'ರಂಗನಾಯಕ'ನ ಅಡ್ಡದಲ್ಲಿ ಶಿವಣ್ಣ, ಸುದೀಪ್, ಯಶ್, ದರ್ಶನ್ ಯಾಕೆ? ಗುರುಪ್ರಸಾದ್ ಟಾಂಗ್ ಕೊಟ್ರಾ? ಕರೆ ಕೊಟ್ರಾ?
'ಮಠ' ಖ್ಯಾತಿಯ ಗುರುಪ್ರಸಾದ್ ಸಿನಿಮಾ ಮಾಡಿದ್ಮೇಲೆ, ಅದರ ಕೆಲವು ಸೀನ್‌ಗಳು ಚರ್ಚೆಗೆ ಒಳಪಡುತ್ತವೆ. ಯಾವುದೋ ದೃಶ್ಯ ಇನ್ಯಾರೋ ಕನೆಕ್ಟ್ ಆಗುತ್ತೆ. ಅಲ್ಲೆಲೋ ಬೆಂಕಿ ಹೊತ್ತಿಕೊಳ್ಳುತ್ತವೆ. ಅದು ಮತ್ತೆ ಇನ್ನೇನೋ ಆಗುತ್ತೆ. ಆ ಮೇಲೆ ಸ್ವತ: ಗುರುಪ್ರಸಾದ್ ಬಂದೇ ಸಮಜಾಯಿಷಿ ಕೊಟ್ಟು ತಿಳಿ ಮಾಡಬೇಕು. ಇಲ್ಲವೇ ರೊಚ್ಚಿಗೆದ್ದು ಇದೇ ಸತ್ಯ ಅಂದು ಇನ್ನು ತುಪ್ಪ ಸುರಿಯಬೇಕು.
ಕನ್ನಡ ಸಿನಿಮಾರಂಗದಲ್ಲಿ ಗುರುಪ್ರಸಾದ್ ಸಿನಿಮಾ ಮೇಕಿಂಗ್ ಹಾದಿನೇ ಬೇರೆ. 'ಮಠ', 'ಎದ್ದೇಳು ಮಂಜುನಾಥ'ದಂತಹ ಸಿನಿಮಾ ನೋಡಿದವರಿಗೆ ಅದು ಅವರಿಗೆ ಬಂದಿರುತ್ತೆ. ಈಗ ಮತ್ತೆ ಅದೇ ಕಾಂಬಿನೇಷನ್ ಸಿನಿಮಾ 'ರಂಗನಾಯಕ' ಕೂಡ ಹೀಗೆ ಕಿಚ್ಚ ಹಚ್ಚುವ ಲಕ್ಷಣ ಎದ್ದು ಕಾಣುತ್ತಿದೆ. ಅದಕ್ಕೆ ಕಾರಣ ಈಗ ರಿಲೀಸ್ ಆಗಿರೋ ಟ್ರೈಲರ್.

'ರಂಗನಾಯಕ' ಟ್ರೈಲರ್‌ನಲ್ಲಿ ಅಂತಹದ್ದೇನಿದೆ? ಅದೇನು ಕಿಚ್ಚು ಹಚ್ಚು ಹಚ್ಚುತ್ತೆ? ಅನ್ನೋ ಪ್ರಶ್ನೆಗೆ ಟ್ರೈಲರ್‌ನಲ್ಲಿ ಬರುವ ತಾರೆಯರ ಹೆಸರೇ ಉತ್ತರ. ಈ ಸಿನಿಮಾದಲ್ಲಿ ಕನ್ನಡ ತಾರೆಯರ ಹೆಸರುಗಳು ಬಂದು ಹೋಗುತ್ತವೆ. ಶಿವಣ್ಣ, ಸುದೀಪ್, ಯಶ್, ದರ್ಶನ್ ಸೇರಿದಂತೆ ಕಲ್ಪನಾ, ವಿಷ್ಣುವರ್ಧನ್, ಅಂಬರೀಶ್, ಡಾ.ರಾಜ್‌ಕುಮಾರ್ ಹೆಸರು ಕೂಡ ಇದೆ. ಆದರೆ, ತುಂಬಾ ವಿಶೇಷವಾಗಿ ಗಮನ ಸೆಳೆಯೋದು ಶಿವಣ್ಣ, ಸುದೀಪ್, ಯಶ್, ದರ್ಶನ್ ಬಗ್ಗೆ ಇರುವ ಡೈಲಾಗ್. ಅಷ್ಟಕ್ಕೂ ಇವರೆಲ್ಲ ಈ ಟ್ರೈಲರ್‌ನಲ್ಲಿ ಯಾಕೆ ಬಂದ್ರು?
'ರಂಗನಾಯಕ' ಟ್ರೈಲರ್ ಆರಂಭದಲ್ಲಿಯೇ ಉಪೇಂದ್ರ ಹಾಗೂ ಓಂ ಹೆಸರು ಬಂದು ಹೋಗುತ್ತೆ. ಅದ್ಯಾಕೆ ಬಂತು ಅಂತ ಯೋಚನೆ ಮಾಡುತ್ತಿರುವಾಗಲೇ ಸಾಹಸ ಸಿಂಹ ವಿಷ್ಣುವರ್ಧನ್, ಡಾ. ರಾಜ್‌ಕುಮಾರ್ ಹಾಗೂ ಅಂಬರೀಶ್ ಬಂದು ಬಿಡುತ್ತಾರೆ. ಇವರೆಲ್ಲ ಯಾಕೆ? ಅಂತ ಯೋಚನೆ ಮಾಡುತ್ತಿರುವಾಗಲೇ ಮೇಕಿಂಗ್, ರೀಲ್.. ಬುದ್ದಿವಂತರಿಗೆ ಮಾತ್ರ ಅಂತೆಲ್ಲ ಒಂದಿಷ್ಟು ಡೈಲಾಗ್ ಇದೆ.

