"ದರ್ಶನ್ ಮೇಲಿನ ಕೋಪವನ್ನು ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ"; ಪ್ರೇಕ್ಷಕರ ಮುಂದೆ ದಿನಕರ್ ಅಳಲು!
ಈ ವಾರ ಕನ್ನಡದಲ್ಲಿ ಮೂರು ಪ್ರಮುಖ ಸಿನಿಮಾಗಳು ರಿಲೀಸ್ ಆಗಿವೆ. ಅದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇಶಿಸಿದ 'ರಾಯಲ್' ಕೂಡ ಒಂದು. ಕಳೆದ ಕೆಲವು ದಿನಗಳಿಂದ ದಿನಕರ್ ಹಾಗೂ 'ರಾಯಲ್' ಚಿತ್ರತಂಡ ಭರ್ಜರಿಯಾಗಿ ಪ್ರಚಾರವನ್ನು ಮಾಡಿತ್ತು. ಬಹಳ ದಿನಗಳ ಬಳಿಕ ದಿನಕರ್ ತೂಗುದೀಪ ನಿರ್ದೇಶನ ಮಾಡಿದ್ದರಿಂದ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ.
ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ 'ರಾಯಲ್' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಆದರೂ, ಬುಕ್‌ಮೈಶೋನಲ್ಲಿ ಮಾತ್ರ ನೆಗೆಟಿವ್ ರಿವ್ಯೂ ಕೊಡುತ್ತಿದ್ದಾರೆ ಎಂದು ನಿರ್ದೇಶಕ ದಿನಕರ್ ತೂಗುದೀಪ ಅಸಮಧಾನ ಹೊರಹಾಕಿದ್ದಾರೆ. ಅದರಲ್ಲೂ ಪಿವಿಆರ್‌ನಲ್ಲಿ ಸಿನಿಮಾ ವೀಕ್ಷಿಸಿದ ಪ್ರೇಕ್ಷಕರ ಮುಂದೆ ಈ ಅಸಮಧಾನವನ್ನು ಹೊರ ಹಾಕಿದ್ದಾರೆ.

ಪ್ರೇಕ್ಷಕರ ಮುಂದೇನೆ 'ರಾಯಲ್' ಸಿನಿಮಾಗೆ ಬೆಂಬಲ ಕೋರಿದ್ದಾರೆ. ಈ ವೇಳೆ ಸಿನಿಮಾದ ನಾಯಕ ವಿರಾಟ್, ನಾಯಕಿ ಸಂಜನಾ ಆನಂದ್, ರಘು ಮುಖರ್ಜಿ ಸೇರಿದಂತೆ ಚಿತ್ರತಂಡ ಥಿಯೇಟರ್ ವಿಸಿಟ್ ಹಾಕಿತ್ತು. ಈ ಸಂದರ್ಭದಲ್ಲಿ ದರ್ಶನ್ ಮೇಲಿನ ಕೋಪವನ್ನು ತನ್ನ ಮೇಲೆ ತೀರಿಸಿಕೊಳ್ಳುತ್ತಿದ್ದಾರೆಂದು ದಿನಕರ್ ತೂಗುದೀಪ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
'ರಾಯಲ್' ಸಿನಿಮಾ ನಿನ್ನೆಯಷ್ಟೇ (ಜನವರಿ 24) ರಿಲೀಸ್ ಆಗಿದೆ. ಹೀಗಾಗಿ ಇಡೀ ಚಿತ್ರರಂಗ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್‌ಗಳಿಗೆ ಭೇಟಿ ಕೊಟ್ಟಿತ್ತು. ತಮ್ಮ ಸಿನಿಮಾಗೆ ರೆಸ್ಪಾನ್ಸ್ ಹೇಗಿದೆ ಅನ್ನುವುದನ್ನು ನೋಡಲು ವಿಸಿಟ್ ಹಾಕಿತ್ತು. ಈ ವೇಳೆ ಪ್ರೇಕ್ಷಕರ ಮುಂದೆ ದಿನಕರ್ ತೂಗುದೀಪ ಮಾಡಿಕೊಂಡು ಮನವಿ ಹೀಗಿದೆ.

