ಪತ್ರಕರ್ತೆಯಾಗುತ್ತಿದ್ದಾರೆ 'ದಿಯಾ' ನಾಯಕಿ ಖುಷಿ ರವಿ
'ದಿಯಾ' ಸಿನಿಮಾದ ಬಳಿಕ ನಟಿ ಖುಷಿ ರವಿ ಅವರ ವರ್ಚಸ್ಸು ಏಕಾಏಕಿ ಏರಿದೆ. ಸಾಮಾಜಿಕ ಜಾಲತಾಣದಲ್ಲಿ ಅವರ ಫಾಲೋವರ್‌ಗಳ ಸಂಖ್ಯೆ ಭರ್ಜರಿ ಹೆಚ್ಚಳ ಕಂಡಿದೆ. ಅಷ್ಟೇ ಅವರ ಫ್ಯಾನ್ ಪೇಜ್‌ಗಳೂ ಸೃಷ್ಟಿಯಾಗಿವೆ. ಇದೇ ಖುಷಿಯಲ್ಲಿ ಅವರು ಮೊದಲ ಬಾರಿಗೆ ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದರು.
'ದಿಯಾ' ಬಳಿಕ ಮುಂದಿನ ಸಿನಿಮಾ ಯಾವುದು, ಅದರಲ್ಲಿ ತಮ್ಮ ಪಾತ್ರ ಹೇಗಿರಲಿದೆ ಎಂಬ ಬಗ್ಗೆ ಖುಷಿ ರವಿ ಮಾಹಿತಿ ನೀಡಿದ್ದಾರೆ. 'ದಿಯಾ' ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆಯ ಮಾತನ್ನಾಡಿದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಹಾಗೆಯೇ ಕೊರೊನಾ ವೈರಸ್ ವಿಚಾರದಲ್ಲಿ ಜನರು ಎಚ್ಚರಿಕೆಯಿಂದ ಇರಬೇಕು. ಆದಷ್ಟು ಮನೆಯಲ್ಲಿಯೇ ಇರಿ. ಅನಿವಾರ್ಯವಾದಾಗ ಮಾತ್ರ ಮನೆಯಿಂದ ಹೊರಹೋಗಿ. ಹೋಗುವಾಗ ಮಾಸ್ಕ್, ಸ್ಯಾನಿಟೈಸರ್ ಬಳಸಿ. ಮನೆ ಹಾಗೂ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಯುಗಾದಿ ದಿನ ಸಿಹಿ ಸುದ್ದಿ ನೀಡುವುದಾಗಿ ತಿಳಿಸಿದ್ದ ಅವರು ಲೈವ್‌ನಲ್ಲಿ ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಹೊಸಬರ ಸಿನಿಮಾ ಬೆಂಬಲಿಸಿ
ದಿಯಾ ಚಿತ್ರಕ್ಕೆ ಒಳ್ಳೆ ಸಪೋರ್ಟ್ ಕೊಟ್ಟದ್ದೀರಿ. ಎಲ್ಲರಿಗೂ ಸಿನಿಮಾ ಇಷ್ಟವಾಗಿದೆ ಎಂದು ಭಾವಿಸುತ್ತೇನೆ. ಈ ಬಗ್ಗೆ ಮಾತೇ ಹೊರಡುತ್ತಿಲ್ಲ. ನಿಜಕ್ಕೂ ಪುಳಕಿತಳಾಗಿದ್ದೇನೆ. ದಿಯಾಗೆ ಹೇಗೆ ಸಪೋರ್ಟ್ ಮಾಡಿದ್ದೀರಿ ಅದೇ ರೀತಿ ಎಲ್ಲ ಹೊಸಬರ ಸಿನಿಮಾಗಳಿಗೂ, ವಿಭಿನ್ನ ಕಾನ್ಸೆಪ್ಟ್ ಇಟ್ಟು ಸಿನಿಮಾ ಮಾಡೋರಿಗೆ ಬೆಂಬಲ ಕೊಡಿ ಎಂದು ಕೋರಿದ್ದಾರೆ.

