"ಇಲ್ಲಿ ಮಲಗಿದ್ರೆ ಅಣ್ಣ ಆರಡಿ ಕೆಳಗಿದ್ದಾನೆ ಅಂತ ಅನಿಸುತ್ತೆ"; ಚಿರು ಸಮಾಧಿ ಪಕ್ಕ ಧ್ರುವ ಸರ್ಜಾ ಮಲಗಲು ಇದೇ ಕಾರಣ!
ಅಣ್ಣ- ತಮ್ಮ ಅಂದರೆ ಹೀಗಿರಬೇಕು ಅಂತ ತೋರಿಸಿಕೊಟ್ಟ ಕನ್ನಡ ಚಿತ್ರರಂಗದ ತಾರೆಯರಿಗೇನು ಕಮ್ಮಿಯಿಲ್ಲ. ಇವರಲ್ಲಿ ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ಕೂಡ ಇದೇ ಸಾಲಿನಲ್ಲಿ ನಿಲ್ಲುತ್ತಾರೆ. ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದಂತಹ ಬಾಂಧವ್ಯ ಇವರದ್ದು. ಆದರೆ, ವಿಧಿ ಇವರನ್ನು ಒಟ್ಟಿಗೆ ಇರುವುದಕ್ಕೆ ಬಿಡಲಿಲ್ಲ.
ಅಣ್ಣ ಚಿರಂಜೀವಿ ಸರ್ಜಾ ದಿಢೀರನೇ ಅಗಲಿದ್ದು ಇಡೀ ಕುಟುಂಬಕ್ಕೆ ದೊಡ್ಡ ಶಾಕ್. ಆರೋಗ್ಯವಾಗಿದ್ದ ಮಗನನ್ನು ಕಳೆದುಕೊಂಡ ನೋವು ತಂದೆ- ತಾಯಿಯಲ್ಲಿತ್ತು. ಇತ್ತ ಅಣ್ಣನನ್ನು ಕಳೆದುಕೊಂಡು ಧ್ರುವ ಸರ್ಜಾ ಕೂಡ ಮಂಕಾಗಿದ್ದೂ ಇದೆ. ಆದರೆ, ಬದುಕಿನಲ್ಲಿ ಮತ್ತೆ ಎದ್ದೇಳಲೇಬೇಕು. ಧ್ರುವ ಸರ್ಜಾ ಮತ್ತೆ ಸಹಜ ಜೀವನಕ್ಕೆ ಮರಳಿದ್ದಾರೆ.

ಆದರೆ, ಎಷ್ಟೇ ನಾರ್ಮಲ್ ಲೈಫ್‌ಗೆ ಬಂದಿದ್ದರೂ, ಅಣ್ಣನ ನೆನಪಾದಾಗ ಸೀದಾ ಫಾರ್ಮ್ ಹೌಸ್‌ಗೆ ಬಂದು ಬಿಡುತ್ತಾರೆ. ಕನಕಪುರ ರಸ್ತೆಯಲ್ಲಿರುವ ನೆಲಗುಳಿ ಫಾರ್ಮ್ ಹೌಸ್‌ನಲ್ಲಿ ಚಿರಂಜೀವಿ ಸರ್ಜಾ ಸಮಾಧಿ ಇದೆ. ಅದರ ಮೇಲೆ ಮಲಗುತ್ತಾರೆ. ಕೆಲವು ತಿಂಗಳುಗಳ ಹಿಂದೆ ಧ್ರುವ ಸರ್ಜಾ ಸಮಾಧಿ ಮೇಲೆ ಮಲಗಿದ್ದ ವಿಡಿಯೋ ವೈರಲ್ ಆಗಿತ್ತು. ಯಾಕೆ ಚಿರು ಸಮಾಧಿ ಮೇಲೆ ಮಲಗುತ್ತಾರೆ? ಮನೆಯವರು ಏನಂತಾರೆ? ಅನ್ನೋದನ್ನು ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
"ಗೇಟ್ ಹಾಕಿಸಿರಲಿಲ್ಲ"
ಚಿರಂಜೀವಿ ಸರ್ಜಾ ಸಮಾಧಿಯನ್ನು ನಿರ್ಮಿಸಿದ ಸಂದರ್ಭದಲ್ಲಿ ಅದಕ್ಕೆ ಗೇಟ್ ಇರಲಿಲ್ಲ. ಹೀಗಾಗಿ ಅಭಿಮಾನಿಗಳು ಸಮಾಧಿ ಬಳಿ ಸಲೀಸಾಗಿ ಬಂದು ವಿಡಿಯೋ ಮಾಡಿದ್ದರು. ಈಗ ಅಲ್ಲಿ ಗೇಟ್ ಅನ್ನು ನಿರ್ಮಾಣ ಮಾಡಲಾಗಿದ್ದು, ಅಷ್ಟು ಸುಲಭಕ್ಕೆ ಯಾರೂ ಬರಲು ಸಾಧ್ಯವಿಲ್ಲ. "ಇಲ್ಲಿ ಆಗ ಗೇಟ್ ಹಾಕಿಸಿರಲಿಲ್ಲ. ಇವಾಗಲೇ ಗೇಟ್ ಹಾಕಿಸಿರುವುದು. ಮಲಗಿದ್ದಾಗ ಹಾಗೇ ವಿಡಿಯೋ ತೆಗೆದು ಹಾಗೇ ಹಾಕಿಬಿಟ್ಟಿದ್ದರು. ಅದು ವೈರಲ್ ಆಯ್ತು." ಎಂದು ಫಿಲ್ಮಿಬೀಟ್ ಕನ್ನಡದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
"ಅಣ್ಣ ಆರಡಿ ಕೆಳಗಿದ್ದಾನೆ ಅನಿಸುತ್ತೆ"
"ನಾನು ಏನು ನಂಬುತ್ತೇನೆ ಅಂದರೆ, ನೀವು ಮೊದಲನೇ ಮಹಡಿಯಲ್ಲಿ ಇದ್ದೀರಿ ಅಂದುಕೊಳ್ಳಿ. ತಂದೆ ತಾಯಿ ಫ್ರೆಂಡ್ಸ್ ಯಾರೇ ಬಂದರೂ ಗ್ರೌಂಡ್ ಫ್ಲೋರ್‌ನಲ್ಲಿ ಇರುತ್ತಾರೆ. ಅದಕ್ಕೆ ಒಂದು ಹದಿನೈದು ಅಡಿ ವ್ಯತ್ಯಾಸವಿರುತ್ತೆ. ನಾನು ನಮ್ಮ ಅಣ್ಣನ ಪಕ್ಕ ಮಲಗಿಕೊಂಡಾಗ ನನಗೆ ಏನು ಅನಿಸುತ್ತೆ ಅಂದರೆ, ಬರೀ ಆರು ಅಡಿ ಕೆಳಗೆ ಇದ್ದಾನೆ ಅಷ್ಟೇ ಅಂತ ಅನಿಸುತ್ತೆ. ಇಷ್ಟೇ ಅನಿಸೋದು ನನಗೆ." ಎನ್ನುತ್ತಾರೆ ಧ್ರುವ ಸರ್ಜಾ.

