Akash Vs Devil: ಅಪ್ಪು ಬರ್ತ್‌ಡೇಗೆ ಬಾಕ್ಸಾಫೀಸ್ ಕದನ; ಆಕಾಶ್ ಎದುರು ಅಖಾಡಕ್ಕಿಳಿದ 'ಡೆವಿಲ್'
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಬರ್ತ್‌ಡೇ ಸನಿಹದಲ್ಲಿದೆ. ಇದೇ ಮಾರ್ಚ್ 17ರಂದು ಅಪ್ಪು 51ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುವುದಕ್ಕೆ ಮುಂದಾಗಿದ್ದಾರೆ. ಪುನೀತ್ ಅಗಲಿದ ಬಳಿಕ ಅವರ ಪ್ರತಿ ಹುಟ್ಟುಹಬ್ಬಕ್ಕೂ ಅವರು ನಟಿಸಿದ ಒಂದು ಸೂಪರ್ ಹಿಟ್ ಸಿನಿಮಾವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ರಿಲೀಸ್ ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ಬಾರಿ ಕೂಡ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ಸಿನಿಮಾ 'ಆಕಾಶ್' ರಿಲೀಸ್ ಆಗುತ್ತಿದೆ. ಪಿಆರ್‌ಕೆ ಪ್ರೊಡಕ್ಷನ್‌ನಿಂದ ಈಗಾಗಲೇ 'ಆಕಾಶ್' ಸಿನಿಮಾದ ಟ್ರೈಲರ್ ಕೂಡ ರಿಲೀಸ್ ಮಾಡಲಾಗಿದೆ. ಈ ಸಿನಿಮಾದಲ್ಲಿ ನಟಿಸಿದ್ದ ಕಲಾವಿದರು ಕೂಡ ತಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸ್ವಾರಸ್ಯಕರ ಸಂಗತಿಗಳನ್ನು ಬಿಚ್ಚಿಡುತ್ತಿದ್ದಾರೆ.

ಮಹೇಶ್ ಬಾಬು ನಿರ್ದೇಶಿಸಿದ್ದ ಈ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ನಾಯಕಿಯಾಗಿ ಮೋಹಕತಾರೆ ರಮ್ಯಾ ನಟಿಸಿದ್ದಾರೆ. ಹಾಡುಗಳು ಇಂದಿಗೂ ಸಿನಿಪ್ರಿಯರ ಬಾಯಲ್ಲಿ ಕೇಳುವುದಕ್ಕೆ ಸಿಗುತ್ತಿದೆ. ಹೀಗಾಗಿ ಆಕಾಶ್ ಸಿನಿಮಾವನ್ನು ಮತ್ತೆ ತೆರೆಮೇಲೆ ನೋಡುವುದಕ್ಕೆ ಅಪ್ಪು ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಈ ಮಧ್ಯೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಡೆವಿಲ್' ಕೂಡ 'ಆಕಾಶ್' ಎದುರು ರಿಲೀಸ್ ಆಗುತ್ತಿದೆ. ಅಷ್ಟಕ್ಕೂ ಕೊನೆಯ ಕ್ಷಣದ ಈ ನಿರ್ಧಾರದ ಹಿಂದಿನ ಲೆಕ್ಕಾಚಾರವೇನು? 'ಆಕಾಶ್' ಎದುರು 'ಡೆವಿಲ್' ಬಿಡುಗಡೆಯಾಗುತ್ತಿರುವ ಹಿನ್ನೆಲೆಯೇನು? ತಿಳಿಯುವುದಕ್ಕೆ ಮುಂದೆ ಓದಿ.
ಬರ್ತ್‌ಡೇಗೆ 'ಆಕಾಶ್'
ಕಳೆದ ವರ್ಷ ಪುನೀತ್ ರಾಜ್‌ಕುಮಾರ್ ಬರ್ತ್‌ಡೆ 'ಜಾಕಿ' ಸಿನಿಮಾವನ್ನು ರಿ-ರಿಲೀಸ್ ಮಾಡಲಾಗಿತ್ತು. ಅಂದೇ ಅಪ್ಪು ಅಭಿಮಾನಿಗಳು ಮುಂದಿನ ವರ್ಷ (ಅಂದರೆ, ಈ ವರ್ಷ) ಆಕಾಶ್ ಸಿನಿಮಾವನ್ನು ರಿಲೀಸ್ ಆಗಬೇಕು ಎಂದು ಬೇಡಿಕೆ ಇಟ್ಟಿದ್ದರು. ಅವರ ಬೇಡಿಕೆಯ ಮೇರೆಗೆ ಪಿಆರ್‌ಕೆ ಪ್ರೊಡಕ್ಷನ್ ಅಂದರೆ, ಅಶ್ವಿನಿ ಪುನೀತ್ ರಾಜ್‌ಕುಮಾರ್ 'ಆಕಾಶ್' ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದಾರೆ.
'ಆಕಾಶ್' ಎದುರು 'ಡೆವಿಲ್'
ಪುನೀತ್ ರಾಜ್‌ಕುಮಾರ್ ಸಿನಿಮಾ 'ಆಕಾಶ್' ರಿಲೀಸ್ ಆಗುತ್ತಿರೋದೇನೋ ಸರಿ. ಆದರೆ, ಈ ಸಿನಿಮಾದ ಎದುರು 'ಡೆವಿಲ್' ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ. ಕಳೆದ ಬಾರಿ ಕೂಡ 'ಜಾಕಿ' ಎದುರು ದರ್ಶನ್ ನಟಿಸಿದ 'ಕರಿಯ' ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಇದು ಇಬ್ಬರು ಅಭಿಮಾನಿಗಳ ನಡುವಿನ ವೈಮನಸ್ಸಿಗೆ ಎಡೆ ಮಾಡಿಕೊಟ್ಟಿತ್ತು. ಈ ವರ್ಷ ಕೂಡ 'ಆಕಾಶ್' ಎದುರು 'ಡೆವಿಲ್' ರಿಲೀಸ್ ಆಗುತ್ತಿದೆ. ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಈ ಬಾರಿ ಕೂಡ ಅಭಿಮಾನಿಗಳ ನಡುವೆ ವೈಮನಸ್ಸು ಮೂಡುವ ಸಾಧ್ಯತೆಯಿದೆ.

