'ದಿಯಾ' ನೆನಪಿಸಿದ ಪೃಥ್ವಿ ಅಂಬಾರ್ 'ಜೂನಿ'; ಕ್ಯಾರೆಕ್ಟರ್ ಟೀಸರ್‌ನಲ್ಲಿ ಅಂತಹದ್ದೇನಿದೆ?
ಸ್ಯಾಂಡಲ್‌ವುಡ್ ಹೊಸ ಪ್ರತಿಭೆಗಳು ಪ್ರತಿವರ್ಷ ಎಂಟ್ರಿ ಕೊಡುತ್ತಲೇ ಇರುತ್ತಾರೆ. ಅವರಲ್ಲಿ ಕೆಲವರು ಮೊದಲ ಪ್ರಯತ್ನದಲ್ಲೇ ಹೊಸ ಇಮೇಜ್ ಅನ್ನು ಸೃಷ್ಟಿಸಿಬಿಡುತ್ತಾರೆ. ಹೀಗೆ ಕನ್ನಡ ಚಿತ್ರರಂಗಕ್ಕೆ ಪರಿಚಯ ಆದವರೇ ನಟ ಪೃಥ್ವಿ ಅಂಬಾರ್. 'ದಿಯಾ' ಅನ್ನೋ ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದ ಈ ನಟ ಈಗ ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿ.
ಪೃಥ್ವಿ ಅಂಬಾರ್ ಒಂದರ ಹಿಂದೊಂದು ವಿಶಿಷ್ಠ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಯುವ ಪ್ರತಿಭೆಯನ್ನು ಸಿನಿಪ್ರಿಯರು ಕೂಡ ಇಷ್ಟ ಪಡುತ್ತಿದ್ದಾರೆ. ಈಗ ಇವರ ಹೊಸ ಸಿನಿಮಾವೊಂದು ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಆ ಸಿನಿಮಾವೇ 'ಜೂನಿ'. ಟೈಟಲ್‌ನಿಂದಲೇ ಗಮನ ಸೆಳೆಯುತ್ತಿರುವ ಈ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಪೃಥ್ವಿ ಅಂಬಾರ್ ಅಭಿನಯದ 'ಜೂನಿ' ಅಪ್ಪಟ ಪ್ರೇಮಕಥೆಯುಳ್ಳ ಸಿನಿಮಾ. ಇತ್ತೀಚೆಗೆ ಈ ಸಿನಿಮಾದ ಕ್ಯಾರೆಕ್ಟರ್ ಟೀಸರ್ ಅನ್ನು ರಿಲೀಸ್ ಮಾಡಲಾಗಿದೆ. ಇದನ್ನು ನೋಡಿದರೆ, 'ದಿಯಾ' ಸಿನಿಮಾದ ಫ್ಲೇವರ್ ಎದ್ದು ಕಾಣುತ್ತಿದೆ ಅನ್ನೋ ಮಾತು ವ್ಯಕ್ತವಾಗುತ್ತಿವೆ. ಅಂದ್ಹಾಗೆ ಈ ಸಿನಿಮಾ ಪೃಥ್ವಿ ಅಂಬಾರ್ ಚೇಫ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಕ್ಯಾರೆಕ್ಟರ್ ಟೀಸರ್ ನೋಡಿ ಅವರ ಅಭಿಮಾನಿಗಳು ಸಖತ್ ಇಂಪ್ರೆಸಿವ್ ಆಗಿದೆ ಎನ್ನುತ್ತಿದ್ದಾರೆ.