"ಹೆಂಡ್ತಿ ಮಗಳಿಗೂ ಗೊತ್ತು"
ಧ್ರುವ ಸರ್ಜಾ ಮನೆಯಲ್ಲಿ ಮಲಗಿಲ್ಲ ಅಂದರೆ, ಅಣ್ಣನ ಸಮಾಧಿ ಬಳಿಕ ಮಲಗಿದ್ದಾರೆ ಅನ್ನೋ ಇಡೀ ಕುಟುಂಬಕ್ಕೂ ಗೊತ್ತಿದೆ. ಹೆಂಡತಿ, ಮಗಳು, ಅಪ್ಪ, ಅಮ್ಮ ಎಲ್ಲರಿಗೂ ಅರ್ಥ ಮಾಡಿಕೊಂಡಿದ್ದಾರೆ ಎನ್ನುತ್ತಾರೆ ಧ್ರುವ ಸರ್ಜಾ "ನನ್ನ ಹೆಂಡ್ತಿಗೂ ಗೊತ್ತು. ಈವಾಗ ನಮ್ಮ ಮಗಳು ಕೂಡ ಹೇಳುತ್ತಾಳೆ. ಅಪ್ಪ ಮನೆಯಲ್ಲಿ ಇಲ್ಲ ಎಲ್ಲಿ ಅಂದರೆ, ಇಲ್ಲಿ ಇರುತ್ತೇನೆ ಅಂತ. ಅಪ್ಪ ಕಾಣಿಸುತ್ತಿಲ್ಲ ದೊಡ್ಡಪ್ಪನ ಹತ್ತಿರ ಹೋಗಿದ್ದಾರೆ ಅಂತ ಹೇಳುತ್ತಾರೆ. ನನ್ನ ಹೆಂಡತಿಗೂ ಅಷ್ಟೇ ಬೆಡ್ ಮೇಲೆ ಮಲಗಿಲ್ಲ ಅಂದರೆ ಇಲ್ಲಿ ಇರುತ್ತೇನೆ ಅಂತ. ಮನೆಯಲ್ಲಿ ಎಲ್ಲರಿಗೂ ಗೊತ್ತು. ನಾನು ಇಲ್ಲೇ ಮಲಗಿರುತ್ತೇನೆ" ಎನ್ನುತ್ತಾರೆ ಧ್ರುವ.
'ಮಾರ್ಟಿನ್' ರಿಲೀಸ್‌ಗೆ ರೆಡಿ
'ಪೊಗರು' ಸಿನಿಮಾ ಬಳಿಕ ಧ್ರುವ ಸರ್ಜಾ ನಟಿಸಿದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ರಿಲೀಸ್‌ಗೆ ರೆಡಿಯಾಗಿದೆ. ಅಕ್ಟೋಬರ್ 11ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದ್ದು, ವಿದೇಶಿ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ಸದ್ಯ 'ಮಾರ್ಟಿನ್' ಸಿನಿಮಾದ ಪ್ರಚಾರದಲ್ಲಿಯೇ ಧ್ರುವ ಸರ್ಜಾ ಬ್ಯುಸಿಯಾಗಿದ್ದಾರೆ.


Click it and Unblock the Notifications