ಎಷ್ಟೆಷ್ಟು ಥಿಯೇಟರ್‌ಗಳಲ್ಲಿ ರಿಲೀಸ್?
ಪುನೀತ್ ರಾಜ್‌ಕುಮಾರ್ ಬರ್ತ್‌ಡೇ ಹಿನ್ನೆಲೆಯಲ್ಲಿ 'ಆಕಾಶ್' ಸಿನಿಮಾ ಕರ್ನಾಟಕದಾದ್ಯಂತ ಸುಮಾರು 80 ರಿಂದ 100 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಅದೇ ಇನ್ನೊಂದು ಕಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಡೆವಿಲ್' ಕೇವಲ ಆಯ್ದ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಬಹುದು. ಅದರಲ್ಲೂ ಬೆಂಗಳೂರಿನ ಪ್ರಸನ್ನ ಪ್ರಮುಖ ಚಿತ್ರಮಂದಿರವಾಗಿ ಬಿಡುಗಡೆಯಾಗುತ್ತಿದೆ.
'ಡೆವಿಲ್' ರಿ-ರಿಲೀಸ್ ಯಾಕೆ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಆರೋಪಿಯಾಗಿ ಜೈಲಿನಲ್ಲಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ರಿಲೀಸ್ ಆಗಿದ್ದು 'ಡೆವಿಲ್'. ಕಳೆದ ವರ್ಷ ತೆರೆಕಂಡಾಗ ಸಿನಿಮಾ ನಿರೀಕ್ಷೆ ಮಾಡಿದಷ್ಟು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಹೀಗಾಗಿ ಮರು ಬಿಡುಗಡೆ ಮಾಡಲಾಗುತ್ತಿದೆ ಎನ್ನಲಾಗಿದೆ. ಇನ್ನೊಂದು ಇನ್‌ಸ್ಟೈಡ್ ಸ್ಟೋರಿ ಏನಂದ್ರೆ, ಪ್ರಸನ್ನ ಚಿತ್ರಮಂದಿರದ ಮಾಲೀಕರು ದರ್ಶನ್‌ಗೆ ತೀರಾ ಹತ್ತಿರ. ಈ ಕಾರಣಕ್ಕಾಗಿ 'ಡೆವಿಲ್' ರಿಲೀಸ್ ಮಾಡುತ್ತಿದ್ದಾರೆಂಬ ಮಾತು ಇದೆ. ಕಳೆದ ಬಾರಿ ಕೂಡ 'ಜಾಕಿ' ಎದುರು 'ಕರಿಯ' ಸಿನಿಮಾವನ್ನು ರಿಲೀಸ್ ಮಾಡಿದ್ದರು.


Click it and Unblock the Notifications











