒಬ್ಬರು ಮಿನಿಸ್ಟರ್. ಹಿಂಗಿದ್ದಾರೆ, ಹಂಗಿದ್ದಾರೆ ಅಂತಲ್ಲ. ಅದೆಲ್ಲಾ ಪಕ್ಕಕ್ಕೆ ಇಟ್ಟಿದ್ದೀನಿ. ಸ್ನೇಹಕ್ಕೆ ತುಂಬಾನೇ ಬೆಲೆ ಕೊಡುತ್ತಾರೆ. ತುಂಬಾ ಪ್ರೀತಿ ತೋರಿಸುತ್ತಾರೆ. ಅವರಿಗೋಸ್ಕರ ಎಲ್ಲಿಗೆ ಬೇಕಾದ್ರೂ ಬರುತ್ತೇನೆ. ಏನು ಬೇಕಾದರೂ ಮಾಡುತ್ತೇನೆ." ಎಂದು ದರ್ಶನ್ ಹೇಳಿದ್ದಾರೆ.


Click it and Unblock the Notifications











