ಕಾಡಾನೆ ಕಾಳಗದಲ್ಲಿ ಅಗಲಿದ 'ಅರ್ಜುನ'ನಿಗೆ 'ಕಾಟೇರ' ಸಿನಿಮಾ ಅರ್ಪಣೆ!
ದರ್ಶನ್ ಅಭಿನಯದ 'ಕಾಟೇರ' ಸಿನಿಮಾ ಇಂದು (ಡಿಸೆಂಬರ್ 29) ರಾಜ್ಯದಾದ್ಯಂತ ರಿಲೀಸ್ ಆಗಿದೆ. ದರ್ಶನ್ ಫ್ಯಾನ್ಸ್ ಈ ಸಿನಿಮಾವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಮೊದಲ ದಿನ ಬಹುತೇಕ ಸಿನಿಮಾ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಥಿಯೇಟರ್ ಮುಂದೆ ಸಂಭ್ರಮ ಮನೆ ಮಾಡಿದೆ.
'ಕಾಟೇರ' ಸಿನಿಮಾವನ್ನು ನೋಡಿ ಹೊರಬರುತ್ತಿದ್ದಂತೆ ದರ್ಶನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಒಂದು ಇಂಟ್ರೆಸ್ಟಿಂಗ್ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಅದೇನಂದರೆ, 'ಕಾಟೇರ' ಸಿನಿಮಾವನ್ನು ದರ್ಶನ್ ಇಷ್ಟ ಪಡುತ್ತಿದ್ದ ಆನೆ ಅರ್ಜುನನಿಗೆ ಈ ಸಿನಿಮಾವನ್ನು ಅರ್ಪಣೆ ಮಾಡಲಾಗಿದೆ.

ದರ್ಶನ್‌ಗೆ ಮೊದಲಿನಿಂದಲೂ ಪ್ರಾಣಿಗಳ ಮೇಲೆ ಪ್ರೀತಿ ಇರೋದು ಗೊತ್ತೇ ಇದೆ. ತಮ್ಮ ತೋಟದ ಮನೆಯಲ್ಲಿಯೇ ನಾನಾ ಜಾತಿಯ ಪ್ರಾಣಿಗಳನ್ನು ಸಾಕಿದ್ದಾರೆ. ಅಲ್ಲದೆ ಹಲವು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಹೀಗಾಗಿ 'ಕಾಟೇರ' ಸಿನಿಮಾವನ್ನು 8 ಬಾರಿ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತಿದ್ದ ಆನೆ ಅರ್ಜುನನಿಗೆ ಅರ್ಪಣೆ ಮಾಡಲಾಗಿದೆ.
ಈ ಸಿನಿಮಾ ಆರಂಭ ಆಗುವ ಮುನ್ನವೇ ಅರ್ಜುನನಿಗೆ ಈ ಸಿನಿಮಾವನ್ನು ಅರ್ಪಣೆ ಮಾಡುತ್ತಿರುವುದಾಗಿ ಚಿತ್ರತಂಡ ಫೋಟೊವನ್ನು ಹಾಕಿ ಗೌರವ ನೀಡಿದೆ. ಅರ್ಜುನನ ಜೊತೆ ದರ್ಶನ್ ನಿಂತಿರುವ ಫೋಟೊ ಜೊತೆಗೆ "ನಾಡ ದೇವಿ ಚಾಮುಂಡಿಯ ಅಂಬಾರಿಯನ್ನು ಹೊತ್ತು ದಸರೆಯ ವೈಭವವನ್ನು ಜಗತ್ತಿನಾದ್ಯಂತ ಕಣ್ತುಂಬಿಸಿ ಕಣ್ಮರೆಯಾದ ದೃತ್ಯ ಮತ್ತು ದೈವ ಜೀವ ಅರ್ಜುನ ಇದಕ್ಕೆ ನಮ್ಮ ಕಾಟೇರ ಚಿತ್ರ ಅರ್ಪಣೆ" ಎಂದು ಗೌರವ ನೀಡಿದ್ದಾರೆ.

ಅರ್ಜುನ ಇತ್ತೀಚೆಗೆ ಕಾಡಾನೆ ಜೊತೆ ಸೆಣೆಸಾಡುತ್ತಾ ಸಾವನ್ನಪ್ಪಿತ್ತು. ಅರ್ಜುನನ ಸಾವು ರಾಜ್ಯದ್ಯಂತ ಚರ್ಚೆಗೆ ಒಳಗಾಗಿತ್ತು. ಕೆಲವೆಡೆ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಈ ಅರ್ಜುನನ ನೆನಪಿನಲ್ಲಿಯೇ 'ಕಾಟೇರ' ಸಿನಿಮಾವನ್ನು ಅರ್ಜುನನಿಗೆ ಅರ್ಪಣೆ ಮಾಡಿದ್ದಕ್ಕೆ ದರ್ಶನ್ ಅಭಿಮಾನಿಗಳು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ತರುಣ್ ಸುಧೀರ್ ನಿರ್ದೇಶಿಸಿರುವ ಈ ಸಿನಿಮಾ ಈಗಾಗಲೇ ಎಲ್ಲಾ ಕಡೆ ಭರ್ಜರಿಯಾಗಿ ಪ್ರದರ್ಶನ ನೀಡುತ್ತಿದೆ. ಫ್ಯಾನ್ ಶೋಗಳಿಂದ ಹಿಡಿದು ರೆಗ್ಯೂಲರ್ ಶೋಗಳ ವರೆಗೂ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ರಾಕ್‌ಲೈನ್ ಪ್ರೊಡಕ್ಷನ್‌ನಲ್ಲಿ ದರ್ಶನ್ ನಟಿಸುತ್ತಿರುವ ಎರಡನೇ ಸಿನಿಮಾ ಇದಾಗಿದ್ದರಿಂದ ನಿರೀಕ್ಷೆಗಳು ಇನ್ನೂ ಗಗನಕ್ಕೆ ಏರಿದ್ದವು.
ದರ್ಶನ್ ಜೊತೆ ಮಾಲಾಶ್ರೀ ಪುತ್ರಿ ಆರಾಧನಾ, ಹಿರಿಯ ನಟಿಯರಾದ ಶ್ರುತಿ, ಪದ್ಮವಾಸಂತಿ ಹಾಗೂ ನಟ ಕುಮಾರ್ ಗೋವಿಂದ್, 500 ಸಿನಿಮಾಗಳ ಸರದಾರ ಬಿರಾದರ್ ನಟಿಸಿದ್ದಾರೆ. ಹಾಗೇ ಈ ಸಿನಿಮಾದಲ್ಲಿ ತೆಲುಗು ಜಗಪತಿ ಬಾಬು ಹಾಗೂ ವಿನೋದ್ ಆಳ್ವಾ ಕೂಡ ನಟಿಸಿದ್ದಾರೆ. ಹೀಗೆ ದೊಡ್ಡ ತಾರಾಗಣವೇ ಇರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಯಾವ ಮಟ್ಟಿಗೆ ಸದ್ದು ಮಾಡುತ್ತೆ ಅನ್ನೋದನ್ನು ನೋಡಬೇಕಿದೆ.


Click it and Unblock the Notifications











