'ರಂಗಿತರಂಗ' ನಿರ್ಮಾಪಕನಿಂದ ಹೊಸ ಸಿನಿಮಾ; 'ಭಾಗ್ಯಲಕ್ಷ್ಮಿ' ಬ್ಯಾಂಕ್ ಲೂಟಿಗೆ ಹೊರಟ 'ದಿಯಾ' ಹೀರೊ!
2023 ಕನ್ನಡ ಚಿತ್ರರಂಗದ ಪಾಲಿಗೆ ಯಶಸ್ವಿ ವರ್ಷವೇನು ಅಲ್ಲ. ಬಿಡುಗಡೆಯಾದ ಸಿನಿಮಾಗಳಲ್ಲಿ ಗೆದ್ದಿದ್ದು ಅಂತ ಬೆರಳೆಣಿಕೆಯಷ್ಟು ಸಿನಿಮಾ ಮಾತ್ರ. ಇಂತಹದ್ರಲ್ಲೂ ಕನ್ನಡದಲ್ಲಿ ಸಿನಿಮಾ ಮಾಡುವವರ ಸಂಖ್ಯೆಯೇನು ಕಮ್ಮಿಯಾಗಿಲ್ಲ. ಹೊಸ ಕಥೆಗಳನ್ನು ಹುಡುಕಿ ತಂದು ಸಿನಿಮಾ ಮಾಡಿ ಗೆಲ್ಲುವುದಕ್ಕೆ ಪಣ ತೊಟ್ಟು ನಿಂತಿದ್ದಾರೆ.
'ರಂಗಿ ತರಂಗ', 'ಅವನೇ ಶ್ರೀಮನ್ನಾರಾಯಣ'ದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರೋ ನಿರ್ಮಾಪಕ ಹೆಚ್. ಕೆ ಪ್ರಕಾಶ್. ಬಹುತೇಕ ಹೊಸಬರಿಗೆ, ಹೊಸ ಕಲ್ಪನೆಗಳಿಗೆ ಹೆಚ್ಚು ಬೆಂಬಲ ನೀಡುವ ಈ ನಿರ್ಮಾಪಕ ಮತ್ತೆ ಹೊಸ ತಂಡದೊಂದಿಗೆ ಹಾಸ್ಯ ಪ್ರಧಾನ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದುವೇ 'ಬ್ಯಾಂಕ್ of ಭಾಗ್ಯಲಕ್ಷ್ಮಿ'. ಸ ಟೈಟಲ್‌ನಿಂದಲೇ ಗಮನ ಸೆಳೆದಿರೋ ಈ ಸಿನಿಮಾ ಈಗಾಗಲೇ ಒಂದು ಹಂತದ ಚಿತ್ರೀಕರಣವನ್ನೂ ಮುಗಿಸಿದೆ.

'ಬ್ಯಾಂಕ್ of ಭಾಗ್ಯಲಕ್ಷ್ಮಿ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರೋದು ದೀಕ್ಷಿತ್ ಶೆಟ್ಟಿ. ದಿಯಾ ಸಿನಿಮಾ ಮೂಲಕ ಚಿತ್ರರಂಗದಲ್ಲಿ ಜನಪ್ರಿಯರಾಗಿರುವ ದೀಕ್ಷಿತ್ ಇತ್ತೀಚೆಗಷ್ಟೇ ತೆಲುಗಿನ ಸ್ಟಾರ್ ನಟ ನಾನಿ ನಟಿಸಿದ 'ದಸರಾ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಾಸ್ಯ ಪಾತ್ರದ ಹುಡುಕಾಟದಲ್ಲಿದ್ದ ದೀಕ್ಷಿತ್ ಶೆಟ್ಟಿಗೆ ಹೊಸ ಅವರ ಇಚ್ಚೆಯಂತೆ ಹಾಸ್ಯ ಪ್ರಧಾನ ಸಿನಿಮಾ ಸಿಕ್ಕಿದೆ.
