Navagraha Box Office Day 2: 2ನೇ ದಿನ 'ನವಗ್ರಹ' ಕಲೆಕ್ಷನ್ ಹೇಗಿದೆ? ಬಾಕ್ಸಾಫೀಸ್‌ನಲ್ಲಿ ದಾಖಲೆ ಮಾಡುತ್ತಾ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶಿಷ್ಟ ಪಾತ್ರದಲ್ಲಿ ನಟಿಸಿದ 'ನವಗ್ರಹ' ಸಿನಿಮಾ ಬರೋಬ್ಬರು 16 ವರ್ಷಗಳ ಬಳಿಕ ಮತ್ತೆ ರೀ-ರಿಲೀಸ್ ಆಗಿದೆ. ಇದು ದರ್ಶನ್ ವೃತ್ತಿ ಬದುಕಿನಲ್ಲೇ ಚಾಲೆಂಜಿಂಗ್ ಸಿನಿಮಾ. ತಮ್ಮನೇ ಸಿನಿಮಾದ ನಿರ್ದೇಶಕ ಅಂದ್ಮೇಲೆ ಮತ್ತಷ್ಟು ಸವಾಲು ಎದುರಿಸಬೇಕಾಗಿತ್ತು. ಅದರ ಜೊತೆಗೆ ಹೊಸ ಕಲಾವಿದರು ಈ ಸಿನಿಮಾದಲ್ಲಿ ಸೇರಿಕೊಂಡಿದ್ದರು. ಇವರೆಲ್ಲರೊಂದಿಗೆ ರಾಬರಿ ಸಿನಿಮಾ ಮಾಡುವುದು ಅಷ್ಟು ಸುಲಭ ಕೆಲಸ ಆಗಿರಲಿಲ್ಲ.
ಇಂದು ಚಿತ್ರರಂಗದಲ್ಲಿ ಸ್ಟಾರ್ ಆಗಿ ಗುರುತಿಸಿಕೊಂಡಿರುವವರೆಲ್ಲ ಅಂದು ಹೊಸಬರು. ಅವರೆಲ್ಲರೂ ಖಳನಾಯಕರ ಮಕ್ಕಳು ಆಗಿದ್ದರಿಂದ ಅವರ ಮೇಲೂ ಅಷ್ಟೇ ಒತ್ತಡವಿತ್ತು. ವಿನೋದ್ ಪ್ರಭಾಕರ್, ತರುಣ್ ಸುಧೀರ್, ಸೃಜನ್ ಲೋಕೇಶ್, ನಾಗೇಂದ್ರ ಅರಸ್, ಧರ್ಮ ಕೀರ್ತಿರಾಜ್ ಅಂತಹ ನಟರು ಈ ಸಿನಿಮಾದಿಂದ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದರು.

ಕನ್ನಡ ಚಿತ್ರರಂಗದಲ್ಲಿ ರಾಬರಿ ಕಥೆಯನ್ನು ಆಧರಿಸಿದ ಸಿನಿಮಾಗಳ ಸುಳಿವು ಇರಲಿಲ್ಲ. ಅದರಲ್ಲೂ ಅಂಬಾರಿ ಕದಿಯೋ ಸ್ಟೋರಿ ಅಂದಾಗ ಸಿನಿಪ್ರೇಮಿಗಳ ಕಿವಿಗಳು ನೆಟ್ಟಗಾಗಿದ್ದವು. ಅಂದಿನಿಂದ ಇಂದಿಗೂ ದರ್ಶನ್ ಅಭಿಮಾನಿಗಳ ಫೇವರಿಟ್ ಸಿನಿಮಾವಿದು. ಅದಕ್ಕೆ ಮತ್ತೊಮ್ಮೆ ಈ ಸಿನಿಮಾ ರೀ-ರಿಲೀಸ್ ಮಾಡಲಾಗಿದ್ದು, ದರ್ಶನ್ ಫ್ಯಾನ್ಸ್ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಮೊದಲ ದಿನ ಒಳ್ಳೆಯ ಕಲೆಕ್ಷನ್ ಮಾಡಿದ್ದ ಸಿನಿಮಾ ಎರಡನೇ ದಿನವೂ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದೆ.
'ನವಗ್ರಹ' 2ನೇ ದಿನದ ಕಲೆಕ್ಷನ್ ಎಷ್ಟು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಖಳನಾಯಕನಾಗಿ ನಟಿಸಿದ ಸಿನಿಮಾವಿದು. ಹೀರೋ ಆಗಿ ಮಿಂಚುತ್ತಿದ್ದ ನಟನೊಬ್ಬ ಖಳನಾಯಕನಾಗಿ ನಟಿಸಿದರೆ ಹೇಗಿರುತ್ತೆ? ಇದರ ಚಿಕ್ಕದೊಂದು ಕಲ್ಪನೆಯೂ ಅಂದು ಇರಲಿಲ್ಲ. ಸಿನಿಪ್ರಿಯರು ಹೇಗೆ ಪ್ರತಿಕ್ರಿಯೆ ನೀಡಬಹುದು ಅನ್ನೋದು ಕೂಡ ಗೊತ್ತಿರಲಿಲ್ಲ. ಹೀಗಿದ್ದರೂ ಕೈಗೆತ್ತಿಕೊಂಡ ಸಿನಿಮಾವಿದು. ಲೆಕ್ಕ ಹಾಕಿ ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡಲಾಗಿದೆ. ಹೀಗಿದ್ದೂ 2ನೇ ದಿನ 15 ಲಕ್ಷದಿಂದ 18 ಲಕ್ಷದವರೆಗೂ ಕಲೆಕ್ಷನ್ ಆಗಿರಬಹುದೆಂದು ವಿತರಕರ ವಲಯದಲ್ಲಿ ಲೆಕ್ಕ ಹಾಕಲಾಗಿದೆ.

