ದರ್ಶನ್ 59ನೇ ಸಿನಿಮಾ ಅನೌನ್ಸ್; 'ಕಾಟೇರ' ನಿರ್ದೇಶಕ ಆಕ್ಷನ್ ಕಟ್ ಹೇಳಲು ಹೊರಟ 'ಸಿಂಧೂರ ಲಕ್ಷ್ಮಣ' ಯಾರು ಗೊತ್ತೇ?
ಕನ್ನಡ ಚಿತ್ರರಂಗದಲ್ಲಿ ಬಹಳ ದಿನಗಳಿಂದ ಚರ್ಚೆಯಲ್ಲಿದ್ದ ಸಿನಿಮಾ ಹೆಸರು 'ಸಿಂಧೂರ ಲಕ್ಷ್ಮಣ'. ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಬಳಿಕ ದರ್ಶನ್ ಮತ್ತೊಬ್ಬ ಸ್ವಾತಂತ್ರ್ಯ ಹೋರಾಟಗಾರನ ಅವತಾರದಲ್ಲಿ ತೆರೆಮೇಲೆ ಕಾಣಿಸಿಕೊಳ್ಳಲ್ಲಿದ್ದಾರೆ ಅನ್ನೋ ಸುದ್ದಿ ಹರಿದಾಡಿದ್ದವು. ಕೊನೆಗೂ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿಲ್ಲ. ನಿರ್ಮಾಪಕಿ ಶೈಲಜಾ ನಾಗ್ ಈ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಇಂದು (ಫೆಬ್ರವರಿ 16) ದರ್ಶನ್ 47ನೇ ಹುಟ್ಟುಹಬ್ಬವಿರುವ ಹಿನ್ನೆಲೆಯಲ್ಲಿ 'ಕ್ರಾಂತಿವೀರ ಸಿಂಧೂರ ಲಕ್ಷ್ಮಣ' ಚಿರಿತ್ರೆಯನ್ನು ಕುರಿತಾದ ಸಿನಿಮಾವನ್ನು ಅನೌನ್ಸ್ ಮಾಡಲಾಗಿದೆ. ಸಿಂಧೂರ ಲಕ್ಷ್ಮಣನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಲಿದ್ದಾರೆ. 'ಕಾಟೇರ'ದಂತಹ ಸೂಪರ್ ಹಿಟ್ ಸಿನಿಮಾ ನಿರ್ದೇಶಿಸಿದ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಲಿದ್ದಾರೆ. ಮತ್ತೊಮ್ಮೆ ದರ್ಶನ್ ಹಾಗೂ ತರುಣ್ ಕಾಂಬಿನೇಷನ್ ಸಿನಿಮಾ ಸೆಟ್ಟೇರಲಿದೆ.

ದರ್ಶನ್ 'ರಾಬರ್ಟ್' ಸಿನಿಮಾ ವೇಳೆನೇ 'ಸಿಂಧೂರ ಲಕ್ಷ್ಮಣ' ಸಿನಿಮಾ ಮಾಡುವ ಬಗ್ಗೆ ಉತ್ಸಾಹ ತೋರಿದ್ದರು. ಈಗ ಆ ಮಹಾತ್ವಕಾಂಕ್ಷೆಯ ಸಿನಿಮಾ ಅನೌನ್ಸ್ ಆಗಿದ್ದು, ಯಾವಾಗ ಟೇಕ್ ಆಫ್ ಆಗುತ್ತೆ ಅನ್ನೋದು ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ. ಆದರೆ, 'ಕ್ರಾಂತಿವೀರ ಸಿಂಧೂರ ಲಕ್ಷ್ಮಣ' ಸಿನಿಮಾ ಬಗ್ಗೆ ಯಾಕಿಷ್ಟು ಕ್ರೇಜ್? ಯಾರೀ ಸಿಂಧೂರ ಲಕ್ಷ್ಮಣ? ಈತನ ಹಿನ್ನೆಲೆಯೇನು? ತಿಳಿಯಲು ಮುಂದೆ ಓದಿ...
ಉತ್ತರ ಕರ್ನಾಟಕ ಭಾಗ ಅದರಲ್ಲೂ ಮುಂಬೈ ಕರ್ನಾಟಕದಲ್ಲಿ 'ವೀರ ಸಿಂಧೂರ ಲಕ್ಷ್ಮಣ' ಅನ್ನೋ ಹೆಸರು ಚಿರಪರಿಚಿತ. ಈ ಹೆಸರು ಎತ್ತಿದರೆ ಸಾಕು, ಅಲ್ಲಿನ ಜನರಲ್ಲಿ ವೀರಾವೇಶ ಜಾಗೃತವಾಗುತ್ತೆ. ಬ್ರಿಟಿಷ್ ಅಧಿಕಾರಶಾಹಿಯ ವಿರುದ್ಧ, ಜಮೀನ್ದಾರರ ವಿರುದ್ಧ ಸಿಡಿದೆದ್ದಿದ್ದ ವೀರನೀತ. ತನ್ನದೊಂದು ಗುಂಪನ್ನು ಕಟ್ಟಿಕೊಂಡು ಬ್ರಿಟಿಷರ ವಿರುದ್ಧ ಸಮರ ಸಾರಿದ್ದ 'ಸಿಂಧೂರ ಲಕ್ಷ್ಮಣ'ನ ಚರಿತ್ರೆಯನ್ನು ಮರೆಯುವಂತಿಲ್ಲ. ಈ ಹೋರಾಟಗಾರರ ಚರಿತ್ರೆಯೇ ಈಗ ಸಿನಿಮಾ ಆಗುತ್ತಿದೆ.

