ದರ್ಶನ್ ಮತ್ತೆ ಶಾಕ್ ಕೊಟ್ಟ ಕೋರ್ಟ್: ಮನೆಯೂಟ ಇಲ್ಲ, ಜೈಲೂಟವೇ ಫಿಕ್ಸ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಜೈಲು ಸೇರಿ ತಿಂಗಳಾಗಿದೆ. ಪರಪ್ಪನ ಅಗ್ರಹಾರ ಜೈಲು ಸೇರಿದ ಬಳಿಕ ಜೈಲೂಟದಿಂದ ಆರೋಗ್ಯ ತಪ್ಪುತ್ತಿದ್ದು, ಮನೆಯೂಟಕ್ಕೆ ಅವಕಾಶ ನೀಡುವಂತೆ ರಿಟ್ ಅರ್ಜಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದರು. 24ನೇ ಎಸಿಎಂಎಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವಂತೆ ಆದೇಶ ಮಾಡಿತ್ತು.
ಈ ಸಂಬಂಧ ವಿಚಾರಣೆ ನಡೆದು ಇಂದು (ಜುಲೈ 25) 24ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶರು ಆದೇಶವನ್ನು ಕಾಯ್ದಿರಿಸಿದ್ದರು. ಅದರಂತೆ ಇಂದು ಆದೇಶವನ್ನು ನೀಡಲಾಗಿದೆ. ಮನೆ ಊಟ, ಹಾಸಿಗೆ, ಬಟ್ಟೆ ಬೇಕು ಎಂದು ದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶರು ನಿರಾಕರಿಸಿದ್ದಾರೆ.

ದರ್ಶನ್ ಜೈಲೂಟ ಸೇವಿಸಿದ್ದರಿಂದ ತೂಕ ಕಡಿಮೆ ಆಗಿದೆ. ಅಜೀರ್ಣ, ಅತಿಸಾರ ಆಗುತ್ತಿದೆ. ಈ ಕಾರಣಕ್ಕೆ ದರ್ಶನ್‌ಗೆ ಮನೆಯೂಟಕ್ಕೆ ಅವಕಾಶ ಕೊಡಬೇಕು. ಹಾಸಿಗೆ, ಬಟ್ಟೆ ಬೇಕು ಎಂದು ದರ್ಶನ್ ಪರ ವಕೀಲರು ವಾದ ಮಂಡಿಸಿದ್ದರು. ಇತ್ತ ಪೊಲೀಸರ ಪರವಾಗಿ ವಿಶೇಷ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದ್ದರು. ಈ ಕಾರಣಕ್ಕೆ ದರ್ಶನ್‌ಗೆ ಜೈಲೂಟವೇ ಗತಿಯಾಗಿದೆ.
ದರ್ಶನ್‌ಗೆ ಜೈಲೂಟದಿಂದ ಯಾವುದೇ ರೀತಿಯ ಸಮಸ್ಯೆಯಾಗಿಲ್ಲ. ಅವರಿಗೆ ಜೈಲೂಟದಿಂದಲೇ ಸಮಸ್ಯೆಯಾದ ಬಗ್ಗೆ ವೈದ್ಯರ ಬಳಿ ಹೇಳಿಕೊಂಡಿಲ್ಲ. ಶೂಟಿಂಗ್ ಸಮಯದಲ್ಲಿ ಕೈಗೆ ಆದ ಗಾಯ ಹಾಗೂ ಬೆನ್ನು ನೋವಿನ ಬಗ್ಗೆ ಮಾತ್ರ ಹೇಳಿಕೊಂಡಿದ್ದಾರೆ. ಹಾಗೇ ಜೈಲಿನ ನಿಯಮಾವಳಿಯ ಪ್ರಕಾರ, ಕೊಲೆ ಆರೋಪಿಗೆ ಮನೆಯೂಟಕ್ಕೆ ಅವಕಾಶವಿಲ್ಲವೆಂದು ವಿಶೇಷ ಅಭಿಯೋಜಕರು ವಾದ ಮಂಡಿಸಿದ್ದರು. ಇಬ್ಬರ ವಾದವನ್ನು ಆಲಿಸಿದ ಬಳಿಕ ನ್ಯಾಯಾಧೀಶರಾದ ವಿಶ್ವನಾಥ್ ಸಿ ಗೌಡರ್ ಮನೆಯೂಟವನ್ನು ತಿರಸ್ಕರಿಸಿದ್ದಾರೆ.
ಜೈಲು ನಿಯಮಾವಳಿ 728ರ ಅಡಿಯಲ್ಲಿ ದರ್ಶನ್‌ಗೆ ಮನೆಯೂಟ, ಹಾಸಿಗೆ ಹಾಗೂ ಬಟ್ಟೆಯನ್ನು ಪಡೆಯಲು ಅವಕಾಶವನ್ನು ನಿರಾಕರಿಸಲಾಗಿದೆ. ಹೀಗಾಗಿ ದರ್ಶನ್ ಈಗ ವಿಧಿಯಿಲ್ಲದೆ ಹೈಕೋರ್ಟ್ ಮೊರೆ ಹೋಗಬೇಕಾಗಿದೆ. ಈಗಾಗಲೇ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರಿಂದ ಜುಲೈ 29ಕ್ಕೆ ವಿಚಾರಣೆಯನ್ನು ನಿಗದಿ ಮಾಡಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ದರ್ಶನ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇನ್ನೂ ಕೆಲವು ದಿನಗಳು ನ್ಯಾಯಾಂಗ ಬಂಧನದಲ್ಲಿಯೇ ಇರುತ್ತಾರೆ ಎನ್ನಲಾಗುತ್ತಿದೆ. ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ ದರ್ಶನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಬಹುದು. ಅಷ್ಟರೊಳಗೆ ಹೈಕೋರ್ಟ್‌ನಲ್ಲಿ ಜುಲೈ 29ರಂದು ಮನೆಯೂಟಕ್ಕೆ ಅವಕಾಶ ಸಿಕ್ಕಿದರೆ, ಸ್ವಲ್ಪ ನಿರಾಳ ಆಗಬಹುದು. ಇಲ್ಲದೇ ಹೋದರೆ, ಜಾಮೀನು ಸಿಗುವವರೆಗೂ ಜೈಲೂಟವೇ ಗತಿ.


Click it and Unblock the Notifications