ಎರಡು ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
'ನವಗ್ರಹ' ಸಿನಿಮಾ ಎರಡು ದಿನಗಳ ಕಲೆಕ್ಷನ್ ಉತ್ತಮವಾಗಿದೆ. ರೀ-ರಿಲೀಸ್ ಆದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿವೆ. ಇದೇ ಕ್ರೇಜ್‌ನಲ್ಲಿಯೇ ಕನ್ನಡದ ಮತ್ತೊಂದು ಸಿನಿಮಾ 'ನವಗ್ರಹ' ರೀ-ರಿಲೀಸ್ ಆಗಿತ್ತು. 'ನವಗ್ರಹ' ಮೊದಲನೇ ದಿನ 18 ರಿಂದ 22 ಲಕ್ಷ ರೂಪಾಯಿ ಕಲೆಕ್ಷನ್ ಆಗಿತ್ತು. ಇನ್ನು ಎರಡನೇ ದಿನ 15 ರಿಂದ 18 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಒಟ್ಟು ಎರಡು ದಿನಗಳಲ್ಲಿ 33 ಲಕ್ಷದಿಂದ 40 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ.
ವೀಕೆಂಡ್ ಕಲೆಕ್ಷನ್ ಹೇಗಿದೆ?
ಇಂದು (ನವೆಂಬರ್ 10) ಭಾನುವಾರ ಆಗಿದ್ದರಿಂದ ದರ್ಶನ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ನೋಡುವ ಸಾಧ್ಯತೆಯಿದೆ. ವೀಕೆಂಡ್‌ನಲ್ಲಿ ಒಳ್ಳೆಯ ಬ್ಯುಸಿನೆಸ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಮೊದಲ ಎರಡು ದಿನ ಸಿನಿಮಾ ಕಲೆಕ್ಷನ್ ಪಾಸಿಟಿವ್ ಆಗಿದೆ. ಒಂದು ವಾರದಲ್ಲಿ 1 ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ದರ್ಶನ್ ಪಾತ್ರವೇ ಹೈಲೈಟ್
'ನವಗ್ರಹ' ಸಿನಿಮಾದ ಹೈಲೈಟ್ ಅಂದರೆ ದರ್ಶನ್ ಪಾತ್ರ. ಆರಂಭದಲ್ಲಿ ಹೀರೋ ಅಂತ ಅನಿಸೋ ಪಾತ್ರ ಕಥೆ ಮುಂದಕ್ಕೆ ಸಾಗುತ್ತಾ ವಿಲನ್ ಅಂತ ಅನಿಸಿಕೊಳ್ಳುತ್ತಾ ಮುಂದಕ್ಕೆ ಸಾಗುತ್ತೆ. ದರ್ಶನ್ ಮಾಡಿದ ಪಾತ್ರವನ್ನು ಮೊದಲ ವಿನೋದ್ ಪ್ರಭಾಕರ್‌ಗೆ ಕೊಡಬೇಕು ಅಂತ ದಿನಕರ್ ಅಂದುಕೊಂಡಿದ್ದರು. ಆದರೆ ಕಥೆ ಕೇಳಿದ ಬಳಿಕ ದರ್ಶನ್ ಆ ಪಾತ್ರವನ್ನು ತಾನೇ ಮಾಡುತ್ತೇನೆಂದು ಹಠಕ್ಕೆ ಬಿದ್ದರು. ದರ್ಶನ್ ಲೆಕ್ಕಾಚಾರ ಸರಿಯಾಗಿಯೇ ಇತ್ತು. ಸಿನಿಮಾದಲ್ಲಿ ಇವರ ಪಾತ್ರ ಹೈಲೈಟ್ ಆಯ್ತು.


Click it and Unblock the Notifications











