ಕನ್ನಡ ತೇರು ಏರಿದ ಡಿಂಪಲ್ ಕ್ವೀನ್; ಸಾರಥಿಗಳಿಗೆ ರಚಿತಾ ರಾಮ್ ಬ್ರ್ಯಾಂಡ್ ಅಂಬಾಸಿಡರ್
ಕನ್ನಡ ಚಿತ್ರರಂಗಕ್ಕೂ ಆಟೋ ಚಾಲಕರಿಗೂ ಅವಿನಾಭಾವ ಸಂಬಂಧವಿದೆ. ಕನ್ನಡ ಚಿತ್ರರಂಗಕ್ಕೆ ಐದಾರು ದಶಕಗಳಿಂದ ಬೆಂಬಲವಾಗಿ ನಿಂತವರೇ ಆಟೋ ಚಾಲಕರು. ಅದ್ಯಾವುದೇ ಸಿನಿಮಾ ಬಂದರೂ ಅಲ್ಲಿ ಒಂದಿಬ್ಬರಾದರೂ ಆಟೋ ಚಾಲಕರು ನೋಡುವುದಕ್ಕೆ ಸಿಕ್ಕೇ ಸಿಗುತ್ತಾರೆ. ಹೀಗಾಗಿ ಸಿನಿಮಾ ಮಂದಿ ಕೂಡ ಅವರಿಗೆ ಹಾಡಿನ ರೂಪದಲ್ಲೋ, ದೃಶ್ಯಗಳ ರೂಪದಲ್ಲೋ ಗೌರವ ಸೂಚಿಸಿದ್ದೂ ಇದೆ.
ಕನ್ನಡ ಚಿತ್ರರಂಗದ ದಿಗ್ಗಜರೆಲ್ಲರೂ ಕೂಡ ಆಟೋ ಚಾಲಕರಾಗಿ ತೆರೆ ಮೇಲೆ ನಟಿಸಿದ್ದೂ ಇದೆ. ಶಂಕರ್ ನಾಗ್, ವಿಷ್ಣುವರ್ಧನ್, ಉಪೇಂದ್ರ, ಕಿಚ್ಚ ಸುದೀಪ್, ದರ್ಶನ್, ಗಣೇಶ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರು ಆಟೋ ಚಾಲಕರಾಗಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಸಿನಿಮಾಗಳು ಬಾಕ್ಸಾಫೀಸ್‌ನಲ್ಲೂ ಹಣ ಗಳಿಸಿದ್ದೂ ಇವೆ. ಆದರೆ, ನಾಯಕಿಯವರಿಗೆ ಆಟೋ ಚಾಲಕರಾಗುವ ಅವಕಾಶ ಸಿನಿಮಾಗಳಲ್ಲಿ ಸಿಕ್ಕಿದ್ದು ತೀರಾ ವಿರಳ.

ಆದ್ರೀಗ ಡಿಂಪಲ್ ಕ್ವೀನ್ ರಚಿತಾ ರಾಮ್ ಆಟೋ ಚಾಲಕರಂತೆ ಖಾಕಿ ತೊಟ್ಟು ಸಾರಥಿ ಏರಿದ್ದಾರೆ. ಹಾಗಂತ ಇದೇನು ಸಿನಿಮಾಗಾಗಿ ಅಲ್ಲ. ರಿಯಲ್ ಲೈಫ್‌ನಲ್ಲಿ ಆಟೋ ಚಾಲಕರ ಮನವಿಗೆ ಒಪ್ಪಿ ಅವರ ರಾಯಬಾರಿಯಾಗಿದ್ದಾರೆ. ರಚಿತಾ ರಾಮ್ ಆಟೋ ಚಾಲಕರ ಸಂಘಕ್ಕೆ ರಾಯಾಬಾರಿ ಆಗಿರುವ ಈ ವಿಶೇಷ ಸಂದರ್ಭದ ಬಗ್ಗೆ ಮಾಹಿತಿ ಇಲ್ಲಿದೆ.
ಆಟೋ ಓಡಿಸಿದ ರಚಿತಾ ರಾಮ್
ರಚಿತಾ ರಾಮ್ ಆಟೋ ಚಾಲಕರ ಸಂಘದ ರಾಯಬಾರಿ ಆಗಿ ಹೊಸ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆಟೋ ಚಾಲಕರ ಆಸೆಯಂತೆ ಖಾಕಿ ತೊಟ್ಟು ಪೋಸ್ ಕೊಟ್ಟಿದ್ದಾರೆ. ಅಲ್ಲದೇ ಆಟೋಗೆ ಕೈ ಮುಗಿದು, ಡ್ರೈವರ್ ಸೀಟ್‌ನಲ್ಲಿ ಕೂತು ಪೋಸ್ ಕೊಟ್ಟಿದ್ದಾರೆ. ಈ ಮೂಲಕ ಇನ್ಮುಂದೆ ಆಟೋ ಚಾಲಕ ಬೆಂಬಲವಾಗಿ ಡಿಂಪಲ್ ಕ್ವೀನ್ ನಿಲ್ಲಲಿದ್ದಾರೆ.
