ಆಕ್ಷನ್ ಪ್ರಿನ್ಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್: Jr.NTR 'ದೇವರ'ಗೆ ಟಕ್ಕರ್ ಕೊಡಲು ಹೊರಟ 'ಮಾರ್ಟಿನ್'
ಥಿಯೇಟರ್‌ಗೆ ಜನ ಬರುತ್ತಿಲ್ಲ. ಸೂಪರ್‌ಸ್ಟಾರ್‌ಗಳ ಸಿನಿಮಾ ರಿಲೀಸ್ ಆಗಿಲ್ಲ ಅನ್ನೋ ಕೂಗು ಕೇಳುತ್ತಿರುವಾಗಲೇ ಸಿನಿಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕಳೆದ ಕೆಲವು ತಿಂಗಳಿನಿಂದ ಧ್ರುವ ಸರ್ಜಾ ಸಿನಿಮಾ 'ಮಾರ್ಟಿನ್' ಯಾವಾಗ ರಿಲೀಸ್ ಆಗುತ್ತೋ ಅಂತ ಅವರ ಫ್ಯಾನ್ಸ್ ಎದುರು ನೋಡುತ್ತಿದ್ದರು. ಆ ನಿರೀಕ್ಷೆಗೀಗ ತೆರೆ ಬಿದ್ದಿದೆ.
ಸ್ಟಾರ್ ಸಿನಿಮಾಗಳು ರಿಲೀಸ್ ಆಗಬೇಕು ಅನ್ನೋ ಕೂಗಿನ ನಡುವೆ ಧ್ರುವ ಸರ್ಜಾ ಸಿನಿಮಾ 'ಮಾರ್ಟಿನ್' ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಧ್ರುವ ಸರ್ಜಾ, ನಿರ್ದೇಶಕ ಎಪಿ ಅರ್ಜುನ್, ನಿರ್ಮಾಪಕ ಉದಯ್ ಮೆಹ್ತಾ, ರವಿಬಸ್ರೂರು ಸೇರಿದಂತೆ ಇಡೀ ತಂಡ ಒಟ್ಟಿಗೆ ಒಂದೇ ವೇದಿಕೆ ಮೇಲೆ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದಾರೆ. ಆದರೆ, ಇಲ್ಲೊಂದು ಚಿಕ್ಕ ಟ್ವಿಸ್ಟ್ ಇದೆ.

'ಮಾರ್ಟಿನ್' ಸಿನಿಮಾದ ಚಿಕ್ಕದೊಂದು ತುಣುಕನ್ನು ಈಗಾಗಲೇ ಚಿತ್ರತಂಡ ರಿಲೀಸ್ ಮಾಡಿದೆ. ಅದನ್ನು ನೋಡಿನೇ ಇದೊಂದು ಪಕ್ಕಾ ಮಾಸ್ ಆಕ್ಷನ್ ಸಿನಿಮಾ ಅನ್ನೋದು ರಿವೀಲ್ ಆಗಿದೆ. ಹೀಗಾಗಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಮಾಡುವುದಕ್ಕೆ ನಿರ್ಮಾಪಕರು ಪ್ಯಾನ್ ಮಾಡಿದ್ದಾರೆ. ವಿಜಯದಶಮಿ ಹಬ್ಬಕ್ಕೆ ಸಿನಿಪ್ರಿಯರನ್ನು ರಂಜಿಸುವುದಕ್ಕೆ 'ಮಾರ್ಟಿನ್' ರೆಡಿಯಾಗಿದೆ.
ಎ ಪಿ ಅರ್ಜುನ್ ನಿರ್ದೇಶಿಸಿದ ಈ ಮಾಸ್ ಸಿನಿಮಾ ಅಕ್ಟೋಬರ್ 11ರಂದು ಏಕಕಾಲಕ್ಕೆ ಐದು ಭಾಷೆಗಳಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಕನ್ನಡದಿಂದಲೇ ಅದ್ದೂರಿ ಪ್ರಚಾರ ಕಾರ್ಯ ಆರಂಭ ಆಗುತ್ತಿದೆ. ವಿಭಿನ್ನವಾಗಿ ಸಿನಿಮಾ ಪ್ರಚಾರ ಮಾಡುವುದಕ್ಕೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. 'ಮಾರ್ಟಿನ್' ಸಿನಿಮಾದ ತುಣುಕು, ಟೀಸರ್, ಸೀನ್ ಅಥವಾ ಸಾಂಗ್ ಯಾವುದನ್ನು ನೋಡುವುದಕ್ಕೆ ಜನರು ಇಷ್ಟ ಪಡುತ್ತಾರೋ ಅದನ್ನು ರಿಲೀಸ್ ಮಾಡುವುದಕ್ಕೆ ಚಿತ್ರತಂಡ ನಿರ್ಧರಿಸಿದೆ.
ಅದಕ್ಕಾಗಿ ಇಂದು ವೇದಿಕೆಯನ್ನು ನಿರ್ಮಾಣ ಆಗಿದೆ. ಓಪಿನಿಯನ್ ಪೋಲ್ ಮಾದರಿಯಲ್ಲಿ ಜನರೇ ಯಾವುದನ್ನು ನೋಡಲು ಇಷ್ಟ ಪಡುತ್ತಾರೋ ಅದನ್ನೇ ರಿಲೀಸ್ ಮಾಡಲಿದೆ ಚಿತ್ರತಂಡ. ಇದೇ ಸ್ಟ್ರಾಟಜಿಯನ್ನು ಬೇರೆ ಭಾಷೆಯಲ್ಲಿಯೂ 'ಮಾರ್ಟಿನ್' ತಂಡ ಮುಂದುವರೆಸುತ್ತಾ? ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ.

