'ಜನ ನಾಯಗನ್', 'ಟಾಕ್ಸಿಕ್'ಗಾಗಿ ಫುಟ್‌ಬಾಲ್ ಆಯ್ತಾ 'ಕೆಡಿ'; ಏನಂತಾರೆ ಪ್ರೇಮ್?
ಕೆವಿಎನ್ ನಿರ್ಮಾಣ ಮಾಡಿರುವ 'ಕೆಡಿ' ಸಿನಿಮಾ ಕಳೆದ ನಾಲ್ಕು ವರ್ಷಗಳಿಂದ ನಿರ್ಮಾಣ ಹಂತದಲ್ಲಿ ಇತ್ತು. ಕೊನೆಗೂ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಹೀಗಿ ಸಿನಿಮಾದ ಪ್ರಚಾರವನ್ನೂ ಭರ್ಜರಿಯಾಗಿ ಶುರು ಮಾಡಿದ್ದಾರೆ. ಇಂದು (ಮಾರ್ಚ್ 14) ಸಿನಿಮಾದ ನಾಲ್ಕನೇ ಸಾಂಗ್ ಅನ್ನು ರಿಲೀಸ್ ಮಾಡಲಾಗಿದೆ. ಬಾಲಿವುಡ್ ನಟಿ ನೂರಾ ಫತೇಹಿ ಹಾಗೂ ಸಂಜಯ್ ದತ್ ಈ ಹಾಡಿನಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
'ಟಾಕ್ಸಿಕ್' ರಿಲೀಸ್ ಡೇಟ್ ಮುಂದಕ್ಕೆ ಹೋದ್ಮೇಲೆ ಚಿತ್ರರಂಗದಲ್ಲಿ ಕೆವಿಎನ್ ಪ್ರೊಡಕ್ಷನ್ ಮೇಲೆ ಒಂದು ಆರೋಪ ಕೇಳಿ ಬರುತ್ತಿದೆ. ಇವರು ನಿರ್ಮಾಣ ಮಾಡಿದ ಸಿನಿಮಾ ಬೇಗ ರಿಲೀಸ್ ಆಗೋದಿಲ್ಲ ಅನ್ನೋ ಮಾತು ಕೇಳಿ ಬರುತ್ತಿದೆ. ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಹಾಗೂ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಎರಡೂ ಸಿನಿಮಾ ರಿಲೀಸ್ ಪೋಸ್ಟ್ ಪೋನ್ ಆಗಿವೆ. ಹೀಗಾಗಿ ಈಗ 'ಕೆಡಿ' ಮೇಲೆ ಸಿನಿಮಾ ಮಂದಿಯ ಕಣ್ಣು ಇದೆ.

ಹಾಗೇ ನೋಡುವುದಕ್ಕೆ ಹೋದರೆ, 'ಕೆಡಿ' ಮೊದಲು ಶುರುವಾಗಿತ್ತು. ಆದರೆ, 'ಕೆಡಿ'ಗಿಂತ ಮುನ್ನ ವಿಜಯ್ ನಟನೆಯ 'ಜನ ನಾಯಗನ್' ಹಾಗೂ ಯಶ್ 'ಟಾಕ್ಸಿಕ್' ರಿಲೀಸ್‌ಗೆ ರೆಡಿಯಾಗಿತ್ತು. ನಾಲ್ಕನೇ ಹಾಡು ರಿಲೀಸ್ ವೇಳೆ 'ಜನ ನಾಯಗನ್', 'ಟಾಕ್ಸಿಕ್'ಗಾಗಿ 'ಕೆಡಿ'ಯನ್ನು ಮುಂದೂಡಿತೇ ಕೆವಿಎನ್ ಎಂಬ ಪ್ರಶ್ನೆ ಎದ್ದಿತ್ತು. ಅದಕ್ಕೆ ಜೋಗಿ ಪ್ರೇಮ್ ಹಾಗೂ ಕೆವಿಎನ್ ಬ್ಯುಸಿನೆಸ್ ಹೆಡ್ ಸುಪ್ರೀತ್ ಕೊಟ್ಟ ಪ್ರತಿಕ್ರಿಯೆ ಇದು.
