'ಮಾರ್ಟಿನ್' VFX ಮಾಡಿಸಲು ಕಮಿಷನ್ ಪಡೆದರೇ ಎಪಿ ಅರ್ಜುನ್? ಅರೆಸ್ಟ್ ಆಗೋದು ಪಕ್ಕಾನಾ?
ಸ್ಯಾಂಡಲ್‌ವುಡ್‌ನಲ್ಲಿ ಇನ್ನೇ ಮತ್ತೆ ಪರ್ವ ಕಾಲ ಶುರುವಾಗಬಹುದು ಅಂತ ಕನ್ನಡಿಗರು ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ಮೇಲೆ ಸಿನಿಮಾ ಮಂದಿನೂ ಕಣ್ಣೂ ಇಟ್ಟಿದ್ದರು. ಬಹಳ ದಿನಗಳ ಬಳಿಕ ಧ್ರುವ ಸರ್ಜಾ ಹಾಗೂ ನಿರ್ದೇಶಕ ಎಪಿ ಅರ್ಜುನ್ ಕಾಂಬಿನೇಷನ್ ಏನಾದರೂ ಜಾದು ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದ್ರೀಗ ಅದೇ ಸಿನಿಮಾ ವಿವಾದಕ್ಕೆ ಸಿಲುಕಿದೆ.
ನಿರ್ಮಾಪಕ ಉದಯ್ ಮೆಹ್ತಾ 'ಮಾರ್ಟಿನ್' ಸಿನಿಮಾವನ್ನು ಕಳೆದ ವರ್ಷವೇ ಬಿಡುಗಡೆ ಮಾಡುವುದಕ್ಕೆ ಪ್ರಯತ್ನ ಮಾಡಿದ್ದರು. ಆದರೆ, ಪೋಸ್ಟ್ ಪ್ರೊಡಕ್ಷನ್ ಕೆಲಸ ಇನ್ನೂ ಮುಗಿಯದೇ ಇದ್ದಿದ್ದರಿಂದ ಸಿನಿಮಾವನ್ನು ಮುಂದೂಡಲಾಗಿತ್ತು. ಕೊನೆಗೂ 'ಮಾರ್ಟಿನ್' ಸಿನಿಮಾ ಅಕ್ಟೋಬರ್ 11ರಂದು ಬಿಡುಗಡೆ ಮಾಡುವುದಕ್ಕೆ ನಿರ್ಧರಿಸಲಾಗಿದೆ. ಇದೇ ವೇಳೆ 'ಮಾರ್ಟಿನ್' ಸಿನಿಮಾದ ನಿರ್ಮಾಪಕ ಉದಯ್ ಮೆಹ್ತಾ ಕಾನೂನು ಸಮರ ಸಾರಿದ್ದಾರೆ.

ಕೆಲವು ದಿನಗಳ ಹಿಂದೆ ನಿರ್ಮಾಪಕ ಉದಯ್ ಮೆಹ್ತಾ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ಸತೀಶ್ ರೆಡ್ಡಿ ಹಾಗೂ ಸುನೀಲ್ ರೆಡ್ಡಿ ಎಂಬುವವರ ವಿರುದ್ಧ ದೂರು ನೀಡಿದ್ದರು. ಇವರಿಬ್ಬರು 'ಮಾರ್ಟಿನ್' ಸಿನಿಮಾದ ವಿಎಫ್‌ಎಕ್ಸ್ ಕೆಲಸದಲ್ಲಿ ಮಾಡುತ್ತಿದ್ದರು. ಸಿನಿಮಾ ಕೆಲವು ದೃಶ್ಯಗಳಿಗೆ ವಿಎಫ್‌ಎಕ್ಸ್ ಮಾಡುವುದಕ್ಕೆಂದು ಸುಮಾರು 3 ಕೋಟಿ ರೂಪಾಯಿ ಪಡೆದಿದ್ದರು. ಆದರೆ, ಅಂದುಕೊಂಡ ಸಮಯದಲ್ಲಿ ಕೆಲಸ ಮುಗಿಸಿರಲಿಲ್ಲ. ಹಲವು ಬಾರಿ ಫಾಲೋ ಅಪ್ ಮಾಡಿದರೂ, ಕೆಲಸ ಮುಗಿಸಿರಲಿಲ್ಲ. ಹೀಗಾಗಿ ದೂರನ್ನು ದಾಖಲಿಸಲಾಗಿತ್ತು.
