"ಅಶ್ವಿನಿ ಮೇಡಂಗೆ ನ್ಯಾಯ ಸಿಗಬೇಕು.. ಅದಕ್ಕೆ ನಾವೇ ಬಂದು ದೂರು ಕೊಟ್ಟಿದ್ದೇವೆ"; ದರ್ಶನ್ ಫ್ಯಾನ್ಸ್
ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿಂದಿಸಿ ಕಿಡಿಗೇಡಿ ಮಾಡಿದ ಟ್ವೀಟ್ (ಎಕ್ಸ್) ರಾಜವಂಶದ ಅಭಿಮಾನಿಗಳನ್ನು ಕೆರಳಿಸಿತ್ತು. ಈ ಸಂಬಂಧ ಇಂದು (ಏಪ್ರಿಲ್ 8) ಗೃಹಮಂತ್ರಿ ಡಾ.ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ, ಕಿಡಿಗೇಡಿಯನ್ನು ಬಂಧಿಸುವಂತೆ ದೂರನ್ನು ನೀಡಿದ್ದರು. ಅತ್ತ ಗೃಹಮಂತ್ರಿಗಳು ಕೂಡ ಕಿಡಿಗೇಡಿಯನ್ನು ಬಂಧಿಸುವ ಭರವಸೆ ನೀಡಿದ್ದರು.
ಈ ಬೆಳೆವಣಿಗೆ ಬೆನ್ನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಕೂಡ ಪ್ರತ್ಯೇಕವಾಗಿ ದೂರನ್ನು ದಾಖಲಿಸಿದ್ದಾರೆ. ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದರ್ಶನ್ ಅಭಿಮಾನಿಗಳು ದೂರು ನೀಡಿದ್ದಾರೆ.

ಅಶ್ವಿನಿ ಪುನೀತ್ ರಾಜ್‌ಕುಮಾರ್, ಸುಮಲತಾ, ದರ್ಶನ್ ಅವರ ತಾಯಿ ಮೀನಾ ತೂಗುದೀಪ ಶ್ರೀನಿವಾಸ್ ಅವರನ್ನು ನಿಂದಿಸಿ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಇಂತಹ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇಷ್ಟೇ ಅಲ್ಲದೆ ಶಿವಣ್ಣ ಹಾಗೂ ದರ್ಶನ್ ಇಬ್ಬರೂ ಚೆನ್ನಾಗಿದ್ದಾರೆ. ಇವರ ಹೆಸರನ್ನು ಎತ್ತಬೇಡಿ ಎಂದು ಸಂದೇಶ ಕೊಟ್ಟಿದ್ದಾರೆ.
"ನಮಗೂ ಬೇಜಾರಾಗಿದೆ"
ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ಕೆಟ್ಟ ಪದಗಳನ್ನು ಬಳಸಿ ನಿಂದಿಸಿರುವುದರಿಂದ ನಮಗೂ ಬೇಜಾರಾಗಿದೆ. ಅದಕ್ಕೆ ನಾವೂ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದೇವೆ ಎಂದು ದರ್ಶನ್ ಅಭಿಮಾನಿ ನಾಗರಾಜ್ ವಿಸ್ತಾರ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. "ನಾಲ್ಕನೇ ತಾರೀಕು ಆ ಪೋಸ್ಟ್ ಬಂತು. ಅದನ್ನು ನೋಡಿ ನಮಗೂ ತುಂಬಾನೇ ಬೇಜಾರಾಯ್ತು. ಅದ್ಯಾರು ಅಂತ ನಮಗೆ ಗೊತ್ತಿರುವ ಹುಡುಗರಿಗೆಲ್ಲ ಕೇಳಿದ್ವಿ. ಯಾರನ್ನೇ ಕೇಳಿದರೂ ನಮಗೆ ಗೊತ್ತಿಲ್ಲ ಅಂತಾನೇ ಹೇಳುತ್ತಾರೆ. ಒಂದು 24 ಗಂಟೆ ಆಗಿರಬಹುದು. ಅಷ್ಟರಲ್ಲೇ ಇನ್ನೊಬ್ಬ ನಟನ ಅಭಿಮಾನಿ ಅಂತ ಬದಲಾಯ್ತು. ಮತ್ತೆ ಇನ್ನೊಬ್ಬರ ಅಭಿಮಾನಿ ಅಂತ ಬದಲಾಯ್ತು. ಇದನ್ನು ನೋಡಿ ಯಾರೋ ಬೇಕು ಅಂತಾನೇ ಮಾಡಿಸುತ್ತಿರೋದು ಅಂತ ಗೊತ್ತಾಯ್ತು." ಎಂದು ನಾಗರಾಜ್ ಹೇಳಿಕೊಂಡಿದ್ದಾರೆ.
