ಸಸ್ಪೆನ್ಸ್, ಥ್ರಿಲ್ಲರ್‌ನಲ್ಲಿ 'ದಿಯಾ' ನಾಯಕಿ ಖುಷಿ: ಯಾವುದು ಈ ಹೊಸ ಸಿನಿಮಾ?
'ದಿಯಾ' ಚಿತ್ರದ ಮೂಲಕ ಕನ್ನಡ ಸಿನಿಮಾ ಪ್ರಿಯರ ಗಮನ ಸೆಳೆದವರು ನಟಿ ಖುಷಿ ರವಿ. 'ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ' ಎಂಬ ಸಿನಿಮಾದಲ್ಲಿ ನಟಿಸಿದ್ದ ಖುಷಿ ಅವರಿಗೆ ಜನಪ್ರಿಯತೆ, ಹೆಸರು ತಂದುಕೊಟ್ಟಿದ್ದು 'ದಿಯಾ'. ಸಿನಿಮಾ ಹೆಸರೇ ನಾಯಕಿಯ ಪಾತ್ರಕ್ಕೆ ಸಿಗುವುದು ಸಿನಿಮಾಗಳಲ್ಲಿ ಬಹಳ ಅಪರೂಪ. ನಾಯಕಿ ಕೇಂದ್ರಿತ ಸಿನಿಮಾಗಳು ಕೂಡ ವಿರಳ.
ಅದರಲ್ಲಿಯೂ ಹೊಸ ಮುಖಗಳಿಗೆ ಈ ರೀತಿ ಪ್ರಮುಖ ಪಾತ್ರಗಳು ಸಿಗುವ ಉದಾಹರಣೆಗಳು ಅಲ್ಲೊಂದು ಇಲ್ಲೊಂದು ಸಿಗಬಹುದು. ಈ ಎಲ್ಲ ಅದೃಷ್ಟಗಳನ್ನು ಪಡೆದ ನಟಿ 'ದಿಯಾ' ಖ್ಯಾತಿಯ ಖುಷಿ. ತ್ರಿಕೋನ ಪ್ರೇಮಕಥೆಯ 'ದಿಯಾ' ಹೆಚ್ಚು ಭಾವನೆಗಳ ಮೇಲೆಯೇ ಸೃಷ್ಟಿಯಾಗಿರುವ ಸಿನಿಮಾ. ನಾಯಕಿಯಲ್ಲೊಂದು ನಿರ್ಲಿಪ್ತ ಭಾವನೆಯ ವ್ಯಕ್ತಿತ್ವವನ್ನು ಕಟ್ಟಿಕೊಡುವ ನಿರ್ದೇಶಕ ಕೆಎಸ್ ಅಶೋಕ್ ಅವರ ಉದ್ದೇಶಕ್ಕೆ ಖುಷಿ ರವಿ ನ್ಯಾಯ ಒದಗಿಸಿದ್ದರು. ಆ ಕಾರಣದಿಂದಲೇ ಅವರೀಗ ಮನೆ ಮಾತಾಗಿದ್ದಾರೆ. ಪಡ್ಡೆ ಹುಡುಗರ ಕನಸಿನ ಹುಡುಗಿ ಕೂಡ ಆಗಿದ್ದಾರೆ.

ಅನೇಕ ಅವಕಾಶಗಳು
'ದಿಯಾ' ತಡವಾಗಿ ಜನಮನ್ನಣೆ ಗಳಿಸಿದರೂ ಖುಷಿ ಅವರಿಗೆ ಅವಕಾಶಗಳು ಒಂದರ ಹಿಂದೊಂದರಂತೆ ಹರಿದುಬರುತ್ತಿವೆ. ಆದರೆ ಅವರು ಎಲ್ಲ ಸಿನಿಮಾಗಳನ್ನೂ ಒಪ್ಪಿಕೊಳ್ಳುತ್ತಿಲ್ಲ. ಅಳೆದೂ ತೂಗಿ ಒಂದು ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದಾರಂತೆ.

