'ಧೀರನ್' 3 ಆಯಾಮಗಳ ಜರ್ನಿ: ಹೀರೊ ಯಾರು, ವಿಲನ್ ಯಾರು ಅನ್ನೋದೆ ಸಸ್ಪೆನ್ಸ್!
'ಕೆಜಿಎಫ್ 2' ಹವಾ ತಣ್ಣಗಾಗುತ್ತಿದ್ದಂತೆ ಹೊಸಬರ ಸಿನಿಮಾಗಳು ಒಂದೊಂದಾಗೇ ಬಿಡುಗಡೆಯಾಗುತ್ತಿದೆ. ಕಳೆದ ವಾರ ಹೀಗೆ ಹೊಸಬರ ಸಿನಿಮಾವೊಂದು ರಿಲೀಸ್ ಆಗಿತ್ತು. ಅದುವೇ 'ಧೀರನ್'. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಸ್ವಾಮಿ ವೈಬಿಎನ್ 'ಧೀರನ್' ಸಿನಿಮಾವನ್ನು ನಿರ್ದೇಶನ ಮಾಡುವುದಷ್ಟೇ ಅಲ್ಲದೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.
ಇಂಜಿನಿಯರ್ ವೃತ್ತಿಯನ್ನು ಮಾಡಿಕೊಂಡೇ ಸಿನಿಮಾ ಮಾಡುತ್ತಿರುವ ವೈ.ಬಿ.ಎನ್.ಸ್ವಾಮಿ ಕನ್ನಡ ಸಿನಿಮಾಗಳ ಪ್ರಮೋಷನ್ ಮಾಡುತ್ತಿದ್ದಾರೆ. ಈಗ 'ಧೀರನ್' ಮೂಲಕ ನಾಯಕನಾಗಿ ಹಾಗೂ ನಿರ್ದೇಶಕನಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ವಾರದಲ್ಲಿ 'ಧೀರನ್' ಸಿನಿಮಾಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ ಈ ಸಿನಿಮಾವೊಂದು ಸ್ಪಸೆನ್ಸ್ ಕಮ್ ಥ್ರಿಲ್ಲರ್ ಕಥೆ.
ಮೂರು ಆಯಾಮಗಳಲ್ಲಿ ನಡೆಯುವ ಕಥೆ
ಐದು ಪಾತ್ರಗಳಲ್ಲಿ ಜರ್ನಿಯಲ್ಲಿ ಮೂರು ಆಯಾಮಗಳಲ್ಲಿ ನಡೆಯುವ ಕಥೆ. ಕಳ್ಳ ಪೋಲಿಸ್, ಕಳ್ಳ ಕಳ್ಳ ಹಾಗೂ ಪೋಲಿಸ್ ಪೋಲಿಸ್ ಆಟ, ಹೀಗೆ 3 ಆಯಾಮದಲ್ಲಿ ನಡೆಯುವ ಕಥೆಯೇ 'ಧೀರನ್'. ಹಾಗಂತ ಇದು ಕೇವಲ ಸಸ್ಪೆನ್ಸ್, ಥ್ರಿಲ್ಲರ್ ಕಥೆಯಷ್ಟೇ ಅಲ್ಲ.ವೈ.ಬಿ.ಎನ್.ಸ್ವಾಮಿ ಸಸ್ಪೆನ್ಸ್ ಕಥೆಯೊಂದಿಗೆ ಸುಂದರವಾದ ಲವ್‌ಸ್ಟೋರಿಯನ್ನು ಹೇಳಿದ್ದಾರೆ. ಈ ಕಾರಣಕ್ಕೆ ಧೀರನ್ ಸಿನಿಮಾ ಸಿನಿಪ್ರಿಯರಿಗೆ ತುಂಬಾನೇ ಇಷ್ಟ ಆಗಿದೆ.