ಸಾವಿರ ಕೋಟಿ ಹೂಡಿಕೆ?
ಜೋಗಿ ಪ್ರೇಮ್ ಮೂರು ಸಿನಿಮಾಗಳ ರಿಲೀಸ್ ಬಗ್ಗೆ ಮಾತಾಡಿದ್ದಾರೆ. ಅಲ್ಲದೇ ಮೂರು ಸಿನಿಮಾಗಳ ಬಜೆಟ್ ಸಾವಿರ ಕೋಟಿ ದಾಟಿದ್ದು, ರಿಲೀಸ್ ಟ್ರ್ಯಾಕ್‌ನಲ್ಲಿದೆ ಎಂದು ಹೇಳಿದ್ದಾರೆ. "ಕೆವಿಎಲ್ ಪ್ರೊಡಕ್ಷನ್ ಅಂದಕೂಡಲೇ ಅದು ಬಿಗ್ ಇನ್ವೆಸ್ಟ್‌ಮೆಂಟ್. ಎಷ್ಟು ಜನರು ಕೆಲಸ ಮಾಡಿದ್ದಾರೆ ಅಂತ ನಿಮಗೆ ಗೊತ್ತೇ ಇದೆ. ಎಷ್ಟು ಜನ ಕಲಾವಿದರು ಬದುಕುತ್ತಿದ್ದಾರೆ. ಟೆಕ್ನಿಷಿಯನ್ ಬದುಕುತ್ತಿದ್ದಾರೆ ಅಂತ. ಜನನಾಯಗನ್ ಆಗಲಿ, ಟಾಕ್ಸಿಕ್ ಆಗಲಿ ಹೆವೀ ಬಜೆಟ್ ಸಿನಿಮಾ. ಈಗ ಮೂರು ಸಿನಿಮಾಗಳನ್ನೂ ಒಂದೇ ಸಂಸ್ಥೆ ಮಾಡಬೇಕಾದರೆ, ಎಷ್ಟು ಸಾವಿರ ಕೋಟಿಗೂ ಅಧಿಕ ಅಂದ್ಕೊಳ್ಳಿ. ನಮ್ಮದು ಹಿಂದೆನೇ ಫಿಕ್ಸ್ ಆಗಿತ್ತು. ಡೇಟ್ ಸ್ವಲ್ಪ ಆಕಡೆ ಈಕಡೆ ಆಗಿದ್ದರಿಂದ ಕೆವಿಎನ್ ಲೇಟ್ ಅನ್ನೋ ಮಾತು ಕೇಳಿ ಬರುತ್ತಿದೆ. ಕೆವಿಎನ್ ಯಾವಾಗಲೂ ಆ ಟ್ರ್ಯಾಕ್‌ನಲ್ಲಿಯೇ ಹೋಗುತ್ತಿದ್ದಾರೆ. 30ನೇ ತಾರೀಕು ಖಂಡಿತ ರಿಲೀಸ್ ಆಗಿತೇ ಆಗುತ್ತೆ." ಅಂತ ಪ್ರೇಮ್ ಭರವಸೆ ಕೊಟ್ಟಿದ್ದಾರೆ.
ಕೆಡಿ ಡೇಟ್ ಕಳೆದ ವರ್ಷವೇ ಅನೌನ್ಸ್
ಇನ್ನು 'ಕೆಡಿ' ರಿಲೀಸ್ ಬಗ್ಗೆ ಕೆವಿಎನ್ ಪ್ರೊಡಕ್ಷನ್‌ನ ಬ್ಯುಸಿನೆಸ್ ಹೆಡ್ ಸುಪ್ರೀತ್ ಪ್ರತಿಕ್ರಿಯೆ ಹೀಗಿದೆ. "ಕೆಡಿ ಡೇಟ್ ಆಗಲಿ, ಜನ ನಾಯಗನ್, ಟಾಕ್ಸಿಕ್ ಡೇಟ್ ಆಗಲಿ ಕಳೆದ ವರ್ಷವೇ ಅನೌನ್ಸ್ ಮಾಡಿದ್ವಿ. ಈಗ ಹೊಸದಾಗಿ ಅನೌನ್ಸ್ ಮಾಡಿರೋದಲ್ಲ. ಕೆಡಿ ರಿಲೀಸ್ ಡೇಟ್ ಅನ್ನು ಜೋಡೆತ್ತು ಸಾಂಗ್ ಯಾವಾಗ ರಿಲೀಸ್ ಆಯ್ತೋ ಆಗ ಹಾಕಿದ್ವಿ. ಆ ಸಾಂಗ್ ಯಾವಾಗ ರಿಲೀಸ್ ಆಗಿದ್ದು ಅಂದರೆ, ಜನ ನಾಯಗನ್ ಇವೆಂಟ್ ಸಯದಲ್ಲಿ ಆಗಿತ್ತು. ಆಗ ಯಾರಿಗೂ ಸಿನಿಮಾ ಪುಶ್ ಆಗುತ್ತೆ ಅನ್ನೋದು ಗೊತ್ತಿರಲಿಲ್ಲ. ಇದೊಂದು ಆಕ್ಸಿಡೆಂಟ್ ಅಷ್ಟೇ." ಎಂದಿದ್ದಾರೆ.

