Martin Box Office:ಸೋಮವಾರದ ಪರೀಕ್ಷೆಯಲ್ಲಿ ಗೆದ್ದನಾ 'ಮಾರ್ಟಿನ್'? 4ನೇ ದಿನ ಎಷ್ಟಾಯ್ತು ಕಲೆಕ್ಷನ್?
ದಸರಾ ಸಂಭ್ರಮದಂದು 'ಮಾರ್ಟಿನ್' ಸಿನಿಮಾ ಅಖಾಡಕ್ಕೆ ಇಳಿದಿತ್ತು. ರಜನಿಕಾಂತ್ ಅಂತಹ ಸೂಪರ್‌ಸ್ಟಾರ್ ನಟಿಸಿದ 'ವೆಟ್ಟೈಯಾನ್' ಸಿನಿಮಾ ಕೂಡ ಇದೇ ವೇಳೆ ರಿಲೀಸ್ ಆಗಿತ್ತು. 'ಮಾರ್ಟಿನ್' ಹಾಗೂ 'ವೆಟ್ಟೈಯಾನ್' ಎರಡೂ ಸಿನಿಮಾಗಳೂ ಒಂದು ದಿನದ ಅಂತರದಲ್ಲಿಯೇ ರಿಲೀಸ್ ಆಗಿತ್ತು. ಈ ಹಿನ್ನೆಲೆಯಲ್ಲಿ 'ಮಾರ್ಟಿನ್' ಸೂಪರ್‌ಸ್ಟಾರ್ ಸಿನಿಮಾ ಜೊತೆ ಕಾಂಪಿಟೇಷನ್ ಮಾಡಬೇಕಾಯಿತು.
ಆದರೂ, ಮೊದಲ ಮೂರು ದಿನ ಕರ್ನಾಟಕದಲ್ಲಿ 'ಮಾರ್ಟಿನ್' ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದೆ. ಧ್ರುವ ಸರ್ಜಾ ನಟಿಸಿದ ಸಿನಿಮಾದ ಆಕ್ಷನ್ ಸೀಕ್ವೆನ್ಸ್ ಅನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವ ಆಕ್ಷನ್‌ಗೆ ಮರುಳಾಗಿದ್ದಾರೆ. ಹೀಗಿದ್ದೂ ಸಿನಿಮಾಗೆ ಮೊದಲ ದಿನ ಜನರಿಂದ ಹಾಗೂ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಮಾರ್ಟಿನ್' ಸಿನಿಮಾ ಮೊದಲ ಮೂರು ದಿನ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಆದರೆ, ಅಸಲಿ ಚಾಲೆಂಜ್ ಇದ್ದಿದ್ದು ನಾಲ್ಕನೇ ದಿನ ಅಂದರೆ ನಿನ್ನೆ (ಅಕ್ಟೋಬರ್ 14). ಮೊದಲ ಸೋಮವಾರ ಪ್ರತಿ ಸಿನಿಮಾಗೂ ನಿರ್ಣಾಯಕ ಆಗಿರುತ್ತೆ. ಸೋಮವಾರ 'ಮಾರ್ಟಿನ್' ಗೆದ್ದರೆ, ಈ ವಾರ ಒಂದೊಳ್ಳೆ ಕಲೆಕ್ಷನ್ ಮಾಡಬಹುದೆಂದು ಅಂದಾಜಿಸಬಹುದು. ಹಾಗಿದ್ದರೆ 'ಮಾರ್ಟಿನ್' 4ನೇ ದಿನದ ಕಲೆಕ್ಷನ್ ಎಷ್ಟು? ಸೋಮವಾರ ಪರೀಕ್ಷೆ ಗೆದ್ದಿತೇ? ತಿಳಿಯಲು ಮುಂದೆ ಓದಿ.
'ಮಾರ್ಟಿನ್' ಸೋಮವಾರ ಪರೀಕ್ಷೆ ಗೆದ್ದಿತೇ?
ಧ್ರುವ ಸರ್ಜಾ ನಟಿಸಿದ ಸಿನಿಮಾ ಹೆಚ್ಚು ಕಡಿಮೆ ಮೂರು ವರ್ಷಗಳ ಬಳಿಕ ರಿಲೀಸ್ ಆಗುತ್ತಿದೆ. ಹೀಗಾಗಿ 'ಮಾರ್ಟಿನ್' ಮೇಲೆ ಕರ್ನಾಟಕದ ಸಿನಿಮಾ ಮಂದಿ ಕಣ್ಣಿಟ್ಟಿದ್ದರು. ಅಲ್ಲದೆ 'ಮಾರ್ಟಿನ್' ಧ್ರುವ ಸರ್ಜಾ ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಬಹುದು ಅನ್ನೋ ಕ್ಯೂರಿಯಾಸಿಟಿಯಿತ್ತು. ನಿರೀಕ್ಷೆಯಂತೆ ಮೊದಲ ಮೂರು ದಿನ ಭರ್ಜರಿ ಗಳಿಕೆ ಕಂಡರೆ, ನಾಲ್ಕನೇ ದಿನ 1.30 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಸೋಮವಾರದ ಪರೀಕ್ಷೆಯನ್ನು ಗೆದ್ದಿದೆ.