ದಿಯಾ ಬಳಿಕ ಹೊಸ ಸಿನಿಮಾ
ಸಿಹಿ ಸುದ್ದಿ ಕೊಡುತ್ತೇನೆ ಎಂದಿದ್ದೆ. 'ದಿಯಾ' ಆದ ಮೇಲೆ ಏನು ಎಂದು ಎಲ್ಲರೂ ಕೇಳುತ್ತಿದ್ದೀರಿ. 'ನಕ್ಷೆ' ಎಂಬ ಸಿನಿಮಾ ಮಾಡುತ್ತಿದ್ದೇನೆ. ಮಧು ಎನ್ನುವವರು ಡೈರೆಕ್ಟ್ ಮಾಡುತ್ತಿದ್ದಾರೆ. ಶಿವಪ್ರಕಾಶ್ ನಿರ್ಮಾಣ ಮಾಡುತ್ತಿದ್ದಾರೆ. ಒಳ್ಳೆಯ ಕಥೆಯನ್ನು ಹೊಂದಿದೆ. ದಿಯಾ ಟ್ರೇಲರ್ ಬಿಡುಗಡೆಯಾದಾಗ ಅದನ್ನು ನೋಡಿ ಅವರು ನನಗೆ ಅಪ್ರೋಚ್ ಮಾಡಿದ್ದರು ಎಂದು ಖುಷಿ ತಿಳಿಸಿದ್ದಾರೆ.

ಪತ್ರಕರ್ತೆಯ ಪಾತ್ರ
'ನಕ್ಷೆ' ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಅದರ ಕಥೆ ನರೇಟ್ ಮಾಡಿದಾಗ ಬಹಳ ಎಕ್ಸೈಟ್ ಆಗಿದ್ದೇನೆ. 'ನಕ್ಷೆ'ಯಲ್ಲಿ ನನ್ನದು ಪತ್ರಕರ್ತೆಯ ಪಾತ್ರ. ಕ್ರೇಜಿ ಲವ್ ಸ್ಟೋರಿ ಇದೆ. ನಿಮಗೆ ಇಷ್ಟ ಆಗಲಿದೆ. ನನಗಂತೂ ಸ್ಕ್ರಿಪ್ಟ್ ಬಹಳ ಇಷ್ಟವಾಗಿದೆ. ಹೇಗೆ ಮೂಡಿಬರುತ್ತದೆ ನೋಡೋಣ.

ಚಿತ್ರಮಂದಿರಕ್ಕೆ ಬಂದು ನೋಡಿ
ಬಹಳ ಪ್ರತಿಭಾವಂತರ ತಂಡ ಇದು. ಇದರಲ್ಲಿನ ಕ್ರೇಜಿ ಲವ್ ಸ್ಟೋರಿ ನಿಮಗೆ ಇಷ್ಟವಾಗಲಿದೆ. ಒಳ್ಳೆಯ ಪ್ರಯತ್ನ ನಮ್ಮ ಕಡೆಯಿಂದ ಸಿಗಲಿದೆ ಎಂಬ ಭರವಸೆ ನೀಡುತ್ತೇನೆ. 'ದಿಯಾ' ಚಿತ್ರವನ್ನು ಥಿಯೇಟರ್‌ಗೆ ಹೋಗಿ ನೋಡಲು ಆಗದಿದ್ದರಿಂದ ಗಿಲ್ಟ್ ಕಾಡುತ್ತಿದೆ ಎಂದು ಅನೇಕರು ಹೇಳಿದ್ದರು. ಈ ಸಿನಿಮಾವನ್ನು ಚಿತ್ರಮಂದಿರಕ್ಕೆ ಹೋಗಿ ನೋಡಿ. ನಿಮ್ಮ ನಿರೀಕ್ಷೆ ಹುಸಿಯಾಗುವುದಿಲ್ಲ ಎಂದು ಮಾತು ಕೊಟ್ಟಿದ್ದಾರೆ.

ಹೊಸಬರ ಪ್ರಯತ್ನ ಥಿಯೇಟರ್‌ನಲ್ಲಿ ನೋಡಿ
'ದಿಯಾ' ಸಿನಿಮಾ ಚಿತ್ರಮಂದಿರದಿಂದ ನಿರ್ಗಮಿಸಿದ ಬಳಿಕವೇ ಹೆಚ್ಚು ಪ್ರಚಾರ ಪಡೆದುಕೊಂಡಿತು. ನೀವು ಚಿತ್ರಮಂದಿರಕ್ಕೆ ಹೋಗಿ ನಮ್ಮನ್ನು ಎನ್‌ಕರೇಜ್ ಮಾಡಬಹುದು. ಯಾವುದೇ ಹೊಸಬರಾಗಲೀ ಅಥವಾ ಯುನೀಕ್ ಕಾನ್ಸೆಪ್ಟ್ ತೆಗೆದುಕೊಂಡು ಬಂದಾಗ ಅದನ್ನು ಚಿತ್ರಮಂದಿರದಲ್ಲಿ ನೋಡಿದಾಗ ಅವರಿಗೆ ಖುಷಿ ಆಗುತ್ತದೆ, ಧೈರ್ಯದಿಂದ ಪ್ರಯೋಗ ಮಾಡುತ್ತಾರೆ.

