ಬ್ಯಾಂಕ್ ದರೋಡೆ ಮಾಡಲು ಹೊರಟವರ ಪೋಸ್ಟರ್ ರಿಲೀಸ್; 'ಬ್ಲಿಂಕ್ ಆಗುತ್ತಾ 'ಬ್ಯಾಂಕ್ of ಭಾಗ್ಯಲಕ್ಷ್ಮಿ'?
ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹೊಸ ಪ್ರಯತ್ನಗಳಾಗುತ್ತಿವೆ. ಆದರೆ, ಆ ಪ್ರಯತ್ನಕ್ಕೆ ಪ್ರೇಕ್ಷಕರು ಬೆಂಬಲ ನೀಡಬೇಕಿದೆ. ಪ್ಯಾನ್ ಇಂಡಿಯಾ ಸಿನಿಮಾಗಳ ಜಮಾನ ಒಂದು ಕಡೆಯಾದರೆ, ಇನ್ನೊಂದು ಕಡೆ ಹೊಸಬರ ಕಂಟೆಂಟ್ ಸಿನಿಮಾಗಳು ಗಮನ ಸೆಳೆಯುತ್ತಿವೆ. ಇಂತಹದ್ದೇ ಇನ್ನೊಂದು ಪ್ರಯತ್ನ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ'.
ಕನ್ನಡದ ಯುವ ನಟ ದೀಕ್ಷಿತ್ ಶೆಟ್ಟಿ ಈ ಸಿನಿಮಾ ಹೀರೋ. ಈಗಾಗಲೇ ಇವರು ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಯಾಕಂದ್ರೆ, ದೀಕ್ಷಿತ್ ಶೆಟ್ಟಿ ನಟನೆಯ 'ಬ್ಲಿಂಕ್' ಸಿನಿಮಾ ಬಗ್ಗೆ ಇಂದಿಗೂ ಚರ್ಚೆಯಾಗುತ್ತಿದೆ. ಥಿಯೇಟರ್‌ನಲ್ಲಿ ಅಷ್ಟಾಗಿ ಸದ್ದು ಮಾಡದೇ ಇದ್ದರೂ ಓಟಿಟಿಯಲ್ಲಿ ನೋಡಿದವರು ಹೌಹಾರಿದ್ದಾರೆ.

ಈಗ ಇದೇ ನಟನ ಮತ್ತೊಂದು ಸಿನಿಮಾ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ' ಯ ಪೋಸ್ಟರ್ ರಿಲೀಸ್ ಆಗಿದೆ. ಈ ಸಿನಿಮಾದ ಪೋಸ್ಟರ್ ಕೂಡ ಅಷ್ಟೇ ಗಮನ ಸೆಳೆಯುತ್ತಿದೆ. ಈಗಾಗಲೇ 'ರಂಗಿ ತರಂಗ', 'ಅವನೇ ಶ್ರೀಮನ್ನಾರಾಯಣ' ದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಹೆಚ್.ಕೆ ಪ್ರಕಾಶ್ 5 ನೇ ಸಿನಿಮಾಗೆ ಕೈ ಹಾಕಿದ್ದಾರೆ. ಅದೇ ಸಿನಿಮಾದ ಪೋಸ್ಟರ್ ಈಗ ರಿಲೀಸ್ ಆಗಿದೆ.
'ದಿಯಾ' ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದಿದ್ದ ದೀಕ್ಷಿತ್ ಶೆಟ್ಟಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ತೆಲುಗು ನ್ಯಾಚುಲರ್ ಸ್ಟಾರ್ ನಾನಿ ನಟಿಸಿದ 'ದಸರಾ' ಸಿನಿಮಾ ಮೂಲಕ ಗಮನ ಸೆಳೆದಿದ್ದರು. ಬಳಿಕ 'ಕೆಟಿಎಂ' ಇತ್ತೀಚೆಗೆ ತೆರೆಕಂಡ 'ಬ್ಲಿಂಕ್' ಸಿನಿಮಾ ಸೌಂಡು ಮಾಡಿತ್ತು. ಈಗ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ' ಸಿನಿಮಾ ಪೋಸ್ಟರ್ ಮೂಲಕವೇ ಸದ್ದು ಮಾಡುತ್ತಿದೆ.

