Martin Box Office Day 11: 2ನೇ ಸೋಮವಾರದ 'ಮಾರ್ಟಿನ್' ಕಥೆಯೇನು? ಬಾಕ್ಸಾಫೀಸ್‌ನಲ್ಲಿ ಚೇತರಿಕೆ ಕಂಡಿತೇ?
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ 'ಮಾರ್ಟಿನ್' ಮೇಲೆ ನಿರೀಕ್ಷೆಗಳು ಬೆಟ್ಟದಷ್ಟು ಇದ್ದವು. ಈ ಸಿನಿಮಾ 2024ರ ಕನ್ನಡದ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳಲ್ಲಿ ಒಂದಾಗಬಹುದೆಂಬ ಎದುರು ನೋಡುತ್ತಿದ್ದರು. ಆದರೆ, ಆಕ್ಷನ್ ಪ್ರಿನ್ಸ್ ಸಿನಿಮಾ ಆ ನಿರೀಕ್ಷೆಯನ್ನು ಮುಟ್ಟುವಲ್ಲಿ ಸೋತಿದೆ. 'ಮಾರ್ಟಿನ್' ಕಲೆಕ್ಷನ್ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಇದೆ.
ಪಕ್ಕಾ ಆಕ್ಷನ್ ಸಿನಿಮಾ 'ಮಾರ್ಟಿನ್' ಅನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿತ್ತು. ಬಿಗ್ ಬಜೆಟ್‌ನಲ್ಲಿ ಆಕ್ಷನ್ ಬ್ಲಾಕ್‌ಗಳನ್ನು ಚಿತ್ರೀಕರಣ ಮಾಡಲಾಗಿತ್ತು. ಇಂಟ್ರುಡಕ್ಷನ್ ಸೀನ್, ಹಾಡನ್ನು ಕೋಟಿ ಲೆಕ್ಕದಲ್ಲಿ ಸುರಿದು ಖರ್ಚು ಮಾಡಲಾಗಿತ್ತು. ಅಲ್ಲದೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದ್ದರಿಂದ ಕರ್ನಾಟಕ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಬರೆಯಬಹುದೆಂಬ ನಿರೀಕ್ಷೆಯಿತ್ತು.

ಆದರೆ, 'ಮಾರ್ಟಿನ್' ಬಾಕ್ಸಾಫೀಸ್‌ನಲ್ಲಿ ದಿಢೀರ್ ಕುಸಿತ ಕಂಡಿದೆ. ಒಳ್ಳೆಯ ಓಪನಿಂಗ್ ಪಡೆದುಕೊಂಡಿದ್ದ ಸಿನಿಮಾ 'ಮಾರ್ಟಿನ್' ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಮೊದಲ ಮೂರು ದಿನ ಭರ್ಜರಿ ಕಲೆಕ್ಷನ್ ಮಾಡಿತ್ತು. ನಾಲ್ಕನೇ ದಿನದಿಂದ ಕುಸಿತ ಕಂಡಿದ್ದು ಮತ್ತೆ ಎದ್ದೇಳಲಿಲ್ಲ. 'ಮಾರ್ಟಿನ್' ರಿಲೀಸ್ ಆಗಿ ಇಂದಿಗೆ 12ನೇ ದಿನ. ಕಳೆದ 11 ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ ಹೇಗಿದೆ? ತಿಳಿಯಲು ಮುಂದೆ ಓದಿ.
'ಮಾರ್ಟಿನ್' 11ನೇ ದಿನ ಕಲೆಕ್ಷನ್ ಎಷ್ಟು?
'ಮಾರ್ಟಿನ್' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಬಹುದೆಂಬ ನಿರೀಕ್ಷೆಯಿತ್ತು. ಆದರೆ, ಬೇರೆ ಭಾಷೆಗಳಲ್ಲಿ ಸದ್ದು ಮಾಡದೇ ಹೋದರೂ, ಕರ್ನಾಟಕದಲ್ಲಿ ಹವಾ ಎಬ್ಬಿಸಬಹುದೆಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ, 'ಮಾರ್ಟಿನ್' ಹಾಗಾಗಲಿಲ್ಲ. 11ನೇ ದಿನದ ಹೊತ್ತಿಗೆ ಬಾಕ್ಸಾಫೀಸ್‌ನಲ್ಲಿ ತಣ್ಣಗಾಗಿದೆ. ಹಿಂದೆಂದಿಗಿಂತಲೂ ಈ ಸಿನಿಮಾ ಅತೀ ಕಡಿಮೆ ಕಲೆಕ್ಷನ್ ಮಾಡಿದೆ. ವಿತರಕರ ಪ್ರಕಾರ, ಈ ಸಿನಿಮಾ ನಿನ್ನೆ (ಅಕ್ಟೋಬರ್ 21) 25 ರಿಂದ 30 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಅದೇ ಇಂಡಸ್ಟ್ರಿ ಟ್ರ್ಯಾಕರ್ sacnilk 13 ಲಕ್ಷ ರೂಪಾಯಿ ಎಂದು ವರದಿ ಮಾಡಿದೆ.

