ಆಶ್ರಮ ಸೇರಿಕೊಂಡ ಕನ್ನಡದ ಹಿರಿಯ ನಟಿ ಶೈಲಶ್ರೀ ಸುದರ್ಶನ್; ನೆರವಿಗೆ ನಿಂತ ದರ್ಶನ್
ಕನ್ನಡ ಚಿತ್ರರಂಗದ ಹಿರಿಯ ಜೀವಗಳು ಸಮಸ್ಯೆಗೆ ಸಿಲುಕಿಕೊಂಡಿವೆ. ಒಂದು ಕಾಲದಲ್ಲಿ ಕನ್ನಡ ಸಿನಿಪ್ರಿಯರನ್ನು ರಂಜಿಸಿದವರು ವೃದ್ಧಾಪ್ಯದಲ್ಲಿ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತಹ ಸಾಕಷ್ಟು ಹಿರಿಯ ಕಲಾವಿದರಿಗೆ ನೆರವಿನ ಅಗತ್ಯವಿದೆ. ಕೆಲವರಿಗೆ ಆ ನೆರವು ಸಿಕ್ಕಿದೆ. ಮತ್ತೆ ಕೆಲವರಿಗೆ ಸಿಗಬೇಕಿದೆ. ಹಿರಿಯ ನಟಿ ಶೈಲಶ್ರೀ ಸುದರ್ಶನ್ ಕೂಡ ಇಂತಹದ್ದೇ ಸಂಕಷ್ಟ ಎದುರಿಸುತ್ತಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಆರ್.ಎನ್. ನಾಗೇಂದ್ರರಾಯರ ಸೊಸೆ ಶೈಲಶ್ರೀ ಸುದರ್ಶನ್. ಇವರು ದಿವಂಗತ ನಟ ಸುದರ್ಶನ್ ಅವರ ಪತ್ನಿ. ಅವರು ಕಾಲವಾದ ನಂತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಅಲ್ಲಿಂದ ಇಲ್ಲಿವರೆಗೂ ಕಷ್ಟದಲ್ಲೇ ಬದುಕು ಸಾಗಿಸುವಂತಾಗಿದೆ. ಒಂದಿಷ್ಟು ದಿನ ಕನ್ನಡ ನಟಿಯೊಬ್ಬರು ಆರ್ಥಿಕ ನೆರವು ನೀಡಿದ್ದರು. ಈಗ ಚಾಲೆಂಜಿಂಗ್ ಸ್ಟಾರ್ದ ದರ್ಶನ್ ಈ ನಟಿಯ ಸಹಾಯಕ್ಕೆ ಬಂದಿದ್ದಾರೆ.

ಹಿರಿಯ ನಟಿಯ ಅಸಹಾಯಕತೆಯನ್ನು ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸಗೋಡು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರದುಕೊಂಡಿದ್ದಾರೆ. ಶೈಲಶ್ರೀ ಸುದರ್ಶನ್ ಆಶ್ರಮ ಸೇರಿಕೊಂಡಿರುವ ವಿಷಯ, ಅವರ ಸದ್ಯದ ಪರಿಸ್ಥಿತಿ, ಕನ್ನಡ ನಟಿ ನೆರವು ನೀಡಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹಾಯ ಹಸ್ತ ಚಾಚಿರುವುದನ್ನು ಸುಧೀರ್ಘವಾಗಿ ಬರೆದುಕೊಂಡಿದ್ದಾರೆ. ಆ ಪೋಸ್ಟ್‌ನಲ್ಲಿ ಏನಿದೆ ಅಂತ ನೋಡುವುದಾದರೆ.
ಕನ್ನಡ ಚಿತ್ರರಂಗ ಕಂಡ ಅದ್ಭುತ ಪ್ರತಿಭೆ ಆರ್ ಎನ್ ಸುದರ್ಶನ್. ಇವರ ಸಹೋದರ ಆರ್.ಎನ್ ಜಯಗೋಪಾಲ್ ಅವರು ಕೂಡ ಕನ್ನಡ ಚಿತ್ರರಂಗಕ್ಕೆ ಎಂದಿಗೂ ಗುನುಗುವ ಹಾಡುಗಳನ್ನು ನೀಡಿದರು. ಒಟ್ಟಾರೆ ಇವರ ಕುಟುಂಬ ಕನ್ನಡ ಚಿತ್ರರಂಗದ ದೊಡ್ಡ ಆಸ್ತಿ. ಇನ್ನು ಆರ್.ಎನ್. ಸುದರ್ಶನ್ ಅವರ ಪತ್ನಿ ಶೈಲಶ್ರೀ ಅವರು ಕೂಡ ಚಿತ್ರರಂಗದಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ, ಖಳನಾಯಕಿಯಾಗಿ, ಹಾಸ್ಯ ನಟಿಯಾಗಿ ಹಲವು ದಿಗ್ಗಜರೊಂದಿಗೆ ನಟಿಸಿದ್ದವರು. ಇಂತಹ ಹಿರಿಯ ನಟಿ ಇಂದು ವೃದ್ಧಾಶ್ರಮ ಸೇರಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರ ಫೇಸ್ ಬುಕ್ ಫೋಸ್ಟ್ ಹೀಗಿದೆ.

"ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನಾಳಿದ ಕಲಾವಿದರ ಕುಟುಂಬದ ಕುಡಿಯೊಂದು ನೆಲೆ ಬೆಲೆಯಿಲ್ಲದೇ ಇದೇ ಬೆಂಗಳೂರಿನ ಆಶ್ರಮಕ್ಕೆ ಸೇರಿಕೊಂಡು ಆಶ್ರಯ ಪಡೆದಿರುವ ದುರಂತ ಸುದ್ದಿಯೊಂದರ ಹಿಂದೆ ಬಿದ್ದಿದ್ದೇನೆ. ಹೌದು, ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಆರ್.ಎನ್. ನಾಗೇಂದ್ರರಾಯರ ಮುದ್ದಿನ ಸೊಸೆ ಇಲ್ಲೇ ಈ ಕಾಂಕ್ರೀಟ್ ಕಾಡಿನ ನಡುವೆ ಕಳೆದು ಹೋಗಿದ್ದಾರೆ. ಸುದರ್ಶನ್ ಅವರ ಸಾವಿನ ನಂತರ ದಿಕ್ಕಿಲ್ಲದ ಪರದೇಶಿಯಾಗಿ ಏಕಾಂಗಿ ಬದುಕು ಕಂಡುಕೊಂಡಿದ್ದ ಶೈಲಶ್ರೀ ಮೇಡಂ ಸೈಲೆಂಟ್ ಆಗಿ ಆಶ್ರಮ ಸೇರಿಕೊಂಡಿರುವ ಹೃದಯ ವಿದ್ರಾವಕ ಸುದ್ದಿಯೊಂದು ಬಂದಿದೆ.
ಈ ಸುದ್ದಿಯ ಬೆನ್ನು ಹತ್ತಿ ಹೋದಾಗ ಸಿಕ್ಕ ವಿವರಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ: ಖ್ಯಾತ ನಾಯಕ ನಟ ಸುದರ್ಶನ್ ಅವರ ಕಾಲಾನಂತರ ನಾಗರಬಾವಿಯ ಅಪಾರ್ಟ್ಮೆಂಟೊಂದರಲ್ಲಿ ಬದುಕು ನಡೆಸುತ್ತಿದ್ದರು ಶೈಲಶ್ರೀ. ಮಕ್ಕಳಿಗೆ ಸಂಗೀತ ಹೇಳಿಕೊಟ್ಟು ಅಷ್ಟೋ ಇಷ್ಟೋ ಸಂಪಾದಿಸುತ್ತಿದ್ದ ಈ ಕಲಾವಿದೆ ಹೇಗೋ ಜೀವನದ ದಾರಿ ಕಂಡುಕೊಂಡಿದ್ದರು. ಆದರೆ ಅಪಾರ್ಟ್ಮೆಂಟ್ ಓನರ್ ಆ ಬಿಲ್ಡಿಂಗನ್ನು ನೆಲಸಮ ಮಾಡಿ ಮತ್ತೊಂದು ಬೃಹತ್ ಅಪಾರ್ಟ್ಮೆಂಟ್ ಕಟ್ಟಲು ತಯಾರಿ ನಡೆಸಿದಾಗ ಶೈಲಶ್ರೀ ಮೇಡಂ ಜಾಗ ಖಾಲಿ ಮಾಡಬೇಕಾಯಿತು. ಒಂಟಿ ಜೀವ.
