ಅಪ್ಪು ಪತ್ನಿ ನಿಂದಿಸಿದ ಕಿಡಿಗೇಡಿಗೆ ವಾರ್ನಿಂಗ್; "ಸಿಕ್ಕಿಕೊಂಡರೆ ಊರು ಬಿಡಿಸುತ್ತೇವೆ" ಎಂದ ಧ್ರುವ ಫ್ಯಾನ್ಸ್
ಕೆಲವು ದಿನಗಳ ಹಿಂದೆ ಕಿಡಿಗೇಡಿಯೊಬ್ಬ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ನಿಂದಿಸಿ ಟ್ವೀಟ್ ಮಾಡಿದ್ದನು. ಆರ್‌ಸಿಬಿ ಸೋಲುವುದಕ್ಕೆ ಅಪ್ಪು ಪತ್ನಿಯೇ ಕಾರಣ ಎಂದು ಕೆಟ್ಟ ಪದಗಳನ್ನು ಬಳಸಿ ಟ್ವೀಟ್ ಮಾಡಿದ್ದ. ಕಿಡಿಗೇಡಿಯ ಈ ಕೃತ್ಯವನ್ನು ಖಂಡಿಸಿ ರಾಜವಂಶದ ಅಭಿಮಾನಿಗಳು ದೂರುಗಳನ್ನು ದಾಖಲಿಸಿದ್ದಾರೆ.
ಗಜಪಡೆ ಪಡೆ ಅನ್ನುವ ಎಕ್ಸ್ ಖಾತೆಯನ್ನು ತೆರೆದು, ಅದರಲ್ಲಿ ಅಪ್ಪು ಪತ್ನಿ ವಿರುದ್ಧ ಕೆಟ್ಟದಾಗಿ ಟ್ವೀಟ್ ಮಾಡಿದ್ದ. ಬಳಿಕ ಸುದೀಪ್ ಅಭಿಮಾನಿ ಅಂತ ಐಡಿ, ಡಿಪಿ ಬದಲಿಸಿದ್ದ. ಇದನ್ನು ಸುದೀಪ್ ಫ್ಯಾನ್ಸ್ ಕಂಡು ಹಿಡಿದು ಅಸಲಿ ಟ್ವೀಟ್‌ನ ಸ್ಕ್ರೀನ್ ಶಾಟ್ ಶೇರ್ ಮಾಡಿ, ಕಿಡಿಗೇಡಿ ವಿರುದ್ಧ ತಿರುಗಿಬಿದ್ದಿದ್ದರು.

ಈಗ ಆಕ್ಷನ್ ಪ್ರಿನ್ಸ್ ಧ್ರುವ ಅಭಿಮಾನಿಗಳು ಕಿಡಿಕಾರಿದ್ದಾರೆ. ಕಿಡಿಗೇಡಿ ವಿರುದ್ಧ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಅದೇ ವೇಳೆ ಈ ಕೃತ್ಯ ಎಸಗಿದವರು ಸಿಕ್ಕಿಕೊಂಡರೆ, ಊರು ಬಿಡಿಸುತ್ತೇವೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ವಿರುದ್ಧ ಕೆಟ್ಟದಾಗಿ ಟ್ವೀಟ್ ಮಾಡಿದ ಬಳಿಕ ಕೆಲವರು ಧ್ರುವ ಸರ್ಜಾ ಅಭಿಮಾನಿಗಳ ಕೆಲಸ ಎಂದು ಹೇಳುತ್ತಿದ್ದಾರೆ. ಧ್ರುವ ಸರ್ಜಾ ಫ್ಯಾನ್ಸ್ ಇಬ್ಬರು ಅಭಿಮಾನಿಗಳ ನಡುವೆ ತಂದಿಡುವ ಕೆಲಸ ಮಾಡುತ್ತಿದ್ದಾರೆ ಎಂದು ಹಬ್ಬಿಸುತ್ತಿದ್ದು, ಇದನ್ನು ಖಂಡಿಸಿ ದೂರು ನೀಡಿದ್ದಾಗಿ ಧ್ರುವ ಫ್ಯಾನ್ಸ್ ಹೇಳಿಕೊಂಡಿದ್ದಾರೆ.

