'ಜೈಲರ್ 2' ಸೆಟ್ಟಿನಲ್ಲಿ ದೊಡ್ಮನೆಯ ಹೆಣ್ಣು ಮಕ್ಕಳು; ರಜನಿಕಾಂತ್ ಭೇಟಿಯಾದ ಧನ್ಯಾ-ಪೂರ್ಣಿಮಾ ರಾಮ್‌ಕುಮಾರ್
ಕಳೆದ ಕೆಲವು ದಿನಗಳಿಂದ ಸೂಪರ್‌ಸ್ಟಾರ್ ರಜನಿಕಾಂತ್ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇದ್ದಾರೆ. ಒಮ್ಮೆ 'ಕೂಲಿ' ಸಿನಿಮಾದಿಂದ ಸುದ್ದಿಯಲ್ಲಿ ಇದ್ದರೆ, ಇನ್ನೊಂದು ಕಡೆ 'ಜೈಲರ್ 2' ವಿಚಾರವಾಗಿ ಸುದ್ದಿಯಲ್ಲಿ ಇರುತ್ತಾರೆ. ನಿನ್ನೆ (ಜೂನ್ 25) 'ಕೂಲಿ' ಮೊದಲ ಸಾಂಗ್ ರಿಲೀಸ್ ಆಗಿತ್ತು. ಅದು ಯೂಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ. ಇಂದು (ಜೂನ್ 26) 'ಜೈಲರ್ 2' ಸೆಟ್ಟಿನಲ್ಲಿ ಸದ್ದು ಮಾಡುತ್ತಿದ್ದಾರೆ.
ಸೂಪರ್‌ಸ್ಟಾರ್ ರಜನಿಕಾಂತ್ ಮೈಸೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಮೆಗಾ ಸಕ್ಸಸ್ ಕಂಡಿದ್ದ 'ಜೈಲರ್' ಸಿನಿಮಾ ಸೀಕ್ವೆಲ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ ಕಳೆದ ಕೆಲವು ದಿನಗಳಿಂದ ಶೂಟಿಂಗ್‌ನಲ್ಲಿರುವ ರಜನಿಕಾಂತ್ ಸದ್ಯಕ್ಕೂ ಮೈಸೂರಿನಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ. ರಜನಿಕಾಂತ್ ಮೈಸೂರಿನಲ್ಲಿ ಇದ್ದಾರೆ ಅಂದರೆ, ಅಭಿಮಾನಿಗಳು ಸುಮ್ಮನೆ ಬಿಡುತ್ತಾರಾ? ಅವರನ್ನು ಹುಡುಕಿಕೊಂಡು ಅದೆಲ್ಲೇ ಇದ್ದರೂ ಹೋಗುತ್ತಾರೆ. ಕೇರಳದಲ್ಲಿ ರಜನಿ ಶೂಟಿಂಗ್ ಮಾಡುವಾಗಲೂ ಇಂತಹದ್ದೇ ಅಭಿಮಾನಿ ಹೊರ ಹೊಮ್ಮಿತ್ತು.

ರಜನಿಕಾಂತ್ ಅವರನ್ನು ನೋಡುವುದಕ್ಕೆ ಕೇವಲ ಅಭಿಮಾನಿಗಳಷ್ಟೇ ಅಲ್ಲ, ಕನ್ನಡ ಚಿತ್ರರಂಗದ ದೊಡ್ಮನೆಯ ಹೆಣ್ಣು ಮಕ್ಕಳು ಕೂಡ 'ಜೈಲರ್ 2' ಶೂಟಿಂಗ್ ಸೆಟ್ಟಿಗೆ ಹೋಗಿದ್ದಾರೆ. ಅಲ್ಲಿ ತಲೈವಾ ರಜನಿಯನ್ನು ಭೇಟಿ ಮಾಡಿ ಫೋಟೊವನ್ನು ಕ್ಲಿಕ್ಕಿಸಿದ್ದಾರೆ. ಈ ಫೋಟೊಗಳನ್ನು ಧನ್ಯಾ ರಾಮ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ದೊಡ್ಮನೆ ಕುಟುಂಬದ ನಡುವೆ ಮೊದಲಿನಿಂದಲೂ ಒಂದು ಆತ್ಮೀಯತೆಯಿದೆ. ಅಣ್ಣಾವ್ರ ಕಾಲದಿಂದಲೂ ರಜನಿ ದೊಡ್ಮನೆಯ ಅಚ್ಚುಮೆಚ್ಚಿನ ನಟನಾಗಿದ್ದಾರೆ. ರಾಜ್ ಕುಟುಂಬದ ಹಲವು ಕಾರ್ಯಕ್ರಮಗಳಿಗೆ ರಜನಿಕಾಂತ್ ಅವರು ಅತಿಥಿಗಳಾಗಿ ಬಂದು ಹೋಗಿದ್ದಾರೆ. ಶಿವಣ್ಣ, ರಾಘಣ್ಣ, ಪುನೀತ್ ರಾಜ್‌ಕುಮಾರ್ ಅವರು ಕೂಡ ಸೂಪರ್‌ಸ್ಟಾರ್ ಜೊತೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ.
