ಜೈಲಿನೊಳಗೆ ಇರುವಾಗಲೇ 'ಡೆವಿಲ್' ಸಾಂಗ್‌ಗೂ ರಿಲೀಸ್ ಆಯ್ತು.. ರಿಲೀಸ್ ಡೇಟ್ ಅನೌನ್ಸ್ ಆಯ್ತು.. ಏನಿದು ಲೆಕ್ಕಾಚಾರ?
ಚಾಲೆಂಜಿಂಗ್ ದರ್ಶನ್ ಜಾಮೀನು ರದ್ದಾದ ಬಳಿಕ ಮತ್ತೆ ಜೈಲಿ ಸೇರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರು ನಟಿಸುತ್ತಿರುವ 'ಡೆವಿಲ್' ಸಿನಿಮಾ ರಿಲೀಸ್ ಆಗುತ್ತಾ.. ಇಲ್ವಾ? ಅನ್ನೋದೇ ಗೊಂದಲಕ್ಕೆ ಎಡೆ ಮಾಡಿಕೊಟ್ಟಿತ್ತು. ದರ್ಶನ್ ಮತ್ತೆ ಅರೆಸ್ಟ್ ಆದ ಮಾರನೇ ದಿನ 'ಡೆವಿಲ್' ಸಿನಿಮಾದ ಹಾಡು ರಿಲೀಸ್ ಆಗಬೇಕಿತ್ತು. ಅಷ್ಟರಲ್ಲೇ ದರ್ಶನ್ ಜಾಮೀನು ರದ್ದಾಗಿದ್ದರಿಂದ ಮತ್ತೆ ಜೈಲು ಸೇರಬೇಕಾಗಿತ್ತು. ಹೀಗಾಗಿ ಆ ಹಾಡಿನ ಬಿಡುಗಡೆಯನ್ನು ಮುಂದೂಡಲಾಗಿತ್ತು. ಕೊನೆಗೂ ಇಂದು (ಆಗಸ್ಟ್ 24) "ಇದ್ದರೆ ನೆಮ್ಮದಿಯಾಗಿ ಇರಬೇಕ್" ಸಾಂಗ್ ರಿಲೀಸ್ ಆಗಿದೆ.
ದರ್ಶನ್ ಅಭಿಮಾನಿಗಳಿಗೆ "ಇದ್ದರೆ ನೆಮ್ಮದಿಯಾಗಿ ಇರಬೇಕ್" ಹಾಡು ರಿಲೀಸ್ ಆಗಿದ್ದು ದೊಡ್ಡ ಮಟ್ಟಕ್ಕೆ ರಿಲೀಫ್ ಕೊಟ್ಟಿದೆ. ಈ ಹಾಡನ್ನು ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಚಿಂದಿ ಉಡಾಯಿಸುತ್ತಿದ್ದಾರೆ. ಇನ್ನೊಂದು ಕಡೆ 'ಡೆವಿಲ್' ತಂಡ ದರ್ಶನ್ ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ಕೊಟ್ಟಿದೆ. ಹೀಗಾಗಿ ಭಾನುವಾರ ಡಿ ಬಾಸ್ ಅಭಿಮಾನಿಗಳಿಗೆ ಡಬಲ್ ಧಮಾಕ ಅಂತಲೇ ಹೇಳಬಹುದು.

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿರದೇ ಹೋಗಿದ್ದಿದ್ದರೆ, 'ಡೆವಿಲ್' ಇಷ್ಟೊತ್ತಿಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿ ಬಂದಿದ್ದರಿಂದ ಆರು ತಿಂಗಳು ಜೈಲಿನಲ್ಲಿ ಇರಬೇಕಾಯ್ತು. ಹೀಗಾಗಿ ಶೂಟಿಂಗ್ ಸ್ಥಗಿತಗೊಂಡಿತ್ತು. ಜಾಮೀನಿನ ಮೇಲೆ ಹೊರ ಬಂದ್ಮೇಲೆ ಸಿನಿಮಾ ಮುಗಿಸಿಕೊಟ್ಟಿದ್ದರು. ಕೊನೆಗೂ 'ಡೆವಿಲ್' ರಿಲೀಸ್ ಆಗ್ಬೇಕಾ ಬೇಡ್ಚಾ ಎನ್ನುವ ಗೊಂದಲಕ್ಕೆ ತೆರೆ ಬಿದ್ದಿದೆ. ಹಾಗಿದ್ರೆ, 'ಡೆವಿಲ್' ರಿಲೀಸ್ ಆವಾಗ? ಅದರ ಲೆಕ್ಕಾಚಾರವೇನು? ಸಾಂಗ್ ಹೇಗಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಹೇಗಿದೆ 'ಡೆವಿಲ್' ಸಾಂಗ್?
ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದೇ 'ಡೆವಿಲ್' ಸಿನಿಮಾದ ಮೊದಲ ಹಾಡು ರಿಲೀಸ್ ಆಗಬೇಕಿತ್ತು. ಆದರೆ, ಹಿಂದಿನ ದಿನವೇ ದರ್ಶನ್ ಜಾಮೀನು ರದ್ದಾಗಿ ಮತ್ತೆ ಜೈಲು ಸೇರಿದ್ದರಿಂದ ಈ ಹಾಡನ್ನು ಮುಂದೂಡಲಾಗಿತ್ತು. ಆ ಸಮಯ ಹಾಡು ರಿಲೀಸ್ ಮಾಡೋದು ಸೂಕ್ತವಲ್ಲ ಅನ್ನೋದು ಚಿತ್ರತಂಡದ ಅಭಿಪ್ರಾಯವಾಗಿತ್ತು. ಈಗ ಒಂದು ವಾರದ ಬಳಿಕ ಅದೇ "ಇದ್ದರೆ ನೆಮ್ಮದಿಯಾಗಿ ಇರಬೇಕ್" ಅನ್ನೋ ಹಾಡನ್ನು ರಿಲೀಸ್ ಮಾಡಿದೆ. ಈ ಹಾಡು ಪಕ್ಕಾ ಫ್ಯಾನ್ಸ್‌ಗಾಗಿಯೇ ಮಾಡಿದ ಸಾಂಗ್. ಹೀಗಾಗಿ ಬಿಡುಗಡೆಯಾದ ಕೇವಲ 64 ನಿಮಿಷದಲ್ಲಿ 9 ಲಕ್ಷ ವೀವ್ಸ್ ಸಿಕ್ಕಿದೆ.
'ಡೆವಿಲ್' ರಿಲೀಸ್ ಡೇಟ್ ಅನೌನ್ಸ್
'ಡೆವಿಲ್' ಸಿನಿಮಾ ಹಾಡಷ್ಟೇ ರಿಲೀಸ್ ಆಗುತ್ತೆ ಎಂದುಕೊಂಡಿದ್ದವರಿಗೆ ಸರ್ಪ್ರೈಸ್ ಸಿಕ್ಕಿದೆ. ಮೊದಲ ಸಾಂಗ್ ಜೊತೆ ಸಿನಿಮಾ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಲಾಗಿದೆ. ಅದೂ ದರ್ಶನ್ ಅವರ ಎಕ್ಸ್ ಖಾತೆಯಲ್ಲಿಯೇ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಲಕ್ಕಿ ತಿಂಗಳು ಡಿಸೆಂಬರ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ದರ್ಶನ್ ಎಕ್ಸ್ ಖಾತೆಯಲ್ಲಿ 'ಡೆವಿಲ್' 12-12-2025 ರಂದು ರಿಲೀಸ್ ಎಂದು ಅನೌನ್ಸ್ ಮಾಡಲಾಗಿದೆ. "ನಲ್ಮೆಯ ಸೆಲೆಬ್ರಿಟೀಸ್, ನಿಮ್ಮ ನಿರಂತರ ಪ್ರಾರ್ಥನೆ, ಪ್ರೀತಿ ಮತ್ತು ಬೆಂಬಲಕ್ಕೆ ಅಂತ ಧನ್ಯವಾದಗಳು. ನೀವು ಕಾತುರದಿಂದ ಕಾಯುತ್ತಿದ್ದ 'ದಿ ಡೆವಿಲ್' ಸಿನಿಮಾ ಡಿಸೆಂಬರ್ 12 ರಂದು ಬಿಡುಗಡೆಯಾಗಲಿದೆ" ಎಂದು ಪೋಸ್ಟರ್ ಹಂಚಿಕೊಂಡು ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ.
ಏನಿದು 'ಡೆವಿಲ್' ರಿಲೀಸ್ ಲೆಕ್ಕಾಚಾರ?
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಎರಡನೇ ಬಾರಿ ಜೈಲು ಸೇರಿರುವ ದರ್ಶನ್ ಇನ್ನು ಆರು ತಿಂಗಳು ಬಿಡುಗಡೆಯಾಗೋದು ಅನುಮಾನ ಎನ್ನಲಾಗಿದೆ. ಕಾನೂನು ವಲಯದಲ್ಲಿ ಹಲವು ಹಿರಿಯ ವಕೀಲರು ಹೀಗೆ ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ 'ಸಾರಥಿ' ಸಿನಿಮಾದಂತೆ 'ಡೆವಿಲ್' ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಇನ್ನೊಂದು ಕಡೆ 'ಡೆವಿಲ್' ರಿಲೀಸ್ ಆಗುವುದರೊಳಗೆ ದರ್ಶನ್‌ರನ್ನು ಜೈಲಿನಿಂದ ಹೊರಗೆ ಕರೆತರುವ ಪ್ರಯತ್ನ ಕೂಡ ನಡೆಯುತ್ತಿದೆ. ಅಷ್ಟರೊಳಗೆ ದರ್ಶನ್ ಬಿಡುಗಡೆಯಾಗದೇ ಹೋದರೆ, ಸಿನಿಮಾ ನಷ್ಟ ಅನುಭವಿಸಬೇಕಾಗುತ್ತೆ. ಈ ಕಾರಣಕ್ಕೆ 'ಡೆವಿಲ್' ರಿಲೀಸ್‌ಗೆ ಚಿತ್ರತಂಡ ಮುಂದಾಗಿದೆ ಎನ್ನಲಾಗಿದೆ.


Click it and Unblock the Notifications