ದಿಯಾ ಪಾರ್ಟ್ 2 ಇಲ್ಲ
ನಮ್ಮ ಬಗ್ಗೆ ಪಾಸಿಟಿವ್ ಟ್ರಾಲ್‌ಗಳು ಬರುತ್ತಿವೆ. ಇವು ನಮಗೆ ಸಾಕಷ್ಟು ಎನರ್ಜಿ ನೀಡಿದೆ. ದಿಯಾ ಮೂಲಕ ಜವಾಬ್ದಾರಿ ಹೆಚ್ಚಾಗಿದೆ. ದಿಯಾ ಸಕ್ಸಸ್‌ನಲ್ಲಿ ತೇಲುತ್ತಿದ್ದೇವೆ. ಹಾಗೆಂದು 'ದಿಯಾ' ಪಾರ್ಟ್ 2 ಮಾಡುವ ಯಾವುದೇ ಯೋಜನೆ ಇಲ್ಲ ಎಂದು ಅಭಿಮಾನಿಯೊಬ್ಬರ ಪ್ರಶ್ನೆಗೆ ಸ್ಪಷ್ಟನೆ ನೀಡಿದರು.

ಹೌದು ಮದುವೆಯಾಗಿದೆ !
'ದಿಯಾ' ಚಿತ್ರದಲ್ಲಿನ ನಟಿಯನ್ನು ಕಂಡು ಎಷ್ಟೋ ಮಂದಿ 'ಸಿಂಗಲ್'ಗಳು, ಛೇ ನನಗೆ ಇಂತಹ ಹುಡುಗಿ ಸಿಗಬಾರದಿತ್ತೇ ಎಂದು ಪೇಚಾಡಿಕೊಂಡಿದ್ದರು. ದಿಯಾಳಂತಹ ಹುಡುಗಿ ಬಗ್ಗೆ ಕನಸು ಕಂಡಿದ್ದರು. ಖುಷಿ ರವಿ ಅವರ ಸಾಮಾಜಿಕ ಜಾಲತಾಣ ಖಾತೆಗಳನ್ನು ಹುಡುಕಿ ಫೋಟೊಗಳನ್ನು ಕೆದಕಿದ್ದರು. ಆದರೆ ಪಡ್ಡೆ ಹುಡುಗರ ಹೃದಯ ಛಿದ್ರ ಮಾಡುವ ಸಂಗತಿಯನ್ನು ಅವರು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಅವರ ಮದುವೆಯ ಫೋಟೊ ಕೆಲವು ಟ್ರಾಲ್ ಪೇಜ್‌ಗಳಲ್ಲಿ ಹರಿದಾಡುತ್ತಿತ್ತು. ಆದರೆ ಅವರು ಈ ಹಿಂದೆಯೇ ಮದುವೆಯಾಗಿದ್ದಾರೆ. ಮಗು ಕೂಡ ಇದೆ. ಅದನ್ನು ಲೈವ್‌ನಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆ ಕೇಳಿದಾಗ ಅವರು ಒಪ್ಪಿಕೊಂಡಿದ್ದಾರೆ.

ಫೇವರಿಟ್ ಹೀರೋ ಯಾರು?
'ದಿಯಾ ಸೂಪ್'ಗೆ ಯಶ್ ಅಚ್ಚುಮೆಚ್ಚಿನ ನಾಯಕ ನಟರಂತೆ. ಹಾಗೆಯೇ ರಕ್ಷಿತ್ ಶೆಟ್ಟಿ ಕೂಡ ಅವರಿಗೆ ಬಲು ಇಷ್ಟ. ರಕ್ಷಿತ್ ನ್ಯಾಚುರಲ್ ಆಕ್ಟರ್. ಹಾಗೆಯೇ ಅವರ ಸಿನಿಮಾಗಳ ಸ್ಕ್ರಿಪ್ಟ್ ಕೂಡ ಯೂನಿಕ್ ಆಗಿರುತ್ತದೆ ಎಂದಿದ್ದಾರೆ.
ವೈಯಕ್ತಿಕವಾಗಿ ತಾವು ಅಂತರ್ಮುಖಿಯೂ ಹೌದು, ಅತಿ ಹೆಚ್ಚು ಮಾತನಾಡುವವರೂ ಹೌದು. ಈ ಎರಡರ ನಡುವೆ ಇದ್ದೇನೆ ಎಂದು ತಿಳಿಸಿದ್ದಾರೆ.


Click it and Unblock the Notifications











