'ಡೆವಿಲ್' ಸಾಂಗ್ ರಿಲೀಸ್ ಆಗುತ್ತಿದ್ದಂತೆ ಪತ್ರ ಬರೆದ ದರ್ಶನ್ ನಾಯಕಿ ರಚನಾ ರೈ; ಅದರಲ್ಲೇನಿದೆ?
2025ರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ದರ್ಶನ್ ನಟಿಸಿರುವ 'ಡೆವಿಲ್' ಸಿನಿಮಾ ಕೂಡ ಒಂದು. ಇಷ್ಟೊತ್ತಿಗಾಗಲೇ ರಿಲೀಸ್ ಆಗಬೇಕಿದ್ದ ಸಿನಿಮಾ ಡಿಸೆಂಬರ್ 12ಕ್ಕೆ ರಿಲೀಸ್ ಆಗುತ್ತಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಹೆಸರು ಬಾರದೇ ಇದ್ದಿದ್ದರೆ, ಈಗಾಗಲೇ ಬಾಕ್ಸಾಫೀಸ್‌ನಲ್ಲಿ 'ಡೆವಿಲ್' ಅಬ್ಬರಿಸಿಬಿಡುತ್ತಿತ್ತು. 'ಕಾಟೇರ' ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದ ದಾಸನಿಗೆ ಮತ್ತೊಂದು ಯಶಸ್ಸು ಸಿಗುತ್ತಿತ್ತೆಂದು ನಿರೀಕ್ಷೆ ಮಾಡಬಹುದಾಗಿತ್ತು. ಆದ್ರೀಗ ಪರಿಸ್ಥಿತಿ ಬೇರೆನೇ ಇದೆ.
ದರ್ಶನ್ ಈಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಯಾಗಿ ಜೈಲಿನಲಿದ್ದಾರೆ. ಮೊದಲೇ ಸಿನಿಮಾ ಶೂಟಿಂಗ್ ತಡವಾಗಿದೆ. ಹೀಗಾಗಿ ಜೈಲಿನಿಂದ ಹೊರ ಬರುವವರೆಗೂ ಕಾಯುವ ಸ್ಥಿತಿಯಲ್ಲಿ ನಿರ್ಮಾಪಕರು ಇಲ್ಲ. ಹೀಗಾಗಿ "ಇದ್ರೆ ನೆಮ್ಮದಿಯಾಗ್ ಇರ್ಬೇಕ್" ಹಾಡಿನ ಮೂಲಕವೇ ಸಿನಿಮಾದ ಪ್ರಚಾರವನ್ನು ಆರಂಭಿಸಲಾಗಿದೆ. ಮೊದಲ ಹಾಡು ಹೊರ ಬೀಳುತ್ತಿದ್ದಂತೆ ಸಿನಿಮಾ ನಾಯಕಿ ರಚನಾ ರೈ ಅಭಿಮಾನಿಗಳು ಹಾಗೂ ಮಾಧ್ಯಮಗಳಿಗೆ ಪತ್ರವೊಂದನ್ನು ಬರೆದಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದಲ್ಲಿ ಅವಕಾಶಕ್ಕಾಗಿ ಗಿಟ್ಟಿಸಿಕೊಳ್ಳುವುದು ಅದೆಷ್ಟೋ ಮಂದಿಯ ಕನಸು. ಇಂತಹದ್ದೊಂದು ಕನಸನ್ನು ನನಸು ಮಾಡಿಕೊಂಡಿರೋದು ಮಂಗಳೂರು ಬೆಡಗಿ ರಚನಾ ರೈ. ಇಲ್ಲಿವರೆಗೂ ಸೈಲೆಂಟ್ ಆಗಿದ್ದ ರಚನಾ ರೈ, 'ಡೆವಿಲ್' ಸಿನಿಮಾದ ಮೊದಲ ಹಾಡು ರಿಲೀಸ್ ಆಗುತ್ತಿದ್ದಂತೆ ತಮ್ಮ ಅಭಿಮಾನಿಗಳಿಗೆ ಹಾಗೂ ಮಾಧ್ಯಮಗಳಿಗೆ ಪತ್ರವೊಂದನ್ನು ಬರೆದಿದ್ದಾರೆ.
