ರೆಬೆಲ್ ಸ್ಟಾರ್ 7ನೇ ಪುಣ್ಯತಿಥಿಯಂದೇ ಇಹಲೋಕ ತ್ಯಜಿಸಿದ ಹೀ-ಮ್ಯಾನ್;ಧರ್ಮೇಂದ್ರ-ಅಂಬರೀಶ್ ಸ್ನೇಹಿತ ಹೇಗಿತ್ತು ಗೊತ್ತೇ?
ಬಾಲಿವುಡ್ ದಿಗ್ಗಜ ಧರ್ಮೇಂದ್ರ ಹಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ನವೆಂಬರ್ 10, 2025ರಂದು ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು. ಮನೆಯಲ್ಲಿಯೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು (ನವೆಂಬರ್ 24) ಧರ್ಮೇಂದ್ರ ಇಹಲೋಕ ತ್ಯಜಿಸಿದ್ದಾರೆ.
ಡಿಸೆಂಬರ್ 8ರಂದು ಅವರು 90ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಆದರೆ, ಅಷ್ಟರೊಳಗೆ ಅವರು ಕುಟುಂಬಸ್ಥರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಪಂಜಾಬ್ ಮೂಲದ ಧರ್ಮೇಂದ್ರ ಬಾಲಿವುಡ್‌ನಲ್ಲಿ ನೆಲೆ ಕಂಡುಕೊಂಡರು. ಹಿಂದಿ ಚಿತ್ರರಂಗದ ಸೂಪರ್‌ಸ್ಟಾರ್ ಪಟ್ಟಕ್ಕೇರಿದರು. ಬಾಲಿವುಡ್ ಅಂತಹ ಮಹಾಸಾಗರದಲ್ಲಿ ಇವರದ್ದೇ ಸಾಮ್ರಾಜ್ಯ ಕಟ್ಟಿಕೊಂಡಿದ್ದೇ ಒಂದು ರೋಚಕ ಕತೆ.

ಧರ್ಮೇಂದ್ರ ಕನ್ನಡ ಚಿತ್ರರಂಗಕ್ಕೆ ಬಾರದೇ ಹೋದರೂ, ಒಂದು ನಂಟಿದೆ. ಬಾಲಿವುಡ್‌ನ ಹೀ-ಮ್ಯಾನ್ ಹಾಗೂ ಸ್ಯಾಂಡಲ್‌ವುಡ್‌ನ ರೆಬೆಲ್ ಸ್ಟಾರ್ ಸ್ನೇಹಿತ ಹೇಗಿತ್ತು? ಅನ್ನೋದು ನಿಮಗೆ ಗೊತ್ತೇ? ಕಾಕತಾಳೀಯ ಹೇಗಿದೆ ನೋಡಿ.. ಅಂಬರೀಶ್ ಅಗಲಿದ ದಿನವೇ (ನವೆಂಬರ್ 24) ಈ ಬಾಲಿವುಡ್ ದಿಗ್ಗಜ ಧರ್ಮೇಂದ್ರ ಇಹಲೋಕ ತ್ಯಜಿಸಿದ್ದಾರೆ. ಇವರಿಬ್ಬರ ಗೆಳೆತನದ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಸ್ಟೋರಿಗಳಿವೆ. ತಿಳಿಯುವುದಕ್ಕೆ ಮುಂದೆ ಓದಿ.
ರೆಬೆಲ್ ಸ್ಟಾರ್ ಅಂಬರೀಶ್ 7 ವರ್ಷಗಳ ಹಿಂದೆ ಅಂದರೆ, ಇದೇ ದಿನ (2018, ನವೆಂಬರ್ 24) ಕೊನೆಯುಸಿರೆಳೆದಿದ್ದರು. ಇಂದು (ನವೆಂಬರ್ 24) ಅಂಬರೀಶ್ ಕುಟುಂಬ 7ನೇ ಪುಣ್ಯಸ್ಮರಣೆಯಂದು ಸಮಾಧಿ ಪೂಜೆಯನ್ನು ಸಲ್ಲಿಸಿದೆ. ಇತ್ತ ಧರ್ಮೇಂದ್ರ ಅದೇ ದಿನ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಇಬ್ಬರು ಸ್ನೇಹಿತರು ಒಂದೇ ದಿನ ಕೊನೆಯುಸಿರೆಳೆದಿದ್ದು ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ.
ಅಂಬರೀಶ್ ಕೇವಲ ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲ. ತೆಲುಗು, ತಮಿಳು, ಹಿಂದಿ ಚಿತ್ರರಂಗದ ಸೂಪರ್‌ಸ್ಟಾರ್‌ಗಳ ಜೊತೆ ಉತ್ತಮ ಸ್ನೇಹ ಬಾಂಧವ್ಯವನ್ನು ಇಟ್ಟುಕೊಂಡಿದ್ದರು. ದಕ್ಷಿಣ ಭಾರತದಲ್ಲಿ ರಜನಿಕಾಂತ್, ಚಿರಂಜೀವಿ, ಮೋಹನ್ ಬಾಬು ಹೀಗೆ ಬಹುತೇಕ ಮಂದಿ ಅಂಬಿಯ ಸ್ನೇಹಿತರಾಗಿದ್ದರು. ಇನ್ನು ಹಿಂದಿ ಚಿತ್ರರಂಗದಲ್ಲಿ ಶತ್ರುಘ್ನ ಸಿನ್ಹ ಉತ್ತಮ ಸ್ನೇಹಿತ ಅನ್ನೋದು ಗೊತ್ತೇ ಇದೆ. ಆದರೆ, ಧರ್ಮೇಂದ್ರ ಜೊತೆ ಕೂಡ ಅಷ್ಟೇ ಒಳ್ಳೆಯ ಸ್ನೇಹವಿತ್ತು ಅನ್ನೋದು ಬಹುತೇಕ ಮಂದಿಗೆ ಗೊತ್ತಿರಲು ಸಾಧ್ಯವಿಲ್ಲ. ಈ ಬಗ್ಗೆ ಹಿರಿಯ ನಟ ದೊಡ್ಡಣ್ಣ ಟಿವಿ9ಗೆ ನೀಡಿದ ಪ್ರತಿಕ್ರಿಯೆ ವೇಳೆ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಬಹಿರಂಗ ಪಡಿಸಿದ್ದಾರೆ.