ಎಲ್ಲಿಗೆ ಹೋಗುವುದೆಂದು ದಿಕ್ಕು ತೋಚದೇ ಕುಳಿತಿದ್ದಾಗ ಅವರಿಗೆ ದಿಕ್ಕಾದವರು ಕನ್ನಡದ ಮತ್ತೊಬ್ಬ ಹಿರಿಯ ನಟಿ. ಹೆಸರು ಬೇಡ ಬಿಡಿ, ಮುಂದೊಮ್ಮೆ ತಿಳಿಸುತ್ತೇನೆ. ಇವರ ಸಲಹೆಯಂತೆ ಶೈಲಶ್ರೀ ಆಶ್ರಮ ಸೇರಿಕೊಂಡರು. ಆಶ್ರಮದ ಖರ್ಚು ವೆಚ್ಚಗಳನ್ನು ಅದೇ ಹಿರಿಯ ನಟಿ ತಾತ್ಕಾಲಿಕವಾಗಿ ನೋಡಿಕೊಂಡರು. ಆದರೆ ದೀರ್ಘಕಾಲದ ತನಕ ಆರ್ಥಿಕವಾಗಿ ಸಹಾಯ ಮಾಡುವುದು ಅವರಿಗೂ ಕಷ್ಟವಾದಾಗ ದೊಡ್ಡ ನೆರವಿಗೆ ನಿಂತವರು ನಟ ದರ್ಶನ್ ತೂಗುದೀಪ. ತಮ್ಮ ಸೋದರ ದಿನಕರ್ ಮೂಲಕ ಶೈಲಶ್ರೀಯವರ ಕೊನೆಗಾಲದ ತನಕ ಈ ಸಹಾಯವನ್ನು ನೀಡಲು ದರ್ಶನ್ ತಾವಾಗಿಯೇ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಯಿದೆ. ಬಲಗೈ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಎಂಬ ನಿಲುವಿನ ದರ್ಶನ್ ಎಷ್ಟೇ ಗುಪ್ತವಾಗಿ ಈ ದೊಡ್ಡ ಸಹಾಯವನ್ನು ಮಾಡಿದರೂ ಸುದ್ದಿ ಹೊರಬಿದ್ದಿದೆ.
ಈ ನಡುವೆ ಯುಟ್ಯೂಬ್ ಓನರ್'ವೊಬ್ಬ ಶೈಲಶ್ರೀಯವರನ್ನು ಸಂದರ್ಶಿಸಿ ಏಳೆಂಟು ಎಪಿಸೋಡ್ ಮಾಡಿ ಹೋದವನು ಈ ಅಸಹಾಯಕ ನಟಿಯ ಹೆಸರು ಹೇಳಿಕೊಂಡು ನಾಲ್ಕಾರು ಲಕ್ಷ ಸಂಪಾದಿಸಿ, ಸ್ವಂತಕ್ಕೆ ಬ್ಯಾಂಕ್ ಬ್ಯಾಲೆನ್ಸ್ ಏರಿಸಿಕೊಂಡ ಸುದ್ದಿಯೂ ಹೊರಬಂದಿದೆ. ಇಂಥಾ ಅಮಾನುಷ ಕೃತ್ಯಕ್ಕೆ ಹೇಗಾದರೂ ಆತನಿಗೆ ಮನಸ್ಸು ಬಂತೋ ಗೊತ್ತಿಲ್ಲ. ಕಲೆಯ ಹೆಸರಿನಲ್ಲಿ ಮಾಧ್ಯಮವನ್ನು ಹೀಗೆ ದುರುಪಯೋಗ ಪಡಿಸಿಕೊಂಡರೆ ಕರ್ಮ ರಿಟರ್ನ್ಸ್ ಎನ್ನದೇ ವಿಧಿಯಿಲ್ಲ." ಎಂದು ಗಣೇಶ್ ಕಾಸರಗೋಡು ಬರೆದು ಪೋಸ್ಟ್ ಮಾಡಿದ್ದಾರೆ.
ಇನ್ನು ಶೈಲಶ್ರೀ ಸುದರ್ಶನ್ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ ನಟಿ. 'ಸಂಧ್ಯಾರಾಗ' ಅನ್ನುವ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ವಿವಿಧ ಪಾತ್ರಗಳ ಮೂಲಕ ಸಿನಿಪ್ರಿಯರನ್ನು ರಂಜಿಸಿದ್ದಾರೆ. 'ಸಂಧ್ಯಾರಾಗ' ಸಿನಿಮಾದಲ್ಲಿ ರಾಜ್‌ಕುಮಾರ್, ಭಾರತಿ ಹಾಗೂ ಉದಯ್ ಕುಮಾರ್ ನಟಿಸಿದ್ದರು. ಅದರಲ್ಲಿ ಶೈಲಶ್ರೀ ಸುದರ್ಶನ್ ಅವರಿಗೂ ಉತ್ತಮ ಪಾತ್ರವಿತ್ತು. ಕನ್ನಡದ ಕುಮಾರತ್ರಯರಾದ ರಾಜ್‌ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್ ಅವರೊಂದಿಗೆ ನಟಿಸಿ ಸೈ ಎನಿಸಿಕೊಂಡವರು. ಇವರಷ್ಟೇ ಅಲ್ಲೇ ರಾಜೇಶ್, ಪತಿ ಸುದರ್ಶನ್ ಸೇರಿದಂತೆ ದಿಗ್ಗಜರೊಂದಿಗೆ ಶೈಲಶ್ರೀ ಸುದರ್ಶನ್ ನಟಿಸಿದ್ದಾರೆ.

