ರಾಜಸ್ಥಾನದಲ್ಲಿ ದರ್ಶನ್ 'ದಿ ಡೆವಿಲ್' ಶೂಟಿಂಗ್; ಜಾಮೀನಿನ ಬಳಿಕ ಇದೇ ಮೊದಲ ಬಾರಿಗೆ ಹೊರ ರಾಜ್ಯದಲ್ಲಿ ಶೂಟ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ 'ದಿ ಡೆವಿಲ್' ಸಿನಿಮಾದ ಮತ್ತೊಂದು ಹಂತದ ಶೂಟಿಂಗ್ ಆರಂಭ ಆಗಿದೆ. ಕೆಲವು ದಿನಗಳ ಹಿಂದಷ್ಟೇ ಮೈಸೂರಿನಲ್ಲಿ ಶೂಟಿಂಗ್ ಆರಂಭ ಆಗಿತ್ತು. ಕೇವಲ ನಾಲ್ಕು ದಿನಗಳ ಕಾಲ ಮೈಸೂರಿನಲ್ಲಿ ಚಿತ್ರೀಕರಣ ಮಾಡಲಾಗಿತ್ತು. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಬಳಿಕ ಮೊದಲ ಬಾರಿಗೆ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು.
ಈಗ ಇದೇ ಮೊದಲ ಬಾರಿಗೆ ಹೊರ ರಾಜ್ಯಕ್ಕೆ ಕಾಲಿಟ್ಟಿದ್ದಾರೆ. ನ್ಯಾಯಾಲಯ ಹೊರ ರಾಜ್ಯದಲ್ಲಿ ಚಿತ್ರೀಕರಣ ಮಾಡುವುದಕ್ಕೆ ಅನುಮತಿಯನ್ನು ನೀಡಿದ್ದರಿಂದ 'ದಿ ಡೆವಿಲ್' ಶೂಟ್ ರಾಜಸ್ಥಾನದಲ್ಲಿ ನಡೆಯುತ್ತಿದೆ. ರಾಜಸ್ಥಾನದಲ್ಲಿ ದಿ ಡೆವಿಲ್ ಸಿನಿಮಾ ಟಾಕಿ ಪೋಷನ್ ಅನ್ನು ಶೂಟಿಂಗ್ ಮಾಡಲಾಗುತ್ತಿದೆ. ದರ್ಶನ್ ಟಾಕಿ ಪೋಷನ್‌ನಲ್ಲಿ ಭಾಗಿಯಾಗಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ದಿ ಡೆವಿಲ್' ಈಗಾಗಲೇ ಶೂಟಿಂಗ್ ಮುಗಿದು ರಿಲೀಸ್ ಆಗಬೇಕಿತ್ತು. 2024ರ ಡಿಸೆಂಬರ್‌ನಲ್ಲಿಯೇ 'ಡೆವಿಲ್' ಬಿಡುಗಡೆಯಾಗಬೇಕಿತ್ತು. ಆದರೆ, ಶೂಟಿಂಗ್ ನಡೆಯುತ್ತಿರುವಾಗಲೇ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಆಗಿದ್ದರು. ಈ ಕೇಸ್‌ನಲ್ಲಿ ದರ್ಶನ್ ಎರಡನೇ ಆರೋಪಿಯಾಗಿದ್ದರಿಂದ ಸುಮಾರು ಆರು ತಿಂಗಳ ಕಾಲ ಜೈಲಿನಲ್ಲಿಯೇ ಇರಬೇಕಾಯ್ತು. ಈ ಹಿನ್ನೆಲೆಯಲ್ಲಿ ಡೆವಿಲ್ ಶೂಟಿಂಗ್ ಸ್ಥಗಿತಗೊಂಡಿತ್ತು.
ಇಷ್ಟು ದಿನ ನಾನಾ ರೀತಿಯ ವಿಘ್ನಗಳನ್ನು ಎದುರಿಸಿದ್ದ 'ದಿ ಡೆವಿಲ್' ತಂಡ ಸಿನಿಮಾದ ಶೂಟಿಂಗ್ ಶುರು ಮಾಡಿದೆ. ವೇಗವಾಗಿ ಒಂದೊಂದೇ ಹಂತದ ಚಿತ್ರೀಕರಣ ಮುಗಿಸುತ್ತಿದೆ. ಮೈಸೂರಿನಲ್ಲಿ ಶೂಟಿಂಗ್ ಮುಗಿಸಿದ ಬಳಿಕ ರಾಜಸ್ಥಾನಕ್ಕೆ ತೆರಳಿದ ತಂಡ ಒಂದಿಷ್ಟು ದಿನ ಶೂಟಿಂಗ್ ನಡೆಸಲಿದೆ. ಆದರೆ, ಎಷ್ಟು ದಿನಗಳ ಕಾಲ ಇಲ್ಲಿ ಶೂಟಿಂಗ್ ಮಾಡುತ್ತಾರೆ ಎಂಬುವುದರ ಬಗ್ಗೆ ಚಿತ್ರತಂಡ ಮಾಹಿತಿಯನ್ನು ಹಂಚಿಕೊಂಡಿಲ್ಲ.
ದರ್ಶನ್ 'ದಿ ಡೆವಿಲ್ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಕ್ಕೆ ಅವರ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಶ್ರೀ ಜೈ ಮಾತ ಕಂಬೈನ್ಸ್ ಅದ್ದೂರಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಮಿಲನ ಪ್ರಕಾಶ್ ಈ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ದರ್ಶನ್‌ಗೆ 'ತಾರಕ್' ಸಿನಿಮಾವನ್ನು ನಿರ್ದೇಶನ ಮಾಡಿದ್ದರು.
ಇನ್ನು ಈ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ನಾಯಕಿಯಾಗಿ ರಚನಾ ರೈ , ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ತುಳಸಿ, ಶೋಭ್ ರಾಜ್ ಸೇರಿದಂತೆ ಪ್ರಮುಖ ಕಲಾವಿದರು ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಸುಧಾಕರ್ 'ದಿ ಡೆವಿಲ್' ಸಿನಿಮಾಗೆ ಛಾಯಾಗ್ರಹಣ ಮಾಡುತ್ತಿದ್ದರೆ, ಬಿ.ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ, ಮೋಹನ್ ಬಿ ಕೆರೆ ಆರ್ಟ್ ಹಾಗೂ ರಾಮ್ ಲಕ್ಷ್ಮಣ್ ಅವರ ಸಾಹಸ ನಿರ್ದೇಶನವಿದೆ.
ಇನ್ನೊಂದು ದರ್ಶನ್‌ಗೆ ಹೈ ಕೋರ್ಟ್‌ನಲ್ಲಿ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಏಪ್ರಿಲ್ 2ನೇ ತಾರೀಕಿನಂದು ದರ್ಶನ್ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಹೀಗಾಗಿ ಇನ್ನೊಂದು ವಾರದಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ. ಹೀಗಾಗಿ ರೇಣುಕಾಸ್ವಾಮಿ ಕೇಸ್ ಇನ್ನೂ ದರ್ಶನ್‌ಗೆ ಕಂಟಕವಾಗಿ ಕಾಡುತ್ತಲೇ ಇದೆ.


Click it and Unblock the Notifications











