"ನನಗೂ ಲವ್ ಮಾಡೋಕೆ ಇಷ್ಟ.. ಯಾರೂ ಬಿಡ್ತಿಲ್ಲ"; ಧನ್ವೀರ್ 'ವಾಮನ' ವೀಕ್ಷಿಸಿ ದರ್ಶನ್ ಮೊದಲ ಪ್ರತಿಕ್ರಿಯೆ
ಧನ್ವೀರ್ ನಟಿಸಿರುವ 'ವಾಮನ' ಸಿನಿಮಾವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ವೀಕ್ಷಿಸಿದ್ದಾರೆ. ನಾಯಕ ನಟ ಧನ್ವೀರ್ ಹಾಗೂ ಚಿಕ್ಕಣ್ಣ ಜೊತೆಗೆ ಸಿನಿಮಾ ಇಡೀ ಸಿನಿಮಾ ನೋಡಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಆರೋಪದ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬಂದಿದ್ದ ದರ್ಶನ್ ಸಿನಿಮಾ ಬಗ್ಗೆ ರಿಯಾಕ್ಷನ್ ನೀಡಿದ್ದಾರೆ.
'ವಾಮನ' ಸಿನಿಮಾ ನೋಡಿ ಧನ್ವೀರ್ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ನಾಲ್ಕನೇ ಸಿನಿಮಾದಲ್ಲಿ ಧನ್ವೀರ್ ಸಿಕ್ಕಾಪಟ್ಟೆ ಮಾಗಿದ್ದಾರೆ. ಹಿಂದಿನ ಮೂರು ಸಿನಿಮಾಗಳಿಗೂ ನಾಲ್ಕನೇ ಸಿನಿಮಾಗೂ ವ್ಯತ್ಯಾಸ ಕಾಣಿಸುತ್ತೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗೇ ಧನ್ವೀರ್ ಈ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ಲವ್ ಮಾಡಿದ್ದಾರೆ. ನನಗೂ ಹಾಗೆ ಲವ್ ಮಾಡುವುದಕ್ಕೆ ಇಷ್ಟ. ಆದರೆ, ಯಾರೂ ಮಾಡುವುದಕ್ಕೆ ಕೊಡುತ್ತಿಲ್ಲ ಎಂದು ಕಾಲೆಳೆದಿದ್ದಾರೆ.

"ಬಜಾರ್ ಆಗಬಹುದು. ಹಾಗೇ ಮೂರು ಸಿನಿಮಾ. ಇದು ಧನ್ವೀರ್ ಅವರ ನಾಲ್ಕನೇ ಸಿನಿಮಾ. ನೀವೆಲ್ಲ ಟ್ರೈಲರ್ ನೋಡಿದ್ದೀರ. ಮಾಸ್ ಸಿನಿಮಾ ಇರಬಹುದು ಅಂದುಕೊಂಡಿರಬಹುದು. ಮಾಸ್ ಜೊತೆಗೆ ತಾಯಿ ಸೆಂಟಿಮೆಂಟ್ ಇದೆ. ತಾಯಿ ಎಷ್ಟು ಮುಖ್ಯ. ತಂದೆ ಏನು ಮಾಡುತ್ತಾನೆ. ಇಂತಹ ಎಲಿಮೆಂಟ್ಸ್ ತುಂಬಾನೇ ಚೆನ್ನಾಗಿದೆ. ಫಸ್ಟ್ ಹಾಫ್ ನೋಡಿದಾಗ ಏನೋ ನೋಡುತ್ತಿದ್ದೇವಲ್ಲ ಅಂತ ಅನಿಸಿತ್ತು. ಅದು ಮುಗಿದ ಮೇಲೆ ಇದು ಇನ್ನೊಂದು ತರ ಇದೆಯಲ್ಲ ಅಂತ ಅನಿಸುತ್ತೆ ಅಂತಹ ಒಂದು ಸಿನಿಮಾ." ಎಂದು ದರ್ಶನ್ ವಾಮನ ಸಿನಿಮಾ ನೋಡಿದ ಬಳಿಕೆ ಅಭಿಪ್ರಾಯ ಪಟ್ಟಿದ್ದಾರೆ.
