Dharmasthala Case: ಹೈಕೋರ್ಟ್ ರಿಟ್ ಅರ್ಜಿಯಲ್ಲಿ ನಟ ಪ್ರಕಾಶ್ ರೈ ಹೆಸರು ಪ್ರಸ್ತಾಪಿಸಿದ 'ಮುಖವಾಡಧಾರಿ' ಚಿನ್ನಯ್ಯ
ಧರ್ಮಸ್ಥಳ ವಿವಾದಕ್ಕೆ ಈಗ ಮತ್ತೊಂದು ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಈ ಹಿಂದೆ ಈ ಕ್ಷೇತ್ರದ ವಿರುದ್ಧವೇ ಆರೋಪ ಮಾಡಿದ್ದ 'ಮುಖವಾಡಧಾರಿ' (Masked man) ಎಂದೇ ಬಿಂಬಿತವಾಗಿರೋ ಚಿನ್ನಯ್ಯ ಈಗ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ನಟ ಪ್ರಕಾಶ್ ರಾಜ್ ಹೆಸರನ್ನು ಸೇರಿಸಿದ್ದು, ರಾಜ್ಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಚಿನ್ನಯ್ಯ ಮಾಡಿರುವ ಆರೋಪ ಪ್ರಕಾಶ್ ರಾಜ್‌ಗಷ್ಟೇ ಸೀಮಿತವಾಗಿಲ್ಲ. ಧರ್ಮಸ್ಥಳದ ಹೆಸರಿಗೆ ಧಕ್ಕೆ ತರುವುದಕ್ಕೆ ಪಿತೂರಿ ನಡೆದಿತ್ತು ಎಂದು ಹೇಳಿದ್ದಾರೆ.
ಈ ಹಿಂದೆ ಧರ್ಮಸ್ಥಳದ ವಿರುದ್ಧ ಸುಳ್ಳು ಆರೋಪ ಮಾಡಿದ್ದ ಚಿನ್ನಯ್ಯ ವಿಶೇಷ ತನಿಖಾ ತಂಡದ (SIT) ಮಾಡಿದ ತನಿಖೆಯಲ್ಲಿ ಸುಳ್ಳು ಸಾಕ್ಷ್ಯ ನುಡಿದ ಆರೋಪದಡಿ ಬಂಧನಕ್ಕೊಳಗಾಗಿದ್ದರು. ಈಗ ಅವರ ಹೇಳಿಕೆ ವಿರುದ್ಧ ದಿಕ್ಕಿನೆಡೆಗೆ ಸಾಗುತ್ತಿದ್ದು, ಪ್ರಕಾಶ್ ರಾಜ್ ಸೇರಿದಂತೆ ಹಲವರ ವಿರುದ್ಧ ತಿರುಗಿಬಿದ್ದಿದ್ದಾರೆ. ಹಾಗಿದ್ದರೆ, ಈ ರಿಟ್ ಅರ್ಜಿಯಲ್ಲಿ ಏನಿದೆ? ಪ್ರಕಾಶ್ ರಾಜ್ ವಿರುದ್ಧ ಮಾಡಿರುವ ಆರೋಪಗಳೇನು? ತಿಳಿಯುವುದಕ್ಕೆ ಮುಂದೆ ಓದಿ.

ರಿಟ್ ಅರ್ಜಿಯಲ್ಲಿ ಏನಿದೆ?
ಚಿನ್ನಯ್ಯ ಹೈಕೋರ್ಟ್‌ಗೆ ಸಲ್ಲಿಸಿದ ರಿಟ್ ಅರ್ಜಿ ಸಂಚಲ ಸೃಷ್ಟಿಸುತ್ತಿರುವುದಕ್ಕೆ ಹಲವು ಕಾರಣಗಳಿವೆ. ಈ ಅರ್ಜಿಯಲ್ಲಿ ಮಾಡಿರುವ ಗಂಭೀರ ಆರೋಪಗಳಲ್ಲಿ ಧರ್ಮಸ್ಥಳದ ವಿರುದ್ಧದ ಪಿತೂರಿಗೆ ₹200 ಕೋಟಿ ಬಳಕೆಯಾಗಿದೆ ಎಂದಿರುವುದು ಸೇರಿದೆ. ಧರ್ಮಸ್ಥಳದ ಇತಿಹಾಸ ಮತ್ತು ಗೌರವಕ್ಕೆ ಧಕ್ಕೆ ತರಲು ₹200 ಕೋಟಿ ರೂಪಾಯಿಗಳ ಬೃಹತ್ ಬಜೆಟ್ ಅನ್ನು ಮೀಸಲಿಟ್ಟಿದ್ದರು ಎಂದು ಚಿನ್ನಯ್ಯ ಆರೋಪಿಸಿದ್ದಾರೆ. ಇದಕ್ಕೆ ಕೇರಳದಿಂದ ಹಣಕಾಸು ನೆರವು ಬಂದಿತ್ತು ಎಂದೂ ಕೂಡ ಹೇಳಿದ್ದು, ಹೊಸ ಚರ್ಚೆಯನ್ನು ಹುಟ್ಟಾಕಿದೆ.