'ಧೀರನ್' ಸಸ್ಪೆನ್ಸ್ ಜರ್ನಿಯಲ್ಲಿ ಸಿಕ್ಕಾಪಟ್ಟೆ ಟ್ವಿಸ್ಟ್‌ಗಳು ಸಿಗುತ್ತವೆ. ಇಲ್ಲಿ ಗೆಳೆಯರು ಯಾರು? ವಿಲನ್ ಯಾರು ಅನ್ನೋದು ಸಿನಿಮಾ ಮುಗಿಯುವವರೆಗೂ ಗೊತ್ತಾಗಲ್ಲ. ಕಥೆಯಲ್ಲಿ ಆ ಮಟ್ಟಿಗೆ ಗ್ರಿಪ್ ಇದೆ. ಸಂಗೀತ, ಛಾಯಾಗ್ರಹಣವೇ ಸಿನಿಮಾ ಹೈಲೆಟ್ ಎನ್ನುತ್ತಿದ್ದಾರೆ ಪ್ರೇಕ್ಷಕರು. 'ಧೀರನ್' ಸ್ಯಾಂಡಲ್‌ವುಡ್‌ನ ಒಂದೊಳ್ಳೆ ಸಿನಿಮಾ ಆಗುತ್ತೆ ಅನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಶೇ.70ರಷ್ಟು ರಾತ್ರಿ ವೇಳೆ ಚಿತ್ರೀಕರಿಸಿದ ಸಿನಿಮಾ
'ಧೀರನ್' ಸಿನಿಮಾದಲ್ಲಿ ಮೆಚ್ಚುಗೆ ಗಳಿಸಿದ್ದು ಛಾಯಾಗ್ರಹಣ. ಸಂದೀಪ್ ಹೊನ್ನಾಳಿ ಛಾಯಾಗ್ರಹಣಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾವನ್ನು ಶೇ.70ರಷ್ಟು ರಾತ್ರಿ ವೇಳೆನೇ ಶೂಟ್ ಆಗಿದೆ. ಇನ್ನು ಉಳಿದ ಶೇ. 30 ಭಾಗವನ್ನು ಹಗಲಲ್ಲಿ ಚಿತ್ರೀಕರಣ ಮಾಡಿದ್ದಾರೆ. ಮಂಗಳೂರಿನ ಲಕ್ಷಾ ಶೆಟ್ಟಿ ಈ ಸಿನಿಮಾಗಾಗೆ ಹೀರೊಯಿನ್. ಈ ಸಿನಿಮಾದಲ್ಲಿ ಬರುವ ಚಿಕ್ಕ ಲವ್‌ಸ್ಟೋರಿಯಲ್ಲಿ ಲಕ್ಷಾ ಶೆಟ್ಟಿ ಕಾಣಿಸಿಕೊಂದಿದ್ದಾರೆ.
ರಘು ಸಂಕಲನ, ಆರ್.ಎಸ್.ಗಣೇಶ್ ನಾರಾಯಣ್ ಸಂಗೀತ ಈ ಚಿತ್ರಕ್ಕಿದೆ. ಬೆಂಗಳೂರು, ಮೈಸೂರು, ಸಕಲೇಶಪುರ, ಕುಂದಾಪುರ, ಮಂಗಳೂರು, ದಾವಣಗೆರೆ ಕಡೆಗಳಲ್ಲಿ ಈ ಸಿನಿಮಾವನ್ನು ಚಿತ್ರೀಕರಣ ಮಾಡಲಾಗಿದೆ. ವೈ.ಬಿ.ಎನ್.ಸ್ವಾಮಿ ಜೊತೆ ಭಾಸ್ಕರ್, ಪ್ರಮೋದ್‌ಶೆಟ್ಟಿ, ಮಿಮಿಕ್ರಿ ದಯಾನಂದ್, ರಘು ಪಾಂಡೇಶ್ವರ್, ತೇಜಸ್ವಿನಿ ಪ್ರಕಾಶ್, ವೀಣಾಸುಂದರ್ ಮುಂತಾದವರು ನಟಿಸಿದ್ದಾರೆ.

ಜೋಷ್ ಆ್ಯಪ್‌ನಲ್ಲಿ 'ಧೀರನ್' ಚಾಲೆಂಜ್
ಜೋಷ್ ಆ್ಯಪ್‌ನಲ್ಲಿ 'ಧೀರನ್' ಸಿನಿಮಾ ರಿಲೀಸ್ ಮೂಲಕ ಚಾಲೆಂಜ್ ಹಾಕಲಾಗಿತ್ತು. ಒಂದು ವಾರಗಳ ಕಾಲ ಕ್ರಿಯೇಟರ್‌ಗಳು ಧೀರನ್ ಚಾಲೆಂಜ್‌ನಲ್ಲಿ ಭಾಗವಹಿಸಿದ್ದರು. ಸುಮಾರು 40 ಮಂದಿ ಕ್ರಿಯೇಟರ್‌ಗಳಿಗೆ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ತೋರಿಸಲಾಗಿದೆ.
'ಧೀರನ್' ಸಿನಿಮಾ ನೋಡಿ ಕ್ರಿಯೇಟರ್‌ಗಳು ಎಂಜಾಯ್ ಮಾಡಿದ್ದಾರೆ. ಒಟ್ಟಿನಲ್ಲಿ 'ಧೀರನ್' ಸಿನಿಮಾ ಬಿಡುಗಡೆಯಾದ ದಿನದಿಂದ ಪ್ರೇಕ್ಷಕರ ಮೌತ್ ಟಾಕ್‌ನಿಂದಲೇ ಸದ್ದು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ಚಿತ್ರಕ್ಕೆ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
Recommended Video



Click it and Unblock the Notifications