ಧರ್ಮೇಂದ್ರ ಏನಾದರೂ ಮೈಸೂರು ಕಡೆಗೆ ಬಂದರೆ, ಅಲ್ಲಿ ಅಂಬರೀಶ್ ಹಾಜರಿರುತ್ತಿದ್ದರು. ಧರ್ಮೇಂದ್ರ ಕೂಡ ಮೊದಲು ಭೇಟಿ ಮಾಡುತ್ತಿದ್ದಿದ್ದೇ ಅಂಬಿಯನ್ನು. ಮೈಸೂರಿನ ಜನಪ್ರಿಯ ಮೈಲಾರಿ ದೋಸೆ ಹೋಟೆಲ್‌ನಲ್ಲಿ ಧರ್ಮೆಂದ್ರಗೆ ಬ್ರೇಕ್‌ಫಾಸ್ಟ್ ಮಾಡಿಸುತ್ತಿದ್ದರಂತೆ. ಒಮ್ಮೆ ಮೈಸೂರಿನಲ್ಲಿ ಧರ್ಮೇಂದ್ರ ಬರುತ್ತಾರೆಂದು ಬ್ಯಾರಿಕೇಡ್ ಹಾಕಿಸಿ ದೋಸೆ ತಿನ್ನಿಸಿ ಕಳುಹಿಸಿದ್ದ ಘಟನೆಯನ್ನು ದೊಡ್ಡಣ್ಣ ನೆನಪಿಸಿಕೊಂಡಿದ್ದಾರೆ.
ಇಬ್ಬರು ಗೆಳೆಯರ ಮೈಸೂರಿನ ಕಹಾನಿ ಇನ್ನೂ ಮುಗಿದಿಲ್ಲ. ಮೈಸೂರಿನ ಮತ್ತೊಂದು ಜನಪ್ರಿಯ ಹನುಮಂತು ಬಿರಿಯಾನಿ ಹೋಟೆಲ್‌ನ ರುಚಿಯನ್ನು ತೋರಿಸಿದ್ದರಂತೆ. ಅಲ್ಲಿನ ಬಿರಿಯಾನಿಯನ್ನು ತಿನಿಸಿಯೇ ಧರ್ಮೇಂದ್ರ ಅವರನ್ನು ಕಳುಹಿಸುತ್ತಿದ್ದರಂತೆ. ಅಂಬರೀಶ್ ಅವರ ಲೈಫ್ ಸೈಲ್ ನೋಡಿ, ಧರ್ಮೇಂದ್ರ "ಕೈಸೆ ದಿಲ್‌ದಾರ್ ಆದ್ಮಿರೇ ಏ ಆದ್ಮೀ" ಎಂದು ಹೇಳಿದ್ದರಂತೆ. ದೊಡ್ಡಣ್ಣ ಕಂಡಂತೆ ಧರ್ಮೇಂದ್ರ ಎಷ್ಟು ಸುಂದರ ನಟನೋ ಅಷ್ಟೇ ಕೋಪಿಷ್ಠ. ಆದರೆ, ಮನಸ್ಸು ಮಾತ್ರ ಮೃಧುವಾಗಿತ್ತು ಎಂದು ದೊಡ್ಡಣ್ಣ ನೆನಪಿಸಿಕೊಂಡಿದ್ದಾರೆ.


Click it and Unblock the Notifications