"ಸುಮಲತಾ ಅವರೂ ಮಹಿಳೆನೇ ತಾನೇ"
ಅಶ್ವಿನಿ ಪುನೀತ್ ರಾಜ್‌ಕುಮಾರ್ ಜೊತೆನೇ ಸುಮಲತಾ ಹಾಗೂ ಮೀನಾ ತೂಗುದೀಪ ಶ್ರೀನಿವಾಸ್ ಅವರನ್ನು ನಿಂದಿಸಿ ಪೋಸ್ಟ್ ಮಾಡಲಾಗಿದೆ. ಅವರೂ ಮಹಿಳೆಯರೇ ತಾನೇ. ಹೀಗಾಗಿ ಎಲ್ಲಾ ನ್ಯಾಯ ಒದಗಿಸುವಂತೆ ದೂರು ದಾಖಲಿಸಿದ್ದೇವೆ ಎಂದು ದರ್ಶನ್ ಅಭಿಮಾನಿ ನಾಗರಾಜ್ ಹೇಳಿಕೆ ಕೊಟ್ಟಿದ್ದಾರೆ. "ಈಗ ಸುಮಲತಾ ಹಾಗೂ ದರ್ಶನ್ ತಾಯಿಯವರ ಪೋಸ್ಟ್ ಬಂತು. ಅವರು ಮಹಿಳೆಯರೇ ತಾನೇ. ಕಾನೂನು ಎಲ್ಲರಿಗೂ ಒಂದೇನೆ ತಾನೆ. ಇವರಿಗೆ ನೋವು ಆಗುವುದಿಲ್ಲವೇ? ಅವರಿಗೂ ನೋವಾಗಿದೆ. ಇವರಿಗೂ ನೋವಾಗಿದೆ. ಅದಕ್ಕೆ ನಾವೇ ದೂರು ಕೊಟ್ಟು ಕಾನೂನು ಪ್ರಕಾರವಾಗಿ ಕ್ರಮ ಕೈಗೊಳ್ಳಬೇಕು ಹೇಳಿದ್ದೇವೆ. ಇವರಿಗೆ ಆಗಿರುವುದಕ್ಕೂ ನ್ಯಾಯ ಸಿಗಬೇಕು. ಅಶ್ವಿನಿ ಮೇಡಂಗೆ ಆಗಿರುವುದಕ್ಕೂ ನ್ಯಾಯ ಸಿಗಬೇಕು. ಈ ಉದ್ದೇಶದಿಂದ ನಾವೇ ಬಂದು ದೂರು ಕೊಟ್ಟಿದ್ದೇವೆ." ಎಂದಿದ್ದಾರೆ.

"ಅಶ್ವಿನಿ ಮೇಡಂ ಪರ ಯಾಕೆ ಟ್ವೀಟ್ ಮಾಡಿಲ್ಲ.."