'ಮಾರ್ಟಿನ್' ಅಕ್ಟೋಬರ್ 11ಕ್ಕೆ ರಿಲೀಸ್ ಆಗುತ್ತಿರುವುದು ಖುಷಿ ವಿಷಯ. ಆದರೆ, ಇನ್ನೊಂದು ಕಡೆ ಒಂದು ಮುಂಚಿತವಾಗಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗುತ್ತಿದೆ. ಜೂನಿಯರ್ ಎನ್‌ಟಿಆರ್ ಹಾಗೂ ಕೊರಟಾಲ ಶಿವ ಕಾಂಬಿನೇಷನ್‌ನಲ್ಲಿ ಬರುತ್ತಿರುವ 'ದೇವರ' ಅಕ್ಟೋಬರ್ 10ಕ್ಕೆ ರಿಲೀಸ್ ಆಗುತ್ತಿದೆ. ಹೀಗಾಗಿ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳು ಥಿಯೇಟರ್‌ಗಾಗಿ ಕಾದಾಡಬೇಕಾದ ಪರಿಸ್ಥಿತಿ ಎದುರಾಗಬಹುದು.
ಆದರೆ, 'ಮಾರ್ಟಿನ್' ಚಿತ್ರತಂಡ ಕಾನ್ಫಿಡೆಂಟ್ ಆಗಿದೆ. ವಿಜಯದಶಮಿ ಹಬ್ಬ ವೇಳೆ ಎರಡು ಮೂರು ಸಿನಿಮಾಗಳು ರಿಲೀಸ್ ಆಗಿವೆ. ಎಲ್ಲಾ ಸಿನಿಮಾಗಳನ್ನು ಜನರು ವೀಕ್ಷಿಸಿದ್ದಾರೆ. ಎರಡೂ ಸಿನಿಮಾಗಳನ್ನು ಜನರು ನೋಡುತ್ತಾರೆ. ಹೀಗಾಗಿ ಹೆಚ್ಚಿನ ಸಮಸ್ಯೆ ಏನೂ ಆಗುವುದಿಲ್ಲ ಎಂಬ ನಂಬಿಕೆಯಲ್ಲಿ ಚಿತ್ರತಂಡವಿದೆ. ಒಟ್ನಲ್ಲಿ ವಿಜಯದಶಮಿಗೆ 'ಮಾರ್ಟಿನ್' Vs 'ದೇವರ' ಅನ್ನೋದು ಗ್ಯಾರಂಟಿ. ಈ ಮಧ್ಯೆ ಬಾಕ್ಸಾಫೀಸ್‌ನಲ್ಲಿ ಗೆಲ್ಲೋದ್ಯಾರು? ಅನ್ನೋ ಪ್ರಶ್ನೆ ಈಗಿನಿಂದಲೇ ಹುಟ್ಟಿಕೊಂಡಿದೆ.


Click it and Unblock the Notifications