ವಾಮನ ಸಿನಿಮಾದಲ್ಲಿ ತನಗೆ ಏನೆಲ್ಲ ಇಷ್ಟ ಆಯ್ತು ಅನ್ನೋದನ್ನು ಹೇಳಿದ್ದಾರೆ. "ನನಗೆ ತುಂಬಾನೇ ಇಷ್ಟ ಆಗಿದ್ದು ಏನಂದ್ರೆ, ಫೈಟ್‌ಗಳಲ್ಲಿ, ಮುದ್ದು ರಾಕ್ಷಿಸಿ ಬಗ್ಗೆ ನಾನು ಹೇಳಿದೆ. ಟ್ರೈಲರ್ ದಿನಾನೂ ಹೇಳಿದೆ. ತುಂಬಾನೇ ಒಳ್ಳೆಯ ಸಾಂಗ್. ಆಮೇಲೆ ಮೆಲೋಡಿಗಳು ತುಂಬಾನೇ ಚೆನ್ನಾಗಿದೆ. ಮೂರು ಸಿನಿಮಾ ಬಿಟ್ಟು ನಾಲ್ಕನೇ ಸಿನಿಮಾಗೆ ಧನ್ವೀರ್ ಬೇರೆ ತರಾನೇ ಕಾಣಿಸುತ್ತಾನೆ. ಫೈಟ್‌ಗಳು ಸುಮ್ಮನೆ ಹೊಡಿ ಬಡಿ ಅಂತಿಲ್ಲ. ಇಂದಿನ ದಿನಗಳಲ್ಲಿ ಪೊಟ್ರೈಟ್ ಮಾಡುತ್ತಾರಲ್ಲ ಹಾಗಿದೆ." ಎಂದಿದ್ದಾರೆ.

'ವಾಮನ' ಸಿನಿಮಾ ಫೈಟ್ ಸೀಕ್ವೆನ್ಸ್ ಅನ್ನು ಮೆಚ್ಚಿಕೊಂಡಿದ್ದಾರೆ. "ಧನ್ವೀರ್ 6.3 ಇದ್ದಾನೆ. ನನಗಿಂತ ಒಂದು ಒಂದೂವರೆ ಅಡಿ ಎತ್ತರವಿದ್ದಾನೆ. ಈ ಫೈಟ್‌ನಲ್ಲಿ ಕಾಲುಗಳನ್ನು ತುಂಬಾನೇ ಚೆನ್ನಾಗಿ ಬಳಸಿದ್ದಾರೆ. ಉದ್ದಕ್ಕೆ ಇರುವವರಿಗೆ ಅಪ್ಪರ್ ಬಾಡಿ ಚಿಕ್ಕದಿರುತ್ತೆ. ಲೋವರ್ ಬಾಡಿ ಚಿಕ್ಕದಿರುತ್ತೆ. ಕಾಲನ್ನು ತುಂಬಾನೇ ಚೆನ್ನಾಗಿ ಬಳಸಿಕೊಂಡಿದ್ದಾರೆ. ನೀಟ್ ಕ್ಲೀನ್ ಸಿನಿಮಾ. ಹಾಗೇ ತಾಯಿ ಜೊತೆಗಿನ ದೃಶ್ಯಗಳು ಒಳ್ಳೆಯ ಸಂದೇಶ ಕೊಡುತ್ತವೆ." ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಹಾಗೇ ಧನ್ವೀರ್ ವಾಮನನಂತೆ ಚಿತ್ರರಂಗದಲ್ಲಿ ಒಂದು ಕಾಲು ಇಡುವುದಕ್ಕೆ ಕೇಳುತ್ತಿದ್ದು, ಅದನ್ನು ಕನ್ನಡ ಜನತೆ ಕೊಡುತ್ತಾರೆಂದು ಹೇಳಿದ್ದಾರೆ. "ವಾಮನ ಅಂದರೆ ಏನು? ಅವನು ಭಿಕ್ಷೆ ಬೇಡುವುದಕ್ಕೆ ಬಂದಂತಹ ಹುಡುಗ. ಬಲಿ ಚಕ್ರವರ್ತಿ ಹತ್ತಿರ ಭಿಕ್ಷೆ ಬೇಡುತ್ತಾನೆ. ಮೂರು ಹೆಜ್ಜೆಯನ್ನು ಎಲ್ಲಾದರೂ ಇಟ್ಕೊ ಅಂತ ಹೇಳುತ್ತಾನೆ. ಅಲ್ಲಿ ಇಡ್ತಾನೆ. ಇಲ್ಲಿ ಇಡ್ತಾನೆ ಕೊನೆಗೆ ಎಲ್ಲಿ ಹೆಜ್ಜೆ ಇಡಬೇಕು ಅಂತ ಕೇಳುತ್ತಾನೆ. ಆದರೆ, ಈ ವಾಮನ ಬರೀ ಕನ್ನಡ ಚಿತ್ರರಂಗದಲ್ಲಿ ಒಂದು ಕಾಲು ಕೇಳುತ್ತಿದ್ದಾನೆ. ಅದು ಕನ್ನಡ ಜನತೆ ಕೊಡುತ್ತಾರೆ. ಆ ಹೆಜ್ಜೆ ತುಂಬಾ ದೊಡ್ಡ ಹೆಜ್ಜೆ ಆಗುತ್ತೆ ಅಂತ ಹೇಳುತ್ತೇನೆ."
