"ಜೈಲ್‌ನಿಂದ ಬರ್ತಿದ್ದಂತೆ ರಾಜಕೀಯಕ್ಕೆ ಹೋಗ್ಬೇಕು.. ಸಿಎಂ ಆಗ್ಬೇಕು";'ಡೆವಿಲ್' ನೋಡಿ ಫ್ಯಾನ್ಸ್ ಒತ್ತಾಸೆ
ದರ್ಶನ್ ನಟಿಸಿರುವ 'ಡೆವಿಲ್' ಸಿನಿಮಾ ಅದ್ಧೂರಿಯಾಗಿ ರಾಜ್ಯಾದ್ಯಂತ ರಿಲೀಸ್ ಆಗಿದೆ. ತಮ್ಮ ನೆಚ್ಚಿನ ನಟ ಜೈಲ್‌ನಲ್ಲಿ ಇರುವಾಗಲೇ ಈ ಸಿನಿಮಾ ರಿಲೀಸ್ ಆದ ನೋವಿನಲ್ಲೂ 'ಡೆವಿಲ್' ಅನ್ನು ಸಂಭ್ರಮಿಸಿದ್ದಾರೆ. ಮೊದಲ ದಿನ ಬಿಡುಗಡೆಯಾದ ಬಹುತೇಕ ಚಿತ್ರ ಮಂದಿರಗಳ ಮುಂದೆ ಸಂಭ್ರಮಾಚರಣೆ ಮಾಡಿದ್ದಾರೆ. ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದ್ದಾರೆ. ದೊಡ್ಡ ದೊಡ್ಡ ಕಟೌಟ್ ಇಟ್ಟು ಸಿನಿಮಾ ಗೆಲ್ಲಿಸೋಕೆ ಪಣ ತೊಟ್ಟಿದ್ದಾರೆ.
'ಕಾಟೇರ' ಸಿನಿಮಾದ ಮೆಗಾ ಯಶಸ್ಸಿನ ಹಿಂದೆನೇ ದರ್ಶನ್ 'ಡೆವಿಲ್' ಅನ್ನು ಆಯ್ಕೆ ಮಾಡಿಕೊಂಡಿದ್ದರು. 'ಡೆವಿಲ್' ಕಂಪ್ಲೀಟ್ ಡಿಫ್ರೆಂಟ್ ಸಿನಿಮಾ. ಡಬಲ್ ರೋಲ್‌ನಲ್ಲಿ ನಟಿಸಿದ ಅಭಿಮಾನಿಗಳಿಗೆ ಡಬಲ್ ಧಮಾಕ ಕೊಟ್ಟಿದ್ದಾರೆ. ಇನ್ನೊಂದು ಕಡೆ ರಾಜಕೀಯದ ಕಥೆಯನ್ನು ಆಯ್ಕೆ ಮಾಡಿಕೊಂಡು ಅಭಿಮಾನಿಗಳಲ್ಲಿ ಅಚ್ಚರಿಯನ್ನು ಮೂಡಿಸಿದ್ದಾರೆ.

ಅಭಿಮಾನಿಗಳು ಡೆವಿಲ್ ಸಿನಿಮಾ ನೋಡಿದ ಕ್ಷಣದಿಂದ ಅವರ ಆಸಕ್ತಿಗಳೇ ಬದಲಾಗಿದೆ. ಜೈಲಿನಿಂದ ಯಾವಾಗ ಹೊರಗೆ ಬರುತ್ತಾರೋ? ಮತ್ತೆ ಯಾವಾಗ ಅವರನ್ನು ನೋಡುತ್ತೇವೋ ಅಂತ ಕಾದು ಕೂತಿರುವ ಅಭಿಮಾನಿಗಳು ತಮ್ಮ ಮನದಾಳದ ಆಸೆಯನ್ನು ವ್ಯಕ್ತಪಡಿಸುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಅದು 'ಡೆವಿಲ್' ಸಿನಿಮಾ ನೋಡಿದ ಮೇಲೆ ಚಿಗುರಿದ ಆಸೆ. ಅಭಿಮಾನಿಗಳ ಆಸೆ ಏನು? ಅದಕ್ಕೆ ದರ್ಶನ್ ಒಪ್ಪುತ್ತಾರಾ? ಜೈಲಿನಿಂದ ಹೊರ ಬಂದ್ಮೇಲೆ ಅವರ ಮುಂದಿನ ನಡೆಯೇನು? ತಿಳಿಯುವುದಕ್ಕೆ ಮುಂದೆ ಓದಿ.
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿ ಜೈಲಿನಲ್ಲಿ ಇದ್ದಾರೆ. 'ಡೆವಿಲ್' ರಿಲೀಸ್ ಒಳಗೆ ಜೈಲಿನಿಂದ ಹೊರ ಬರುತ್ತಾರೆಂಬ ಕನಸು ಕಂಡಿದ್ದರು. ಆದರೆ, ಸಾಧ್ಯವಾಗಲಿಲ್ಲ. ಸದ್ಯದ ಲೆಕ್ಕಾಚಾರದ ಪ್ರಕಾರ ಇನ್ನೂ ಕೆಲವು ತಿಂಗಳು ದರ್ಶನ್‌ಗೆ ಜೈಲಿನಿಂದ ಬಿಡುಗಡೆ ಭಾಗ್ಯವಿಲ್ಲ. ಇನ್ನೂ ಟ್ರಯಲ್ ಮುಗಿದು ನ್ಯಾಯಾಧೀಶರ ವಾದ-ವಿವಾದಗಳನ್ನು ಗಣನೆಗೆ ತೆಗೆದುಕೊಂಡು ಆಮೇಲೆ ನಿರ್ಧಾರ ಕೈಗೊಳ್ಳುತ್ತಾರೆ. ಅಲ್ಲಿವರೆಗೂ ದರ್ಶನ್ ಭವಿಷ್ಯ ಅತಂತ್ರದಲ್ಲಿಯೇ ಇರುತ್ತೆ.
