ಡೆವಿಲ್ ಸೆಟ್‌ನಲ್ಲಿ ದರ್ಶನ್‌ಗೆ ಬೆನ್ನು ನೋವಿನಿಂದ ಬಳಲಿದ್ದು ನಾಟಕನಾ? ನಿಜನಾ? ಏನಂತಾರೆ ರಚನಾ ರೈ?
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿ ಜೈಲು ಸೇರಿದ್ದರು. ಬಳ್ಳಾರಿ ಜೈಲಿನಲ್ಲಿ ಇರುವಾಗಲೇ ಅವರಿಗೆ ತೀವ್ರ ಬೆನ್ನು ನೋವು ಕಾಣಿಸಿಕೊಂಡಿತ್ತು. ಈ ಕಾರಣದಿಂದಲೇ ಹೈಕೋರ್ಟ್ ದರ್ಶನ್‌ಗೆ ಜಾಮೀನು ನೀಡಿತ್ತು. ಒಂದಷ್ಟು ದಿನ ವಿಶ್ರಾಂತಿ ಪಡೆದ ಬಳಿಕ ದರ್ಶನ್ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಅರ್ಧಕ್ಕೆ ನಿಂತಿದ್ದ 'ಡೆವಿಲ್' ಸಿನಿಮಾದ ಶೂಟಿಂಗ್ ಅನ್ನು ಮುಂದುವರೆಸಿದ್ದರು.
ಇನ್ನೇನು ಶೂಟಿಂಗ್ ಮುಗೀತು ಎನ್ನುವಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್‌ಗೆ ನೀಡಿದ್ದ ಜಾಮೀನನ್ನು ರದ್ದುಗೊಳಿಸಲಾಯ್ತು. ಈ ವೇಳೆ ದರ್ಶನ್ ಬೆನ್ನು ನೋವಿನ ಬಗ್ಗೆ ಟೀಕೆಗಳು ಶುರುವಾಗಿದ್ದವು. ಜಾಮೀನು ಪಡೆಯುವುದಕ್ಕಾಗಿಯೇ ದರ್ಶನ್ ಬೆನ್ನು ನೋವಿನ ನಾಟಕ ಆಡಿದ್ದಾರೆ. ಬೆನ್ನು ನೋವಿನ ಕಾರಣ ಕೊಟ್ಟು ಹೊರ ಬಂದ್ಮೇಲೆ ದರ್ಶನ್ ಯಾಕೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿಲ್ಲ? ಅಂತ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗಳು ಬಂದಿದ್ದೂ ಇವೆ.

ಆದರೆ, ಜಾಮೀನು ರದ್ದಾಗಿ ಮತ್ತೆ ಜೈಲು ಸೇರಿದ ಬಳಿಕ ಡೆವಿಲ್ ಸೆಟ್‌ನ ಒಂದು ವಿಡಿಯೋ ಹರಿದಾಡುವುದಕ್ಕೆ ಶುರುವಾಗಿತ್ತು. ದರ್ಶನ್ ಡೆವಿಲ್ ಸೆಟ್‌ನಲ್ಲಿ ಬೆನ್ನು ನೋವಿನಿಂದ ಬಳಲಿದ್ದರು. ಆ ವಿಡಿಯೋ ಅವರ ಅಭಿಮಾನಿಗಳ ಮನ ಕಲುಕಿತ್ತು. ದರ್ಶನ್ ಬೆನ್ನು ನೋವು ಅಂತ ಸುಳ್ಳು ಹೇಳಿಲ್ಲ ಅಂತ ಕೆಲವರು. ಇದೂ ಕೂಡ ಸುಳ್ಳು ಅಂತ ಇನ್ನೊಂದಿಷ್ಟು ಮಂದಿ ವಾದ ಮಾಡಿದ್ದರು. ಅಸಲಿಗೆ ಈ ವಿಡಿಯೋದಲ್ಲಿ ದರ್ಶನ್ ಬೆನ್ನು ನೋವು ಅಂತ ಮಲಗಿದ್ದು ನಾಟಕನಾ? ಇಲ್ಲಾ ನಿಜನಾ? ಸಿನಿಮಾದ ನಾಯಕಿ ರಚನಾ ರೈ ರಿವೀಲ್ ಮಾಡಿದ್ದಾರೆ.
