ಪಬ್ ಸಾಂಗ್‌ನಲ್ಲಿ ಅಣ್ಣಾವ್ರ ಮೊಮ್ಮಗಳು: ದಿಗಂತ್ ಜೊತೆ ಧನ್ಯಾ ರಾಮ್‌ಕುಮಾರ್ ಮಸ್ತ್ ಸ್ಟೆಪ್ಸ್!
ನಟ ರಾಮ್ ಕುಮಾರ್ ಪುತ್ರಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾಗಿದೆ. ಈಗಾಗಲೇ ಕೆಲವು ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಲೇ ಬೇಕು ಅಂತ ಪಟ್ಟು ಹಿಡಿದು ಕೂತಂತಿದೆ.
ಧನ್ಯಾ ರಾಮ್‌ಕುಮಾರ್ ಆಯ್ಕೆ ಮಾಡಿಕೊಂಡಿರುವ ವಿಭಿನ್ನ ಸಿನಿಮಾಗಳ ಪೈಕಿ 'ದಿ ಜಡ್ಜ್‌ಮೆಂಟ್'ಕೂಡ ಒಂದು. ಬಹುತಾರಾಗಣದ ಈ ಸಿನಿಮಾದ ಚಿತ್ರೀಕರಣ ವೇಗವಾಗಿ ಸಾಗುತ್ತಿದೆ. ಈ ಗ್ಯಾಪ್‌ನಲ್ಲೇ ಸಿನಿಮಾ ಅದ್ಧೂರಿ ಹಾಡೊಂದನ್ನು ಚಿತ್ರೀಕರಿಸಲಾಗಿದೆ. ಇದರಲ್ಲಿ ಧನ್ಯಾ ರಾಮ್‌ಕುಮಾರ್ ಗ್ಲಾಮರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

'ದಿ ಜಡ್ಜ್‌ಮೆಂಟ್' ಸಿನಿಮಾದಲ್ಲಿ ಪಬ್ ಸಾಂಗ್ ಒಂದನ್ನು ಚಿತ್ರೀಕರಿಸಲಾಗಿದೆ. ಈ ಹಾಡಿನಲ್ಲಿ ದಿಗಂತ್ ಹಾಗೂ ಧನ್ಯಾ ರಾಮ್‌ಕುಮಾರ್ ಜೋಡಿಯಾಗಿ ಹೆಜ್ಜೆ ಹಾಕಿದ್ದಾರೆ. ಇಂದಿನ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಈ ಹಾಡನ್ನು ಪಬ್ ಒಂದರಲ್ಲಿ ಚಿತ್ರೀಕರಣ ಮಾಡಲಾಗಿದೆ.
ಈ ಪಬ್ ಸಾಂಗ್ ಅನ್ನು ಅದ್ಧೂರಿಯಾಗಿ ಚಿತ್ರೀಕರಣ ಮಾಡಿದ್ದು, ದಿಗಂತ್ ಹಾಗೂ ಧನ್ಯಾ ರಾಮ್ ಕುಮಾರ್ ಜೊತೆ ಬಾಲಿವುಡ್‌ನಿಂದ ಊರ್ವಶಿ ಮತ್ತು ಗೋವಾದಿಂದ ಸಾನಿಯಾ ಎಂಬ ಕಲಾವಿದರು ಸ್ಟೆಪ್ ಹಾಕಿದ್ದಾರೆ. ಹಾಗೇ ಅಶ್ವಿನ್, ಸುಶೀಲ್ ನಾಗ್ ಮತ್ತು ಸುವೀಷ್ ಕೂಡ ಈ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಕೊರಿಯೊಗ್ರಾಫರ್ ರಾಮ್ ಕಿರಣ್ ಈ ಪಬ್ ಸಾಂಗ್‌ಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.

ಈ ಪಬ್ ಸಾಂಗ್‌ನಲ್ಲಿ ಸುಮಾರು 75 ಮಂದಿ ನೃತ್ಯ ಕಲಾವಿದರು ಹಾಗೂ 50 ಮಂದಿ ಸಹ ಕಲಾವಿದರನ್ನು ಬಳಸಿಕೊಳ್ಳಲಾಗಿದೆ. ಅನೂಪ್ ಸೀಳಿನ್ ಟ್ಯೂನ್ ಹಾಕಿದ್ರೆ, ಪ್ರಮೋದ್ ಮರವಂತೆ ಸಾಂಗ್ ಬರೆದಿದ್ದು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. "ಈ ಹಾಡು ವರ್ಷದ ಸೂಪರ್ ಹಿಟ್ ಹಾಡು ಆಗುವದು ಪಕ್ಕಾ" ಎಂದು ಚಿತ್ರತಂಡ ಹೇಳಿಕೊಂಡಿದೆ.
'ದಿ ಜಡ್ಜ್‌ಮೆಂಟ್' ಸಿನಿಮಾದ ಸ್ಟೋರಿ ಲೀಗಲ್ ಥ್ರಿಲ್ಲರ್ ಹಿನ್ನೆಲೆಯದ್ದಾಗಿದೆ. ಇಂದಿನ ಪ್ರಸ್ತುತ ವಿದ್ಯಮಾನಗಳನ್ನು, ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ಈ ಕಥೆಯನ್ನು ಹೆಣೆಯಲಾಗಿದೆ. ಈ ಸಿನಿಮಾ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂಬುದು ನಿರ್ದೇಶಕ ಗುರುರಾಜ ಕುಲಕರ್ಣಿ ನಂಬಿಕೆ.
ಈ ಸಿನಿಮಾದಲ್ಲಿ ಕ್ರೇಜಿ ಸ್ಟಾರ್ ಡಾ. ವಿ.ರವಿಚಂದ್ರನ್, ದಿಗಂತ್ ಮಂಚಾಲೆ, ಮೇಘನಾ ಗಾಂವ್ಕರ್, ಧನ್ಯಾ ರಾಮಕುಮಾರ್, ಲಕ್ಷ್ಮೀ ಗೋಪಾಲಸ್ವಾಮಿ, ಟಿ ಎಸ್ ನಾಗಾಭರಣ, ಪ್ರಕಾಶ ಬೆಳವಾಡಿ, ಕೃಷ್ಣ ಹೆಬ್ಬಾಳೆ, ರಂಗಾಯಣ ರಘು, ರಾಜೇಂದ್ರ ಕಾರಂತ್, ಸುಜಯ್ ಶಾಸ್ತ್ರೀ, ರೂಪಾ ರಾಯಪ್ಪ, ರವಿಶಂಕರ ಗೌಡ ಮುಂತಾದವರು ನಟಿಸಿದ್ದಾರೆ.
ಗುರುರಾಜ ಕುಲಕರ್ಣಿ ನಿರ್ದೇಶನ, ಪಿ ಕೆ ಎಚ್ ದಾಸ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಕೆಂಪರಾಜು ಬಿ ಎಸ್ ಸಂಕಲನ, ಪ್ರಮೋದ್ ಮರವಂತೆ ಗೀತರಚನೆ, ರವಿವರ್ಮ ಸಾಹಸ ನಿರ್ದೇಶನ ಹಾಗೂ ರೂಪೇಂದ್ರ ಆಚಾರ್ ಅವರ ಕಲಾ ನಿರ್ದೇಶನವಿದೆ. ಎಂ ಎಸ್ ರಮೇಶ್ ಸಂಭಾಷಣೆ ಬರೆದಿದ್ದಾರೆ.


Click it and Unblock the Notifications











