'ಐಶ್ವರ್ಯ' ಬಳಿಕ ಕನ್ನಡದಲ್ಲಿ ದೀಪಿಕಾ ಪಡುಕೋಣೆಯ ಮತ್ತೊಂದು ಸಿನಿಮಾ ರಿಲೀಸ್
ದೀಪಿಕಾ ಪಡುಕೋಣೆ ಬಾಲಿವುಡ್‌ನ ಬಹುಬೇಡಿಕೆ ನಟಿ. ಮದುವೆ ಬಳಿಕವೂ ದೀಪಿಕಾ ಪಡುಕೋಣೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಹಾಗೂ ಜಾಹೀರಾತು ಅಂತ ಪತಿ ರಣ್‌ವೀರ್ ಸಿಂಗ್‌ಗಿಂತಲೂ ದೀಪಿಕಾ ಬಿಡುವಿಲ್ಲ. ಕನ್ನಡದ ನಟಿಯೊಬ್ಬರು ಈ ಮಟ್ಟಿಗೆ ಸಕ್ಸಸ್‌ಫುಲ್ ಆಗಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವೇ. ಆದರೆ, ಕನ್ನಡ ಸಿನಿಮಾಗಳಿಂದ ನಟನೆ ಆರಂಭಿಸಿದ್ದ ದೀಪಿಕಾ ಮತ್ತೆ ಸ್ಯಾಂಡಲ್‌ವುಡ್ ಕಡೆ ತಿರುಗಿ ಕೂಡ ನೋಡಿರಲಿಲ್ಲ.
ದೀಪಿಕಾ ಪಡುಕೋಣೆ ತಂದೆಯಂತೆ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದರೂ, ಮಾಡಲಿಂಗ್‌ನಲ್ಲಿ ಹೆಚ್ಚು ಒಲವು ಬೆಳಸಿಕೊಂಡಿದ್ದರು. ಜಾಹೀರಾತುಗಳಲ್ಲಿ ದೀಪಿಕಾ ನಟಿಸಲು ಆರಂಭಿಸಿದ್ದರು. ಇದೇ ವೇಳೆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು. ಅದುವೇ ಉಪ್ಪಿ ಜೊತೆ ನಟಿಸಿದ್ದ ಐಶ್ವರ್ಯ. ಈ ಸಿನಿಮಾ ಬಳಿಕ ದೀಪಿಕಾ ಪಡುಕೋಣೆ ಲೈಫ್ ಬದಲಾಗಿ ಹೋಯ್ತು. ಬಾಲಿವುಡ್ ಇವರನ್ನು ಕೈ ಬೀಸಿ ಕರೆದಿತ್ತು. ಅಲ್ಲಿಂದ ದೀಪಿಕಾ ಮತ್ತೆ ಸ್ಯಾಂಡಲ್‌ವುಡ್ ಕಡೆ ತಿರುಗಿ ಕೂಡ ನೋಡಿರಲಿಲ್ಲ. ಆದ್ರೀಗ ದೀಪಿಕಾ ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ.

'ಐಶ್ವರ್ಯ 'ಬಳಿಕ ಕನ್ನಡದಲ್ಲಿ ದೀಪಿಕಾ ಸಿನಿಮಾ
ಹೌದು.. ಕನ್ನಡದಲ್ಲಿ ದೀಪಿಕಾ ಪಡುಕೋಣೆಯ ಸಿನಿಮಾ ರಿಲೀಸ್‌ಗೆ ಸಜ್ಜಾಗುತ್ತಿದೆ. 15 ವರ್ಷಗಳ ಹಿಂದೆ ಇಂದ್ರಜಿತ್ ಲಂಕೇಶ್ ನಿರ್ದೇಶಿಸಿದ್ದ 'ಐಶ್ವರ್ಯ' ಸಿನಿಮಾವೇ ದೀಪಿಕಾ ನಟಿಸಿದ ಕೊನೆಯ ಸಿನಿಮಾ ಆಗಿತ್ತು. ಅಲ್ಲಿಂದಲೂ ದೀಪಿಕಾ ಕನ್ನಡ ಚಿತ್ರಗಳಲ್ಲಿ ಮತ್ತೆ ನಟಿಸಬೇಕು ಅನ್ನುವುದು ಕನ್ನಡಿಗರ ಒತ್ತಾಸೆಯಾಗಿತ್ತು. ಈಗ ಆಸೆ ಈಡೇರುವ ಕಾಲ ಕೂಡಿ ಬಂದಿದೆ. ದೀಪಿಕಾ ಹಾಗೂ ರಣ್‌ವೀರ್ ಸಿಂಗ್ ನಟಿಸಿರುವ 83 ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗುತ್ತಿದ್ದು, ಬಿಡುಗಡೆ ಬೇಕಾಗಿರುವ ತಯಾರಿ ಜೋರಾಗೇ ನಡೆಯುತ್ತಿದೆ.