ಹಾಗಂತ ಕನ್ನಡ ಅಷ್ಟೇ ಅಲ್ಲ. ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿಯೂ ಶೈಲಶ್ರೀ ಸುದರ್ಶನ್ ತಮ್ಮ ನಟನಾ ಪ್ರತಿಭೆಯನ್ನು ತೋರಿಸಿದ್ದಾರೆ. ಶೈಲಜಾ ಸುದರ್ಶನ್ ನಟನೆಯಷ್ಟೇ ಅಲ್ಲ. ಅವರು ಉತ್ತಮ ಭರತನಾಟ್ಯಂ ಡ್ಯಾನ್ಸರ್ ಕೂಡ ಹೌದು. ಪತಿ ಸುದರ್ಶನ್ ಕಾಲವಾದ ಬಳಿಕ ಇವರ ಬದುಕಿಗೆ ಆಸೆಯಾಗಿದ್ದು ಇದೇ ಡ್ಯಾನ್ಸ್. ಮನೆಯಲ್ಲಿಯೇ ಡ್ಯಾನ್ಸ್ ಕ್ಲಾಸ್ ನಡೆಸಿ ಜೀವನ ಸಾಗಿಸುತ್ತಿದ್ದರು. ಆದರೆ, ಈಗ ಅದೂ ಸಾಧ್ಯವಾಗುತ್ತಿಲ್ಲ.
ಹಿರಿಯ ನಟ ದಿವಂಗತ ಸುದರ್ಶನ್ ಹಾಗೂ ಶೈಲಶ್ರೀ 'ಕಾಡಿನ ರಹಸ್ಯ' ಸಿನಿಮಾದಲ್ಲಿ ನಟಿಸುವಾಗ ಇಬ್ಬರಲ್ಲೂ ಪ್ರೀತಿ ಚಿಗುರಿತ್ತು. ಆದರೆ, ಆ ಸಮಯದಲ್ಲಿ ಸಿಕ್ಕಾಪಟ್ಟೆ ಬೇಡಿಕೆಯಲ್ಲಿ ಇದ್ದಿದ್ದರಿಂದ ಸುದರ್ಶನ್ ಅವರನ್ನು ಐದು ವರ್ಷಗಳ ಬಳಿಕ ಮದುವೆಯಾದರು ಅಂತ ಕೆಲವು ವರದಿಗಳು ಹೇಳುತ್ತವೆ. ಇಷ್ಟೊಂದು ಬೇಡಿಕೆಯಲ್ಲಿದ್ದ ನಟಿ ವಿವಾದ ಬಳಿಕ ಹೆಚ್ಚಾಗಿ ತೆರೆಮೇಲೆ ಕಾಣಿಸಿಕೊಳ್ಳಲಿಲ್ಲ. ನಟಿಸಿದ್ದು ಕಡಿಮೆ ಸಿನಿಮಾಗಳೇ ಆಗಿದ್ದರೂ, ನೆನಪಿನಲ್ಲಿ ಉಳಿಯುವಂತಹ ಸಿನಿಮಾಗಳನ್ನು ಮಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಈ ಮಟ್ಟಿಗೆ ಸೇವೆ ಸಲ್ಲಿಸಿದ ಹಿರಿಯ ನಟಿಯ ಬದುಕು ಈಗ ಅತಂತ್ರ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನೆರೆವಿಗೆ ಬಂದಿದ್ದು ಹಿರಿಯ ನಟಿಯ ಜೀವನ ನಿರಾಳ ಆಗುವಂತೆ ಮಾಡಿದೆ. ಈ ಸಹಕಾರ ಹೀಗೆ ಮುಂದುವರೆಯಬೇಕಿದೆ. ಜೊತೆಗೆ ಫಿಲ್ಮ್ ಚೇಂಬರ್ ಕೂಡ ಕನ್ನಡ ಚಿತ್ರರಂಗದ ಪರವಾಗಿ ಇಂತಹ ಅಸಹಾಯಕ ಕಲಾವಿದರಿಗೆ ನೆರವು ನೀಡುವ ಕಡೆಗೆ ಗಮನ ಹರಿಸಬೇಕು.


Click it and Unblock the Notifications











