ಸಂಗೊಳ್ಳಿ ರಾಯಣ್ಣನ ಮೂರ್ತಿ ಭಗ್ನಗೊಳಿಸಿದವರು ವಿರುದ್ಧ ಸಿಡಿದೆದ್ದ ಸ್ಯಾಂಡಲ್‌ವುಡ್ ರಾಯಣ್ಣ!
ಬ್ರಿಟಿಷರ ವಿರುದ್ಧ ತೊಡೆತಟ್ಟಿ ನಿಂತಿದ್ದ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿರಾಯಣ್ಣ. ಬೆಳಗಾವಿ ಸೇರಿದಂತೆ ಕರ್ನಾಟಕದಾದ್ಯಂತ ಸಂಗೊಳ್ಳಿರಾಯಣ್ಣನ ಹೋರಾಟಕ್ಕೆ ಕನ್ನಡಿಗರು ಗೌರವ ಸೂಚಿಸುತ್ತಲೇ ಇದ್ದಾರೆ. ಹೀಗಾಗಿ ಬೆಳಗಾವಿ ಅಷ್ಟೇ ಅಲ್ಲ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಎದ್ದು ನಿಂತಿದೆ. ಅದರಲ್ಲೂ ಬೆಳಗಾವಿ ಭಾಗದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಕಂಡರೆ ದೇವರಿಗಿಂತಲೂ ಹೆಚ್ಚು ಭಕ್ತಿಯನ್ನು ತೋರುತ್ತಾರೆ.
ಇಂತಹ ಬೆಳಗಾವಿಯಲ್ಲಿ ಕೆಲವು ಕಿಡಿಗೇಡಿಗಳು ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಭಗ್ನಗೊಳಿಸಿದ್ದಾರೆ. ಬೆಳಗಾವಿಯ ಅನಗೋಳದ ಕನಕದಾಸ ಕಾಲೊನಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಭಗ್ನಗೊಳಿಸಲಾಗಿದೆ. ಈ ವಿಷಯ ದಾಸ ದರ್ಶನ್ ಕಿವಿಗೆ ಮುಟ್ಟುತ್ತಿದ್ದಂತೆ ರೊಚ್ಚಿಗೆದ್ದಿದ್ದಾರೆ. ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದು, ಕಿಡಿಗೇಡಿಗಳನ್ನು ಬಂಧಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ರಾಯಣ್ಣನ ಮೂರ್ತಿ ಭಗ್ನ: ಸಿಡಿದೆದ್ದ ದರ್ಶನ್
ಬೆಳಗಾವಿಯ ಅನಗೋಳದಲ್ಲಿ ಸಂಗೊಳ್ಳಿರಾಯಣ್ಣನ ಮೂರ್ತಿ ಭಗ್ನ ಮಾಡಿದ ವಿಷಯ ದರ್ಶನ್ ಕಿವಿಗೆ ಬಿದ್ದಿದೆ. ಹೀಗಾಗಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. "ಸ್ವಾತಂತ್ರ್ಯ ದಿನಾಚರಣೆಯಂದು ಜನಿಸಿ, ಗಣರಾಜ್ಯೋತ್ಸವ ದಿನದಂದು ಮರಣ ಹೊಂದಿರುವ ಈ ಅಪ್ರತಿಮ ವೀರನಿಗೆ ಅಪಮಾನ ಮಾಡಿರುವುದು. ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನು ಮುಡಿಪಿಟ್ಟ ಅಪ್ರತಿಮ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ಧ್ವಂಸ ಮಾಡಿರುವ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡತಕ್ಕದ್ದು." ಎಂದು ಟ್ವೀಟ್ ಮಾಡುವ ಮೂಲಕ ಕರ್ನಾಟಕದ ಮುಖ್ಯಮಂತ್ರಿಗಳಲ್ಲಿ ನಟ ದರ್ಶನ್ ಮನವಿ ಮಾಡಿಕೊಂಡಿದ್ದಾರೆ.