"ನೋಡಿ ನೀವೆಲ್ಲ ಸೂಪರ್ ಅಂತ ಹೇಳುತ್ತಿದ್ದೀರ. ಬುಕ್ ಮೈ ಶೋನಲ್ಲಿ ಸುಮ್ಸುಮ್ನೆ ನೆಗೆಟಿವ್ ರಿವ್ಯೂಗಳನ್ನು ಹಾಕುತ್ತಿದ್ದಾರೆ. ಬರೀ ಒಂದೊಂದು ಸ್ಟಾರ್‌ಗಳನ್ನು ಕೊಟ್ಟಿದ್ದಾರೆ. ಬೇಕು ಬೇಕು ಅಂತಾನೇ ತುಂಬಾ ಜನ ಪ್ರಯತ್ನ ಪಡುತ್ತಿದ್ದಾರೆ. ನೀವುಗಳ ಸಪೋರ್ಟ್ ಮಾಡಿದರೆ, ಅವರದ್ದು ಏನೇ ಪ್ರಯತ್ನವಿದ್ದರೂ ಫಲಿಸುವುದಿಲ್ಲ. ನಮ್ಮನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದು. ನೀವು ಗೆಲ್ಲಿಸುತ್ತೀರ ಅನ್ನೋ ನಂಬಿಕೆ ನನಗಿದೆ. ನಮ್ಮ ಸೆಲೆಬ್ರಿಟಿಗಳು ನೀವು. ಗೆಲ್ಲಿಸುತ್ತೀರ ಎಂಬ ನಂಬಿಕೆ ಇದೆ." ಎಂದು ಪ್ರೇಕ್ಷಕರಲ್ಲಿ ದಿನಕರ್ ಮನವಿಯನ್ನು ಮಾಡಿಕೊಂಡಿದ್ದಾರೆ.
ಇದೇ ವೇಳೆ ದಿನಕರ್ ಅಣ್ಣ ದರ್ಶನ್ ಮೇಲಿನ ಕೋಪವನ್ನು ತನ್ನ ಮೇಲೆ ತೆಗೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ. "ತುಂಬಾ ಜನ ಪ್ರಯತ್ನ ಪಡುತ್ತಿದ್ದಾರೆ. ಗೊತ್ತಿಲ್ಲ ದರ್ಶನ್ ಮೇಲಿನ ಕೋಪವನ್ನು ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಅನಿಸುತ್ತಿದೆ. ನೀವುಗಳು ನಮಗೆ ಸಪೋರ್ಟ್ ಮಾಡಬೇಕು. ನಿಮ್ಮಗಳ ಸಪೋರ್ಟ್ ಇದ್ದರೆ ನಮಗೆ ಆನೆ ಬಲವಿದ್ದಂತೆ. ನಾವುಗಳು ಧೈರ್ಯವಾಗಿ ಮುಂದೆ ನಿಂತಿರುತ್ತೇವೆ. ಅವರು ಏನೇ ಪ್ರಯತ್ನ ಪಟ್ಟರೂ ನೀವು ಗೆಲ್ಲಿಸುವುದಕ್ಕೆ ಬಿಡುವುದಿಲ್ಲ ಅಂತ ನಮಗೆ ಗೊತ್ತು. ನೀವು ನಮ್ಮನ್ನು ಗೆಲ್ಲಿಸುತ್ತೀರ ಎಂಬ ನಂಬಿಕೆ ಇದೆ." ಎಂದಿದ್ದಾರೆ.
ರಾಯಲ್ ಸಿನಿಮಾ ನೋಡಿದ ಬಳಿಕ ನಿಮಗೆ ಏನೇ ಅನಿಸಿದರೂ ಹೇಳಿ ಪರವಾಗಿಲ್ಲ. ಚೆನ್ನಾಗಿದೆ ಅಂತ ಅನಿಸಿದರೆ ಎಲ್ಲರಿಗೂ ಹೇಳಿ. ಥಿಯೇಟರ್‌ಗೆ ಬಂದು ಸಿನಿಮಾವನ್ನು ನೋಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮೊದಲ ದಿನವೇ ಸಿನಿಮಾ ಬಗ್ಗೆ ನೆಗೆಟಿವ್ ಕಾಮೆಂಟ್ ಹಾಗೂ ರಿವ್ಯೂ ಬಂದಿದ್ದಕ್ಕೆ ಚಿತ್ರತಂಡ ಬೇಸರವನ್ನು ಹೊರ ಹಾಕಿದೆ. ಈ ವಿಡಿಯೋ ನೋಡಿದ ಮೇಲಾದರೂ ಅಭಿಮಾನಿಗಳು ಅವರನ್ನು ಕೈ ಹಿಡಿಯುತ್ತಾರಾ? ಎಂದು ನೋಡಬೇಕಿದೆ.


Click it and Unblock the Notifications