ಈ ಮಧ್ಯೆ ದರ್ಶನ್ ಜೈಲಿನಿಂದ ಹೊರ ಬರುತ್ತಿದ್ದಂತೆ ರಾಜಕೀಯದ ಕಡೆಗೆ ಮುಖ ಮಾಡಬೇಕು ಅಂತ ಫ್ಯಾನ್ಸ್ ಅಭಿಪ್ರಾಯ ಪಟ್ಟಿದ್ದಾರೆ. ಅದರಲ್ಲೂ 'ಡೆವಿಲ್' ಸಿನಿಮಾದಲ್ಲಿ ರಾಜಕಾರಣಿಯಾಗಿಯೂ ತಮ್ಮ ಛಾಪನ್ನು ತೋರಿಸಿದ್ದಾರೆ. ಇದನ್ನು ನೋಡಿ, ದರ್ಶನ್ ರಾಜಕೀಯಕ್ಕೆ ಬರಬೇಕು. ಪಾಲಿಟಿಕ್ಸ್‌ನಲ್ಲಿಯೂ ಮಿಂಚಬೇಕು. ಹಾಗೆಯೇ ಸಿಎಂ ಆಗಬೇಕು ಅಂತ ತಮ್ಮ ಆಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ದರ್ಶನ್ ಅಪ್ಪಟ ಅಭಿಮಾನಿ ವೆಂಕಟೇಶ್ ಇದೇ ಅಭಿಪ್ರಾಯ ಪಟ್ಟಿದ್ದಾರೆ. "ನಮ್ಮ ಬಾಸ್ ಸಿನಿಮಾ ಡೆವಿಲ್ ಅನ್ನು ಫಸ್ಟ್ ಡೇ ಫಸ್ಟ್ ಶೋ ನೋಡಿಕೊಂಡು ಬಂದೆ. ಅವರು ಡಬಲ್ ರೋಲ್‌ನಲ್ಲಿ ನಟಿಸಿದ್ದು ಸಿಕ್ಕಾಪಟ್ಟೆ ಇಷ್ಟ ಆಯ್ತು. ಅದರಲ್ಲೂ ರಾಜಕಾರಣಿಯಾಗಿ ನಟಿಸುತ್ತಿದ್ದ ಅವರ ಪಾತ್ರ ತುಂಬಾನೇ ಇಷ್ಟ ಆಯ್ತು. ಅವರು ಜೈಲಿನಿಂದ ಬರುತ್ತಿದ್ದಂತೆ ರಾಜಕೀಯ ಕ್ಷೇತ್ರಕ್ಕೆ ಕಾಲಿಡಬೇಕು ಅನ್ನೋದು ನನ್ನ ಆಸೆ. ಡೆವಿಲ್ ಸಿನಿಮಾ ರಾಜಕೀಯ ಪ್ರವೇಶದ ಬಗ್ಗೆ ನಮಗೆ ಸುಳಿವು ಕೊಟ್ಟಿರಬಹುದು ಅಂತ ಅನಿಸುತ್ತಿದೆ. ಒಂದು ವೇಳೆ ಬಾಸ್ ಏನಾದರೂ ರಾಜಕೀಯಕ್ಕೆ ಎಂಟ್ರಿ ಕೊಟ್ಟರೆ, ಸಿಎಂ ಆಗೋದು ಪಕ್ಕಾ" ಎಂದು ಫಿಲ್ಮಿಬೀಟ್ ಕನ್ನಡ ಜೊತೆ ಮಾತಾಡುವಾಗ ಅಭಿಪ್ರಾಯ ಪಟ್ಟಿದ್ದಾರೆ.
ದರ್ಶನ್‌ಗೂ ರಾಜಕೀಯ ಕ್ಷೇತ್ರದಲ್ಲಿ ಸ್ನೇಹಿತರಿದ್ದಾರೆ. ಅವರು ಈ ಹಿಂದೆ ದರ್ಶನ್‌ರನ್ನು ರಾಜಕೀಯಕ್ಕೆ ಕರೆದುಕೊಂಡು ಬರಬೇಕು ಅಂತ ಶತಪ್ರಯತ್ನ ಪಟ್ಟಿದ್ದರು. ಆದರೆ, ದರ್ಶನ್ ಒಲವು ತೋರಿರಲಿಲ್ಲ. ಇಂತಹದ್ದೇ ಪಕ್ಷ ಎನ್ನದೇ ರಾಜಕೀಯ ಕ್ಷೇತ್ರದಲ್ಲಿ ಇರುವ ತನ್ನ ಸ್ನೇಹಿತರಿಗಾಗಿ ಚುನಾವಣೆ ಸಮಯದಲ್ಲಿ ದರ್ಶನ್ ಪ್ರಚಾರ ಮಾಡಿದ್ದರು. ಹೀಗಾಗಿ ಮುಂದಿನ ದಿನಗಳಲ್ಲಿ ದರ್ಶನ್ ರಾಜಕೀಯಕ್ಕೆ ಎಂಟ್ರಿ ಕೊಟ್ಟರೂ ಅಚ್ಚರಿ ಪಡಬೇಕಿಲ್ಲ.


Click it and Unblock the Notifications











