ದರ್ಶನ್ ಸಿನಿಮಾ ಅನೌನ್ಸ್ ಮಾಡಲು ಕ್ಯೂ ನಿಂತ ನಿರ್ಮಾಪಕರು: ಆರು ಮಂದಿ ಸಿಕ್ತು ಗ್ರೀನ್ ಸಿಗ್ನಲ್!
ಇಂದು (ಫೆಬ್ರವರಿ 16) ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 46ನೇ ವರ್ಷಕ್ಕೆ ಕಾಲಿಟ್ಟಿರೋ ಡಿ ಬಾಸ್ ಬರ್ತ್‌ಡೇಯನ್ನು ಅಭಿಮಾನಿಗಳು ಹಿಂದೆಂದಿಗಿಂತಲೂ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದಾರೆ. ದರ್ಶನ್ ಮನೆ ಮುಂದೆ ಅಭಿಮಾನಿಗಳ ಸಾಗರವೇ ಕಾಣಿಸುತ್ತಿದೆ.
ಕಳೆದ ಕೆಲವು ದಿನಗಳಿಂದ 'ಕ್ರಾಂತಿ' ಬಿಟ್ಟರೆ ಬೇರೆ ಸಿನಿಮಾ ಬಗ್ಗೆ ದರ್ಶನ್ ಮಾತಾಡಿದ್ದೇ ಇಲ್ಲ. ಹೀಗಾಗಿ ಅಭಿಮಾನಿಗಳಿಗೂ ಮುಂದಿನ ಸಿನಿಮಾ ಯಾವುದು ಅನ್ನೋ ಸುಳಿವು ಇರಲಿಲ್ಲ. ಆದರೆ, ಬರ್ತ್‌ಡೇ ವೇಳೆಗೆ ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿರೋ ಸಿನಿಮಾಗಳು ಅನೌನ್ಸ್ ಆಗೇ ಆಗುತ್ತೆ ಅನ್ನೋದು ಗೊತ್ತಿತ್ತು.
ನಿರೀಕ್ಷೆಯಂತೆ ಕನ್ನಡದ ನಿರ್ಮಾಪಕರು ದರ್ಶನ್ ಸಿನಿಮಾ ಅನೌನ್ಸ್ ಮಾಡುವುದಕ್ಕೆ ಕ್ಯೂನಲ್ಲಿ ನಿಂತಿದ್ದರು. ಹುಟ್ಟುಹಬ್ಬದ ದಿನವೇ ದರ್ಶನ್‌ಗೆ ವಿಶ್ ಮಾಡುವುದರ ಜೊತೆ ತಮ್ಮ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಹಾಗಿದ್ದರೆ, ದರ್ಶನ್ ಜೊತೆ ಸಿನಿಮಾ ಮಾಡುವ ಆ ನಿರ್ಮಾಣ ಸಂಸ್ಥೆಗಳು ಯಾವುವು? ನಿರ್ದೇಶಕರು ಯಾರು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಮಿಲನ ಪ್ರಕಾಶ್ ಸಿನಿಮಾ ಅನೌನ್ಸ್
ಸ್ಯಾಂಡಲ್‌ವುಡ್‌ನಲ್ಲಿ 'ಮಿಲನ', 'ವಂಶಿ', 'ತಾರಕ್' ಅಂತಹ ಎವರ್‌ಗ್ರೀನ್ ಸಿನಿಮಾಗಳನ್ನು ಕೊಟ್ಟಿರೋ ನಿರ್ದೇಶಕ ಪ್ರಕಾಶ್. ಬಹಳ ದಿನಗಳಿಂದ ದರ್ಶನ್ ಜೊತೆ ಮತ್ತೊಂದು ಸಿನಿಮಾ ಮಾಡುತ್ತಾರೆ ಅನ್ನೋ ಸುದ್ದಿ ಓಡಾಡುತ್ತಲೇ ಇತ್ತು. ನಿರೀಕ್ಷೆಯಂತೆ ದರ್ಶನ್ ಹುಟ್ಟುಹಬ್ಬದಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ. ಬಹುಶ: ದರ್ಶನ್ 56ನೇ ಸಿನಿಮಾ ಮುಗಿಯುತ್ತಿದ್ದಂತೆ ಮಿಲನ ಪ್ರಕಾಶ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ.

ಪ್ರೊಡಕ್ಷನ್ ನಂ 14
ದರ್ಶನ್ ಸಿನಿಮಾವನ್ನು ಅನೌನ್ಸ್ ಮಾಡಲು ಕ್ಯೂ ನಿಂತ ನಿರ್ಮಾಪಕರಲ್ಲಿ ರಮೇಶ್ ಪಿ ಪಿಳ್ಳೈ ಹೆಸರಿದೆ. ಇವರು 'ಪ್ರೊಡಕ್ಷನ್ ನಂ 14' ಹೆಸರಲ್ಲಿ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಆದರೆ, ನಿರ್ಮಾಪಕ ರಮೇಶ್ ಅವರದ್ದು ಎಷ್ಟನೇ ಸಿನಿಮಾ ಅನ್ನೋದು ಮಾತ್ರ ಇನ್ನಷ್ಟೇ ರಿವೀಲ್ ಆಗಬೇಕಿದೆ.