ಮೊದಲೇ ಡೇಟ್ ಅನೌನ್ಸ್ ಆಗಿತ್ತು?
"ಇದು ಮುಂಚೆನೇ ಅನೌನ್ಸ್ ಮಾಡಿದ ಡೇಟ್. ಈಗ ಅನೌನ್ಸ್ ಮಾಡಿದ ಡೇಟ್ ಅಲ್ವಲ್ಲ. ಡಿಸೆಂಬರ್ 25ನೇ ತಾರೀಕಿನಂದೇ ಏಪ್ರಿಲ್ 30ಕ್ಕೆ ಸಿನಿಮಾ ಬರುತ್ತೆ ಅಂತ ಅನೌನ್ಸ್ ಮಾಡಿದ್ವಿ. ಅಂದು ಹೇಳಿದ್ದ ಸಮಯಕ್ಕೆ ಬರುತ್ತಿದ್ದೇವೆ" ಎಂದು ಸುಪ್ರಿತ್ ಕ್ಲಾರಿಟಿ ಕೊಟ್ಟಿದ್ದಾರೆ.
"ಕೆಡಿ ಅತೀ ದೊಡ್ಡ ಸಿನಿಮಾ ಆಗುತ್ತೆ"
'ಕೆಡಿ' ಬಗ್ಗೆ ಕೆವಿಎನ್ ಭವಿಷ್ಯ ನುಡಿದಿದ್ದು, ಅವರ ಪ್ರೊಡಕ್ಷನ್‌ನ ಬಿಗ್ ಸಿನಿಮಾ ಆಗುತ್ತೆ ಎಂದಿದ್ದಾರೆ ಎಂದು ಜೋಗಿ ಪ್ರೇಮ್ ಹೆಮ್ಮೆ ಪಟ್ಟಿದ್ದಾರೆ. "ಕೆವಿಎನ್ ಸರ್ ಯಾವಾಗಲೂ ಹೇಳುತ್ತಿದ್ದರು. ನನಗೆ ಕೆಡಿ ಬಗ್ಗೆ ಹೋಪ್ ಇದೆ. ಇದು ನಾನು ನಿರ್ಮಾಣ ಮಾಡಿದ ಅತೀ ದೊಡ್ಡ ಸಿನಿಮಾ ಆಗುತ್ತೆ. ಈ ಮಾತನ್ನು ಬಹಳಷ್ಟು ಸಾರಿ ಹೇಳಿದ್ದಾರೆ. ನಾನು ಆಗಲೇ ಹೇಳಿದ ಹಾಗೆ ಆನೆ ಕಷ್ಟ ಆನೆಗೆ, ಇರುವೆ ಕಷ್ಟ ಇರುವೆ ಅಂತ. ಏನೇ ಇದ್ದರೂ ಮೊದಲು ಶುರು ಮಾಡಿದ ಸಿನಿಮಾ. ಮೊದಲು ರಿಲೀಸ್ ಆಗುತ್ತಿರೋದಕ್ಕೆ ಖುಷಿಯಿದೆ." ಎಂದಿದ್ದಾರೆ.


Click it and Unblock the Notifications