'ಜೂನಿ' ಇದೊಂದು ಪಕ್ಕಾ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾ. ದಿಯಾ ಬಳಿಕ ಪೃಥ್ವಿ ಅಂಬಾರ್ ಬೇರೆ ಶೈಲಿಯ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡಿದ್ದರು. ವಿಶಿಷ್ಠ ಎನಿಸುವ ಕಂಟೆಂಟ್ ಅನ್ನೇ ಒಪ್ಪಿ ಸಿನಿಮಾ ಮಾಡಿದ್ದರು. ಈಗ ಮತ್ತೆ ದಿಯಾ ಬಳಿಕ ಲವ್ ಸ್ಟೋರಿ ಕಡೆಗೆ ವಾಲಿದ್ದಾರೆ. ಹೀಗಾಗಿ 'ಜೂನಿ' ಮೇಲೆ ಚಿತ್ರರಂಗ ಒಂದು ಕಣ್ಣು ಇಟ್ಟಿರೋದಂತೂ ಸತ್ಯ.
ಪೃಥ್ವಿ ಅಂಬಾರ್ ನಟಿಸುತ್ತಿರುವ 'ಜೂನಿ' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರೋದು ವೈಭವ್ ಮಹಾದೇವ್. ಇವರು ಈಗಾಗಲೇ 'ಜನ್ನಿ' ಅನ್ನೋ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದರು. ಈಗ 'ಜೂನಿ' ಸಿನಿಮಾ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆಯನ್ನು ಇಡುತ್ತಿದ್ದಾರೆ. ಪ್ರಾಗ್ ಫಿಲ್ಮ್ ಸ್ಕೂಲ್‌ನಲ್ಲಿ ನಿರ್ದೇಶನ ಬಗ್ಗೆ ತರಬೇತಿಯನ್ನು ಪಡೆದಿದ್ದಾರೆ. ಈಗ 'ಜೂನಿ' ಸಿನಿಮಾಗೆ ಕಥೆ- ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಇಂತಹ ವಿಭಿನ್ನ ಟೈಟಲ್ ಇಟ್ಟು ಮಾಡುತ್ತಿರುವ ಸಿನಿಮಾಗೆ ರಿಷಿಕಾ ನಾಯಕ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಂದ್ಹಾಗೆ 'ಜೂನಿ'ಯ ಒಂದೆಳೆ ಕಥೆ ಏನಪ್ಪ ಅಂದ್ರೆ, " ಪ್ರೀತಿ ಯಾರ ಮೇಲೆ ಹುಟ್ಟುತ್ತೋ.. ಅವರ ಮೇಲೆ ಪ್ರೀತಿ ಆಗುತ್ತಾ?" ಇಂತಹದ್ದೊಂದು ಪ್ರಶ್ನೆಯನ್ನು ಇಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ. ತ್ರಿಶೂಲ ಕ್ರಿಯೇಷನ್ ಬ್ಯಾನರ್‌ನಿಂದ ಮೋಹನ್ ಕುಮಾರ್ ಎಂಬುವವರು ಹಣ ಹಾಕಿದ್ದಾರೆ. ಶ್ರೇಯಸ್ ವೈ ಎಸ್ ಎಂಬುವವರು ಸಹ ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
'ಜೂನಿ' ಸಿನಿಮಾವನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಈ ಸಿನಿಮಾವನ್ನು ಚಿತ್ರತಂಡ ಫೆಬ್ರವರಿ 9ಕ್ಕೆ ಬಿಡುಗಡೆ ಮಾಡುವುಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದೆ. 'ಲವ್ ಮಾಕ್ಟೇಲ್ 2'ಗೆ ಆಕ್ಷನ್ ಕಟ್ ಹೇಳುತ್ತಿರುವ ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಶಾಂಕ್ ನಾರಾಯಣ ಎಡಿಟಿಂಗ್ ಮಾಡಿದ್ರೆ, ಅಜಿನ್ ಬಿ, ಜಿತಿನ್ ದಾಸ್ ಕ್ಯಾಮರಾ ವರ್ಕ್ ಇದೆ. ಹಾಗೇ ನವೀನ್ ಈ ಸಿನಿಮಾಗೆ ಆರ್ಟ್ ಡೈರೆಕ್ಷನ್ ಮಾಡಿದ್ದಾರೆ.


Click it and Unblock the Notifications