ರಜನಿಕಾಂತ್‌ಗೆ ಮೈಸೂರು ಅಂದರೆ ಬಲು ಇಷ್ಟ. ಇವರ ಹಲವು ಸಿನಿಮಾಗಳು ಮೈಸೂರಿನಲ್ಲಿಯೇ ಶೂಟಿಂಗ್ ಆಗಿದೆ. ಇತ್ತೀಚೆಗೆ ಹೆಚ್ಚಾಗಿ ಮೈಸೂರಿನಲ್ಲಿ ಒಂದು ಶೆಡ್ಯೂಲ್ ಆದರೂ ಶೂಟಿಂಗ್ ಮಾಡುತ್ತಲೇ ಇರುತ್ತಾರೆ. ಈಗ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸುತ್ತಿರುವ 'ಜೈಲರ್ 2' ಸಿನಿಮಾದ ಕೆಲವು ದೃಶ್ಯಗಳನ್ನು ಅರಮನೆ ನಗರಿಯಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ಇದೇ ವೇಳೆ ಧನ್ಯಾ ಹಾಗೂ ಅವರ ಅಮ್ಮ ಪೂರ್ಣಿಮಾ ರಾಮ್‌ಕುಮಾರ್ ಅವರು 'ಜೈಲರ್ 2' ಸೆಟ್ಟಿಗೆ ತೆರಳಿ ರಜನಿಯನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಅವರೊಂದಿಗೆ ತೆಗೆಸಿಕೊಂಡ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಧನ್ಯಾ ರಾಮ್‌ಕುಮಾರ್‌ಗೂ ಮೈಸೂರು ಅಂದರೆ ಬಲು ಇಷ್ಟ. ಅದಕ್ಕೆ ಅವರು ಹಂಚಿಕೊಂಡಿರುವ ಫೋಟೊಗಳೇ ಸಾಕ್ಷಿ. ರಜನಿಕಾಂತ್ ಭೇಟಿಯ ವೇಳೆನೇ ಚಾಮುಂಡೇಶ್ವರಿ ದೇವಿಯ ದರ್ಶನ ಮಾಡಿದ್ದಾರೆ. ಮೈಸೂರು ಅರಮನೆ, ಅಲ್ಲಿನ ದೋಸೆಯ ಫೋಟೊಗಳನ್ನು ಹಂಚಿಕೊಂಡಿಕೊಂಡಿದ್ದಾರೆ. ಮೈಸೂರು ಯಾವಾಗಲೂ ಒಳ್ಳೆಯ ಐಡಿಯಾ ಎಂದು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಂಡು ಬರೆದುಕೊಂಡಿದ್ದಾರೆ.
ರಜನಿಕಾಂತ್ ಕಳೆದ ನಾಲ್ಕೈದು ದಿನಗಳಿಂದ ಮೈಸೂರಿನ ಹುಣಸೂರು ತಾಲೂಕಿನ ಬಿಳಿಕೆರೆಯಲ್ಲಿ 'ಜೈಲರ್ 2' ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇಲ್ಲಿ ಸಿನಿಮಾದ ಕೆಲವು ಪ್ರಮುಖ ದೃಶ್ಯಗಳು ಹಾಗೂ ಆಕ್ಷನ್ ಸೀಕ್ವೆನ್ಸ್ ಅನ್ನು ಚಿತ್ರೀಕರಣ ಮಾಡಲಾಗಿದೆ ಎಂದು ವರದಿಯಾಗಿದೆ. ರಜನಿಕಾಂತ್ ಇಲ್ಲಿ ಶೂಟಿಂಗ್‌ಗೆ ಬಂದಿರುವುದನ್ನು ತಿಳಿಯುತ್ತಿದ್ದಂತೆ ಅಭಿಮಾನಿಗಳು ಅವರನ್ನು ನೋಡುವುದಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದಾರೆ. ಪ್ರತಿ ದಿನ ರಜನಿಯನ್ನು ನೋಡುವುದಕ್ಕೆ ಆಗಮಿಸುತ್ತಿದ್ದಾರೆ.
ಸೂಪರ್‌ಸ್ಟಾರ್ ರಜನಿಕಾಂತ್ ಕೂಡ ಶೂಟಿಂಗ್ ಮುಗಿಯುತ್ತಿದ್ದಂತೆ ತಮ್ಮ ಅಭಿಮಾನಿಗಳಿಗೆ ದರ್ಶನ ಕೊಟ್ಟು ತೆರಳುತ್ತಿದ್ದಾರೆ. ಅಭಿಮಾನಿಗಳ ಕಡೆಗೆ ಕೈ ಬೀಸಿ, ನಮಸ್ಕರಿಸಿ ತೆರಳುತ್ತಿರುವ ದೃಶ್ಯಗಳನ್ನು ಅಭಿಮಾನಿಗಳೇ ವಿಡಿಯೋ ಮಾಡಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 'ಜೈಲರ್ 2' ಸಿನಿಮಾದ ಶೂಟಿಂಗ್‌ಗಾಗಿ ಕೆಲವು ಕಡೆ ಸೆಟ್‌ಗಳನ್ನು ಹಾಕಿ ಅಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.


Click it and Unblock the Notifications