ಈ ಸಿನಿಮಾ ಪೋಸ್ಟರ್ ಅನ್ನು ಸ್ಯಾಂಡಲ್‌ವುಡ್ ನಿರ್ದೇಶಕ ಸಿಂಪಲ್ ಸುನಿ ರಿವೀಲ್ ಮಾಡಿದ್ದಾರೆ. ಸಿಂಪಲ್ ಸುನಿ ಈ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ್ದಕ್ಕೂ ಒಂದು ಕಾರಣವಿದೆ. ಸಿಂಪಲ್ ಸುನಿ ನಿರ್ದೇಶಿಸಿದ 'ಬಹುಪರಾಕ್', 'ಆಪರೇಷನ್ ಅಲಮೇಲಮ್ಮ' ದಂತಹ ಸಿನಿಮಾಗಳಿಗೆ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ' ಸಿನಿಮಾದ ನಿರ್ದೇಶಕ ಅಭಿಷೇಕ್ ಎಂ ಸಹಾಯಕರಾಗಿ ಕೆಲಸ ಮಾಡಿದ್ದರು. ಅಷ್ಟೇ ಅಲ್ಲದೆ ಸಂಕಲನಗಾರರಾಗಿಯೂ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೆ. 'ಪಿನಾಕ' ಎಂಬ VFX ಸ್ಟುಡಿಯೋ ಕೂಡ ಹೊಂದಿರುವ ಅಭಿಷೇಕ್ ಎಂ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ' ಮೂಲಕ ಚೊಚ್ಚಲ ಬಾರಿ ನಿರ್ದೇಶನಕ್ಕೆ ಇಳಿದಿದ್ದಾರೆ.
ಇನ್ನು ದೀಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ಬೃಂದಾ ಆಚಾರ್ಯ ನಟಿಸುತ್ತಿದ್ದಾರೆ. 'ಪ್ರೇಮಂ ಪೂಜ್ಯಂ', 'ಕೌಸಲ್ಯ ಸುಪ್ರಜಾ ರಾಮ' ಸಿನಿಮಾದ ಯಶಸ್ಸಿನ ಬಳಿಕ ಬೃಂದಾ ಆಚಾರ್ಯ 'ಸನ್ ಆಫ್ ಸತ್ಯಮೂರ್ತಿ' ಹಾಗೂ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇವರೊಂದಿಗೆ ಸಾಧುಕೋಕಿಲ, ಗೋಪಾಲ ಕೃಷ್ಣ ದೇಶಪಾಂಡೆ,ಉಷಾ ಭಂಡಾರಿ, ಭರತ್,ವಿಶ್ವನಾಥ್, ಹರೀಶ್ ಸಮಷ್ಟಿ, ಅಶ್ವಿನ್ ರಾವ್ ಪಲ್ಲಕ್ಕಿ, ಶ್ರೇಯಸ್ ಶರ್ಮಾ, ಶ್ರೀ ವತ್ಸ, ವಿನುತ್ ಮುಂತಾದ ಬಹುದೊಡ್ಡ ತಾರಾಗಣ ಈ ಚಿತ್ರದಲ್ಲಿದೆ.
ಬ್ಯಾಂಕ್ ದರೋಡೆ ಮಾಡಲು ಹೊರಟವರ ಕಥೆಯೇ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ' ಸಿನಿಮಾದ ಕಥೆ. ಇದೊಂದು ಹಾಸ್ಯ ಪ್ರಧಾನ ಸಿನಿಮಾ ಆಗಿದ್ದು, ಬೆಂಗಳೂರು, ತುಮಕೂರು ಹಾಗು ಚಿತ್ರದುರ್ಗ ಚಿತ್ರೀಕರಣ ನಡೆದಿದ್ದು, ಶೇ. 80ರಷ್ಟು ಶೂಟಿಂಗ್ ಮುಗಿದಿದೆ. ಕನ್ನಡದ ಜೊತೆ ತೆಲುಗಿನಲ್ಲಿಯೂ ಈ ಸಿನಿಮಾ ಬಿಡುಗಡೆಯಾಗಲಿದೆ.


Click it and Unblock the Notifications