ನಾಲ್ಕು ದಿನಗಳ ಗಳಿಕೆ ಹೇಗಿದೆ?
ಸೋಮವಾರದ ಪರೀಕ್ಷೆಯಲ್ಲಿ 'ಮಾರ್ಟಿನ್' ಗೆದ್ದಿದ್ದಾಗಿದೆ. ಇನ್ನು ಈ ವಾರ ಪೂರ್ತಿ ಕಲೆಕ್ಷನ್ ಹೇಗಾಗಬಹುದು ಅನ್ನೋದರ ಮೇಲೆ ಎಲ್ಲರ ನಿರೀಕ್ಷೆಯಿದೆ. 'ಮಾರ್ಟಿನ್' ಕರ್ನಾಟಕದಲ್ಲಿ ಸುಮಾರು 341 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಅಕ್ಟೋಬರ್ 11 ರಂದು ತೆರೆಕಂಡಿದ್ದ ಈ ಸಿನಿಮಾ ಇಂದಿಗೆ (ಅಕ್ಟೋಬರ್ 15) ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ನಾಲ್ಕು ದಿನಗಳಲ್ಲಿ 'ಮಾರ್ಟಿನ್' ಗಳಿಸಿದ ಕಲೆಕ್ಷನ್ ಹೀಗಿದೆ.
'ಮಾರ್ಟಿನ್' ಕರ್ನಾಟಕ ಕಲೆಕ್ಷನ್
ಮೊದಲ ದಿನ 6.5 ಕೋಟಿ ರೂ.
ಎರಡನೇ ದಿನ 5.1 ಕೋಟಿ ರೂ.
ಮೂರನೇ ದಿನ 4.1 ಕೋಟಿ ರೂ.
ನಾಲ್ಕನೇ ದಿನ 1.3 ಕೋಟಿ ರೂ.
ಒಟ್ಟು 17.00 ಕೋಟಿ ರೂ.
ಬೇರೆ ಭಾಷೆಯಲ್ಲಿ ಹೇಗಿದೆ?
'ಮಾರ್ಟಿನ್' ಕನ್ನಡ ವರ್ಷನ್‌ಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇದರೊಂದಿಗೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಬೆಂಗಾಲಿಯಲ್ಲಿಯೂ ರಿಲೀಸ್ ಆಗಿತ್ತು. ಆದರೆ, ತೆಲುಗಿನಲ್ಲಿ ನಾಲ್ಕು ದಿನಕ್ಕೆ 1.3 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಹಾಗೇ ಹಿಂದಿ ಅವತರಣಿಕೆಯ 'ಮಾರ್ಟಿನ್' ಕಲೆಕ್ಷನ್ 1 ಕೋಟಿ ರೂಪಾಯಿ ದಾಟಿದೆ. ಉಳಿದಂತೆ ತಮಿಳು ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿಲ್ಲ.
25 ಕೋಟಿ ಕ್ಲಬ್ ಸೇರಬಹುದೇ?
'ಮಾರ್ಟಿನ್' ಸಿನಿಮಾ ಈ ವೀಕೆಂಡ್ ಮುಗಿಯುವುದರೊಳಗೆ 25 ಕೋಟಿ ಕ್ಲಬ್ ಸೇರುತ್ತಾ? ಅನ್ನೋದು ಸದ್ಯದ ಕುತೂಹಲ. ಸದ್ಯಕ್ಕೆ ಇನ್ನೊಂದು ವೀಕೆಂಡ್ ಸಿಗುವುದರೊಳಗೆ ಈ ಸಿನಿಮಾದ ಕಲೆಕ್ಷನ್ ಹೇಗಾಗುತ್ತೆ ಅನ್ನೋದು ಮುಖ್ಯ. ಇನ್ನು ಆರು ದಿನಗಳಲ್ಲಿ 8 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದರೆ, 'ಮಾರ್ಟಿನ್' ಕೇವಲ ಕನ್ನಡದಲ್ಲಿಯೇ 25 ಕೋಟಿ ರೂಪಾಯಿ ಕ್ಲಬ್ ಸೇರೋದು ಗ್ಯಾರಂಟಿ.
ಸೂಚನೆ: ಈ ಸಿನಿಮಾ ಬಾಕ್ಸಾಫೀಸ್ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿ ಹೇಳಲಾಗಿದೆ. ಮಾರ್ಟಿನ್ ತಂಡ ಅಧಿಕೃತವಾಗಿ ಬಾಕ್ಸಾಫೀಸ್ ರಿಪೋರ್ಟ್ ಅನ್ನು ಇನ್ನೂ ಹೊರ ಹಾಕಿಲ್ಲ.


Click it and Unblock the Notifications