ರಾಯಣ್ಣನ ಮುಖ ವಿರೂಪಗೊಳಿಸಿದ ಕಿಡಿಗೇಡಿಗಳು
ಸಂಗೊಳ್ಳಿರಾಯಣ್ಣನ ಪ್ರತಿಮೆಯ ಮುಖದ ಭಾಗವನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ. ತಲ್ವಾರ್ ಬಳಸಿ ಮುಖ ವಿರೂಪಗೊಳಿದ್ದಾರೆ ಎನ್ನಲಾಗಿದೆ. ಅಲ್ಲದೆ ರಾಯಣ್ಣನ ಪ್ರತಿಮೆಯಲ್ಲಿದ್ದ ಖಡ್ಗವನ್ನು ಕಿತ್ತು ಹಾಕಿದ್ದಾರೆ ಎನ್ನಲಾಗಿದೆ. ಸಂಗೊಳ್ಳಿ ರಾಯಣ್ಣನ ಪ್ರತಿಭೆ ಭಗ್ನ ಮಾಡಿದ್ದಕ್ಕೆ ಬೆಳಗಾವಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಕಿಡಿಗೇಡಿಗಳನ್ನು ಬಂಧಿಸಿ ಶಿಕ್ಷೆ ನೀಡಬೇಕೆಂದು ಪೊಲೀಸರ ಮುಂದೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಸಂಶಯಾಸ್ಪದ ವ್ಯಕ್ತಿಗಳು ಪೊಲೀಸರ ವಶಕ್ಕೆ
ಸಂಗೊಳ್ಳಿರಾಯಣ್ಣ ಪ್ರತಿಭೆ ಭಗ್ನಗೊಳಿಸಿದ ವಿಷಯ ಮುಟ್ಟುತ್ತಿದ್ದಂತೆ ಟಿಳಕವಾಡಿ ಪೊಲೀಸರು ಸ್ಥಳಕ್ಕೆ ತೆರಳಿ ಮುಂಜಾಗ್ರತಾ ಕ್ರಮವಾಗಿ ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ರಾಯಣ್ಣ ಅಭಿಮಾನಿಗಳು ಪ್ರತಿಭಟನೆ ಮಾಡುವ ಸಾಧ್ಯತೆ ಇರುವುದರಿಂದ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಬೆಳಗಾವಿಯಲ್ಲಿ ರಾಯಣ್ಣ ಪ್ರತಿಮೆ ಧ್ವಂಸ ಮಾಡಿದವರು ಯಾರೇ ಆಗಿದ್ದರೂ ಅವರನ್ನು ವಶಕ್ಕೆ ಪಡೆದು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸರಿಗೆ ಸಂದೇಶ ರವಾನಿಸಿದ್ದಾರೆ.

9 ವರ್ಷದ ಹಿಂದೆ ಸಂಗೊಳ್ಳಿರಾಯಣ್ಣನಾಗಿದ್ದ ದರ್ಶನ್
2012 ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ರಾಂತಿ ವೀರ ಸಂಗೊಳ್ಳಿರಾಯಣ್ಣ ಸಿನಿಮಾದಲ್ಲಿ ನಟಿಸಿದ್ದರು. ಸುಮಾರು 30 ಕೋಟಿ ವೆಚ್ಚದಲ್ಲಿ ಈ ಸಿನಿಮಾವನ್ನು ನಾಗಣ್ಣ ನಿರ್ದೇಶನ ಮಾಡಿದ್ದರು. ಅಲ್ಲಿಂದ ದರ್ಶನ್‌ಗೂ ಕ್ರಾಂತಿ ವೀರ ಸಂಗೊಳ್ಳಿರಾಯಣ್ಣನಿಗೂ ಬಿಡಲಾರದ ನಂಟಿದೆ. ಬೆಳಗಾವಿ ಜನತೆ ಕೂಡ ಸಂಗೊಳ್ಳಿರಾಯಣ್ಣನನ್ನು ದರ್ಶನ್‌ರಲ್ಲಿಯೇ ಕಾಣುತ್ತಿದ್ದಾರೆ. ಹೀಗಾಗಿ ಕಿಡಿಗೇಡಿಗಳ ಈ ಕೃತ್ಯವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಖಂಡಿಸಿದ್ದು, ಶೀಘ್ರವೇ ಬಂಧಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.


Click it and Unblock the Notifications











