Martin Box Office Day 10:2ನೇ ವೀಕೆಂಡ್‌ನಲ್ಲಿ 'ಮಾರ್ಟಿನ್' ಗಳಿಸಿದ್ದೆಷ್ಟು? ಕಲೆಕ್ಷನ್‌ನಲ್ಲಿ ಏರಿಕೆ ಆಯ್ತಾ?
ಧ್ರುವ ಸರ್ಜಾ ಸಿನಿಮಾ 'ಮಾರ್ಟಿನ್' ರಿಲೀಸ್ ಆಗಿ 11ನೇ ದಿನಕ್ಕೆ ಕಾಲಿಟ್ಟಿದೆ. ಈ ಗ್ಯಾಪ್‌ನಲ್ಲಿ ಆಕ್ಷನ್ ಪ್ರಿನ್ಸ್ ಸಿನಿಮಾಗೆ ಎರಡು ವೀಕೆಂಡ್ ಸಿಕ್ಕಿದೆ. ಮೊದಲ ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ಆಗಿತ್ತು. ಆ ಬಳಿಕ ಕಲೆಕ್ಷನ್‌ನಲ್ಲಿ ಇಳಿಕೆ ಕಂಡಿದ್ದ ಸಿನಿಮಾ ನಿಧಾನವಾಗಿ ಇಳಿಮುಖವಾಗುತ್ತಲೇ ಇತ್ತು. ಹೀಗಾಗಿ ವೀಕೆಂಡ್‌ನಲ್ಲಿ ಸಿನಿಮಾ ಕಲೆಕ್ಷನ್ ಏರಿಕೆ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು.
ಸಾಮಾನ್ಯವಾಗಿ ಶುಕ್ರವಾರದಿಂದ ಮತ್ತೆ ಸಿನಿಮಾ ಗಳಿಕೆಯಲ್ಲಿ ಏರಿಕೆಯಾಗುತ್ತೆ. ಈ ಕಾರಣಕ್ಕೆ ಹೊಸ ಸಿನಿಮಾಗಳ ನಿರ್ಮಾಪಕರು ಎರಡನೇ ವೀಕೆಂಡ್ ವರೆಗೂ ನಂಬಿಕೆ ಇಟ್ಟುಕೊಂಡಿರುತ್ತಾರೆ. ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಆಗಬಹುದೆಂದು ಎದುರು ನೋಡುತ್ತಿರುತ್ತಾರೆ. 'ಮಾರ್ಟಿನ್' ಕೂಡ ಇದೇ ಚಮತ್ಕಾರ ಮಾಡಬಹುದು ಎಂಬ ನಿರೀಕ್ಷೆ ಇತ್ತು.

ಒಂದ್ಕಡೆ ಮಳೆ. ಇನ್ನೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಪ್ರಚಾರ. ಈ ಎರಡು ಅಂಶಗಳು 'ಮಾರ್ಟಿನ್' ಸಿನಿಮಾವನ್ನು ಬಾಕ್ಸಾಫೀಸ್‌ನಲ್ಲಿ ಕಾಡಿವೆ. ಎರಡನೇ ವೀಕೆಂಡ್ ಕೂಡ ಧ್ರುವ ಸರ್ಜಾ ಸಿನಿಮಾ 'ಮಾರ್ಟಿನ್'ಗೆ ಆಶಾದಾಯಕವಾಗಿರಲಿಲ್ಲ. ಹಾಗಿದ್ದರೆ, 10ನೇ ದಿನ ಅಂದರೆ ನಿನ್ನೆ (ಅಕ್ಟೋಬರ್ 20) ಕರ್ನಾಟಕ ಬಾಕ್ಸಾಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಮಾರ್ಟಿನ್' 10ನೇ ದಿನ ಗಳಿಕೆ ಎಷ್ಟು?
'ಮಾರ್ಟಿನ್' ವೀಕೆಂಡ್‌ನಲ್ಲಿ ಒಳ್ಳೆ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿತ್ತು. ಆದರೆ, ಚಿತ್ರತಂಡ ಅಂದುಕೊಂಡಂತೆ ಆಗಿಲ್ಲ. ಅದಕ್ಕೊಂದು ಕಾರಣ ಮಳೆಯೂ ಇರಬಹುದು. ಕಳೆದ ಕೆಲವು ದಿನಗಳಿಂದ ಬಿಡದೆ ಮಳೆ ಸುರಿಯುತ್ತಿರುವುದರಿಂದ 'ಮಾರ್ಟಿನ್' ವೀಕೆಂಡ್ ಕಲೆಕ್ಷನ್ ಪೆಟ್ಟು ಬಿದ್ದಿದೆ. ಎರಡನೇ ವೀಕೆಂಡ್‌ನಲ್ಲಿ ಒಂದೊಳ್ಳೆ ಕಲೆಕ್ಷನ್ ಆಗಬಹುದೆಂದು ನಿರೀಕ್ಷೆ ಇತ್ತು. ಆದರೆ, ಭಾನುವಾರ (ಅಕ್ಟೋಬರ್ 20) ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 50 ಲಕ್ಷ ರೂಪಾಯಿ ಗಳಿಸಿದೆ ಎನ್ನುತ್ತಿವೆ ಕರ್ನಾಟಕದ ವಿತರಕರ ಮೂಲ. ಇದೇ ಇಂಡಸ್ಟ್ಟೀ ಟ್ರ್ಯಾಕರ್ sacnilk ಪ್ರಕಾರ, ಈ ಸಿನಿಮಾದ 10ನೇ ದಿನದ ಕಲೆಕ್ಷನ್ 40 ಲಕ್ಷ ರೂಪಾಯಿ.