ಬೆಂಗಳೂರಿನ ಬಸವೇಶ್ವರನಗರ ಠಾಣೆಯ ಪೊಲೀಸರು ಇವರಿಬ್ಬರನ್ನು ಅರೆಸ್ಟ್ ಮಾಡಿ ವಿಚಾರಣೆ ಮಾಡಿದ್ದಾರೆ. ಈ ವಿಚಾರಣೆ ವೇಳೆ 'ಮಾರ್ಟಿನ್' ಸಿನಿಮಾದ ನಿರ್ದೇಶಕ ಎಪಿ ಅರ್ಜುನ್ ಹೆಸರು ಕೂಡ ಕೇಳಿ ಬಂದಿದೆ. ಮಾಧ್ಯಮಗಳಲ್ಲಿ ಈಗಾಗಲೇ ವರದಿ ಆಗಿರುವ ಪ್ರಕಾರ, ಅರೆಸ್ಟ್ ಆಗಿರುವ ಸತೀಶ್ ರೆಡ್ಡಿ ಹಾಗೂ ಸುನೀಲ್ ರೆಡ್ಡಿ ಇಬ್ಬರೂ ನಿರ್ದೇಶಕ ಎಪಿ ಅರ್ಜುನ್ ವಿರುದ್ಧ ಕಮಿಷನ್ ಪಡೆದುಕೊಂಡಿರುವ ಆರೋಪ ಮಾಡಿದ್ದಾರೆ ಎನ್ನಲಾಗಿದೆ.
ಮಾಧ್ಯಮಗಳ ವರದಿ ಪ್ರಕಾರ, ಬಂಧಿತರು 'ಮಾರ್ಟಿನ್' ಸಿನಿಮಾದ ನಿರ್ದೇಶಕ ಎಪಿ ಅರ್ಜುನ್ ವಿರುದ್ಧವೇ ಆರೋಪ ಮಾಡಿದ್ದಾರೆ. 'ಮಾರ್ಟಿನ್' ಸಿನಿಮಾ ಕೊಡಿಸಿದ್ದಕ್ಕೆ ಇವರಿಂದ 50 ಲಕ್ಷ ರೂಪಾಯಿ ಹಣವನ್ನು ಕಮಿಷನ್ ರೂಪದಲ್ಲಿ ಪಡೆದಿದ್ದಾರೆ ಎಂದು ಆರೋಪ ಮಾಡಿದ್ದಾರೆಂದು ವರದಿ ಮಾಡಿದ್ದಾರೆ. ನಿರ್ಮಾಪಕರು ಕೂಡ ಕೊಟ್ಟ ದೂರಿನಲ್ಲಿ ಮೂವರು ಎಂದು ಹೇಳಿದ್ದಾರೆ ಎನ್ನಲಾಗಿದೆ. ಆದರೆ, ಮೂರನೇ ಹೆಸರನ್ನು ಮಾತ್ರ ನಮೂದಿಸಿರಲಿಲ್ಲ. ಈಗ ಎಪಿ ಅರ್ಜುನ್ ಅವರದ್ದೇ ಮೂರನೇ ಹೆಸರು ಎಂದು ಅಂದಾಜಿಸಲಾಗಿದೆ.
ಇದೇ ವೇಳೆ ಬಂಧಿತರು ಎಪಿ ಅರ್ಜುನ್ ಹೆಸರನ್ನು ಹೇಳಿದ್ದರಿಂದ ಪೊಲೀಸರನ್ನು ಅವರನ್ನೂ ಬಂಧಿಸಬಹುದು ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಆದರೆ, ಈ ಬಗ್ಗೆ ಮಾರ್ಟಿನ್ ಸಿನಿಮಾದ ನಿರ್ಮಾಪಕರು ಪ್ರತಿಕ್ರಿಯೆ ನೀಡಿಲ್ಲ. ಸಿನಿಮಾ ಮೊದಲೇ ರಿಲೀಸ್ ತಡವಾಗಿದ್ದರಿಂದ ವಿವಾದಗಳಲ್ಲಿ ಸಿಕ್ಕಿಕೊಳ್ಳುವುದು ಬೇಡ ಎಂದು ನಿರ್ಮಾಪಕರು ನಿರ್ಧರಿಸಿರಬಹುದು ಎಂದು ಅಂದಾಜಿಸಲಾಗುತ್ತಿದೆ.
ಇನ್ನು ಎಪಿ ಅರ್ಜುನ್ ಕೂಡ ಈ ವಿವಾದದ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಧ್ರುವ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಮಾರ್ಟಿನ್' ಸಿನಿಮಾ ಅಕ್ಟೋಬರ್ 11ರಂದು ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿದೆ. ಅಷ್ಟರೊಳಗೆ ಸಿನಿಮಾ ನಿರ್ದೇಶಕ ಎಪಿ ಅರ್ಜುನ್ ಹೆಸರು ಕಮಿಷನ್ ವಿಚಾರದಲ್ಲಿ ತಳುಕು ಹಾಕಿಕೊಂಡಿದೆ. ಸದ್ಯ ಈ ವಿವಾದ ಇನ್ಯಾವ ಮಟ್ಟಕ್ಕೆ ಹೋಗಿ ನಿಲ್ಲುತ್ತೋ ಗೊತ್ತಿಲ್ಲ.


Click it and Unblock the Notifications