ನಟ ಪ್ರಕಾಶ್ ರೈ ವಿರುದ್ಧ ಆರೋಪ
ಇನ್ನು ಈ ಅರ್ಜಿಯಲ್ಲಿ ಗಮನ ಸೆಳೆದಿದ್ದು ನಟ ಪ್ರಕಾಶ್ ರಾಜ್ ಹೆಸರು. "ಒಂದು ದಿನ ರಾತ್ರಿ 8:00 ಗಂಟೆ ವೇಳೆ, ಗಿರೀಶ್ ಮತ್ತಿಣ್ಣವರ್ ಅವರು ಪ್ರಕಾಶ್ ರಾಜ್ ಅವರಿಗೆ ಫೋನ್ ಮಾಡಿ, ತನ್ನೊಂದಿಗೆ ಮಾತಾಡಿಸಿದ್ದರು. ಅವರು ತಮಿಳಿನಲ್ಲಿ ಮಾತನಾಡುತ್ತಾ, ಈ ಗುಂಪು ಹೇಳಿಕೊಟ್ಟಂತೆಯೇ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡುವಂತೆ ಸೂಚಿಸಿದ್ದರು" ಎಂದು ಚಿನ್ನಯ್ಯ ಆರೋಪಿಸಿದ್ದಾರೆ. ಅಲ್ಲದೇ "ಗಿರೀಶ್ ಮತ್ತಿಣ್ಣವರ್ ಹೇಳಿದಂತೆ ಕೇಳಿದರೆ, ಜೂನ್ 29 ರಂದು ನಾನು ಬಂದು ನಿಮ್ಮನ್ನು ಅಪ್ಪಿಕೊಳ್ಳುತ್ತೇನೆ" ಎಂದು ಪ್ರಕಾಶ್ ರಾಜ್ ಹೇಳಿದ್ದಾಗಿ ಚಿನ್ನಯ್ಯ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ.
₹50 ಲಕ್ಷ ಆಮಿಷ
ಚಿನ್ನಯ್ಯ ಅವರ ಆರೋಪ ಇಲ್ಲಿಗೆ ನಿಂತಿಲ್ಲ. ತನಗೆ ಹಣದ ಆಮಿಷ ಒಡ್ಡಿ ಸುಳ್ಳು ಹೇಳಿಕೆಗಳನ್ನು ನೀಡುವಂತೆ ಒತ್ತಡ ತರಲಾಗಿತ್ತು ಎಂದಿದ್ದಾರೆ. ಈಗಾಗಲೇ ವರದಿಗಳಾಗಿರುವ ಪ್ರಕಾರ ಚಿನ್ನಯ್ಯ ಅವರು ಬ್ಯಾಂಕ್ ಮತ್ತು ನಗದು ವಹಿವಾಟಿನ ಸಂಪೂರ್ಣ ದಾಖಲೆಗಳನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಅಲ್ಲದೆ ಪತ್ನಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿರುವ ದಾಖಲೆಗಳು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ. ಇದೇ ಅರ್ಜಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ತಮಗೆ 50 ಲಕ್ಷ ರೂಪಾಯಿ ಕೊಡುವ ಆಮಿಷ ಒಡ್ಡಿದ್ದರು ಎಂಬ ಆರೋಪ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಧರ್ಮಸ್ಥಳ ವಿರುದ್ಧದ ಷಡ್ಯಂತರಕ್ಕೆ ಚಿತ್ರದುರ್ಗದ ರಮಾ ನಾಗರಾಜ್ ಎಂಬುವವರೂ ಕೂಡ ಹಣ ನೀಡಿದ್ದಾರೆ ಎಂದಿದ್ದು, ನಗದು ಹಣ ವಹಿವಾಟಿನ ಸಂಪೂರ್ಣ ವಿವರಗಳನ್ನು ಚಿನ್ನಯ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಇಷ್ಟೇ ಅಲ್ಲದೆ ಮಹೇಶ್ ತಿಮರೋಡಿ, ವಿಠಲಗೌಡ, ಗಿರೀಶ್ ಮಟ್ಟಣ್ಣವರ್, ಜಯಂತ್ ಧರ್ಮಸ್ಥಳ ವಿರುದ್ಧದ ಷಡ್ಯಂತ್ರದ ರೂವಾರಿಗಳಾಗಿದ್ದಾರೆ. ಈ ಎಲ್ಲಾ ಆರೋಪಿಗಳ ಹೆಸರು ಹೇಳಿದರೂ ಎಸ್‌ಐಟಿ ಕ್ರಮ ಕೈಗೊಂಡಿಲ್ಲ ಎಂದು ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಲಾಗಿದೆ. ಈ ಹೈಕೋರ್ಟ್ ವಿಚಾರಣೆಯನ್ನು ಜೂನ್ 29ಕ್ಕೆ ಮುಂದೂಡಿದೆ.


Click it and Unblock the Notifications