"ನಮ್ಮ ಅಕ್ಕನ ಸಮಾನರು.. ತಾಯಿ ಸಮಾನರಾದಂತಹ ಪುನೀತ್ ರಾಜ್‌ಕುಮಾರ್ ಶ್ರೀಮತಿ ಅಶ್ವಿನಿ ಮೇಡಂ ಅವರ ಮೇಲೆ ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಬಹಳ ಕೆಟ್ಟದಾಗಿ ಅಶ್ಲೀಲವಾಗಿ ಸಾಕಷ್ಟು ಕೆಟ್ಟ ಬೆಳವಣಿಗೆಗಳು ನಡೆದಿತ್ತು. ಈ ವಿಚಾರವನ್ನು ಇಟ್ಕೊಂಡು ಧ್ರುವ ಅನ್ನುವವರು ಈ ಕೆಲಸ ಮಾಡುತ್ತಿದ್ದಾರೆ. ಅವರ ಅಭಿಮಾನಿಗಳು ಈ ಕೆಲಸ ಮಾಡುತ್ತಿದ್ದಾರೆ ಅಂತ ತಪ್ಪು ಸಂದೇಶ ನೀಡುತ್ತಿದ್ದಾರೆ." ಎಂದು ಧ್ರುವ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ.
ಈ ಸಂಬಂಧ ಧ್ರುವ ಫ್ಯಾನ್ಸ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. "ರಾಜ್ಯದ ಉದ್ದಗಲಕ್ಕೂ ಧ್ರುವ ಅಣ್ಣನ ಸಾಕಷ್ಟು ಅಭಿಮಾನಿಗಳು ಇದ್ದಾರೆ. ತಾಲೂಕಿನ ಅವರ ವ್ಯಾಪ್ತಿಗೆ ಬರುವಂತಹ ಎಲ್ಲಾ ಕಡೆ ದೂರನ್ನು ದಾಖಲು ಮಾಡುತ್ತಿದ್ದಾರೆ. ಇದೇ ರೀತಿ ಧ್ರುವ ಅಣ್ಣನ ವೈಯಕ್ತಿಕ ವಿಚಾರದಲ್ಲಿ ತುಂಬಾನೇ ಷಡ್ಯಂತರ ನಡೆಯುತ್ತಾ ಬರುತ್ತಲೇ ಇದೆ. ಹಂತ ಹಂತವಾಗಿ ವಿಕೃತ ಮನ:ಸ್ಥಿತಿ ತೋರುತ್ತಿದ್ದಾರೋ ಅವರನ್ನು ಕಟ್ಟಿ ಹಾಕುವ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ನ್ಯಾಯ ಸಿಕ್ಕಿಲ್ಲ ಅಂದರೆ, ರಾಜ್ಯಪಾಲರಿಗೂ ಮನವಿ ಕೊಡುತ್ತಿದ್ದೇವೆ. ಬೃಹತ್ ಮಟ್ಟದಲ್ಲಿ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಮಾಡುತ್ತಿದ್ದೇವೆ." ಎಂದಿದ್ದಾರೆ.
ಇದೇ ವೇಳೆ ಈ ಕೃತ್ಯ ಎಸಗಿದ ಕಿಡಿಗೇಡಿಗೆ ಸಿಕ್ಕಿಕೊಂಡರೆ ಮನೆ ಖಾಲಿ ಮಾಡಿಸುತ್ತೇವೆಂದು ವಾರ್ನಿಂಗ್ ಕೂಡ ಕೊಟ್ಟಿದ್ದಾರೆ. "ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೇವರ ರಾಜ್‌ಕುಮಾರ್ ಅವರ ಸೊಸೆಯಲ್ಲ. ಪುನೀತ್ ರಾಜ್‌ಕುಮಾರ್ ಅವರ ಧರ್ಮಪತ್ನಿ ಅಷ್ಟೇ ಅಲ್ಲ. ಪಿಆರ್‌ಕೆ ಸಂಸ್ಥೆಯನ್ನಷ್ಟೇ ಅಲ್ಲ. ಅವರೊಬ್ಬ ಹೆಣ್ಣು ಮಗಳು. ಗಜಪಡೆ ಅಂತ ಹೆಸರಿಟ್ಟುಕೊಂಡು ಯಾರು ಈ ಕೆಲಸ ಮಾಡುತ್ತಿದ್ದಾರೆ ಅವರಿಗೆ, ದಯವಿಟ್ಟು ನೀವು ಸಿಕ್ಕಿ ಹಾಕಿಕೊಳ್ಳಬೇಡಿ. ಸಿಕ್ಕಿ ಹಾಕಿಕೊಂಡರೆ ಮಾತ್ರ. ನಿಮ್ಮ ಮನೆಗಳನ್ನು ಹುಡುಕೊಂಡು ಬಂದು ಬಾಗಿಲು ತಟ್ಟಿ, ಊರು ಬಿಡಿಸುವ ಕೆಲಸ ಮಾಡಬೇಕಾಗುತ್ತೆ." ಎಂದು ಹೇಳಿದ್ದಾರೆ.
ಹಾಗೇ "ಧ್ರುವ ಅಣ್ಣ ನಮ್ಮ ಕೈ ಕಟ್ಟಾಕಿರುವುದಕ್ಕೆ ಸುಮ್ಮನಿದ್ದೇವೆ. ನಾವೇನು ಕೈಲಾಗದೆ ಇರುವವರಲ್ಲ. ತಪ್ಪು ಮಾಡಿದರೆ ತಲೆ ಬಗ್ಗಿಸುತ್ತೇವೆ. ಇಲ್ಲ ಅಂದ್ರೆ ತಲೆ ಬಗ್ಗಿಸುವುದಕ್ಕೆ ಹೋಗುವುದಿಲ್ಲ." ಅಂತ ಧ್ರುವ ಸರ್ಜಾ ಬಗ್ಗೆ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ.


Click it and Unblock the Notifications