ಇತ್ತೀಚೆಗೆ 'ಡೆವಿಲ್' ಸಿನಿಮಾದ ನಾಯಕಿ ರಚನಾ ರೈ 'ಆತ್ಮೀಯ ಕನ್ನಡಿಗರೇ' ಎನ್ನುವ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ನಿರೂಪಕರು ಕೇಳಿದ ಪ್ರಶ್ನೆಗೆ ರಚನಾ ರೈ ಡೆವಿಲ್ ಶೂಟಿಂಗ್ ಸೆಟ್‌ನಲ್ಲಿ ಏನಾಯ್ತು? ಅನ್ನೋದನ್ನು ಇಂಚಿಂಚಾಗಿ ಬಿಡಿಸಿ ಹೇಳಿದ್ದಾರೆ. ದರ್ಶನ್‌ಗೆ ದಿಢೀರನೇ ಬೆನ್ನು ನೋವು ಹೇಗೆ ಕಾಣಿಸಿಕೊಳ್ತು? ಅನ್ನೋದನ್ನು ರಿವೀಲ್ ಮಾಡಿದ್ದಾರೆ.
ಎಲ್ಲರೂ ಆ ಸೀನ್ ಬೇಡ ಅಂತಿದ್ದರು
ಡೆವಿಲ್ ಸೆಟ್‌ನಲ್ಲಿ ಒಂದು ಪ್ರಮುಖವಾದ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಎಲ್ಲವೂ ಆ ಸೀನ್ ಮಾಡುವುದು ಬೇಡವೆಂದು ದರ್ಶನ್‌ಗೆ ಸಲಹೆ ನೀಡಿದ್ದರು. ಆದರೆ, ಸಿನಿಮಾಗೆ ಆ ದೃಶ್ಯದ ಪ್ರಾಮುಖ್ಯತೆ ಅರಿತಿದ್ದ ದರ್ಶನ್ ನಟಿಸುವುದಕ್ಕೆ ಮುಂದಾಗಿದ್ದರು. "ಆ ಸೀನ್ ಮಾಡೋದು ಎಲ್ಲರೂ ಬೇಡ ಬೇಡ ಅಂತಾನೇ ಹೇಳುತ್ತಿದ್ದರು. ಆದರೆ, ಆ ಸೀನ್ ಅಷ್ಟು ಮುಖ್ಯ ಇತ್ತು. ಸಿನಿಮಾ ನೋಡಿದಾಗ ನಿಮಗೆ ಗೊತ್ತಾಗುತ್ತೆ. ಹಾಗಾಗಿ ಆ ದೃಶ್ಯದಲ್ಲಿ ನಟಿಸಲೇಬೇಕಿತ್ತು. ಪ್ರಕಾಶ್ ಸರ್ ಬೇರೆ ಏನೋ ಮಾಡಿಕೊಳ್ಳುತ್ತಿದ್ದರು. ಆದರೆ, ಆ ಸೀನ್ ಬೇಕು ಅನ್ನೋದು ದರ್ಶನ್ ಸರ್‌ಗೆ ಗೊತ್ತಿತ್ತು. ಈ ದೃಶ್ಯವನ್ನು ಬಿಟ್ಟುಕೊಟ್ಟರೆ, ತೊಂದರೆ ಆಗುತ್ತೆ ಎಂದು ಹೇಳಿ, ಅವರಿಗೆ ಕಷ್ಟ ಆದರೂ ಪರ್ವಾಗಿಲ್ಲ ಅಂತ ಟ್ರೈ ಮಾಡಿದರು. ಆದರೆ ಆಗಲಿಲ್ಲ." ಎಂದು ರಚನಾ ರೈ ಹೇಳಿದ್ದಾರೆ.