ಶಿವಣ್ಣನ ಸಿನಿಮಾ ಪ್ರಡ್ಯೂಸರ್‌ಗೆ ಸಿನಿಮಾ
ಶಿವಣ್ಣ ಹಾಗೂ ರಮ್ಯಾ ಕಾಂಬಿನೇಷನ್‌ನಲ್ಲಿ ಬಂದಿದ್ದ 'ಆರ್ಯನ್' ಸಿನಿಮಾ ನಿರ್ಮಾಪಕರಿಗೆ ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ನಿರ್ಮಾಪಕ ಧ್ರುವ್ ದಾಸ್ ಕನ್ನಡದಲ್ಲಿ 'ಆರ್ಯನ್' ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈಗ ಇದೇ ನಿರ್ಮಾಪಕರು ದರ್ಶನ್‌ಗೂ ಸಿನಿಮಾ ಮಾಡುತ್ತಿದ್ದಾರೆ. 'ಪ್ರೊಡಕ್ಷನ್ ನಂ 4' ಹೆಸರಲ್ಲಿ ಧ್ರುವ್ ದಾಸ್ ಸಿನಿಮಾ ಅನೌನ್ಸ್ ಮಾಡಿದ್ದಾರೆ.

ಪ್ರೊಡಕ್ಷನ್ ನಂ 7
ಸ್ಯಾಂಡಲ್‌ವುಡ್‌ನ ಮತ್ತೊಬ್ಬ ದುಬಾರಿ ನಿರ್ಮಾಪಕ ಸೌಂದರ್ಯ ಜಗದೀಶ್. ಈಗಾಗಲೇ ಹಲವು ಸಿನಿಮಾಗಳನ್ನು ಕನ್ನಡದಲ್ಲಿ ನಿರ್ಮಾಣ ಮಾಡಿದ್ದಾರೆ. ಆದರೆ, ಕೆಲವು ವರ್ಷಗಳಿಂದ ಸಿನಿಮಾ ನಿರ್ಮಾಣಕ್ಕೆ ಸೌಂದರ್ಯ ಜಗದೀಶ್ ಕೈ ಹಾಕಿರಲಿಲ್ಲ. ಆದ್ರೀಗ ದರ್ಶನ್ ಬರ್ತ್‌ಡೇಗೆ ಹೊಸ ಸಿನಿಮಾವನ್ನು 'ಪ್ರೊಡಕ್ಷನ್ ನಂ 7' ಹೆಸರಲ್ಲಿ ಅನೌನ್ಸ್ ಮಾಡಿದ್ದಾರೆ.

ಸಚ್ಚಿದಾನಂದರಿಂದ ಸಿನಿಮಾ
ದರ್ಶನ್ ಆಪ್ತ ಗೆಳೆಯ ಸಚ್ಚಿದಾನಂದ ಇಂಡುವಾಳು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಸಿನಿಮಾವನ್ನು ತರುಣ್ ಸುಧೀರ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಆದರೆ, ಎಷ್ಟನೇ ಸಿನಿಮಾ ಅನ್ನೋದು ಇನ್ನೂ ಅನೌನ್ಸ್ ಆಗಿಲ್ಲ.

ದರ್ಶನ್, ಸೂರಪ್ಪ ಬಾಬು ಸಿನಿಮಾ
'ಕೋಟಿಗೊಬ್ಬ 3' ಸಿನಿಮಾ ಮಾಡಿದ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಸೂರಪ್ಪ ಬಾಬು ಸಿನಿಮಾ ಮಾಡುತ್ತಾರೆ ಅನ್ನೋ ಸುದ್ದಿಯಿತ್ತು. ಅದರಂತೆ ದರ್ಶನ್ ಹುಟ್ಟುಹಬ್ಬಕ್ಕೆ ಸೂರಪ್ಪ ಬಾಬು ಸಿನಿಮಾ ಅನೌನ್ಸ್ ಮಾಡಿದ್ದಾರೆ. ಆದರೆ, ಸೂರಪ್ಪ ಬಾಬು ಅವರದ್ದು ಎಷ್ಟನೇ ಸಿನಿಮಾ ಅನ್ನೋದು ಮಾತ್ರ ಇನ್ನೂ ರಿವೀಲ್ ಆಗಿಲ್ಲ. ಒಟ್ನಲ್ಲಿ ಈ ಬಾರಿ ಹುಟ್ಟುಹಬ್ಬಕ್ಕೆ ದರ್ಶನ್ ಸುಮಾರು 6 ಮಂದಿಗೂ ಹೆಚ್ಚು ನಿರ್ಮಾಪಕರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ದರ್ಶನ್ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.


Click it and Unblock the Notifications