ರಚಿತಾ ರಾಮ್ ಮನೆ ಮುಂದೆ ಸಂಭ್ರಮ
ಡಿಂಪಲ್ ಕ್ವೀನ್ ಮನೆ ಮುಂದೆ ಆಟೋ ಚಾಲಕರು ಬಹಳ ಸಂಖ್ಯೆಯಲ್ಲಿ ಸೇರಿದ್ದರು. ಬೆಂಗಳೂರಿನ ಆರ್.ಆರ್.ನಗರದಲ್ಲಿ ರಚಿತಾ ರಾಮ್ ವಾಸವಿದ್ದು, ಅವರನ್ನು ರಾಯಬಾರಿಯಾಗಿ ಆಹ್ವಾನಿಸಿದ್ದಾರೆ. ಈ ವೇಳೆ ಮಹಿಳಾ ಆಟೋ ಚಾಲಕಿಯರೇ ಹೆಚ್ಚು ಇದ್ದಿದ್ದು ಕಂಡು ಬಂದಿತ್ತು. ಅವರು ಪ್ರೀತಿಯಿಂದ ಕೇಳಿಕೊಂಡಿದ್ದಕ್ಕೆ ಡಿಂಪಲ್ ಕ್ವೀನ್ ಅಷ್ಟೇ ಪ್ರೀತಿಯಿಂದ ಒಪ್ಪಿಕೊಂಡಿರೋದು ವಿಶೇಷ.
ಹೆಮ್ಮೆಯ ಕ್ಷಣ ಎಂದು ರಚಿತಾ ರಾಮ್
ಈ ವಿಷಯವನ್ನು ವಿಡಿಯೋ ಸಮೇತ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಚಿತಾ ರಾಮ್ ಹಂಚಿಕೊಂಡಿದ್ದಾರೆ. ಹಾಗೇ "ಅತಿರಥ ಮಹರಥ ಸಾರಥಿಗಳಿಗೆ ನನ್ನ ನಮಸ್ಕಾರ. ನನ್ನನ್ನು ಆಟೋ ಚಾಲಕರ ಸಂಘದ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ಇದು ನನಗೆ ಬಹಳ ಹೆಮ್ಮೆಯ ಕ್ಷಣ" ಎಂದು ರಚಿತಾ ರಾಮ್ ಬರೆದುಕೊಂಡಿದ್ದಾರೆ.
ಸಿನಿಮಾಗಳಲ್ಲಿ ಬ್ಯುಸಿ
ಡಿಂಪಲ್ ಕ್ವೀನ್ ರಚಿತಾ ರಾಮ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಜನಿಕಾಂತ್ ಸಿನಿಮಾ 'ಕೂಲಿ'ಯಲ್ಲಿ ನೆಗೆಟಿವ್ ಪಾತ್ರಗಳಲ್ಲಿ ನಟಿಸಿದ ಬಳಿಕ ಪರಭಾಷೆಯಿಂದಲೂ ಆಫರ್ ಬರುತ್ತಿದೆ. ಹಾಗೇ ಕನ್ನಡದಲ್ಲಿ ಮೂರು ಸಿನಿಮಾಗಳು ಕೈಯಲ್ಲಿವೆ. ಈಗಾಗಲೇ 'ಕಲ್ಟ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜನವರಿ 23ಕ್ಕೆ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ನೀನಾಸಂ ಸತೀಶ್ ಜೊತೆ 'ಅಯೋಗ್ಯ 2', ದುನಿಯಾ ವಿಜಯ್ ಜೊತೆ ನಟಿಸುತ್ತಿರುವ 'ಲ್ಯಾಂಡ್ ಲಾರ್ಡ್'ನಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಪರಭಾಷೆಯಿಂದ ಬಂದ ಆಫರ್‌ಗಳ ಬಗ್ಗೆ ಇನ್ನೂ ಮಾಹಿತಿಯನ್ನು ಹಂಚಿಕೊಂಡಿಲ್ಲ.


Click it and Unblock the Notifications