ಧನ್ವೀರ್ ಹಾಗೂ ದರ್ಶನ್ ಒಟ್ಟಿಗೆ ಸಿನಿಮಾ ಮಾಡುತ್ತಾರಾ ಎಂಬ ಪ್ರಶ್ನೆಗೂ ಪ್ರತಿಕ್ರಿಯಿಸಿದ್ದಾರೆ. "ಅದಕ್ಕೆ ಒಳ್ಳೆಯ ಡೈರೆಕ್ಟರ್ ಬೇಕು. ನಾನು ಮಾಡುವುದಾಗಲಿ, ಚಿಕ್ಕಣ್ಣ ಮಾಡುವುದಾಗಲಿ, ಧನ್ವೀರ್ ಮಾಡುವುದಾಗಲಿ ಇಲ್ಲ ಅನ್ನಲ್ಲ. ಒಂದೊಳ್ಳೆ ಕಥೆ ಬರಬೇಕು. ಧನ್ವೀರ್ ನನಗೆ ಗೊತ್ತು. ಒಂದು ಮಾತು ಹೇಳಿದರೆ ಒಂದು ಪದನೂ ಕೇಳಲ್ಲ. ಕಥೆಯನ್ನೂ ಕೇಳಲ್ಲ. ಧನ್ವೀರ್ ಮಾಡ್ತಾರೆ. ನಮ್ಮ ಚಿಕ್ಕಣ್ಣನೂ ಮಾಡುತ್ತಾರೆ. ಆದರೆ, ಅದಕ್ಕೆ ನ್ಯಾಯ ಒದಗಿಸುವಂತಹ ಒಬ್ಬ ನಿರ್ದೇಶಕ ಬೇಕು." ಎಂದಿದ್ದಾರೆ.
ಕನ್ನಡಿಗರಿಗಾಗಿ, ಇಲ್ಲಿನ ಥಿಯೇಟರ್‌ಗಳಿಗಾಗಿ ನಾವು ಸಿನಿಮಾ ಮಾಡುತ್ತೇವೆ ಎಂದು ಮತ್ತೆ ಪುನರುಚ್ಚರಿಸಿದ್ದಾರೆ. "ಅವತ್ತೂ ಹೇಳ್ತಿರೋದು, ಇವತ್ತು ಹೇಳ್ತಿರೋದು ಒಂದೇ. ನಾವು ಮಾಡುತ್ತಿರೋದು ಕನ್ನಡ ಸಿನಿಮಾ. ನಾವು ಬೇರೆ ಭಾಷೆಯ ಸಿನಿಮಾ ಮಾಡುವುದಿಲ್ಲ. ಕನ್ನಡದ ಜನತೆಗೆ, ಇಲ್ಲಿರುವ ಥಿಯೇಟರ್‌ಗಳಿಗೆ ಸಿನಿಮಾ ಮಾಡುತ್ತೇವೆ." ಎಂದು ಮತ್ತೆ ಹೇಳಿದ್ದಾರೆ.


Click it and Unblock the Notifications











