'ಕಾಟೇರ' ಶೋಗಳು ಹೌಸ್‌ಫುಲ್: ಇದೇ ಖುಷಿಯಲ್ಲಿ ರಿಲೀಸ್ ಆಯ್ತು ರೊಮ್ಯಾಂಟಿಕ್ ಸಾಂಗ್
ಪರಭಾಷೆಯ ಸಿನಿಮಾಗಳಿಗೆ ಸೆಡ್ಡು ಹೊಡೆದು ಅಪ್ಪಟ ಕನ್ನಡ ಸಿನಿಮಾ 'ಕಾಟೇರ' ಬಿಡುಗಡೆಗೆ ಸಜ್ಜಾಗಿ ನಿಂತಿದೆ. ನಾಲ್ಕು ದಿನಗಳ ಹಿಂದಷ್ಟೇ 'ಕಾಟೇರ' ಸಿನಿಮಾಗೆ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಲಾಗಿತ್ತು. ದರ್ಶನ್ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ಟಿಕೆಟ್ ಅನ್ನು ಖರೀದಿ ಮಾಡುತ್ತಿದ್ದಾರೆ.
ನಾಲ್ಕು ದಿನಗಳಲ್ಲಿ 'ಕಾಟೇರ' ಸಿನಿಮಾದ ಟಿಕೆಟ್‌ಗಳು ಕಡೆಲೆಪುರಿಯಂತೆ ಸೇಲ್ ಆಗಿವೆ. ಬಿಡುಗಡೆಗೆ ಇನ್ನೂ ಒಂದು ದಿನ ಬಾಕಿ ಇದ್ದು, ಇನ್ನು ಹೆಚ್ಚು ಟಿಕೆಟ್‌ಗಳು ಖರೀದಿಯಾಗುವ ಸಾಧ್ಯತೆಯಿದೆ. ಕೇವಲ ಅಡ್ವಾನ್ಸ್ ಬುಕಿಂಗ್‌ನಿಂದಲೇ ದರ್ಶನ್ ಸಿನಿಮಾ 2 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.

ಸದ್ಯ 'ಕಾಟೇರ' ತಂಡವೇ ನೀಡಿರುವ ಮಾಹಿತಿ ಪ್ರಕಾರ, ಕಳೆದ ನಾಲ್ಕು ದಿನಗಳಿಂದ ಸುಮಾರು 1 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟ ಆಗಿವೆ. ಬುಕ್ ಮೈ ಶೋ ಟಿಕೆಟ್ ಬುಕಿಂಗ್ ಆಪ್ ಮೂಲಕ ಕರ್ನಾಟಕದಾದ್ಯಂತ ಲಕ್ಷ ಟಿಕೆಟ್‌ಗಳು ಸೇಲ್ ಆಗಿವೆ. ಇನ್ನೂ ಕೆಲವು ಗಂಟೆಗಳಲ್ಲಿ ಇನ್ನೂ 25 ಸಾವಿರ ಟಿಕೆಟ್ ಖರೀದಿ ಆಗಬಹುದು ಎಂದು ಅಂದಾಜಿಸಲಾಗಿದೆ.
ಸದ್ಯ 'ಕಾಟೇರ' ಸಿನಿಮಾದ ಹವಾ ಹೇಗಿದೆ ಅಂದರೆ, ಇದೂವರೆಗೂ ಸುಮಾರು 229 ಶೋಗಳು ಸೋಲ್ಡ್ ಔಟ್ ಆಗಿವೆ. ಅದರಲ್ಲಿ ಸುಮಾರು 118 ಶೋಗಳೂ ವೇಗವಾಗಿ ಭರ್ತಿಯಾಗುತ್ತಿವೆ. ಇದು ನಿನ್ನೆ (ಡಿಸೆಂಬರ್ 27) ಸಂಜೆ 7.30ರವರೆಗೆ ಸಿಕ್ಕಿರುವ ಮಾಹಿತಿ ಎಂದು ಚಿತ್ರತಂಡ ಹೇಳಿಕೊಂಡಿದೆ. ಇನ್ನೊಂದು ದಿನದಲ್ಲಿ 'ಕಾಟೇರ' ಸಿನಿಮಾ ಮತ್ತಷ್ಟು ಶೋಗಳು ತುಂಬುವ ಸಾಧ್ಯತೆಗಳಿವೆ.

ಇದೇ ಖುಷಿಯಲ್ಲಿ 'ಕಾಟೇರ' ಸಿನಿಮಾ ತಂಡ ರೊಮ್ಯಾಂಟಿಕ್ ಸಾಂಗ್ ಅನ್ನು ರಿಲೀಸ್ ಮಾಡಿದೆ. ವಿ. ಹರಿಕೃಷ್ಣ ಸಂಗೀತ ನಿರ್ದೇಶಿಸಿದ್ದು, ಅವರ ವಾಣಿ ಹರಿಕೃಷ್ಣ ಈ ಹಾಡನ್ನು ಹಾಡಿದ್ದಾರೆ. ಈಗಾಗಲೇ ಯೂಟ್ಯೂಬ್‌ನಲ್ಲಿ "ಅನುರಾಗ ಕಲಿಸಲು.." ಅನ್ನೋ ರೊಮ್ಯಾಂಟಿಕ್ ಸಾಂಗ್‌ಗೆ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.


Click it and Unblock the Notifications