'ಮಾರ್ಟಿನ್' ವೀಕೆಂಡ್ ಕಲೆಕ್ಷನ್ ಎಷ್ಟು?
'ಮಾರ್ಟಿನ್' ಸಿನಿಮಾದ ಎರಡನೇ ವೀಕೆಂಡ್ ಗಳಿಕೆ ಮೇಲೆ ಚಿತ್ರರಂಗ ಕಣ್ಣಿಟ್ಟಿತ್ತು. ಶನಿವಾರ ಅಂದರೆ 9ನೇ ದಿನ (ಅಕ್ಟೋಬರ್ 19) ಕರ್ನಾಟಕ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ 40 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿತ್ತು. ಹಾಗೇ ಭಾನುವಾರ ಅಂದರೆ, 10ನೇ ದಿನ ವಿತರಕರ ಪ್ರಕಾರ 50 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ. ಇವೆಲ್ಲವನ್ನೂ ಸೇರಿಸಿದರೆ, 21.80 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.
10 ದಿನಗಳ ಬಾಕ್ಸ್ ಆಫೀಸ್ ಕಲೆಕ್ಷನ್ (ಕರ್ನಾಟಕ)
ಮೊದಲ ದಿನ - 6.5 ಕೋಟಿ ರೂ.
ಎರಡನೇ ದಿನ - 5.1 ಕೋಟಿ ರೂ.
ಮೂರನೇ ದಿನ - 4.1 ಕೋಟಿ ರೂ.
ನಾಲ್ಕನೇ ದಿನ - 1.7 ಕೋಟಿ ರೂ.
ಐದನೇ ದಿನ - 1.0 ಕೋಟಿ ರೂ.
ಆರನೇ ದಿನ -1.0 ಕೋಟಿ ರೂ.
ಏಳೆನೇ ದಿನ - 90 ಲಕ್ಷ ರೂ.
ಎಂಟನೇ ದಿನ - 60 ಲಕ್ಷ ರೂ.
ಒಂಬತ್ತನೇ ದಿನ - 40 ಲಕ್ಷ ರೂ.
ಹತ್ತನೇ ದಿನ - 50 ಲಕ್ಷ ರೂ.
ಒಟ್ಟು - 21.80 ಕೋಟಿ ರೂ.
ನಿರ್ಮಾಪಕರಿಗೆ ನಷ್ಟನಾ? ಲಾಭನಾ?
'ಮಾರ್ಟಿನ್' ಸಿನಿಮಾದಿಂದ ನಿರ್ಮಾಪಕರಿಗೆ ನಷ್ಟ ಆಗಿದೆಯಾ? ಲಾಭ ಆಗಿದೆಯಾ? ಅನ್ನೋ ಪ್ರಶ್ನೆಗೆ ಈಗಲೇ ಉತ್ತರ ಸಿಗೋದು ಅನುಮಾನ. ಈ ಸಿನಿಮಾವನ್ನು ಕೇವಲ ಆರು ಭಾಷೆಯಲ್ಲಷ್ಟೇ ರಷ್ಯಾ, ಕೊರಿಯಾ, ಚೈನೀಸ್ ಸೇರಿದಂತೆ ಹಲವು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಸಿನಿಮಾ ಮೇಲೆ ಇನ್ನೂ ನಿರೀಕ್ಷೆಯಿದೆ. ಜೊತೆಗೆ ಇನ್ನೂ ಒಂದು ವಾರ ಥಿಯೇಟರ್‌ನಲ್ಲಿ ಹಣ ಮಾಡುವ ಅವಕಾಶವಿದೆ. ಹಾಗೇ ಡಿಜಿಟಲ್ ಹಾಗೂ ಓಟಿಟಿ ರೈಟ್ಸ್ ಲೆಕ್ಕಚಾರದ ಮೇಲೆ ನಿರ್ಮಾಪಕರಿಗೆ ನಷ್ಟನಾ? ಲಾಭನಾ? ಅನ್ನೋದು ನಿಂತಿದೆ.
25 ಕೋಟಿ ರೂಪಾಯಿ ದಾಟಬಹುದೇ?
ಧ್ರುವ ಸರ್ಜಾ ಸಿನಿಮಾ 'ಮಾರ್ಟಿನ್' ಸಿನಿಮಾದ ಕಲೆಕ್ಷನ್ 25 ಕೋಟಿ ರೂಪಾಯಿ ದಾಟಬಹುದೇ? ಅನ್ನೋ ಪ್ರಶ್ನೆ ಎದುರಾಗಿದೆ. ದಿನಕ್ಕೆ 50 ಲಕ್ಷದಂತೆ ಕಲೆಕ್ಷನ್ ಆದರೂ ಇನ್ನು ಏಳು ದಿನಗಳಲ್ಲಿ 25 ಕೋಟಿ ರೂಪಾಯಿ ಕ್ಲಬ್ ಸೇರಬಹುದು. ಅಲ್ಲದೆ ಮಳೆನೂ ಕಮ್ಮಿಯಾದರೆ, ಸಿನಿಮಾ ನೋಡಲು ಜನರು ಬರಬಹುದೆಂಬ ನಿರೀಕ್ಷೆಯಿದೆ. ಇನ್ನೊಂದು ವಾರದಲ್ಲಿ 'ಮಾರ್ಟಿನ್' 25 ಕೋಟಿ ರೂಪಾಯಿ ಕ್ಲಬ್ ಸೇರಬಹುದು. ಅಂದ್ಹಾಗೆ, ಈ ಲೆಕ್ಕಾಚಾರ ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿದ ಮಾಹಿತಿ. ಇನ್ನೂ 'ಮಾರ್ಟಿನ್' ತಂಡ ಅಧಿಕೃತ ಮಾಹಿತಿಯನ್ನು ಹೊರಹಾಕಬೇಕಿದೆ.


Click it and Unblock the Notifications











