ಅಣ್ಣ ಕೊನೆಯ ಸಿನಿಮಾ ಧ್ರುವ ಸರ್ಜಾ ಡಬ್ಬಿಂಗ್: ಪೊಗರಿನ ಡೈಲಾಗ್ ಏನು?
ಸ್ಯಾಂಡಲ್‌ವುಡ್ ಮೆಚ್ಚಿನ ಅಣ್ಣ-ತಮ್ಮಂದಿರೆಂದರೆ ಧ್ರುವ ಸರ್ಜಾ ಮತ್ತು ಚಿರಂಜೀವಿ ಸರ್ಜಾ. ಆದರೆ, ದುರಾದೃಷ್ಟವಶಾತ್ ಚಿರಂಜೀವಿ ಸರ್ಜಾ ತಮ್ಮ ಆಪ್ತರನ್ನು, ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ. ಅವರ ನೆನಪುಗಳಿಗಾಗಿ ಸಿನಿಮಾಗಳನ್ನು ಬಿಟ್ಟು ಹೋಗಿದ್ದಾರೆ. ಈಗ ಚಿರು ಅಭಿನಯದ ಕೊನೆಯ ಸಿನಿಮಾ 'ರಾಜಮಾರ್ತಾಂಡ' ಬಿಡುಗಡೆಗೆ ಸಜ್ಜಾಗಿ ನಿಂತಿದೆ.
ಚಿರಂಜೀವಿ ಸರ್ಜಾ ಅಗಲಿದ ವೇಳೆನೇ 'ರಾಜಮಾರ್ತಾಂಡ' ನಿರ್ದೇಶಕರಿಗೆ ಧ್ರುವ ಸರ್ಜಾ ಮಾತು ಕೊಟ್ಟಿದ್ದರು. ಅಣ್ಣ ಅರ್ಧಕ್ಕೆ ಬಿಟ್ಟು ಹೋದ ಸಿನಿಮಾದ ಕೆಲಸವನ್ನು ಪೂರ್ತಿ ಮಾಡಿಕೊಡುವ ಭರವಸೆ ನೀಡಿದ್ದರು. ಅದರಂತೆ ಇಂದು ( ಮೇ 9) 'ರಾಜಮಾರ್ತಾಂಡ' ಚಿತ್ರಕ್ಕೆ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ. ಅಣ್ಣನಿಗೆ ಧ್ರುವ ಧ್ವನಿ ನೀಡಿದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ

ಚಿರುಗೆ ಧ್ರುವ ಸರ್ಜಾ ಡಬ್ಬಿಂಗ್
ಕೆಲವು ದಿನಗಳ ಹಿಂದಷ್ಟೇ ಚಿರಂಜೀವಿ ಸರ್ಜಾ ನಟಿಸಿದ ಕೊನೆಯ ಸಿನಿಮಾ 'ರಾಜಮಾರ್ತಾಂಡ' ಪ್ರತಿಕಾಗೋಷ್ಠಿ ಕರೆಯಲಾಗಿತ್ತು. ಸಿನಿಮಾ ಬಿಡುಗಡೆ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಚಿರಂಜೀವಿಗೆ ಧ್ರುವ ಸರ್ಜಾ ಧ್ವನಿ ನೀಡಲಿದ್ದಾರೆ ಎಂದು ಚಿತ್ರತಂಡ ಹೇಳಿತ್ತು. ಅದರಂತೆ ಇಂದು (ಮೇ 9) ರಂದು ಧ್ರುವ ಸರ್ಜಾ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ. ಡಬ್ಬಿಂಗ್ ಮಾಡಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಧ್ರುವ ಸರ್ಜಾ ಬಿಟ್ಟ ಡೈಲಾಗ್ ಏನು?
ಮೈಕ್ ಮುಂದೆ ನಿಂತು ಧ್ರುವ ಸರ್ಜಾ ಅಣ್ಣ ದೃಶ್ಯಗಳಿಗೆ ಧ್ವನಿ ನೀಡುತ್ತಿರುವ ವಿಡಿಯೋ ಅಭಿಮಾನಿಗಳ ಮನ ಕಲುಕಿದೆ. ಇನ್ನೊಂದು ಕಡೆ ಸಿನಿಮಾ ಪವರ್‌ಫುಲ್ ದೃಶ್ಯಕ್ಕೆ ಪವರ್‌ಫುಲ್ ಡೈಲಾಗ್ ಬಿಟ್ಟಿರುವ ವಿಡಿಯೋ ನೋಡಿ ಖುಷಿನೂ ಪಟ್ಟಿದ್ದಾರೆ. ಅಂದ್ಹಾಗೆ ಆ ಡೈಲಾಗ್ ಹೀಗಿದೆ. " ಸಮಧಾನ ಸಮಾಧಾನ.. ಅಕ್ಕ ತಂಗಿಯಂದಿರೇ.. ಅಣ್ಣ-ತಮ್ಮಂದಿರೇ.. ಬಂಧು ಬಾಂಧವರೇ.. ನನ್ನನ್ನ ನಂಬಿ ಓಟ್ ಹಾಕಿ. ನನ್ನ ಕೊನೆ ಉಸಿರಿರುವವರೆಗೂ ನಿಮ್ಮಗಳಿಗೋಸ್ಕರನೇ ಹೋರಾಡ್ತೀನಿ." ಇದೇ ಡೈಲಾಗ್ ಎಲ್ಲೆಡೆ ವೈರಲ್ ಆಗುತ್ತಿದೆ.
ಕೊಟ್ಟ ಮಾತು ಈಡೇರಿಸಿದ ಧ್ರುವ ಸರ್ಜಾ
ಚಿರಂಜೀವಿ ಸರ್ಜಾ ಅಗಲುವ ಮುನ್ನ ಕೇವಲ ಡಬ್ಬಿಂಗ್ ಮಾತ್ರ ಬಾಕಿ ಉಳಿದಿತ್ತು. ಆಗಲೇ ಚಿರು ಪಾರ್ಥೀವ ಶರೀರದ ಮುಂದೆನೇ ಧ್ರುವ ಸರ್ಜಾ ನಿರ್ದೇಶಕರಿಗೆ ಮಾತುಕೊಟ್ಟಿದ್ದರು. ಅದರಂತೆ 'ರಾಜಮಾರ್ತಾಂಡ' ಟ್ರೈಲರ್‌ಗೂ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ ಎಂದು ನಿರ್ದೇಶಕ ರಾಮ್ ನಾರಾಯಣ್ ಬಹಿರಂಗ ಪಡಿಸಿದ್ದರು. ಅಂದು ಕೊಟ್ಟ ಮಾತಿನಂತೆಯೇ ಧ್ರುವ ಸಿನಿಮಾಗೆ ಡಬ್ ಮಾಡಿ ಮುಗಿಸಿದ್ದಾರೆ.

'ಸಿಂಪಥಿಗಲ್ಲ, ಪ್ರೀತಿಗೆ ಸಿನಿಮಾ ನೋಡಿ'
'ರಾಜಮಾರ್ತಾಂಡ' ಸಿನಿಮಾದ ಪತ್ರಿಕಾಗೋಷ್ಠಿ ವೇಳೆ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಸಿಂಪಥಿಗಾಗಿ ಸಿನಿಮಾ ನೋಡಬೇಡಿ. ಬಹಳ ಇಷ್ಟ ಪಟ್ಟು ಈ ಸಿನಿಮಾ ಮಾಡಿದ್ದಾರೆ. ಅವರ ಮೇಲೆ ಪ್ರೀತಿಗಾಗಿ ಈ ಸಿನಿಮಾ ನೋಡಿ." ಎಂದಿದ್ದರು. ಅದರಂತೆ ಈ ಸಿನಿಮಾ ಜೂನ್ ತಿಂಗಳಲ್ಲಿ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಆದರೆ, ಜೂನ್‌ನಲ್ಲಿ ಯಾವ ದಿನ ಸಿನಿಮಾ ಬಿಡುಗಡೆಯಾಗುತ್ತೆ ಅನ್ನುವುದನ್ನು ಇನ್ನೂ ಸಿನಿಮಾ ತಂಡ ಖಚಿತ ಪಡಿಸಿಲ್ಲ.


Click it and Unblock the Notifications