ಗಾಂಧೀಜಿಯವರ ಅಸಹಕಾರ ಚಳುವಳಿ ಕರೆಗೆ ಓಗೊಟ್ಟು ಸಿಂಧೂರ ಲಕ್ಷಣ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕ್ಕಿದ್ದರು. ಇಲ್ಲಿಂದ ಸರ್ಕಾರಿ ಖಜಾನೆ ಲೂಟಿ, ಶ್ರೀಮಂತರನ್ನು ಲೂಟಿ ಮಾಡಿ ಅದನ್ನು ಬಡವರಿಗೆ ಹಂಚುವ ಕೆಲಸವನ್ನು ಮಾಡುತ್ತಿದ್ದರು. ಬ್ರಿಟಿಷರನ್ನು ಭಾರತದಿಂದ ತೊಲಗಿಸಲೇಬೇಕು ಅಂತ ಪಣ ತೊಟ್ಟಿದ್ದ ಸಿಂಧೂರ ಲಕ್ಷ್ಮಣ ಹೋರಾಟಕ್ಕೆ ಇಳಿದಿದ್ದನು. ಈ ವೇಳೆ ಬ್ರಿಟಿಷರ ಗುಂಡೇಟಿಗೆ ವೀರ ಮರಣವನ್ನು ಹೊಂದಿದ್ದನು. 1898ರಲ್ಲಿ ಜನಿಸಿದ್ದ ಸಿಂಧೂರ ಲಕ್ಷ್ಮಣ ಕೇವಲ ತನ್ನ 24ನೇ ವಯಸ್ಸಿನಲ್ಲೇ ವೀರ ಮರಣವನ್ನಪ್ಪಿದನು.
ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣ ಹೊಂದಿರೋ ಸಂಗೊಳ್ಳಿರಾಯಣ್ಣ , ಸುರಪುರದ ವೆಂಕಟ್ಪಪ್ಪ ನಾಯಕ, ನರಗುಂದ ಬಾಬಾಸಾಹೇಬ, ಮುಂಡರಗಿ ಭೀಮರಾಯ, ಮೈಲಾರ ಮಹಾದೇವ, ಹಲಗಲಿಯ ಬೇಡರು ಅಂತ ವೀರ ಸೇನಾನಿಗಳ ಸಾಲಿನಲ್ಲಿ ಸಿಂಧೂರ ಲಕ್ಷ್ಮಣ ಕೂಡ ಸೇರಿಕೊಳ್ಳುತ್ತಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ಹುತಾತ್ಮರಾದ ಈ ಧೀರ ಬ್ರಿಟಿಷರನ್ನು ದುಸ್ವಪ್ನದಂತೆ ಕಾಡಿದ್ದನು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಬೀಳಗಿ ತಾಲ್ಲೂಕಿನ ಕಪ್ಪರ ದೇವಾಲಯದಲ್ಲಿ ನಡೆದ ಕಾಳಗದಲ್ಲಿ ತಮ್ಮವರಿಂದಲೇ ವೀರಮರಣವನ್ನಪ್ಪಿದ ಸೇನಾನಿ.
1898ರಲ್ಲಿರಲ್ಲಿ ಸಿಂಧೂರಿನಲ್ಲಿ ಈ ವೀರ ಸೇನಾನಿಯ ಜನನವಾಗಿತ್ತು. ಕೇವಲ 24ರ ಹರೆಯದಲ್ಲಿ ಅಂದರೆ, 1922ರಲ್ಲಿ ವೀರಮರಣವನ್ನು ಅಪ್ಪಿದರು. ಕರ್ನಾಟಕದ ಏಕೀಕರಣಕ್ಕೂ ಮುನ್ನ ಸಿಂಧೂರ ಇದೇ ಕರ್ನಾಟಕದಲ್ಲಿಯೇ ಇತ್ತು. ಆ ಬಳಿಕ ಸಿಂಧೂರು ಈಗ ಮಹಾರಾಷ್ಟ್ರದ ಪಾಲಾಗಿದೆ. ಆದರೆ, ಸಿಂಧೂರ ಲಕ್ಷ್ಮಣನ ಮನೆತನದವರು ಇನ್ನೂ ಇದೇ ಊರಿನಲ್ಲಿಯೇ ಇದ್ದಾರೆ. ಅವರೆಲ್ಲರೂ ಕನ್ನಡವನ್ನೇ ಮಾತಾಡುತ್ತಾರೆ ಅನ್ನೋ ವರದಿಯಿದೆ.


Click it and Unblock the Notifications











