"ಯಾರು ಏನೇ ಅಂದ್ಕೊಂಡ್ರೂ, ಏನೇ ಮಾಡಿಕೊಂಡ್ರೂ, ಸೆಲೆಬ್ರೆಟಿಗಳು ಸಾಕು ನನಗೆ"; ನಟ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿದ 'ಕಾಟೇರ' ಸಿನಿಮಾ 25 ದಿನಗಳನ್ನು ಪೂರೈಸಿದೆ. ಇದೇ ವೇಳೆ ಇಂದು (ಜನವರಿ 26) ರೈತ ಸಂಘದ ಮುಖಂಡ ದಿವಗಂತದ ಕೆ ಎಸ್ ಪುಟ್ಟಣ್ಣಯ್ಯ ಅವರ 75ನೇ ಜನ್ಮದಿನೋತ್ಸವದಂದು ಪಾಂಡವಪುರದಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದರ್ಶನ್‌ಗೆ ಭೂಮಿಪುತ್ರ ಎಂಬ ಬಿರುದನ್ನು ನೀಡಿ ಗೌರವಿಸಲಾಗಿದೆ.
ಎಲ್ಲಾ ಜಿಲ್ಲೆಯ ಮಣ್ಣು, ರಾಗಿ, ಗೋಧಿ ಹಾಗೂ ಟಗರನ್ನು ನೀಡಿ, ಭೂಮಿ ಪುತ್ರ ಅನ್ನೋ ಬಿರುದನ್ನು ರೈತ ಸಂಘದ ಪರವಾಗಿ ಕೆ ಎಸ್ ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣ ವೇದಿಕೆ ಮೇಲೆ ನೀಡಿದ್ದಾರೆ. ಇದೇ ವೇಳೆ ದರ್ಶನ್ ರೈತರ ತ್ಯಾಗ, ಸೇವೆಯನ್ನು ನೆನಪಿಸಿಕೊಂಡಿದ್ದಾರೆ. ಹಾಗೇ ಕೆ ಎಸ್ ಪುಟ್ಟಣ್ಣಯ್ಯ ಅವರ ಸೇವೆಯನ್ನು ನೆನೆದಿದ್ದಾರೆ.