'ನಕ್ಷೆ' ಸಿನಿಮಾದಲ್ಲಿ ಖುಷಿ
ಅರ್ಚನಾ ಜೋಯಿಸ್, ಪ್ರಮೋದ್ ಶೆಟ್ಟಿ, ಸುಮನ್ ನಗರ್‌ಕರ್ ಮುಂತಾದವರು ನಟಿಸಿರುವ 'ನಕ್ಷೆ' ಎಂಬ ಚಿತ್ರದ ಕುರಿತು ಕೆಲವು ಸಮಯದ ಹಿಂದೆಯೇ ಸುದ್ದಿಯಾಗಿತ್ತು. ಖುಷಿ ರವಿ ಕೂಡ ಅದರ ಭಾಗವಾಗುತ್ತಿದ್ದಾರೆ ಎಂಬ ಮಾಹಿತಿ ಈಗ ಬಂದಿದೆ.

ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ
ಮಧು ಎಂಬುವವರು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ 'ನಕ್ಷೆ' ಸಿನಿಮಾ ಸಸ್ಪೆನ್ಸ್, ಥ್ರಿಲ್ಲರ್ ಕಥೆ ಹೊಂದಿದೆ. ಪೂರ್ಣಚಂದ್ರ ತೇಜಸ್ವಿ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಉಳಿದಂತೆ ಈ ಸಿನಿಮಾ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ.

ಯುಗಾದಿ ದಿನ ಶುಭ ಸುದ್ದಿ
ಇದೇ ಮೊದಲ ಬಾರಿಗೆ ಇನ್‌ಸ್ಟಾಗ್ರಾಂನಲ್ಲಿ ಲೈವ್ ಬರುವುದಾಗಿ ತಿಳಿಸಿರುವ ಖುಷಿ ರವಿ, ಯುಗಾದಿ ದಿನದಂದು ಅಂದರೆ ಮಾರ್ಚ್ 24ರಂದು ಸಿಹಿ ಸುದ್ದಿ ನೀಡಲಿದ್ದೇನೆ ಎಂದು ಹೇಳಿದ್ದಾರೆ. ಅವರು ತಮ್ಮ ಹೊಸ ಸಿನಿಮಾ 'ನಕ್ಷೆ' ಕುರಿತು ಮಾಹಿತಿ ನೀಡಬಹುದು ಎಂದು ಊಹಿಸಲಾಗಿದೆ.

'ನಕ್ಷೆ' ಕೂಡ ಅದ್ಭುತವಾಗಿದೆ
'ದಿಯಾ' ಚಿತ್ರಕ್ಕೆ ಅಷ್ಟೊಂದು ಮೆಚ್ಚುಗೆ ವ್ಯಕ್ತವಾಗಿರುವುದು ಅದರ ಮೇಕಿಂಗ್ ಕಾರಣಕ್ಕೆ. ತಾವು ಭಾಗವಹಿಸಬೇಕು ಎಂದು ಬಯಸುವಂತಹ ಸಿನಿಮಾ ಅದಾಗಿತ್ತು. 'ನಕ್ಷೆ' ಮಹಿಳಾ ಪ್ರಧಾನ ಸಿನಿಮಾ. ನಿರ್ದೇಶಕರ ನಿರೂಪಣೆ ಅದ್ಭುತವಾಗಿದೆ. ಎಲ್ಲವೂ ಸಹಜ ಸ್ಥಿತಿಗೆ ಬಂದ ಬಳಿಕ ಅದರ ಮುಹೂರ್ತಕ್ಕೆ ಸಮಯ ನಿಗದಿಪಡಿಸಲಾಗುವುದು ಎಂದು ಖುಷಿ ತಿಳಿಸಿದ್ದಾರೆ.


Click it and Unblock the Notifications