ದೀಕ್ಷಿತ್ ಶೆಟ್ಟಿ ಇದೇ ಮೊದಲ ಬಾರಿಗೆ ಹಾಸ್ಯ ಪ್ರಧಾನ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ದಿಯಾ','ದಸರಾ'ದಂತಹ ಸಿನಿಮಾಗಳು ತೆರೆಕಂಡ ಬಳಿಕ ದೀಕ್ಷಿತ್ ಪರಭಾಷೆಯ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಮಧ್ಯೆ 'ಬ್ಯಾಂಕ್ of ಭಾಗ್ಯಲಕ್ಷ್ಮಿ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾವನ್ನು ಪ್ರತಿಭಾವಂತ ನಿರ್ದೇಶಕ ಅಭಿಷೇಕ್ ಎಂ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಅಂದ್ಹಾಗೆ, ನಿರ್ದೇಶಕ ಅಭಿಷೇಕ್ ಎಂ ಈ ಹಿಂದೆ ಸಿಂಪಲ್ ಸುನಿ ಜೊತೆ 'ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ', 'ಬಹುಪರಾಕ್' ಮತ್ತು 'ಆಪರೇಷನ್ ಅಲಮೇಲಮ್ಮ' ಅಂತಹ ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಹಾಗೂ ಸಂಕಲನಗಾರಾಗಿ ಕೆಲಸ ಮಾಡಿದ ಅನುಭವವಿದೆ. ಹಾಗೇ 'ಪಿನಾಕ' ಎಂಬ VFX ಸ್ಟುಡಿಯೋ ಕೂಡ ಇದ್ದು, ಇದೇ ಮೊದಲ ಬಾರಿಗೆ ಅಭಿಷೇಕ್ ಎಂ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ' ಮೂಲಕ ನಿರ್ದೇಶನಕ್ಕೆ ಇಳಿದಿದ್ದಾರೆ.
'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ' ಇದೊಂದು ಬ್ಯಾಂಕ್ ದರೋಡೆ ಮಾಡಲು ಹೊರಟವರ ಸುತ್ತ ಸಾಗುವ ಸಿನಿಮಾ. ಹಾಸ್ಯ ಪ್ರಧಾನ ಸಿನಿಮಾ ಆಗಿದ್ದು, ದೀಕ್ಷಿತ್ ಶೆಟ್ಟಿ ಜೊತೆ ನಾಯಕಿಯಾಗಿ ಬೃಂದಾ ಆಚಾರ್ಯ ನಟಿಸುತ್ತಿದ್ದಾರೆ. ತಾರಾಗಣದಲ್ಲಿ ಅಶ್ವಿನ್ ರಾವ್ ಹಾಸ್ಟೇಲ್ ಹುಡುಗರು ಖ್ಯಾತಿಯ ಶ್ರೀ ವತ್ಸ, ಶ್ರೇಯಸ್ ಶರ್ಮಾ , ವಿನುತ ಇನ್ನಿತರು ಇದ್ದಾರೆ.
ಸದ್ಯ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ' ಸಿನಿಮಾದ ಮೊದಲ ಹಂತದ ಚಿತ್ರೀಕರಣ ಬೆಂಗಳೂರು, ಚಿತ್ರದುರ್ಗ ಸುತ್ತ ಮುತ್ತ ನಡೆದಿದೆ. ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗಿದ್ದು, ಜನವರಿ ಮೊದಲ ವಾರ ಶೂಟಿಂಗ್ ಆರಂಭವಾಗಲಿದೆ. ವಿಶೇಷ ಅಂದರೆ, ಈ ಸಿನಿಮಾವನ್ನು ಕನ್ನಡದ ಜೊತೆಗೆ ತೆಲುಗು, ತಮಿಳು ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಮಾಡುವುದಕ್ಕೆ ಮುಂದಾಗಿದ್ದಾರೆ.


Click it and Unblock the Notifications