ಪಾಂಡವಪುರದ ವೇದಿಕೆಯಲ್ಲಿ ದರ್ಶನ್ ರೈತರ ಬಗ್ಗೆ, ಕೆ ಎಸ್ ಪುಟ್ಟಣ್ಣಯ್ಯ ಬಗ್ಗೆ ಆಡಿದ ಮಾತುಗಳ ಝಲಕ್ ಇಲ್ಲಿದೆ. ಇನ್ನೊಂದು ಕಡೆ ಮತ್ತೆ ವೈವಾಹಿಕ ಜೀವನದಲ್ಲಿ ಎದ್ದಿರೋ ಬಿರುಗಾಳಿ ಬಗ್ಗೆ ದರ್ಶನ್ ಪರೋಕ್ಷವಾಗಿ ಮಾತಾಡಿದ್ದಾರೆ. ಪ್ರತಿ ವೇದಿಕೆ ಮೇಲೆ ಹೇಳಿದ ಹಾಗೇ ಉರಿಯೋದು ಉರಿದುಕೊಳ್ಳಲಿ, ಬೈದೋರು ಬೈಯಿಸಿಕೊಳ್ಳಲಿ ಎಂದು ಹೇಳಿದ್ದಾರೆ. ಅಷ್ಟಕ್ಕೂ ವೇದಿಕೆ ಮೇಲೆ ದರ್ಶನ್ ಏನಂದ್ರು? ಅನ್ನೋದನ್ನು ತಿಳಿಯಲು ಮುಂದೆ ಓದಿ..
"ರೈತರ ಸಂಘಕ್ಕೆ ಯಾರು ಕೈ ಕೊಡುವುದಕ್ಕೆ ಹೋಗಬೇಡಿ. ಅನ್ನನಾ ದೇವರು ಅಂತೀವಿ. ಆ ದೇವರನ್ನು ಸೃಷ್ಟಿ ಮಾಡುವ ಏಕೈಕ ಅಧಿಕಾರ ಇರೋದು ಯಾರಿಗೆ? ಅವನೊಬ್ಬನಿಗೆನೇ.. ಅವನು ನೇಗಿಲು ಹಿಡಿಯೋದಿಲ್ಲ, ಎತ್ತು ಕಟ್ಟುವುದಿಲ್ಲ ಅಂದರೆ ಮಣ್ಣು ತಿನ್ನಬೇಕಾಗುತ್ತೆ. ನಾನು ಯಾವಾಗಲೂ ಹೇಳುತ್ತೇನೆ ರೈತರಿಗೆ ಸಿಂಪತಿ ಬೇಡ. ಅಯ್ಯೋ ಪಾಪ ಅಂತ ಹೇಳುವುದಕ್ಕೆ ಹೋಗಬೇಡಿ. ನ್ಯಾಯವಾದ ಬೆಲೆ ಕೊಟ್ಟು ಬಿಟ್ಟರೆ, ಎಲ್ಲರೂ ಹೆಲಿಕಾಪ್ಟರ್‌ನಲ್ಲಿ ಬರುತ್ತೇವೆ." ಎಂದು ರೈತರ ಬಗ್ಗೆ ದರ್ಶನ್ ಮಾತಾಡಿದ್ದಾರೆ.
ಇದೇ ವೇದಿಕೆ ಮೇಲೆ ಅಪ್ಪಟ ಕನ್ನಡ ಸಿನಿಮಾಗಳನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ. "ಮುಂದಕ್ಕೆ ನಮ್ಮ ಟೈಗರ್ ಸಿನಿಮಾ ಬರುತ್ತೆ. ಮಾದೇವ ಬರುತ್ತೆ. ಹಾಗೇ ಧನ್ವೀರ್‌ದು ವಾಮನ ಬರುತ್ತೆ. ನಮ್ಮ ಚಿಕ್ಕಣ್ಣನದ್ದು ಉಪಾಧ್ಯಕ್ಷ ಬಂದಿದೆ. ಸಿನಿಮಾ ನೋಡುತ್ತಿದ್ದೀರ. ಇನ್ನು ನೋಡಿ ಇದೆಲ್ಲ ಅಪ್ಪಟ ಕನ್ನಡ ಸಿನಿಮಾಗಳು. ಅದ್ಯಾವುದೂ ಬೇರೆ ಭಾಷೆ ಸಿನಿಮಾ ಅಲ್ಲ. ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಕನ್ನಡ ಸಿನಿಮಾಗಳನ್ನು ಹರಸಿ ಬೆಳೆಸಿ." ಎಂದಿದ್ದಾರೆ.

ಇನ್ನು ನಟಿ ಪವಿತ್ರಾ ಗೌಡ ಹಾಗೂ ಪತ್ನಿ ವಿಜಯಲಕ್ಷ್ಮಿ ನಡುವಿನ ಕಿತ್ತಾಟದ ಬಗ್ಗೆ ಪರೋಕ್ಷವಾಗಿ ಏನಾದರೂ ಹೇಳಬಹುದು ಎಂಬ ನಿರೀಕ್ಷೆಯಿತ್ತು. ಅದಕ್ಕೆ ತಕ್ಕಂತೆ "ಉರಿಯೋರು ಉರಿದುಕೊಳ್ಳಲಿ.. ಬೈದೋರು ಬೈಯಿಸಿಕೊಳ್ಳಲಿ. ದರ್ಶನ್ ನೀನು ಹಿಂಗೆ ಇರು. ಇವತ್ತು ತುಂಬಾ ತಾಳ್ಮೆಯಿಂದ ಇದ್ದೀನಿ. ತಾಳ್ಮೆ ತುಂಬಾನೇ ಕಲಿಸುತ್ತಿದೆ. ಯಾರು ಏನೇ ಅಂದುಕೊಂಡರೂ, ಏನೇ ಮಾಡಿಕೊಂಡರೂ, ಇಲ್ಲಿರೋ ಸೆಲೆಬ್ರೆಟಿಗಳು ಸಾಕು ನನಗೆ. ಇನ್ಯಾರು ಬೇಡ ನನಗೆ ಅಂತ ಹೇಳುವುದಕ್ಕೆ ಇಷ್ಟ ಪಡುತ್ತೇನೆ." ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಟಾಂಗ್ ಕೊಟ್ರಾ? ಅನ್ನೋ ಪ್ರಶ್ನೆ ಎದ್ದಿದೆ.


Click it and Unblock the Notifications