ಮೊದಲ ವಿಶ್ವಕಪ್ ಕಥೆ ಹೇಳಲಿದೆ '83'
ಕಪಿಲ್ ನಾಯಕತ್ವದ ಕ್ರಿಕೆಟ್ ತಂಡ 1983ರಲ್ಲಿ ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದು ಕೊಡುವಲ್ಲಿ ಯಶಸ್ವಿಯಾಗಿತ್ತು. ಆ ಕ್ಷಣಗಳನ್ನು ತೆರೆಮೇಲೆ ಕಟ್ಟಿಕೊಡಲು '83' ಸಿನಿಮಾ ಸಜ್ಜಾಗುತ್ತಿದೆ. ರಣ್‌ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ನಟಿಸಿರುವ ಈ ಸಿನಿಮಾದ ಮೊಟ್ಟ ಮೊದಲ ಟೀಸರ್ ರಿಲೀಸ್ ಆಗಿದೆ. ಇದೇ ಸಿನಿಮಾ ಕನ್ನಡದಲ್ಲೂ ಡಬ್ ಆಗಿ ಬಿಡುಗಡೆಯಾಗಲಿದೆ. ಈ ಮೂಲಕ ಕನ್ನಡದಲ್ಲಿ ಮತ್ತೆ ದೀಪಿಕಾ ಪಡುಕೋಣೆ ಸಿನಿಮಾ ನೋಡುವ ಅವಕಾಶ ಸಿಕ್ಕಂತಾಗಿದೆ.

ಕ್ರಿಸ್‌ಮಸ್‌ಗೆ '83' ಸಿನಿಮಾ ರಿಲೀಸ್
ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ನಟಿಸಿದ '83' ಕಳೆದ ವರ್ಷವೇ ರಿಲೀಸ್ ಆಗಬೇಕಿತ್ತು. ಆದರೆ, ಕೊರೊನಾ ಕಾರಣದಿಂದಾಗಿ ಈ ಸಿನಿಮಾ ಬಿಡುಗಡೆ ವಿಳಂಬ ಆಗಿತ್ತು. ಆದ್ರೀಗ ಡಿಸೆಂಬರ್ 24ಕ್ಕೆ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿರುವುದರಿಂದ ಮೊಟ್ಟ ಮೊದಲ ಟೀಸರ್ ರಿಲೀಸ್ ಮಾಡಿದೆ. ಈ ಟೀಸರ್ ಟ್ರೈಲರ್ ರಿಲೀಸ್‌ಗೆ ಆಮಂತ್ರಣದಂತಿದೆ. '83'ಯ ಮೊದಲ ಟ್ರೈಲರ್ ಇದೇ ನವೆಂಬರ್ 30ರಂದು ಗ್ರ್ಯಾಂಡ್ ರಿಲೀಸ್ ಆಗಲಿದೆ.

ಕಪಿಲ್ ದೇವ್ ಅವತಾರದಲ್ಲಿ ರಣ್‌ವೀರ್ ಸಿಂಗ್
ಕಬೀರ್ ಖಾನ್ ನಿರ್ದೇಶಿಸಿರುವ '83' ಬಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲೊಂದು. ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ಮದುವೆ ಬಳಿಕ ಜೊತೆಯಾಗಿ ನಟಿಸಿದ ಮೊದಲ ಸಿನಿಮಾ ಕೂಡ ಹೌದು. ಎಲ್ಲಕ್ಕಿಂತ ಹೆಚ್ಚಾಗಿ ರಣ್‌ವೀರ್ ಸಿಂಗ್ 83 ವಿಶ್ವಕಪ್ ಗೆದ್ದ ನಾಯಕ ಕಪಿಲ್ ದೇವ್ ಪಾತ್ರದಲ್ಲಿ ನಟಿಸುತ್ತಿರುವುದರಿಂದ ಸಿನಿಮಾ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ. ಅದ್ರಲ್ಲು '83' ಕನ್ನಡ ಸೇರಿದಂತೆ ದಕ್ಷಿಣ ಭಾರತ ಎಲ್ಲಾ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಕ್ರಿಸ್‌ಮಸ್‌ಗೆ ತೆರೆಮೇಲೆ 1983ರ ವಿಶ್ವಕಪ್ ಪಂದ್ಯ ವೀಕ್ಷಿಸಬಹುದಾಗಿದೆ.


Click it and Unblock the Notifications