'ಡೆವಿಲ್' ನಾಯಕಿ ರಚನಾ ರೈ ಚಿತ್ರಂಗಕ್ಕೆ ಹೊಸಬರೇನೂ ಅಲ್ಲ. ನಟನೆಯಲ್ಲಿ ಅವರಿಗೆ ಸಾಕಷ್ಟು ಅನುಭವವಿದೆ. ತುಳು ಸಿನಿಮಾಗಳಲ್ಲಿ ರಚನಾ ರೈ ಈಗಾಗಲೇ ನಟಿಸಿದ್ದಾರೆ. ಈ ಸಿನಿಮಾಗಳ ಹಿಂದೆನೇ ರಚನಾ ರೈಗೆ ಬಿಗ್ ಪ್ರಾಜೆಕ್ಟ್ ಸಿಕ್ಕಿದೆ. ಅದುವೇ 'ಡೆವಿಲ್'. ವೃತ್ತಿ ಬದುಕಿನ ಆರಂಭದಲ್ಲಿಯೇ ರಚನಾ ರೈಗೆ ಬಿಗ್ ಪ್ರಾಜೆಕ್ಟ್ ಸಿಕ್ಕಿದೆ. ಹೀಗಾಗಿ ಗೌರಿ-ಗಣೇಶ ಹಬ್ಬದ ಶುಭಾಶಯಗಳನ್ನು ಕೋರಿತ್ತಾ ತಮ್ಮ ಅಭಿಮಾನಿಗಳಿಗೆ ಹಾಗೂ ಮಾಧ್ಯಮಗಳಲ್ಲಿ ಬೆಂಬಲ ಕೋರಿ ಪತ್ರವೊಂದರನ್ನು ಬರೆದಿದ್ದಾರೆ.

ರಚನಾ ರೈ ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಇವರು ಕೇವಲ ನಟಿಯಾಗಿ ಅಷ್ಟೇ ಗುರುತಿಸಿಕೊಂಡಿಲ್ಲ. ಬದಲಾಗಿ ಭರತನಾಟ್ಯಂ ಡ್ಯಾನ್ಸರ್ ಆಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ ಕೂಡ ಹೌದು. ನಟನೆಯೊಂದಿಗೆ ಡ್ಯಾನ್ಸ್, ಕ್ರೀಡೆಯಲ್ಲೂ ಸಕ್ರಿಯರಾಗಿದ್ದರು. ಈಗ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರನ್ನು ಬಹುಮುಖ ಪ್ರತಿಭೆ ಎಂದೇ ಹೇಳಬಹುದು.
ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೂ ಮುನ್ನ ತುಳು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಅಲ್ಲಿ ಇವರ ಪ್ರತಿಭೆಯನ್ನು ಗುರುತಿಸಿ ಕನ್ನಡ ಚಿತ್ರರಂಗಕ್ಕೆ ಕರೆದುಕೊಂಡು ಬರಲಾಯಿತು. ಧನ್ವೀರ್ ನಟಿಸಿದ 'ವಾಮನ' ಸಿನಿಮಾದಲ್ಲಿ ಇವರ ಪ್ರತಿಭೆಯನ್ನು ಜನರು ಮೆಚ್ಚಿಕೊಂಡಿದ್ದರು. ಈ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿದ 'ಡೆವಿಲ್' ಸಿನಿಮಾಗೆ ಆಯ್ಕೆ ಆಗಿದ್ದರು. ಇಷ್ಟರೊಳಗೆ 'ಡೆವಿಲ್' ಮುಗಿಯಬೇಕಿತ್ತು. ಆದರೆ, ರೇಣುಕಾಸ್ವಾಮಿ ಕೇಸ್‌ನಲ್ಲಿ ದರ್ಶನ್ ಆರೋಪಿಯಾಗಿರುವುದರಿಂದ ಬಿಡುಗಡೆ ಹೆಚ್ಚು ಕಡಿಮೆ ಒಂದು ವರ್ಷ ತಡವಾಗಿದೆ.


Click it and Unblock the Notifications