11 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
ಕಳೆದ 11 ದಿನಗಳಲ್ಲಿ 'ಮಾರ್ಟಿನ್' ಕಲೆಕ್ಷನ್ ನಿರೀಕ್ಷೆ ಮಾಡಿದಷ್ಟು ಆಗಿಲ್ಲ. ಇಷ್ಟರೊಳಗೆ 50 ಕೋಟಿ ರೂಪಾಯಿ ಸಮೀಪ ರೀಚ್ ಆಗಿದ್ದರೆ, ಹಿಟ್ ಅಂತ ಸಾಬೀತಾಗುತ್ತಿತ್ತು. ಮೊದಲ ಮೂರು ದಿನಗಳಲ್ಲಿ 15 ಕೋಟಿ ರೂಪಾಯಿ ಗಳಿಸಿದ್ದ ಸಿನಿಮಾ ನಂತರದ ಎಂಟು ದಿನಗಳಲ್ಲಿ ಗಳಿಸಿದ್ದು ಬರೀ 6 ರಿಂದ 7 ಕೋಟಿ ರೂಪಾಯಿ. ವಿತರಕರ ಪ್ರಕಾರ ಇದೂವರೆಗೂ ಈ ಸಿನಿಮಾ 22 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ.
11 ದಿನಗಳ ಬಾಕ್ಸ್ ಆಫೀಸ್ ಕಲೆಕ್ಷನ್ (ಕರ್ನಾಟಕ)
ಮೊದಲ ದಿನ 6.5 ಕೋಟಿ ರೂ.
ಎರಡನೇ ದಿನ 5.1 ಕೋಟಿ ರೂ.
ಮೂರನೇ ದಿನ 4.1 ಕೋಟಿ ರೂ.
ನಾಲ್ಕನೇ ದಿನ 1.7 ಕೋಟಿ ರೂ.
ಐದನೇ ದಿನ 1.0 ಕೋಟಿ ರೂ.
ಆರನೇ ದಿನ 1.0 ಕೋಟಿ ರೂ.
ಏಳೆನೇ ದಿನ 90 ಲಕ್ಷ ರೂ.
ಎಂಟನೇ ದಿನ 60 ಲಕ್ಷ ರೂ.
ಒಂಬತ್ತನೇ ದಿನ 40 ಲಕ್ಷ ರೂ.
ಹತ್ತನೇ ದಿನ 50 ಲಕ್ಷ ರೂ.
ಹನ್ನೊಂದನೇ ದಿನ 25 ಲಕ್ಷ ರೂ.
ಒಟ್ಟು 22.05 ಕೋಟಿ ರೂ.
₹25 ಕೋಟಿ ಯಾವಾಗ ?
'ಮಾರ್ಟಿನ್' ಕರ್ನಾಟಕದಲ್ಲಿ ಕಮ್ಮಿ ಅಂದರೂ 25 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆಯಿತ್ತು. ಆದರೆ, ಈಗ್ಯಾಕೋ ಆ ಗುರಿಯನ್ನು ಮುಟ್ಟುವುದು ಕೂಡ ಅನುಮಾನ ಎನ್ನಲಾಗುತ್ತಿದೆ. ಅದ್ದೂರಿಯಾಗಿ ನಿರ್ಮಸಿದ ಸಿನಿಮಾ ನೂರು ಕೋಟಿ ಕ್ಲಬ್ ಸೇರಬೇಕಿತ್ತು. ಅದನ್ನೇ ಗುರಿಯಾಗಿಸಿಕೊಂಡು ಸಿನಿಮಾ ಮಾಡಲಾಗಿತ್ತು. ಆದರೆ, ನಿರೀಕ್ಷಿತ್ ಮಟ್ಟದಲ್ಲಿ ಈ ಸಿನಿಮಾ ಯಶಸ್ಸು ಕಾಣಲಿಲ್ಲ. ಇನ್ನು ರಿಲೀಸ್ ಆದ ಪರ ಬೇರೆ ಭಾಷೆಯಲ್ಲಿಯೂ ಅಷ್ಟಾಗಿ ಸದ್ದು ಮಾಡುತ್ತಿಲ್ಲ.


Click it and Unblock the Notifications











