'ಕೆಡಿ' ಟ್ರೈಲರ್‌ನಲ್ಲಿ ಎಡವಟ್ಟು; ಯೂಟ್ಯೂಬ್‌ನಿಂದ ಕಣ್ಮರೆ.. ಕೆವಿಎನ್ ಕೊಟ್ಟ ಕಾರಣವೇನು?
ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿರುವ ಸಿನಿಮಾ 'ಕೆಡಿ ದಿ ಡೆವಿಲ್' ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಸಿನಿಮಾ ರಿಲೀಸ್‌ಗೆ ಇನ್ನೊಂದು ವಾರ ಇರುವಾಗಲೇ ಸಿನಿಮಾ ತಂಡ ಟ್ರೈಲರ್ ರಿಲೀಸ್ ಮಾಡುವ ಮೂಲಕ ಕೊನೆಯ ಹಂತದ ಅಬ್ಬರ ಪ್ರಚಾರವನ್ನು ಆರಂಭ ಮಾಡಿತ್ತು. ಆದರೆ, ಈಗ ಆ ಟ್ರೈಲರ್ ಯೂಟ್ಯೂನ್‌ನಿಂದಲೇ ಕಣ್ಮರೆಯಾಗಿದೆ. ಇದನ್ನು ನೋಡಿ ಧ್ರುವ ಸರ್ಜಾ ಅಭಿಮಾನಿಗಳು ಕಂಗಾಲಾಗಿದ್ದಾರೆ.
ಇತ್ತೀಚೆಗಷ್ಟೇ ಕೆವಿಎನ್ ಪ್ರೊಡಕ್ಷನ್ಸ್ 'ಕೆಡಿ' ಸಿನಿಮಾದ ಟ್ರೈಲರ್ ಅನ್ನು ಅದ್ಧೂರಿಯಾಗಿ ರಿಲೀಸ್ ಮಾಡಿತ್ತು. ಧ್ರುವ ಸರ್ಜಾ, ಜೋಗಿ ಪ್ರೇಮ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ ಹಾಗೂ ಕೆವಿಎನ್ ಸಂಸ್ಥೆಯ ಮಾಲೀಕರಾದ ವೆಂಕಟ್ ನಾರಾಯಣ್ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. 'ಕೆಡಿ' ಟ್ರೈಲರ್ ನೋಡಿ ಎಂಜಾಯ್ ಮಾಡಿದ್ದರು. ಅಷ್ಟಕ್ಕೂ ಮತ್ತೊಂದು ವಿಘ್ನ ಎದುರಾಗಿದೆ.

'ಕೆಡಿ' ಟ್ರೈಲರ್ ರಿಲೀಸ್ ಮಾಡಿ ಇನ್ನೇನು ಎರಡು ದಿನವೂ ಆಗಿಲ್ಲ. ಅಷ್ಟರಲ್ಲೇ ಯೂಟ್ಯೂಬ್‌ನಿಂದ ತೆಗೆದು ಹಾಕಲಾಗಿದೆ. ಅದ್ಧೂರಿಯಾಗಿ ಟ್ರೈಲರ್ ಲಾಂಚ್ ಮಾಡಿದ್ದೆಲ್ಲ ನೀರಿನಲ್ಲಿ ಕೊಚ್ಚಿ ಹೋದಂತಾಗಿದೆ. ಅಷ್ಟಕ್ಕೂ ಯೂಟ್ಯೂಬ್‌ನಲ್ಲಿ 'ಕೆಡಿ' ಟ್ರೈಲರ್ ಯಾಕೆ ಕಾಣಿಸುತ್ತಿಲ್ಲ ಅನ್ನೋದಕ್ಕೆ ಸ್ವತ: ಕೆವಿಎನ್ ಪ್ರೊಡಕ್ಷನ್ಸ್ ಕ್ಲಾರಿಟಿಯನ್ನು ಕೂಡ ಕೊಟ್ಟಿದೆ. ಅಷ್ಟಕ್ಕೂ ಕಾರಣವೇನು ಅಂತ ನೋಡುವುದಾರೇ,
ಕೆವಿಎನ್ ಪ್ರೊಡಕ್ಷನ್ ಅದ್ಧೂರಿಯಾಗಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಸೂಪರ್‌ಸ್ಟಾರ್‌ಗಳನ್ನು ಇಟ್ಟುಕೊಂಡು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದರೂ, ಅವುಗಳಿಗೆ ಬಿಡುಗಡೆ ಭಾಗ್ಯ ಮಾತ್ರ ಇನ್ನೂ ಸಿಕ್ಕಿಲ್ಲ. ಒಂದಲ್ಲ ಒಂದು ಸಂಕಷ್ಟಗಳು ಎದುರಾಗುತ್ತಲೇ ಇವೆ. ಈಗ 'ಕೆಡಿ' ಕೂಡ ಅದೇ ಸಂಕಷ್ಟಗಳನ್ನು ಎದುರಿಸುತ್ತಿದೆ. ಆದರೆ, ಟ್ರೈಲರ್ ಯೂಟ್ಯೂಬ್‌ನಿಂದ ತೆಗೆದು ಹಾಕಿದ್ದಕ್ಕೆ ಕಾರಣ ಅವರೇ ಮಾಡಿಕೊಂಡ ತಪ್ಪು ಅನ್ನೋದನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಕೆವಿಎನ್ ಹಂಚಿಕೊಂಡ ಮಾಹಿತಿ ಹೀಗಿದೆ "ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಕೆಡಿ ದಿ ಡೆವಿಲ್ ಸಿನಿಮಾದ ಟ್ರೈಲರ್ ಅನ್ನು ಪ್ರಮಾಣಿಕರಿಸುವ ಪ್ರಕ್ರಿಯೆ ವೇಳೆ ಅಜಾಗರೂಕತೆಯಿಂದ ಕೆಲವು ಪ್ರಮಾಣೀಕರಿಸದ ಕಂಟೆಂಟ್ ಅನ್ನು ಸೇರಿಸಲಾಗಿತ್ತು. ಹೀಗಾಗಿ ನಾವು ಟ್ರೈಲರ್ ಅನ್ನು ತೆಗೆದು ಹಾಕಿದ್ದೇವೆ. ಶೀಘ್ರದಲ್ಲಿಯೇ ಪ್ರಮಾಣೀಕರಣದ ಮಾರ್ಗಸೂಚಿಗಳ ಅನುಗುಣವಾಗಿ ಸಿದ್ಧಪಡಿಸಿದ ಮತ್ತೊಂದು ಟ್ರೈಲರ್ ಅನ್ನು ಅಪ್‌ಲೋಡ್ ಮಾಡುತ್ತೇವೆ. ಇಂತಹ ಅಚಾತುರ್ಯಕ್ಕೆ ಪ್ರಾಮಾಣಿಕವಾಗಿ ನಾವು ವಿಷಾದಿಸುತ್ತೇವೆ. ಸರ್ಟಿಫಿಕೇಷನ್‌ನ ಎಲ್ಲಾ ನಿಯಮಗಳನ್ನು ಪಾಲಿಸಲು ಸಂಪೂರ್ಣವಾಗಿ ಬದ್ಧರಾಗಿದ್ದೇವೆ" ಎಂದು ಕೆವಿಎನ್ ಪ್ರೊಡಕ್ಷನ್ಸ್ ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ಕೆವಿಎನ್ ಸಂಸ್ಥೆಗೆ ಯಾಕೋ ಒಂದಲ್ಲ ಒಂದು ವಿಘ್ನಗಳು ಎದುರಾಗುತ್ತಿವೆ. 'ಕೆಡಿ' ಸಿನಿಮಾದ ವಿವಾದ ಇದೇ ಮೊದಲೇನಲ್ಲ. 'ಸೆರಗು.. " ಹಾಡು ದೇಶಾದ್ಯಂತ ವಿವಾದವನ್ನು ಹುಟ್ಟಾಕಿದ್ದು ಗೊತ್ತೇ ಇದೆ. ಇದರ ಹಿಂದೇನೆ ಈಗ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ರಿಲೀಸ್ ಮಾಡಿದ್ದ ಟ್ರೈಲರ್ ಅನ್ನು ತೆಗೆದು ಹಾಕಿದೆ. ಹೊಸ ಟ್ರೈಲರ್ ಬರುವವರೆಗೂ ಯೂಟ್ಯೂಬ್‌ನಲ್ಲಿ ಲಭ್ಯವಿರುವುದಿಲ್ಲ.
ಇನ್ನು ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾ ಸೆನ್ಸಾರ್‌ನಿಂದ ಶುರುವಾಗಿದ್ದ ಈ ವಿಘ್ನಗಳು ಇನ್ನು ಮುಂದುವರೆಯುತ್ತಲೇ ಇದೆ. 'ಜನ ನಾಯಗನ್' ಯಾವಾಗ ರಿಲೀಸ್ ಆಗುತ್ತೆ ಅನ್ನೋದು ಸುಳಿವು ಇನ್ನೂ ಇಲ್ಲ. ಇದರ ಹಿಂದೇನೆ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ ಬಿಡುಗಡೆ ಕೂಡ ಮುಂದೂಡಲ್ಪಟ್ಟಿದೆ. ಹೀಗಾಗಿ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಗೆ ವಿಘ್ನಗಳ ಮೇಲೆ ವಿಘ್ನಗಳನ್ನು ಎದುರಿಸುವಂತಾಗಿದೆ.


Click it and Unblock the Notifications