ಕೂರೋಕೂ-ನಿಲ್ಲೋಕೂ ಆಗ್ತಿರಲಿಲ್ಲ
ಡೆವಿಲ್ ಸೆಟ್ಟಿನಲ್ಲಿ ದರ್ಶನ್‌ಗೆ ತೀವ್ರ ಬೆನ್ನು ನೋವು ಕಾಣಿಸಿಕೊಂಡಾಗ ಅವರಿಗೆ ಸಿಕ್ಕಾಪಟ್ಟೆ ಜ್ವರ ಇತ್ತು. ಕೂರೋಕೂ, ನಿಲ್ಲೋಕೂ ಆಗುತ್ತಿರಲಿಲ್ಲ ಎಂದು ನಟಿ ರಚನಾ ರೈ ಹೇಳಿದ್ದಾರೆ. "ದರ್ಶನ್ ಸರ್‌ಗೆ ಅವತ್ತು ಜ್ವರ ಬೇರೆ ಇತ್ತು. ಆದರೂ ರಿಸ್ಕ್ ತೆಗೆದುಕೊಂಡು ಶೂಟಿಂಗ್ ಮಾಡಿದರು. ಸಡನ್ ಆಗಿ ಬೆನ್ನು ನೋವು ಕಾಡುವುದಕ್ಕೆ ಶುರುವಾಗಿತ್ತು. ಅವರನ್ನು ಸೆಟ್‌ನಲ್ಲಿ ನೋಡುವುದಕ್ಕೆ ತುಂಬಾನೇ ಹಿಂಸೆ ಆಗುತ್ತಿತ್ತು. ಆಕ್ಷನ್ ಸೀನ್‌ಗಳಲ್ಲೆಲ್ಲ ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದಾರೆ. ಒಂದು ಸೀನ್ ಮಾಡೋರು ಬಂದು ಕೂರುತ್ತಿದ್ದರು. ಕೆಲವೊಮ್ಮೆ ಕೂರುವುದಕ್ಕೂ ಆಗುತ್ತಿರಲಿಲ್ಲ, ಓಡಾಡುತ್ತಿರೋರು, ಟ್ಯಾಬ್ಲೆಟ್ಸ್ ತಿನ್ನೋರು. ಸೆಟ್‌ನಲ್ಲಿಯೇ ಮಸಾಜ್ ಎಲ್ಲ ಮಾಡಿಸಿಕೊಂಡು ಆಕ್ಟ್ ಮಾಡೋರು." ಎಂದು ರಚನಾ ರೈ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಫ್ಯಾನ್ಸ್ ಸಪೋರ್ಟ್ ಇದೆ
ಇದೇ ಸಂದರ್ಶನದಲ್ಲಿ ದರ್ಶನ್ ಅಭಿಮಾನಿಗಳ ನೀಡುತ್ತಿರುವ ಬೆಂಬಲದ ಬಗ್ಗೆನೂ ಮಾತಾಡಿದ್ದಾರೆ. "ದರ್ಶನ್ ಸರ್ ಅಭಿಮಾನಿಗಳ ಬಗ್ಗೆ ಏನು ಹೇಳೋದು. ಅವರು ನನಗೆ ತುಂಬಾನೇ ಸಪೋರ್ಟ್ ಮಾಡುತ್ತಿದ್ದಾರೆ. ಅವರಿಗೆ ನಾನು ಯಾರೂ ಅಲ್ಲ. ಎಷ್ಟು ಪ್ರೀತಿಯಿಂದ ರಚ್ಚು, ರಚ್ಚಿ, ರಚಿಮಾ ಅಂತೆಲ್ಲ ಕರೆಯುತ್ತಾರೆ. ಅವರ ತಂಗಿಯಂದಿರನ್ನು ಹೇಗೆ ಮುದ್ದು ಮುದ್ದಾಗಿ ಕರೆಯುತ್ತಾರೋ, ಹಾಗೇ ಹೆಸರಿಟ್ಟು ಕರೆಯುತ್ತಾರೆ. ನನಗೆ ಅವರು ಎಷ್ಟು ಪಾಪಚ್ಚಿಗಳು ಅಂತ ಅನಿಸುತ್ತೆ." ಎಂದಿದ್ದಾರೆ.
ಟೆನ್ಷನ್ ತಗೋಬೇಡಿ ಅಂತಾರೆ
"ಪ್ರತಿಯೊಬ್ಬ ಅಭಿಮಾನಿಯೂ ಟೆನ್ಷನ್ ತಗೋಬೇಡಿ ಅಕ್ಕ ನಾವಿದ್ದೀವಿ ಅಂತಾರೆ. ಪ್ರತಿಯೊಬ್ಬರೂ ದರ್ಶನ್ ಹೇಗಿದ್ದಾರೆ ಅಕ್ಕ ಅಂತಾರೆ. ದರ್ಶನ್ ಸರ್ ಚೆನ್ನಾಗಿದ್ದಾರಾ? ಚೆನ್ನಾಗಿ ನೋಡಿಕೊಳ್ಳಿ ಅಂತ ಹೇಳುತ್ತಾರೆ. ಅಂದರೆ, ಅವರು ಹಾಕುವ ಮೆಸೇಜ್ ಅನ್ನು ನಾವು ನೋಡುತ್ತೇವೋ ಇಲ್ಲವೋ? ಅನ್ನೋದೂ ಗೊತ್ತಿಲ್ಲ. ಆದರೂ, ಸುಮ್ಮನೆ ಹಾಗೇ ಮೆಸೇಜ್ ಹಾಕುತ್ತಾರೆ." ಎಂದು ದರ್ಶನ್ ಅಭಿಮಾನಿಗಳನ್ನು ಹಾಡಿ ಹೊಗಳಿದ್ದಾರೆ.


Click it and Unblock the Notifications