ಇದೇ ವೇಳೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪರ ದರ್ಶನ್ ಟ್ವೀಟ್ ಮಾಡಬಹುದಿತ್ತು ಅನ್ನೋ ಆರೋಪ ಕೂಡ ಕೇಳಿ ಬಂದಿತ್ತು. ಅದಕ್ಕೆ ದರ್ಶನ್ ಆಪ್ತ ಹಾಗೂ ಅಭಿಮಾನಿ ನಾಗರಾಜ್ ಹೀಗೆ ಪ್ರತಿಕ್ರಿಯಿಸಿದ್ದಾರೆ. "ಅಶ್ವಿನಿ ಮೇಡಂ ಪರ ಯಾಕೆ ಟ್ವೀಟ್ ಮಾಡಿಲ್ಲ ಅಂದರೆ, ಅವರು ಆಸ್ಪತ್ರೆಯಲ್ಲಿ ಇದ್ದರು. ಬಲಗೈಗೆ ಡ್ರಿಪ್ಸ್ ಹಾಕಿದ್ದರು. ಎಡಗೈಗೆ ಬ್ಯಾಂಡೇಜ್ ಹಾಕಿದ್ದರು. ನೀರು ಕುಡಿಸುವುದಕ್ಕೂ ಇನ್ನೊಬ್ಬರು ಕುಡಿಸಬೇಕು. ಅವರು ಹೇಗೆ ಟ್ವೀಟ್ ಮಾಡುತ್ತಾರೆ? ಈಗ ಸುಮಲತಾ, ದರ್ಶನ್ ಅವರ ಪತ್ನಿ, ತಾಯಿಗೂ ಹೀಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಅವರ ಪರವಾಗಿಯೂ ಟ್ವೀಟ್ ಮಾಡಿಲ್ವಲ್ಲ. ಅವರ ನೋವಿನಲ್ಲಿ ಅವರು ಇದ್ದಾರೆ. ಒಂದ್ಕಡೆ ಕೈ ನೋವು. ಇನ್ನೊಂದು ಕಡೆ ಈ ನೋವು." ಎಂದು ಪ್ರತಿಕ್ರಿಯೆ ನೀಡಿದ್ದಾರೆ.
"ಶಿವಣ್ಣ-ದರ್ಶನ್ ಚೆನ್ನಾಗಿದ್ದಾರೆ"
"ಶಿವಣ್ಣ ಅವರೂ ಚೆನ್ನಾಗಿದ್ದಾರೆ. ದರ್ಶನ್ ಅವರೂ ಚೆನ್ನಾಗಿದ್ದಾರೆ. ಇಡೀ ಚಿತ್ರರಂಗ ಚೆನ್ನಾಗಿದೆ. ಮೊನ್ನೆ ಕಾವೇರಿ ಹೋರಾಟದಲ್ಲೂ ದರ್ಶನ್ ಅವರು ಶಿವಣ್ಣನನ್ನು ಪ್ರೀತಿಯಿಂದ ಅಪ್ಪಿಕೊಂಡು ನಮಸ್ಕಾರ ಮಾಡಿದ್ರು. ಆ ರೀತಿ ಎಲ್ಲರೂ ಚೆನ್ನಾಗಿದ್ದಾರೆ. ನೀವು ಸೋಶಿಯಲ್ ಮೀಡಿಯಾ ಲೈಕ್ಸ್ ಶೇರ್ ಹೆಚ್ಚು ಮಾಡಿಕೊಳ್ಳುವುದಕ್ಕೆ, ನಿಮ್ಮ ಬೇಳೆ ಕಾಳು ಬೇಯಿಸಿಕೊಳ್ಳುವುದಕ್ಕೆ ಯಾಕೆ ಅವರ ಹೆಸರು ಹೇಳುತ್ತಿದ್ದಾರಾ? ದರ್ಶನ್ ಹೆಸರು ಹೇಳ್ಬೇಡಿ. ಶಿವಣ್ಣನ ಹೆಸರು ಹೇಳ್ಬೇಡಿ, ದೊಡ್ಮನೆ ಅಂತ ಹೇಳ್ಬೇಡಿ. ಇವರ ಹೆಸರು ಎತ್ತದೆ ಏನ್ಬೇಕಾದ್ರೂ ಮಾಡಿಕೊಳ್ಳಿ." ಎಂದು ದರ್ಶನ್ ಅಭಿಮಾನಿ ಸಂದೇಶ ರವಾನಿಸಿದ್ದಾರೆ.


Click it and Unblock the Notifications