ಇದು ಮುಗೀತು ಅನ್ನುವಾಗಲೇ ಗಿರೀಶ್ ಕಾಸರವಳ್ಳಿ ಸಿನಿಮಾ ಬಗ್ಗೆ ವಿಡಂಬನೆ. ಅವರ ಸಿನಿಮಾದಲ್ಲಿ ಐಟಂ ಸಾಂಗ್ ಬಗ್ಗೆ ಚರ್ಚೆ. ಈ ಡೈಲಾಗ್ ಮುಗೀತಿದ್ದಂತೆ ಒಂದು ಸಾಂಗ್‌ನ ಝಲಕ್ ಬರುತ್ತೆ. ಅದು ಐಟಂ ಸಾಂಗ್ ಅಲ್ಲ. ದೇಸಿ ಶೈಲಿಯ ಹಾಡು. ಸ್ವಲ್ಪ ರಿಲ್ಯಾಕ್ಸ್ ಆಗ್ತಿರಬೇಕಾದ್ರೆ, ಇನ್‌ಸ್ಟಾಗ್ರಾಂ, ರೀಲ್ಸ್, ಅಪಪ್ರಚಾರ, ಅತ್ಯಾಚಾರ ಅನ್ನೋ ಪದಗಳು ಕಿವಿಗೆ ಬೀಳುತ್ತೆ. ಇಷ್ಟೆಲ್ಲ ಆದ್ಮೇಲೆ ಲವ್ ಟ್ರ್ಯಾಕ್.. ಆಮೇಲೆ ಹನಿ ಟ್ರ್ಯಾಪ್.. ದಿಢೀರನೇ ಜಗ್ಗೇಶ್ ಮೈಮೇಲೆ ಕಲ್ಪನಾ ಆವರಿಸಿಕೊಂಡು ಬಿಡ್ತಾರೆ. ಇದೆಲ್ಲವೂ ಫಸ್ಟ್ ಹಾಫ್ ಇದ್ದಂಗೆ. ಅಸಲಿಗೆ ಚರ್ಚೆ ಶುರುವಾಗೋದು ಇಲ್ಲಿಂದ.
1911.. ಕನ್ನಡ ಚಲಚಿತ್ರ ಚರಿತ್ರೆಯ ಕರಾಳ ವರ್ಷ ಅಂತ ಒಂದು ಗ್ರಾಫಿಕ್ಸ್ ಪ್ಲೇಟ್ ಪ್ಲೇ ಆಗುತ್ತೆ. ಭಟ್ರು ಡೈಲಾಗ್ ಬಂದು ಅದೃಶ್ಯ ಆಗುತ್ತೆ. ಶಿವಣ್ಣ, ಸುದೀಪ್, ಯಶ್, ದರ್ಶನ್ ಬಂದು ಬಿಡ್ತಾರೆ. ಈ ಸೂಪರ್‌ಸ್ಟಾರ್‌ಗಳ ಹೆಸರನ್ನೆಲ್ಲಾ ತೆಗೆದು ಕನ್ನಡಕ್ಕೆ ತೊಂದರೆ ಆಗ್ತಿದೆ ಬನ್ನಿರಿ ಅಂತ ಕರೆಯೋ ಡೈಲಾಗ್ ಇದೆ. ಒಬ್ಬ ವ್ಯಕ್ತಿಯನ್ನು ಧರ ಧರನೇ ಎಳೆದುಕೊಂಡು ಹೋಗುವ ದೃಶ್ಯವಿದೆ. ಅಸಲಿಗೆ 'ರಂಗನಾಯಕ'ನ ಟ್ರೈಲರ್ ಇಲ್ಲಿಗೆ ನಿಂತುಕೊಳ್ಳುತ್ತೆ.
ಗುರು ಪ್ರಸಾದ್ ಏನು ಹೇಳುವುದಕ್ಕೆ ಹೊರಟಿದ್ದಾರೆ? 1911 ಸಂಖ್ಯೆಯ ಹಿನ್ನೆಲೆಯೇನು? ಕನ್ನಡ ಚಲಚಿತ್ರ ಚರಿತ್ರೆ ಅಂದ್ರೇನು? ಕರಾಳ ವರ್ಷ ಯಾಕೆ? ಕನ್ನಡಕ್ಕೆ ತೊಂದರೆ ಆಗ್ತಿದೆ ಅಂತ ಶಿವಣ್ಣ, ಸುದೀಪ್, ಯಶ್, ದರ್ಶನ್‌ರನ್ನು ಕರೆದಿದ್ಯಾಕೆ? ಈ ಸೂಪರ್ ಸ್ಟಾರ್ ಹೆಸರನ್ನು ತೆಗೆದು ಟಾಂಗ್ ಕೊಟ್ರಾ? ಇಲ್ಲಾ ವಾಸ್ತವ ಹೇಳಿದ್ರಾ? ಇಲ್ಲ ಕರೆ ಕೊಟ್ರಾ? ಇಂತಹ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಅದಕ್ಕೆ ಉತ್ತರ ಸಿನಿಮಾದಲ್ಲಿ ಕೊಟ್ಟಿರಬಹುದು. ಅಲ್ಲಿವರೆಗೂ ತಾಳ್ಮೆ ಇರಲಿ.


Click it and Unblock the Notifications










